ಗುರುವಾರ , ಮಾರ್ಚ್ 4, 2021
25 °C

ಯೋಗದ ಜತೆ ಶಿವ ಯೋಗ..!

 ಪ್ರಕಾಶ ಎನ್.ಮಸಬಿನಾಳ Updated:

ಅಕ್ಷರ ಗಾತ್ರ : | |

Deccan Herald

ಪಡುವಣದ ದಿಗಂತದಲ್ಲಿ ದಿನಕರ ಕೆಂಬಣ್ಣದೊಂದಿಗೆ ಇಳಿಜಾರಲು ಆರಂಭಿಸುತ್ತಿದ್ದಂತೆ, ಬಸವನಬಾಗೇವಾಡಿಯ ಬಸವೇಶ್ವರ ದೇಗುಲದ ಅಂತರರಾಷ್ಟ್ರೀಯ ಶಾಲೆ ಆವರಣದಲ್ಲಿ ಅಪಾರ ಸಂಖ್ಯೆಯ ಜನರು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಪ್ರವಚನ ಆಲಿಸಲು ಮುಗಿಬೀಳುತ್ತಿದ್ದಾರೆ.

ಇನ್ನೂ ಮೂಡಣದ ಬಾನಂಗಳದಲ್ಲಿ ಭಾಸ್ಕರನ ಉದಯಕ್ಕೂ ಮುನ್ನವೇ, ಚುಮು ಚುಮು ಚಳಿಯಲ್ಲೂ ಅಪಾರ ಸಂಖ್ಯೆಯ ಜನರು ಯೋಗ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಆಧ್ಯಾತ್ಮಿಕ ಚಿಂತನೆ ಹಾಗೂ ಆರೋಗ್ಯಕರ ಬದುಕಿನ ಮಹತ್ವವನ್ನು ಅರಿಯುತ್ತಿದ್ದಾರೆ.

ಶ್ರಾವಣ ಮಾಸ ಹಾಗೂ ಬಸವೇಶ್ವರ ಜಾತ್ರೆಯ ಅಂಗವಾಗಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ. ಜಾತ್ರಾ ಉತ್ಸವ ಸಮಿತಿ, ರಾಷ್ಟ್ರೀಯ ಬಸವ ಸೈನ್ಯದ ಸಹಯೋಗದಲ್ಲಿ ನಡೆಯುತ್ತಿರುವ ಪ್ರವಚನಕ್ಕೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ನಿತ್ಯವೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.

ಇದೇ ಆವರಣದಲ್ಲಿ ಸೆ.1ರಿಂದ ನಿತ್ಯ ಬೆಳಿಗ್ಗೆ 5 ಗಂಟೆಗೆ ಆರಂಭವಾಗುವ ಉಚಿತ ಯೋಗ ಶಿಬಿರದಲ್ಲೂ ಅಪಾರ ಸಂಖ್ಯೆಯ ಜನರು ಪಾಲ್ಗೊಳ್ಳುವ ಮೂಲಕ, ಯೋಗವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಆಸಕ್ತರು ಮುಂದಾಗಿದ್ದಾರೆ.

ಬೆಂಗಳೂರಿನ ಯೋಗ ನಿಸರ್ಗ ಚಿಕಿತ್ಸಾ ಮತ್ತು ಆಯುರ್ವೇದ ಕೇಂದ್ರದ ಸಂಸ್ಥಾಪಕ, ಯೋಗ ಗುರು ಚನ್ನಬಸವಣ್ಣ ಯೋಗ ತರಬೇತಿ ನೀಡುತ್ತಿದ್ದಾರೆ.

ಸರ್ವ ರೋಗಕ್ಕೂ ಯೋಗವೇ ಮದ್ದು

‘ಪ್ರಾಣಿ–ಪಕ್ಷಿಗಳಿಗೆ ಬರದ ರೋಗಗಳು ಮನುಷ್ಯನಿಗೆ ಏಕೆ ಬರುತ್ತಿವೆ ? ರೋಗಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ ತಿಳಿದುಕೊಳ್ಳಬೇಕು. ನಮ್ಮ ದೇಹದ ಅಂಗಾಂಗಗಳ ಸಹಜ ಕ್ರಿಯೆ ನಡೆಯಲು ಆರೋಗ್ಯ ಮುಖ್ಯವಾಗಿದೆ. ಸರ್ವರೋಗಗಳಿಗೆ ಯೋಗ ಒಂದೇ ಮದ್ದು,

ಯೋಗ ಸಾಧನೆ ಕಠಿಣವಾದುದು. ಅದು ಬ್ರಹ್ಮಚಾರಿ ಹಾಗೂ ಸನ್ಯಾಸಿಗಳಿಗೆ ಮಾತ್ರ ಸೂಕ್ತವಾಗಿದೆ ಎಂಬ ತಪ್ಪು ಕಲ್ಪನೆಯಿಂದ ಹೊರ ಬರಬೇಕು. ಯೋಗ ಎಂದರೆ ಸರಳತೆ, ಆತ್ಮ ಪರಮಾತ್ಮನ ಮಿಲನವೇ ಯೋಗವಾಗಿದೆ...’ ಎಂಬಿತ್ಯಾದಿ ಸಂದೇಶಗಳೊಂದಿಗೆ ವಿವಿಧ ಆಸನಗಳನ್ನು ತಿಳಿಸಿಕೊಡುತ್ತಿದ್ದಾರೆ.

30ರ ಪ್ರಾಯದ ಯೋಗ ಗುರು ಚನ್ನಬಸವಣ್ಣ ತಮ್ಮ 15ನೇ ವಯಸ್ಸಿನಲ್ಲೇ ಯೋಗದ ಆಸಕ್ತಿ ಬೆಳೆಸಿಕೊಂಡವರು. ರವಿಶಂಕರ ಆಯುರ್ವೇದಿಕ ಸಂಶೋಧನಾ ಕೇಂದ್ರ, ದೆಹಲಿಯ ಅಖಿಲ ಭಾರತ ಪ್ರಾಕೃತಿಕ ಪರಿಷತ್‌ನಲ್ಲಿ ಸೇರಿದಂತೆ ವಿವಿಧೆಡೆ ಯೋಗ ಮತ್ತು ಆಯುರ್ವೇದಿಕ ಶಿಕ್ಷಣ ಪಡೆದ ಇವರು ಕೊಲೊಂಬೊ ವಿಶ್ವವಿದ್ಯಾಲಯದಿಂದ ಯೋಗಿಕ್‌ ವಿಜ್ಞಾನದಲ್ಲಿ ಪಿಎಚ್‌.ಡಿ ಪದವಿ ಪಡೆದ ಮೊದಲಿಗರು. ಯೋಗ ಸಾಧನೆಯ ನಂತರ ದೇಶದ ವಿವಿಧೆಡೆ ಸೇರಿದಂತೆ, ವಿಶ್ವದ 15 ರಾಷ್ಟ್ರಗಳಲ್ಲಿ ನೂರಾರು ಶಿಬಿರಗಳನ್ನು ನಡೆಸಿದ್ದಾರೆ.

ರೋಗಗಳಿಂದ ಮುಕ್ತಿ ಹೊಂದಿ ಆನಂದಮಯ ಜೀವನ ನಡೆಸಲು ಅಗತ್ಯವಿರುವ ಸರಳ ಆಸನಗಳನ್ನು ತಿಳಿಸಿಕೊಡುತ್ತಿರುವ ಇವರು, ಗಂಭೀರ ಎನಿಸಿದ ರೋಗಗಳಿಗೆ ಆಯುರ್ವೇದಿಕ ಔಷಧಿಗಳ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಇವರ ಬಳಿ ಚಿಕೆತ್ಸೆ ಪಡೆಯಲು ನಿತ್ಯ ಅಪಾರ ಜನರು ಬರುತ್ತಿದ್ದಾರೆ. ಸೆ.10 ರಂದು (ಸೋಮವಾರ) ಪ್ರವಚನ ಹಾಗೂ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ.

ಶಿವಯೋಗ

ಇದೇ ಆವರಣದಲ್ಲಿ ಸೆ.8ರಿಂದ ಮೂರು ದಿನ ನಿಜಗುಣಾನಂದ ಸ್ವಾಮೀಜಿ ಬೆಳಿಗ್ಗೆ 6 ಗಂಟೆಗೆ ಶಿವಯೋಗದ ಮಹತ್ವವನ್ನು ತಿಳಿಸಿಕೊಡುತ್ತಿದ್ದಾರೆ. ಲಿಂಗಪೂಜೆಯ ವಿಧಾನ, ಲಿಂಗಪೂಜೆಯಿಂದಾಗುವ ಬದಲಾವಣೆ, ಅಧ್ಯಾತ್ಮದ ಶಕ್ತಿ, ಮನಸ್ಸನ್ನು ನಿಯಂತ್ರಣ ಮಾಡಿಕೊಳ್ಳುವುದು ಹೇಗೆ ? ಶರಣರು ನಡೆಸಿದ ಶಿವಯೋಗದಿಂದ ಸಮಾಜದಲ್ಲಿ ಹೇಗೆ ಬದಲಾವಣೆ ತಂದರು ಸೇರಿದಂತೆ ಶರಣರ ನಿದರ್ಶನಗಳನ್ನು ತಿಳಿಸಿ ಕೊಡುತ್ತಿದ್ದಾರೆ.

ಮಕ್ಕಳು, ಯುವಕರು, ಮಹಿಳೆಯರು, ವೃದ್ಧರು ಶಿವಯೋಗದ ಮಹತ್ವ ತಿಳಿಯುವ ಮೂಲಕ ಶ್ರಾವಣ ಮಾಸದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವ ಸಂಘಟಕರ ಕಾರ್ಯವನ್ನು ಶ್ಲಾಘಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು