ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಿ: ಕುಲಪತಿ ಪ್ರೊ.ಸಬಿಹಾ ಸಲಹೆ

Last Updated 5 ಡಿಸೆಂಬರ್ 2019, 14:53 IST
ಅಕ್ಷರ ಗಾತ್ರ

ವಿಜಯಪುರ: ‘ಯುವ ಪೀಳಿಗೆಯಲ್ಲಿ ಅಪಾರ ಜ್ಞಾನ, ಕಲೆ, ಸಾಹಿತ್ಯ, ಸೃಜನಶೀಲತೆ ಅಡಗಿದೆ. ಪ್ರತಿಭೆ ಅನಾವರಣಕ್ಕೆ ಸರ್ಕಾರ ಕಲ್ಪಿಸಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಹಿಂದಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಾನಪದಕ್ಕೆ ಹೆಚ್ಚು ಮಹತ್ವ ಕೊಟ್ಟವರು ಮಹಿಳೆಯರು. ಜಾನಪದ ಸಾಹಿತ್ಯದ ಸೃಷ್ಟಿಯಲ್ಲಿ ಮಹಿಳೆಯ ಪಾತ್ರ ಬಹಳ ಮುಖ್ಯವಾಗಿದ್ದು, ಯುವ ಜನತೆ ತಮ್ಮ ಬಾಳ ಸಂಗಾತಿಯಾಗಿ ಬರುವ ಸ್ತ್ರೀಯ ಕಲೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳೆಸಬೇಕು’ ಎಂದು ಹೇಳಿದರು.

ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಹಾಗೂ ರಾಷ್ಟ್ರೀಯ ಯುವಜನೋತ್ಸವ ಸಮಿತಿ ಸದಸ್ಯ ಡಾ.ಜಾವಿದ್ ಜಮಾದಾರ ಮಾತನಾಡಿ, ‘ಆಧುನಿಕ ಭರಾಟೆಯಲ್ಲಿ ನಮ್ಮ ಸಂಸ್ಕೃತಿ, ಪರಂಪರೆ ಮರೆಯಾಗುತ್ತಿದೆ. ದೇಶದ ಸಂಸ್ಕೃತಿ, ಭವ್ಯ ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ. ಇಂತಹ ಭವ್ಯ ಪರಂಪರೆಯನ್ನು ಉಳಿಸಿ-–ಬೆಳೆಸುವ ಕಾರ್ಯವನ್ನು ಯುವಜನತೆ ಮಾಡಬೇಕಾಗಿದೆ’ ಎಂದು ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ಯುವಜನತೆ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ. ಯುವ ಜನರಲ್ಲಿ ಸಂಸ್ಕೃತಿಯ ಮಹತ್ವವನ್ನು ಸಾರಲು ಭಾರತ ಸರ್ಕಾರ ಯುವ ಜನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇಲ್ಲಿ ಆಯ್ಕೆಯಾದ ಪ್ರತಿಭಾನ್ವಿತ ಕಲಾವಿದರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು’ ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಸಲಹಾ ಸಮಿತಿ ಸದಸ್ಯ ಅಡಿವೆಪ್ಪ ಸಾಲಗಲ್ಲ ಮಾತನಾಡಿ, ‘ಯುವ ಜನತೆ ಮೊಬೈಲ್ ಎಂಬ ಮಾಯಾಜಾಲದಲ್ಲಿ ಮುಳುಗಿದ್ದಾರೆ. ಯುವಜನೋತ್ಸವ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೇ, ಗ್ರಾಮೀಣ ಪ್ರದೇಶದಲ್ಲಿರುವ ಯುವ ಪ್ರತಿಭೆಗಳನ್ನು ಗುರುತಿಸಿ, ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡಬೇಕು. ಮಹಿಳೆಯಲ್ಲಿರುವ ಕಲೆಯನ್ನು ಗುರುತಿಸಿ, ಪ್ರೊತ್ಸಾಹಿಸುವುದು ಪ್ರತಿ ಪುರುಷನ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

ಮಹಿಳಾ ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್‌ ಸಂಯೋಜಕರಾದ ಪ್ರೊ.ಬಿ.ಎಲ್. ಲಕ್ಕಣ್ಣವರ, ಬಸವರಾಜ ಕುಲಕರ್ಣಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸಂಜೀವ ಖೋತ, ಸಂತೋಷ ನಿಗಡಿ ಇದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್.ಜಿ.ಲೋಣಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ನಾಗರಾಜ ಎಸ್.ಬಿರಾದಾರ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT