ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‍‍‍‍‍‍‍ಜಿಲ್ಲೆಯಲ್ಲಿ ₹180 ಕೋಟಿ ನಷ್ಟ

ಪ್ರವಾಹ ಪರಿಹಾರ ಕಾಮಗಾರಿಗಳ ಪರಿಶೀಲನೆ ನಡೆಸಿದ ನೂತನ ಸಚಿವರು
Last Updated 22 ಆಗಸ್ಟ್ 2019, 15:51 IST
ಅಕ್ಷರ ಗಾತ್ರ

ಯಾದಗಿರಿ: ನೂತನ ಸಚಿವರಾದ ಬಿ.ಶ್ರೀರಾಮುಲು, ಪ್ರಭು ಚವಾಣ ಅವರು ಜಿಲ್ಲೆಯಲ್ಲಿ ಪ್ರವಾಹದಿಂದ ಆಗಿರುವ ಹಾನಿ ಹಾಗೂ ಪರಿಹಾರ ಕಾಮಗಾರಿಗಳ ಕುರಿತು ಗುರುವಾರ ಇಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪರಿಶೀಲನೆ ನಡೆಸಿದರು.

‘ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿಗಳ ಪ್ರವಾಹದಿಂದ ₹180 ಕೋಟಿ ನಷ್ಟವಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಾನಿಗೊಳಗಾದ ವಿದ್ಯುತ್ ಪರಿವರ್ತಕಗಳು ಮತ್ತು ಕಂಬಗಳನ್ನು ಬದಲಾಯಿಸಿ ವಾರದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು’ ಎಂದು ಶ್ರೀರಾಮುಲು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ನದಿಗಳ ತೀರದ ಗ್ರಾಮಗಳಲ್ಲಿ 1900 ವಿದ್ಯುತ್ ಕಂಬಗಳು ಬಿದ್ದಿವೆ. 507 ವಿದ್ಯುತ್ ಪರಿವರ್ತಕಗಳು ಹಾಳಾಗಿವೆ. ಇವುಗಳಲ್ಲಿ 110 ಬದಲಾಯಿಸಲಾಗಿದೆ. 300 ವಿದ್ಯುತ್ ಪರಿವರ್ತಕಗಳ ಸಂಗ್ರಹ ಇದ್ದು, ಬದಲಾಯಿಸುವ ಕಾರ್ಯ ನಡೆಯುತ್ತಿದೆ ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ರಾಘವೇಂದ್ರ ಮಾಹಿತಿ ನೀಡಿದರು.

ಇದಕ್ಕೆ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿ, ‘ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದ ಬೆಳೆಗಳು ಒಣಗುತ್ತಿವೆ, ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ. ತಡವಾಗಿ ವಿದ್ಯುತ್ ನೀಡಿದರೆ ಯಾವುದೇ ಪ್ರಯೋಜನ ಇಲ್ಲ. ಹಾಗಾಗಿ ತುರ್ತಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು’ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಈ ಸಂದರ್ಭದಲ್ಲಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸಭೆಯಲ್ಲಿಯೇ ಕರೆ ಮಾಡಿದ ಸಚಿವರು, ಜಿಲ್ಲೆಗೆ ಬೇಕಾದಷ್ಟು ವಿದ್ಯುತ್ ಪರಿವರ್ತಕಗಳನ್ನು ತರಿಸಿಕೊಂಡು ತಕ್ಷಣ ಸಮಸ್ಯೆ ಪರಿಹರಿಸಿ’ ಎಂದು ನಿರ್ದೇಶಿಸಿದರು.

ಪ್ರಭು ಚವಾಣ ಮಾತನಾಡಿ, ‘ಪ್ರವಾಹ ಸಂತ್ರಸ್ತರಿಗೆ ಈಗಾಗಲೇ ತುರ್ತು ಪರಿಹಾರವಾಗಿ ₹3800 ನೀಡಲಾಗಿದೆ. ಈಗ ಹೆಚ್ಚುವರಿ ಘೋಷಿಸಿದ ₹6200 ಸೇರಿ ಪ್ರತಿ ಕುಟುಂಬಕ್ಕೆ ತಲಾ ₹10 ಸಾವಿರಗಳಂತೆ ಪರಿಹಾರ ಹಣವನ್ನು ತಕ್ಷಣ ನೀಡಬೇಕು. ಪ್ರವಾಹದಿಂದ ಬೆಳೆ ಹಾನಿ, ಮನೆಗಳ ಹಾನಿ ವರದಿಯನ್ನು ನಿಖರವಾಗಿ ಸಲ್ಲಿಸಬೇಕು. ಈ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ, ಸೂಕ್ತ ಪರಿಹಾರಕ್ಕೆ ಮನವಿ ಮಾಡಲಾಗುವುದು’ ಎಂದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ‘ಪ್ರವಾಹದಿಂದಹಾಳಾದ ಜಿಲ್ಲೆಯ ರಸ್ತೆಗಳನ್ನು ಶೀಘ್ರ ದುರಸ್ತಿ ಮಾಡಬೇಕು. ಸಂತ್ರಸ್ತರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಪ್ರವಾಹದಿಂದಾಗಿ ಎನ್‍ಡಿಆರ್‌ಎಫ್ ಮತ್ತು ಎನ್‍ಸಿಆರ್‌ಎಫ್ ಮಾರ್ಗಸೂಚಿ ಅನ್ವಯ ಜಿಲ್ಲೆಯಲ್ಲಿ ಅಂದಾಜು ₹26.16 ಕೋಟಿ ಮೊತ್ತದ ಹಾನಿ ಸಂಭವಿಸಿದೆ. ವಾಸ್ತವದಲ್ಲಿ ₹180 ಕೋಟಿ ಹಾನಿ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ತಿಳಿಸಿದರು.

ಈ ವೇಳೆ ಸಚಿವ ಶ್ರೀರಾಮುಲು ಮಾತನಾಡಿ, ‘ಪ್ರವಾಹ ಹಾನಿ ಪ್ರಮಾಣದ ಕುರಿತು ಎನ್‍ಡಿಆರ್‌ಎಫ್ ಮತ್ತು ಎನ್‍ಸಿಆರ್‌ಎಫ್ ಮಾರ್ಗಸೂಚಿ ಅನ್ವಯ ಮೊತ್ತ ಹಾಗೂ ವಾಸ್ತವದಲ್ಲಿ ಸಂಭವಿಸಿರುವ ಹಾನಿ ಮೊತ್ತವನ್ನು ಇಲಾಖಾವಾರು ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯ ನಾರಾಯಣಪುರ ಜಲಾಶಯಕ್ಕೆ ಸದ್ಯ ಒಳಹರಿವು 10 ಸಾವಿರ ಕ್ಯುಸೆಕ್ ಇರುವುದರಿಂದ ನದಿಗೆ ನೀರು ಬಿಡುತ್ತಿಲ್ಲ’ ಎಂದು ಕೂರ್ಮಾರಾವ್‌ ತಿಳಿಸಿದರು.

ರಸ್ತೆಗಳಿಗೆ ಹಾನಿ: ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಚನ್ನಬಸಪ್ಪ ಮೆಕಾಲೆ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಸೇತುವೆಗಳು ಮತ್ತು ರಸ್ತೆಗಳು ಸೇರಿ ₹15 ಕೋಟಿ ಮೊತ್ತದ ಹಾನಿ ಸಂಭವಿಸಿದೆ. 14 ಕಿ.ಮೀ.ನಷ್ಟು ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಮಾತನಾಡಿ, ಪ್ರತಿ ಬಾರಿ ಪ್ರವಾಹ ಬಂದಾಗ ಕೊಳ್ಳೂರು (ಎಂ) ಸೇತುವೆ ಮುಳುಗುತ್ತದೆ. ಇದನ್ನು ಎತ್ತರಿಸಲು ಕ್ರಮ ಕೈಗೊಳ್ಳಬೇಕು ಎಂದರು. ಈ ಬಗ್ಗೆ ಹೊಸ ಪ್ರಸ್ತಾವನೆ ಸಲ್ಲಿಸಲು ಶ್ರೀರಾಮುಲು ಸೂಚಿಸಿದರು.

ಸದ್ಯದಲ್ಲಿ ಕೇಂದ್ರ ತಂಡ ಬರಲಿದೆ:
ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಹಗೊಳಗಾದ ಪ್ರದೇಶಗಳನ್ನು ವೀಕ್ಷಿಸಲು ಸದ್ಯದಲ್ಲಿಯೇ ಕೇಂದ್ರ ಅಧ್ಯಯನ ತಂಡ ಬರಲಿದೆ. ಈ ತಂಡ ಬಂದ ನಂತರ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದುಸಚಿವ ಬಿ.ಶ್ರೀರಾಮುಲು ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ಇರುವ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ರಾಜ್‍ಕುಮಾರ್ ಪತ್ತಾರ ತಿಳಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಡಿ.ಡಿ.ಟಿ. ಪೌಡರ್, ರಾಸಾಯನಿಕ ಸಿಂಪಡಿಸಲಾಗುತ್ತಿದೆ. ಕುದಿಸಿ ಆರಿಸಿದ ನೀರನ್ನು ಕುಡಿಯಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ, ಹೆಚ್ಚವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್., ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT