ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ–3ರಲ್ಲೂ ಯಾದಗಿರಿ ಹಿಂದೆ

ಫಲಿತಾಂಶ ಸುಧಾರಣೆಗೆ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸಿದ ಶಾಲಾ ಶಿಕ್ಷಣ ಇಲಾಖೆ
Published : 29 ಆಗಸ್ಟ್ 2024, 6:36 IST
Last Updated : 29 ಆಗಸ್ಟ್ 2024, 6:36 IST
ಫಾಲೋ ಮಾಡಿ
Comments

ಯಾದಗಿರಿ: ಶಾಲಾ ಶಿಕ್ಷಣ ಇಲಾಖೆ ಹಾಗೂ ಸಾಕ್ಷರತಾ ಇಲಾಖೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆಗೆ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸಿದ್ದು, ಯಾದಗಿರಿ ತಾಲ್ಲೂಕು ಕಳಪೆ ಸಾಧನೆ ಮುಂದುವರಿದಿದೆ.

ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಿದ್ದು, ಶಾಲಾ ಶಿಕ್ಷಣ ಇಲಾಖೆ ಹಾಗೂ ಸಾಕ್ಷರತಾ ಇಲಾಖೆ ಹಳೆ ತಾಲ್ಲೂಕುಗಳನ್ನೆ ಗಣನೆಗೆ ತೆಗೆದುಕೊಂಡಿದ್ದು, ಯಾದಗಿರಿ, ಶಹಾಪುರ, ಸುರಪುರ ಎಂದು ವಿಭಾಗಿಸಿದೆ. ಶಹಾಪುರ, ಸುರಪುರ ತಾಲ್ಲೂಕುಗಳಲ್ಲಿ ಮೂರು ಹಂತದ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದರೆ, ಯಾದಗಿರಿ ತಾಲ್ಲೂಕು ಮಾತ್ರ ಕೊನೆಯ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

2023ರಲ್ಲಿ ಜಿಲ್ಲೆಗೆ 35ನೇ ಸ್ಥಾನ ಇತ್ತು. ಈ ಬಾರಿಯೂ 35 ಸ್ಥಾನ ಪಡೆದಿದೆ.‌ ರೆಗ್ಯುಲರ್‌ ಸೇರಿ ಬಾಹ್ಯ ಅಭ್ಯರ್ಥಿಗಳು 18,880 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 9,551 ಉತ್ತೀರ್ಣರಾಗಿದ್ದರು. ಶೇ 50.59 ಫಲಿತಾಂಶ ಬಂದಿತ್ತು. ಕಳೆದ ಐದು ವರ್ಷಗಳಲ್ಲೇ ಇದು ಅತ್ಯಂತ ಕಳಪೆ ಫಲಿತಾಂಶವಾಗಿತ್ತು. ಶೇ 75ಕ್ಕಿಂತ ಕಡಿಮೆ ಹಾಜರಾತಿಯುಳ್ಳ ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆಯಿಂದ ಪರೀಕ್ಷೆ ನಿರಾಕರಿಸಲಾಗಿತ್ತು. ಆ ನಂತರ ನಡೆದ ಎರಡನೇ ಹಂತದ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ಮೂರು ಹಂತಗಳಲ್ಲಿ ಪರೀಕ್ಷೆ: ಜಿಲ್ಲೆಯಲ್ಲಿ ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಮೊದಲ ಹಂತ, ಜೂನ್‌ 14ರಿಂದ 22ರವರೆಗೆ ಪರೀಕ್ಷೆ–2 ನಡೆದಿತ್ತು. ಆಗಸ್ಟ್ 2ರಿಂದ 9ರವರೆಗೆ ಪರೀಕ್ಷೆ–3 ನಡೆದಿತ್ತು. ಮೊದಲ ಹಂತದಲ್ಲಿ ಯಾದಗಿರಿ ತಾಲ್ಲೂಕು ಶೇ 56.25, ಎರಡನೇ ಹಂತದಲ್ಲಿ ಶೇ 21.29, ಮೂರನೇ ಹಂತದಲ್ಲಿ ಶೇ 15.99ರಷ್ಟು ಫಲಿತಾಂಶ ಪಡೆದಿದೆ. ಈ ಮೂಲಕ ಉಳಿದ ತಾಲ್ಲೂಕುಗಳಿಗಿಂತ ಕಡಿಮೆ ಫಲಿತಾಂಶ ಪಡೆದಿದೆ.

ಮೂರನೇ ಹಂತದ ಫಲಿತಾಂಶ: ಶಹಾಪುರ ತಾಲ್ಲೂಕಿನಲ್ಲಿ ಮೂರನೇ ಹಂತದ ಪರೀಕ್ಷೆಯಲ್ಲಿ 1,207ರಲ್ಲಿ 330 ವಿದ್ಯಾರ್ಥಿಗಳು ಉತ್ತೀರ್ಣರಾಗಿ 877 ಮಕ್ಕಳು ಅನ್ನುತ್ತೀರ್ಣರಾಗಿದ್ದಾರೆ. ಸುರಪುರ ತಾಲ್ಲೂಕಿನಲ್ಲಿ 1,562 ವಿದ್ಯಾರ್ಥಿಗಳಲ್ಲಿ 591 ಪಾಸಾಗಿ, 971 ನಪಾಸಾಗಿದ್ದಾರೆ. ಯಾದಗಿರಿ ತಾಲ್ಲೂಕಿನಲ್ಲಿ 1,476 ವಿದ್ಯಾರ್ಥಿಗಳಲ್ಲಿ 236 ವಿದ್ಯಾರ್ಥಿಗಳು ಮೂರನೇ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 1,240 ಮಕ್ಕಳು ಅನ್ನುತ್ತೀರ್ಣರಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಮೂರನೇ ಪರೀಕ್ಷೆಯಲ್ಲಿ 3,088 ವಿದ್ಯಾರ್ಥಿಗಳು ಫೇಲ್‌ ಆಗಿದ್ದಾರೆ. 1,157 ಮಕ್ಕಳು ಉತ್ತೀರ್ಣರಾಗಿದ್ದಾರೆ.

‘ಅತಿಥಿ ಶಿಕ್ಷಕರ ಮೇಲೆ ಶಾಲಾ ಶಿಕ್ಷಣ ಇಲಾಖೆ ಅವಲಂಬಿಸಿದೆ. ಇತ್ತೀಚೆಗೆ ಶಿಕ್ಷಕರ ವರ್ಗಾವಣೆಯಾಗಿದ್ದು, ಮತ್ತಷ್ಟು ಶಿಕ್ಷಕರು ಜಿಲ್ಲೆಯಿಂದ ಹೊರ ಹೋಗಿದ್ದಾರೆ. ಕಳೆದ ವರ್ಷವೂ ಶಿಕ್ಷಕರು ವರ್ಗಾವಣೆಯಾಗಿದ್ದರು. ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ವ್ಯವಸ್ಥೆ ಹದಗೆಟ್ಟಿದೆ. ಕೂಡಲೇ ಕೆಲವರನ್ನು ವರ್ಗಾವಣೆ ಮಾಡಿದರೆ ಶಿಕ್ಷಣ ಇಲಾಖೆ ಸುಧಾರಣೆ ಕಾಣಲಿದೆ’ ಎಂದು ಶಿಕ್ಷಣಪ್ರೇಮಿ ಯಲ್ಲಯ್ಯ ನಾಯಕ ವನದುರ್ಗ ಹೇಳುತ್ತಾರೆ.

ಜಿಲ್ಲೆಯಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೂರು ಹಂತಗಳಲ್ಲಿ ನಡೆದಿದ್ದು ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.
–ಮಂಜುನಾಥ ಎಚ್‌.ಟಿ., ‌ಡಿಡಿಪಿಐ
ಜಿಲ್ಲೆಯ ವಸತಿ ಶಾಲೆ ಸೇರಿದಂತೆ ಎಲ್ಲ ಶಾಲೆಗಳಲ್ಲೂ ವಿದ್ಯಾರ್ಥಿಗಳಿಗೆ ತಕ್ಕಂತೆ ಶಿಕ್ಷಕರ ನೇಮಕವಾಗಬೇಕು. ಅಗತ್ಯ ಪಠ್ಯ ಸಾಮಗ್ರಿ ಶಿಕ್ಷಕರ ಭರ್ತಿ ಕೊರತೆ ಜಿಲ್ಲೆಯಲ್ಲಿ ಕಾಡುತ್ತಿದೆ.
ಯಲ್ಲಯ್ಯ ನಾಯಕ ವನದುರ್ಗ, ಶಿಕ್ಷಣಪ್ರೇಮಿ

ವಿಶೇಷ ತರಗತಿ ನಡೆಸಿತ್ತು

ಎಸ್‌ಎಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಮೇ 15ರಿಂದ ಜೂನ್‌ 6ರವರೆಗೆ ಶಿಕ್ಷಣ ಇಲಾಖೆ ನಡೆಸಿತ್ತು. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನಾ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೊದಲ ಹಂತದ ಪರೀಕ್ಷೆ ನಂತರ ಜಿಲ್ಲೆಯಲ್ಲಿ 7725 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದರು. ಇದರಲ್ಲಿ ಬಾಲಕರು 4464 ಬಾಲಕಿಯರು 3261 ಸೇರಿದ್ದಾರೆ. ಆದರೂ ಎರಡನೇ ಹಂತದಲ್ಲಿ ನಿರೀಕ್ಷಿತ ಫಲಿತಾಂಶ ಬಂದಿರಲಿಲ್ಲ. ಮೂರನೇ ಹಂತದಲ್ಲೂ ಪರೀಕ್ಷೆ ನಡೆಸಲಾಗಿತ್ತು.

ಶಿಕ್ಷಕರ ಕೊರತೆ ಕಾರಣ

ಜಿಲ್ಲೆಯಲ್ಲಿ ಶಾಲೆಗಳಿಗೆ ತಕ್ಕಂತೆ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ವಿಶೇಷವಾಗಿ ಪ್ರಾಥಮಿಕ ಶಾಲೆಗಳಲ್ಲಿ ಸರಿಯಾದ ಬುನಾದಿ ಶಿಕ್ಷಣ ಲಭಿಸದ ಕಾರಣ ಪ್ರೌಢಶಿಕ್ಷಣ ಹಂತಕ್ಕೆ ಬಂದಾಗ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿ ಪರೀಕ್ಷೆಯಲ್ಲಿ ಕಳಪೆ ಸಾಧನೆ ಮಾಡುತ್ತಿದ್ದಾರೆ ಎಂದು ಶಿಕ್ಷಣಪ್ರೇಮಿಗಳ ದೂರಾಗಿದೆ.

‘ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಂತದಲ್ಲೇ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಸಿಗುತ್ತಿಲ್ಲ. ಇದರಿಂದ ಪ್ರೌಢಶಾಲೆಗಳಲ್ಲೂ ಶಿಕ್ಷಕರ ಕೊರತೆ ಇದೆ. ಮುಖ್ಯವಾಗಿ ಗಣಿತ ವಿಜ್ಞಾನ ಇಂಗ್ಲಿಷ್‌ ಶಿಕ್ಷಕರ ಕೊರತೆಯಿಂದ ಕಳಪೆ ಸಾಧನೆ ಮುಂದುವರಿದಿದೆ. ಗಡಿ ಗ್ರಾಮಗಳಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡುವುದಿಲ್ಲ ಎನ್ನುವ ಆರೋಪ ಆಗಿನಿಂದಲೂ ಇದೆ. ಕೆಲವರು ಶಿಕ್ಷಕರ ಸಂಘದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದರಿಂದ ಫಲಿತಾಂಶ ಕೆಳಗಡೆಯಿಂದ ಮೊದಲನೇ ಸ್ಥಾನ ಪಡೆಯುತ್ತದೆ’ ಎನ್ನುತ್ತಾರೆ ಶಿಕ್ಷಣಪ್ರೇಮಿ ಯಲ್ಲಯ್ಯ ನಾಯಕ ವನದುರ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT