ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಆರಂಭವಾಗದ ಪ್ಯಾಸೆಂಜರ್‌ ರೈಲು ಸಂಚಾರ

ಕೊರೊನಾ ವೇಳೆ ಸ್ಥಗಿತಗೊಂಡ ಇಂಟರ್‌ಸಿಟಿ ರೈಲು, ಆರಂಭಿಸಲು ಪ್ರಯಾಣಿಕರ ಒತ್ತಾಯ
Last Updated 26 ಜುಲೈ 2022, 6:29 IST
ಅಕ್ಷರ ಗಾತ್ರ

ಯಾದಗಿರಿ: ಕೊರೊನಾ ಸೋಂಕಿನಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿರುವ ಕಲಬುರಗಿ–ಗುಂತಕಲ್‌ ಪ್ಯಾಸೆಂಜರ್‌ ರೈಲು ಸಂಚಾರವನ್ನು ಪುನರಾರಂಭಿಸಬೇಕು. ರೈಲು ಸ್ಥಗಿತಗೊಳಿಸಿರುವುದರಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ದೇಶದಲ್ಲಿ ಕೊರೊನಾ ತೀವ್ರತೆ ಹೆಚ್ಚಿದ್ದರಿಂದ ರೈಲ್ವೆ ಇಲಾಖೆ ಎಲ್ಲ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಇಳಿಕೆಯಾದ ಬಳಿಕ ಹಂತಹಂತವಾಗಿ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ಆರಂಭಿಸಿತ್ತು. ಆದರೆ ಈಗ ಕೊರೊನಾ ತೀವ್ರತೆಯಿಲ್ಲ. ಆದರೂ ಕಲಬುರಗಿ–ರಾಯಚೂರು–ಗುಂತಕಲ್‌ ಮಾರ್ಗದ ಪ್ಯಾಸೆಂಜರ್‌ ರೈಲುಸಂಚಾರಆರಂಭವಾಗಿಲ್ಲ.ಇದರಿಂದಾಗಿ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಒತ್ತಡ ಹೇರಲು ಸಂಸದರಿಗೆ ಒತ್ತಾಯ: ರಾಯಚೂರು ಸಂಸದ ರಾಜಾ ಅಮರೇಶ ನಾಯಕ, ಕಲಬುರಗಿ ಸಂಸದ ಡಾ.ಉಮೇಶ ಜಾಧವ ಇದ್ದು, ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಪ್ಯಾಸೆಂಜರ್‌ ರೈಲು ಓಡಿಸಲು ಪ್ರಯತ್ನಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿದೆ. ಡಬಲ್‌ ಇಂಜಿನ್‌ ಸರ್ಕಾರ ಇದ್ದರೆ ಅಭಿವೃದ್ಧಿ ಕಾರ್ಯಗಳು ಶೀಘ್ರ ಆಗುತ್ತವೆ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಾರೆ. ಆದರೆ, ಎರಡೂ ವರ್ಷಗಳಿಂದ ರೈಲು ಸ್ಥಗಿತಗೊಂಡಿದ್ದರೂ ಈ ಬಗ್ಗೆ ಸಂಬಂಧಿಸಿದವರು ಗಮನಹರಿಸುತ್ತಿಲ್ಲ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಸಂಸದರು, ರಾಯಚೂರು ಸಂಸದರು ಈ ಇಬ್ಬರು ಜಿಲ್ಲೆಯ ವ್ಯಾಪ್ತಿಗೆ ಬರುತ್ತಾರೆ. ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡ ಕಲಬುರಗಿ-ರಾಯಚೂರು-ಗುಂತಕಲ್ ಪ್ಯಾಸೆಂಜರ್ ಇಂಟರ್ ಸಿಟಿ ರೈಲು ಆರಂಭಿಸಲು ಮನಸ್ಸು ಮಾಡುತ್ತಿಲ್ಲ. ಈ ರೈಲು ಕಲಬುರಗಿ, ವಾಡಿ, ಯಾದಗಿರಿ, ಸೈದಾಪುರ, ರಾಯಚೂರು, ಮಂತ್ರಾಲಯ ರೋಡ್ ಸ್ಟೇಷನ್‌ಗೆ ಹೆಚ್ಚಿನ ಪ್ರಯಾಣಿಕರು ಅವಲಂಬಿತರಾಗಿದ್ದಾರೆ. ಸುಕ್ಷೇತ್ರಮಂತ್ರಾಲಯ ಗುರು ರಾಯರ ದರ್ಶನಕ್ಕೆ ತೆರಳುವ ಅಸಂಖ್ಯಾತ ಭಕ್ತರಿಗೆ ಈ ರೈಲು ಬಹಳ ಅನುಕೂಲವಾಗಿತ್ತು. ಎಲ್ಲೆಡೆ ಸ್ಥಗಿತಗೊಂಡ ರೈಲುಗಳು ಪುನಃ ಆರಂಭವಾಗಿವೆ. ಹಿಂದುಳಿದ ಕಲ್ಯಾಣ ಕರ್ನಾಟಕದ ಪ್ರಮುಖ ಪ್ಯಾಸೆಂಜರ್ ರೈಲು ಆರಂಭ ಮಾಡುವಲ್ಲಿ ಈ ಭಾಗದ ಜನಪ್ರತಿನಿಧಿಗಳು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ಎಂದು ಪ್ರಯಾಣಿಕ ಆನಂದ ಕುಮಾರ ಪಾಟೀಲ ಆರೋಪಿಸಿದ್ದಾರೆ.

ರಾಯಚೂರು–ವಿಜಯಪುರ ಪ್ಯಾಸೆಂಜರ್‌ ರೈಲು ಕಳೆದ ಎರಡು ತಿಂಗಳಿಂದ ಆರಂಭವಾಗಿದ್ದು, ಬೆಳಿಗ್ಗೆ ರಾಯಚೂರುನಿಂದ ಕಲಬುರಗಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಿದೆ. ಸಂಜೆ 6 ಗಂಟೆಗೆ ಮತ್ತೆ ಕಲಬುರಗಿ ಮಾರ್ಗವಾಗಿ ರಾಯಚೂರು ಪ್ಯಾಸೆಂಜರ್‌ ರೈಲು ಇದೆ. ಆದರೆ, ಬೆಳಗಿನ ಜಾವದಲ್ಲಿ ಈ ಮುಂಚೆ ಇದ್ದ ಪ್ಯಾಸೆಂಜರ್ ಸ್ಥಗಿತಗೊಂಡಿದೆ.

ವ್ಯಾಪಾರಸ್ಥರು, ನೌಕರರಿಗೆ ಅನುಕೂಲ: ಕಲಬುರಗಿ- ರಾಯಚೂರು-ಗುಂತಕಲ್ ಪ್ಯಾಸೆಂಜರ್ ವ್ಯಾಪಾರಸ್ಥರು, ನೌಕರರಿಗೆ ಅನುಕೂಲವಾಗಿತ್ತು. ಕಲಬುರಗಿಯಿಂದ ಶಿಕ್ಷಕರು, ಸರ್ಕಾರಿ ನೌಕರರು, ಖಾಸಗಿ ನೌಕಕರು ತಿಂಗಳು ಪಾಸ್‌ ಮಾಡಿಸಿ ಓಡಾಡ ನಡೆಸುತ್ತಿದ್ದರು. ಅದರ ಜೊತೆಗೆ ವ್ಯಾಪಾರಸ್ಥರು ತಮ್ಮ ವಹಿವಾಟಿಗೆ ಈ ರೈಲನ್ನು ಅವಲಂಬಿಸಿದ್ದರು.

ಹೆಚ್ಚು ಆದಾಯ ತರುವ ರೈಲ್ವೆ ನಿಲ್ದಾಣ: ದಕ್ಷಿಣ ಮಧ್ಯ ರೈಲ್ವೆಯಲ್ಲಿ ಹೆಚ್ಚು ಆದಾಯ ತರುವ ಸ್ಥಾನದಲ್ಲಿ ಯಾದಗಿರಿ ರೈಲು ನಿಲ್ದಾಣವಾಗಿದೆ ಎನ್ನಲಾಗುತ್ತಿದೆ. ಆದರೆ, ಇಲ್ಲಿಯೇ ಅನೇಕ ರೈಲುಗಳು ನಿಲ್ಲುತ್ತಿಲ್ಲ. ಇವುಗಳನ್ನು ನಿಲ್ಲಿಸುವಂತೆ ಮಾಡಬೇಕು ಎಂದು ಜನರ ಒತ್ತಾಯವಾಗಿದೆ.

ಹಿಂದೆ ಕೆಲವು ರೈಲುಗಳ ಸಂಚಾರ ಆರಂಭವಾಗಿರಲಿಲ್ಲ. ಮನವಿ ಕೊಟ್ಟ ನಂತರ ಆರಂಭವಾಗಿದ್ದು, ಈಗ ಕಲಬುರಗಿ–ಗುಂತಕಲ್‌ ಪ್ಯಾಸೆಂಜರ್‌ ರೈಲು ಸಂಚಾರ ಆರಂಭಿಸುವಂತೆ ಮನವಿ ಸಲ್ಲಿಸಲಾಗುವುದು. ಇದಕ್ಕೆ ಸೂಕ್ತ ಸ್ಪಂದನೆ ಸಿಗುವ ಭರವಸೆ ಇದೆ.
ರಾಜಾ ಅಮರೇಶ ನಾಯಕ, ರಾಯಚೂರು ಸಂಸದ

ಮಹಾರಾಷ್ಟ್ರದ ಫಂಡರಪುರದ ವಿಠ್ಠಲ–ರುಕ್ಮಿಣಿ ಜಾತ್ರೆ ನಡೆಯುತ್ತಿರುವುದರಿಂದ ಪ್ಯಾಸೆಂಜರ್‌ ರೈಲು ಸಂಚರಿಸುವುದು ತಡವಾಗಿದೆ. ಜಾತ್ರೆ ಮುಗಿದ ನಂತರ ಪ್ಯಾಸೆಂಜರ್‌ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ.
ರಾಜನ್‌ ದಾಸ್‌, ಯಾದಗಿರಿ ರೈಲು ನಿಲ್ದಾಣದ ವ್ಯವಸ್ಥಾಪಕ

ಮೊದಲು ಕಲಬುರಗಿಯಿಂದ ಯಾದಗಿರಿಗೆ ಪ್ಯಾಸೆಂಜರ್‌ ರೈಲು ಸಂಚರಿಸುತ್ತಿತ್ತು. ಹೆಚ್ಚಿನ ನೌಕರರು ಇದೇ ರೈಲನ್ನು ಅವಲಂಬಿಸಿದ್ದರು. ಶೀಘ್ರ ಕಲಬುರಗಿ–ಗುಂತಕಲ್‌ ಪ್ಯಾಸೆಂಜರ್‌ ರೈಲು ಆರಂಭಿಸಬೇಕು.
ಬಸವರಾಜ ಪಾಟೀಲ, ಪ್ರಯಾಣಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT