ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಪಂಚಾಯಿತಿಯಲ್ಲೂ ಪ್ರತಿಧ್ವನಿಸಿದ ಕಲ್ಲೊಡ್ಡು ಯೋಜನೆ

ನೆರೆ ಸಂತ್ರಸ್ತರಿಗೆ ಒಂದು ತಿಂಗಳ ಗೌರವಧನ ನೀಡಲು ಸಭೆಯಲ್ಲಿ ನಿರ್ಣಯ
Last Updated 25 ಸೆಪ್ಟೆಂಬರ್ 2019, 14:20 IST
ಅಕ್ಷರ ಗಾತ್ರ

ಶಿವಮೊಗ್ಗ: ಕಲ್ಲೊಡ್ಡು ಯೋಜನೆ ಬುಧವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲೂ ಪ್ರತಿಧ್ವನಿಸಿತು.

ಯೋಜನೆ ವಿರೋಧಿಸಿ ಸಾಗರ, ಹೊಸನಗರ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ನಿರ್ಣಯ ಅಂಗೀಕರಿಸುವಂತೆ ಪಟ್ಟು ಹಿಡಿದರು. ಶಿಕಾರಿಪುರ, ಸೊರಬ ಭಾಗದ ಸದಸ್ಯರು ಯೋಜನೆ ಪರ ವಕಾಲತ್ತು ವಹಿಸಿದರು. ಬಹುತೇಕ ಬಿಜೆಪಿ ಸದಸ್ಯರು ಯೋಜನೆ ಬೆಂಬಲಿಸಿ ಮಾತನಾಡಿದರು. ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕೊನೆಗೆ ಅಧ್ಯಕ್ಷೆ ಜ್ಯೋತಿ ಕುಮಾರ್ ಮಾತನಾಡಿ, ಯೋಜನೆ ಸಾಧಕ–ಬಾಧಕಗಳ ಕುರಿತು ವೈಜ್ಞಾನಿಕ ವಿವರಗಳನ್ನು ಪಡೆದ ನಂತರ ಈ ಕುರಿತು ನಿರ್ಧಾರ ತೆಗೆದುಕೊಳ್ಳೋಣ ಎಂದು ಚರ್ಚೆಗೆ ಮುಕ್ತಾಯ ಹಾಡಿದರು.

ಒಂದು ತಿಂಗಳ ಗೌರವಧನ:

ಭಾರಿ ಮಳೆಯಿಂದ ಹಾಗಿರುವ ಹಾನಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ಮಳೆ, ನೆರೆಯಿಂದ ಮಲೆನಾಡಿನ ಬಹುತೇಕ ಭಾಗಗಳಲ್ಲಿ ಅಡಿಕೆ, ಬಾಳೆ, ಭತ್ತ ನಾಶವಾಗಿವೆ. ಸಾವಿರಾರು ಜನರು ಮನೆ ಕಳೆದುಕೊಂಡಿದ್ದಾರೆ. ಗುಡ್ಡಗಳು ಕುಸಿದಿವೆ. ಇದುವರೆಗೂ ಪರಿಹಾರ ದೊರೆತಿಲ್ಲ. ಸಂತ್ರಸ್ತರಿಗೆ ಸಾಂತ್ವನ ಹೇಳಲೂ ವಿಶೇಷ ಸಭೆ ಕರೆದಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜೆ.ಅನುರಾಧ ಮಾತನಾಡಿ, ಬೆಳೆ ಹಾನಿ ಪರಿಹಾರಕ್ಕೆ ಪ್ರಥಮ ಹಂತದಲ್ಲಿ ₨ 9 ಕೋಟಿ ಬಿಡುಗಡೆಯಾಗಿದೆ. 15 ಸಾವಿರ ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾದ ವರದಿ ಸಲ್ಲಿಸಲಾಗಿದೆ ಎಂದರು.

ಮಂಗನ ಕಾಯಿಲೆಗೆ ಮುಂಜಾಗ್ರತೆ:

ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಕುಮಾರ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮಳೆಗಾಲ ಮುಗಿಯುವ ಮೊದಲೇ ಕಾಯಿಲೆ ಹರಡಿರುವುದು ಗಂಭೀರ ವಿಷಯ. ಕೆಎಫ್‌ಡಿ ಲಸಿಕೆ, ಡಿಎಂಪಿ ಆಯಿಲ್ ಎಲ್ಲಾ ಆಸ್ಪತ್ರೆಗಳಲ್ಲೂ ದಾಸ್ತಾನು ಮಾಡಬೇಕು. ಆ ಪ್ರದೇಶಗಳಲ್ಲಿ ಎಲ್ಲರಿಗೂ ಲಸಿಕೆ ಹಾಕಬೇಕು. ವೈದ್ಯಾಧಿಕಾರಿಗಳ ತಂಡಗಳನ್ನು ರಚಿಸಬೇಕು. ಪ್ರತಿ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್‌ ಸುರಗಿಹಳ್ಳಿ ಮಾತನಾಡಿ, ಎಲ್ಲಾ ಆಸ್ಪತ್ರೆಗಳಲ್ಲಿ ಲಸಿಕೆ ಸಾಕಷ್ಟು ಪ್ರಮಾಣದಲ್ಲಿದೆ. ಪ್ರಸ್ತುತ2.25 ಲಕ್ಷ ಡೋಸ್ ಲಸಿಕೆ ಲಭ್ಯವಿದೆ. ಜುಲೈ ತಿಂಗಳಿನಿಂದ ಇದುವರೆಗೆ ಒಂದು ಲಕ್ಷಕ್ಕೂ ಅಧಿಕ ಡೋಸ್ ಹಾಕಲಾಗಿದೆ. ಅಕ್ಟೋಬರ್ ಕೊನೆಯ ಒಳಗಾಗಿ ಎಲ್ಲರಿಗೂ ಲಸಿಕೆ ಹಾಕುವ ಕಾರ್ ಪೂರ್ಣಗೊಳಿಸಲಾಗುವುದು. ಇದೇ ರೀತಿ ಜಿಲ್ಲಾ ಮಟ್ಟದಲ್ಲಿ 45 ಸಾವಿರ ಡಿಎಂಪಿ ತೈಲ ಬಾಟಲುಗಳು ಲಭ್ಯವಿದೆ. ಪ್ರತಿ ತಾಲ್ಲೂಕಿನಲ್ಲೂ 6ಸಾವಿರ ಬಾಟಲು ಡಿಎಂಪಿ ಸರಬರಾಜು ಮಾಡಲಾಗಿದೆ. ಸಂಚಾರಿ ವೈದ್ಯಕೀಯ ಘಟಕದ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದರು.

ಆಯುಷ್ಮಾನ್ ಭಾರತ ಯೋಜನೆ ಅನುಷ್ಟಾನದಲ್ಲಿರುವ ಆಸ್ಪತ್ರೆಗಳ ವಿವರ ಸಾರ್ವಜನಿಕವಾಗಿ ಪ್ರಕಟಿಸಬೇಕು. 108 ಅಂಬುಲೆನ್ಸ್ ಮೂಲಕ ರೋಗಿಗಳನ್ನು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುತ್ತಿರುವ ದೂರುಗಳಿವೆ. ಈ ಕುರಿತು ಪರಿಶೀಲಿಸಬೇಕು ಎಂದು ಸಿಇಒ ವೈಶಾಲಿ ತಾಕೀತು ಮಾಡಿದರು.

ಟಾಸ್ಕ್‌ಫೋರ್ಸ್‌ ರಚನೆಗೆ ಸ್ವಾಗತ:

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್‌ಪೋರ್ಸ್‌ ರಚಿಸುವ ನಿರ್ಧಾರ ಕೈಗೊಂಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಸದಸ್ಯರು ಸ್ವಾಗತಿಸಿದರು.

ಸಣ್ಣ ನೀರಾವರಿ ಅಧಿಕಾರಿಗೆ ತರಾಟೆ:

ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದರೂ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆಡಳಿತ ಹಾಗೂ ವಿರೋಧಪಕ್ಷದ ಸದಸ್ಯರು ಆರೋಪಿಸಿದರು. ಅಧಿಕಾರಿಗಳು ಇನ್ನಾದರೂ ಮಳೆ ಹಾನಿ ಕುರಿತ ವಿವರಗಳನ್ನು ದಾಖಲಿಸಬೇಕು. ಪರಿಹಾರ, ಅಗತ್ಯ ಕಾಮಗಾರಿ ಕೈಗೊಳ್ಳಲು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಜೆ.ಅನುರಾಧ, ಸಿಇಒ ವೈಶಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT