ಕುಚಲಕ್ಕಿ ಪೂರೈಕೆಗೆ ಅನುಮತಿ ಕೋರಿ ಪ್ರಸ್ತಾವ

7
ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ

ಕುಚಲಕ್ಕಿ ಪೂರೈಕೆಗೆ ಅನುಮತಿ ಕೋರಿ ಪ್ರಸ್ತಾವ

Published:
Updated:
Prajavani

ಶಿವಮೊಗ್ಗ: ಕನಿಷ್ಠ ಬೆಂಬಲ ಬೆಲೆ ಅಡಿ ಭತ್ತ ಮಾರಾಟ ಮಾಡಲು 712 ರೈತರು ಹೆಸರು ನೋದಾಯಿಸಿಕೊಂಡಿದ್ದಾರೆ. ಇದುವರೆಗೆ 28 ಸಾವಿರ ಕ್ವಿಂಟಲ್ ಭತ್ತ ಖರೀದಿಸಲಾಗಿದೆ. ಅಕ್ಕಿಯಲ್ಲಿ ನುಚ್ಚು ಹೆಚ್ಚಾಗಿರುವ ಕಾರಣ ಕುಚಲಕ್ಕಿ ಪೂರೈಕೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಜಯಪ್ಪ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಮಾರ್ಗಸೂಚಿ ಪ್ರಕಾರ ಒಂದು ಕ್ವಿಂಟಲ್ ಭತ್ತದಲ್ಲಿ ಕನಿಷ್ಠ 67 ಕೆ.ಜಿ. ಅಕ್ಕಿ ಒದಗಿಸಬೇಕಿದೆ. ಸ್ಥಳೀಯ ಭತ್ತದಲ್ಲಿ ನುಚ್ಚಿನ ಅಂಶ ಹೆಚ್ಚಿರುವುದರಿಂದ ಇಷ್ಟು ಅಕ್ಕಿ ಒದಗಿಸಲು ಸಾಧ್ಯವಿಲ್ಲ ಎಂದು ಗಿರಣಿ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುಚ್ಚಲಕ್ಕಿ ಪೂರೈಕೆ ಮಾಡಲು ಅನುಮತಿ ಕೋರಿದ್ದೇವೆ ಎಂದು ವಿವರ ನೀಡಿದರು.

ಸಂಹನಕ್ಕೆ ವಯರ್‌ಲೆಸ್‌ ಸಾಧನ:

ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ವಯರ್‌ಲೆಸ್ ಸಂಪರ್ಕ ಸೌಲಭ್ಯ ಒದಗಿಸಲಾಗಿದೆ. ನೈಸರ್ಗಿಕ ವಿಕೋಪದಂಥ ಸಮಯದಲ್ಲಿ ಸಂಹನಕ್ಕೆ ಇದು ಅತ್ಯಂತ ಅಗತ್ಯ. ಈಗಾಗಲೇ ನೀಡಿರುವ ವಯರ್‌ಲೆಸ್ ಸಾಧನಗಳನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಚಕ್ರವರ್ತಿ ಮೋಹನ್ ಸಲಹೆ ನೀಡಿದರು.

216 ಗ್ರಾಮಗಳಲ್ಲಿ ಮುಂಜಾಗ್ರತೆ:

ಜಿಲ್ಲೆಯಲ್ಲಿ ಹಿಂಗಾರು ವಾಡಿಕೆಗಿಂತ ಶೇ 50ರಷ್ಟು ಕಡಿಮೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ತೊಂದರೆ ಇಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿನ  ಸಮಸ್ಯೆ ಎದುರಾಗಬಹುದಾದ 216 ಗ್ರಾಮಗಳನ್ನು ಗುರುತಿಸಲಾಗಿದೆ. ಇದರಲ್ಲಿ ಶಿವಮೊಗ್ಗ 16, ಭದ್ರಾವತಿ 44, ಸಾಗರ 69, ಹೊಸನಗರ 12, ಶಿಕಾರಿಪುರ 32 ಹಾಗೂ ಸೊರಬ ತಾಲ್ಲೂಕಿನ 43 ಗ್ರಾಮಗಳಿವೆ. ಈ ಗ್ರಾಮಗಳಲ್ಲಿ ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಮೇವು ಕೊರತೆ ಇಲ್ಲ:

ಜಿಲ್ಲೆಯಲ್ಲಿ ಭತ್ತದ ಕಟಾವು ನಡೆಯುತ್ತಿದೆ. ಸುಮಾರು 26 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಮೇವು ಬೀಜದ 32,522 ಕಿಟ್‌ಗಳನ್ನು ಪೂರೈಸಲಾಗಿದೆ. ಈಗಾಗಲೇ ಎಲ್ಲ ತಾಲ್ಲೂಕುಗಳಿಗೂ ಹಂಚಿಕೆ ಮಾಡಲಾಗಿದೆ ಎಂದು ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಸದಾಶಿವ ಮಾಹಿತಿ ನೀಡಿದರು.

ಅಡಿಕೆಗೆ ಕೊಳೆ ರೋಗ:

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಅಡಿಕೆಗೆ ಕೊಳೆರೋಗ ಬಂದು ₨ 18.50 ಕೋಟಿ ನಷ್ಟವಾಗಿದೆ. ಈಗಾಗಲೇ ₨ 8.50 ಕೋಟಿ ಪರಿಹಾರ ಧನ ಬಿಡುಗಡೆಯಾಗಿದೆ. 13,500 ಫಲಾನುಭವಿಗಳಿಗೆ ಪರಿಹಾರ ವಿತರಣೆ ಮಾಡಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಯೋಗೀಶ್ ಮಾಹಿತಿ ನೀಡಿದರು.

ಕಂದು ಜಿಗಿಹುಳ ಬಾಧೆ:

ಮುಂಗಾರು ಹಂಗಾಮಿನಲ್ಲಿ ಕಂದು ಜಿಗಿಹುಳ ಬಾಧೆಯಿಂದ ಜಿಲ್ಲೆಯಲ್ಲಿ ಒಟ್ಟು 6,698 ಹೆಕ್ಟೇರ್ ಪ್ರದೇಶದಲ್ಲಿನ ಭತ್ತದ ಬೆಳೆಗಳಿಗೆ ಹಾನಿಯಾಗಿದೆ. ಮಾರ್ಗಸೂಚಿ ಪ್ರಕಾರ ₨ 6.47 ಕೋಟಿ ಪರಿಹಾರ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಿವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ ಕುಮಾರ್ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಜಿಲ್ಲಾ ಪಂಚಾಯಿತಿ ಸಿಇಒ ಶಿವರಾಮೇಗೌಡ ಉಪಸ್ಥಿತರಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !