ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷದ ಶಾಸಕರ ಮೇಲೆ ಹದ್ದಿನ ಕಣ್ಣು

ಅತ್ತಿಂದಿತ್ತ ಅಡ್ಡಾಡುತ್ತಿದ್ದ ಡಿ.ಕೆ.ಶಿವಕುಮಾರ್‌ * ಕೆಳಮನೆ ಸದಸ್ಯರನ್ನು ಹಿಂಬಾಲಿಸುತ್ತಿದ್ದ ಮೇಲ್ಮನೆ ಸದಸ್ಯರು
Last Updated 19 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಶಾಸಕರ ಮೇಲೆ ‘ಹದ್ದಿನ ಕಣ್ಣು’ ಇತ್ತು. ಅವರು ಸ್ವಲ್ವ ಮಿಸುಕಾಡಿದರೂ ಅವರನ್ನು ಮೂರನೇ ಕಣ್ಣು ಗಮನಿಸುತ್ತಿತ್ತು. ಅವರು ಎದ್ದು ಆಚೀಚೆ ಹೋದರೆ ಯಾರಾದರೂ ಹಿಂಬಾಲಿಸುತ್ತಿದ್ದರು.

ವಿರೋಧ ಪಕ್ಷದ ಮೊಗಸಾಲೆಯಲ್ಲಿ ಶನಿವಾರ ಕಂಡು ಬಂದ ದೃಶ್ಯವಿದು. ಚುನಾವಣೆಯ ಫಲಿತಾಂಶ ಬಂದ ದಿನದಿಂದ ಜತನದಿಂದ ಕಾಪಾಡಿಕೊಂಡು ಬಂದ ಶಾಸಕರು ‘ಕಮಲ’ ಪಾಳಯಕ್ಕೆ ಜಿಗಿಯಬಹುದು ಎಂಬ ಆತಂಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರಲ್ಲಿತ್ತು. ಈ ಎರಡೂ ಪಕ್ಷಗಳು ಶಾಸಕರ ಚಲನವಲನಗಳ ಮೇಲೆ ನಿಗಾ ಇಡುವ ಹೊಣೆಯನ್ನು ವಿಧಾನ ಪರಿಷತ್‌ ಸದಸ್ಯರಿಗೆ ವಹಿಸಿದ್ದವು.

ಬೆಳಿಗ್ಗೆ 10.30ಕ್ಕೆ ಬಸ್‌ನಲ್ಲಿ ವಿಧಾನಸೌಧಕ್ಕೆ ಬಂದ ಕಾಂಗ್ರೆಸ್‌ ಶಾಸಕರು ನೇರವಾಗಿ ಸದನಕ್ಕೆ ಬಂದರು. ಆಗಿನಿಂದಲೂ ವಿಧಾನ ಪರಿಷತ್‌ ಸದಸ್ಯರು ಅವರ ಬೆನ್ನ ಹಿಂದೆಯೇ ಇದ್ದರು. ಅವರಿಗಿಂತ ಮೊದಲೇ ವಿರೋಧ ಪಕ್ಷದ ಮೊಗಸಾಲೆಗೆ ಬಂದಿದ್ದ ಪಕ್ಷದ ಹಿರಿಯ ನಾಯಕರು, ‘ಎಲ್ಲರೂ ಬಂದಿದ್ದಾರೋ ಇಲ್ಲವೋ...’ ಎಂದು ಖಚಿತಪಡಿಸಿಕೊಂಡರು.

ಸಿದ್ದರಾಮಯ್ಯ ಅವರು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಅವರನ್ನು ಕರೆದು, ‘ಏನಯ್ಯಾ... ಎಲ್ಲರೂ ಇದ್ದಾರೇನಯ್ಯಾ...’ ಎಂದು ವಿಚಾರಿಸಿದರು.

‘ಹ್ಹಾ ಇದ್ದಾರೆ. ಅವರಿಗೆ ಏನು ಬೇಕೋ ಎಲ್ಲ ವ್ಯವಸ್ಥೆ ಮಾಡಿದ್ದೇವೆ. ಎಲ್ಲರ ಹಿಂದೆಯೂ ಜನ ಬಿಟ್ಟಿದ್ದೇವೆ’ ಎಂದು ಐವನ್‌ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರೂ, ಯಾರೆಲ್ಲ ಶಾಸಕರು ಬಂದಿದ್ದಾರೆ ಎಂಬ ಮಾಹಿತಿ ಪಡೆದುಕೊಂಡರು.

ಸ್ಥಳದಲ್ಲಿದ್ದ ವಿಧಾನ ಪರಿಷತ್‌ ಸದಸ್ಯೆ ಜಯಮಾಲಾ ಅವರನ್ನು ಉದ್ದೇಶಿಸಿ, ‘ಏನಮ್ಮಾ ಹೆಣ್ ಮಕ್ಕಳನ್ನೆಲ್ಲಾ ಸರಿಯಾಗಿ ಕಾಯುತ್ತಿದ್ದೀಯಾ’ ಎಂದು ವಿಚಾರಿಸಿದರು.

‘ಹೆಂಗಸರದ್ದು ಏನೂ ಸಮಸ್ಯೆ ಇಲ್ಲಾ ಸಾರ್‌... ಅವರು ಯಾವತ್ತೂ ಮೋಸ ಮಾಡುವುದಿಲ್ಲ. ಮೊದಲು ಗಂಡಸರನ್ನು ನೋಡಿಕೊಳ್ಳಬೇಕು ಸಾರ್‌’ ಎಂದು ಜಯಮಾಲಾ ಉತ್ತರಿಸಿದರು.

ಆನಂದ್‌ ಸಿಂಗ್‌ ಹಾಗೂ ಪ್ರತಾಪಗೌಡ ಪಾಟೀಲ ಇಬ್ಬರನ್ನು ಬಿಟ್ಟು ಉಳಿದೆಲ್ಲ ಶಾಸಕರೂ ಸದನಕ್ಕೆ ಬಂದಿರುವುದು ಕಾಂಗ್ರೆಸ್‌ ಶಾಸಕರು ನಿಟ್ಟುಸಿರು ಬಿಡುವಂತೆ ಮಾಡಿತ್ತು. ಹಾಗಾಗಿ ಅವರ ಮೊಗದಲ್ಲಿ ಗೆಲುವಿನ ವಿಶ್ವಾಸ ಬೆಳಿಗ್ಗೆಯಿಂದಲೇ ಎದ್ದು ಕಾಣುತ್ತಿತ್ತು. ಆದರೂ ಹಿರಿಯ ನಾಯಕರು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದ್ದರು.

ಪ್ರಮಾಣವಚನ ಸ್ವೀಕರಿಸಿದ ಬಳಿಕ ಕೆಲವು ಶಾಸಕರು ಆಸನದಿಂದ ಎದ್ದು ಹೊರಗೆ ಹೋಗುವಾಗಲೂ ಪಕ್ಷದ ಮುಖಂಡರು ಅವರ ಹಿಂದೆಯೇ ಬರುತ್ತಿದ್ದರು.

ಡಿ.ಕೆ.ಶಿವಕುಮಾರ್‌ ಅವರಂತೂ ಬೆನ್ನ ಹಿಂದೆ ಕೈಕಟ್ಟಿಕೊಂಡು ಸದನದಲ್ಲಿ ಹಾಗೂ ಮೊಗಸಾಲೆಯಲ್ಲಿ ಅತ್ತಿಂದಿತ್ತ ಅಡ್ಡಾಡುತ್ತಾ ಎಲ್ಲ ಸದಸ್ಯರ ಮೇಲೂ ಕಣ್ಣಿಟ್ಟಿದ್ದರು. ಊಟದ ವಿರಾಮದ ವೇಳೆ ಯಾರಾದರೂ ಹೊರಗೆ ಹೋಗಬಹುದು ಎಂಬ ಆತಂಕದಿಂದ ಬಾಗಿಲಿನ ಬಳಿಯೇ ವಿಧಾನ ಪರಿಷತ್‌ ಸದಸ್ಯರನ್ನು ನಿಲ್ಲಿಸಿದರು. ಅವರು ಬಾಗಿಲು ಹಾಕಲು ಮುಂದಾದಾಗ ತಡೆದ ಶಿವಕುಮಾರ್‌, ‘ಬಾಗಿಲು ಹಾಕುವುದೇನೂ ಬೇಡ, ಯಾರೂ ಹೊರಗೆ ಹೋಗದಂತೆ ನೋಡಿಕೊಳ್ಳಿ ಸಾಕು’ ಎಂದು ನಸುನಗೆ ಬೀರಿದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಾಳಯದಲ್ಲಿ ಮಧ್ಯಾಹ್ನದ ವೇಳೆ ಲವಲವಿಕೆ ಮನೆಮಾಡಿತ್ತು. ಊಟದ ವಿರಾಮಕ್ಕಾಗಿ ಸದನವನ್ನು ಮುಂದೂಡುವಷ್ಟರಲ್ಲಿ ಶಾಸಕರು, ಬಿಜೆಪಿಯವರು ತಮ್ಮನ್ನು ಸೆಳೆಯಲು ಏನೆಲ್ಲ ಪ್ರಯತ್ನಪಟ್ಟರು ಎಂಬ ಬಗ್ಗೆ ಬಹಿರಂಗವಾಗಿ ಚರ್ಚಿಸಲು ಆರಂಭಿಸಿದ್ದರು.

ಹಿರೇಕೆರೂರಿನ ಶಾಸಕ ಬಿ.ಸಿ.ಪಾಟೀಲ ಅವರಂತೂ ತಮಗೆ ಯಡಿಯೂರಪ್ಪ ಕರೆ ಮಾಡಿ, ‘ಏನಾದರೂ ನೆಪ ಹೇಳಿ ಬಸ್‌ನಿಂದ ಇಳಿದು ಬಾ. ಮಂತ್ರಿ ಮಾಡುತ್ತೇನೆ’ ಎಂದು ಹೇಳಿದ್ದನ್ನು ಅನ್ಯ ಶಾಸಕರ ಜೊತೆ ಸಿನಿಮಾ ಸಂಭಾಷಣೆಯ ಶೈಲಿಯಲ್ಲೇ ವಿವರಿಸುತ್ತಿದ್ದರು.

ಯಡಿಯೂರಪ್ಪ ಅವರು ವಿಶ್ವಾಸ ಮತ ಯಾಚಿಸದೆಯೇ, ರಾಜೀನಾಮೆ ನೀಡುವುದಾಗಿ ಘೋಷಿಸಿದ ಬಳಿಕವಂತೂ ವಿರೋಧ ಪಕ್ಷಗಳ ಸದಸ್ಯರ ಮೊಗದಲ್ಲಿ ಯುದ್ಧ ಗೆದ್ದ ಕಳೆ ಮೂಡಿತ್ತು. ಪರಸ್ಪರ ಅಭಿನಂದಿಸಿ ಶುಭಾಶಯ ಕೋರಿ ಸದನದಿಂದ ಹೊರ ನಡೆದರು.

ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಲಹರಿ

ವಿರೋಧ ಪಕ್ಷದ ನಾಯಕರಾಗಿದ್ದಾಗ ಹಾಗೂ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಮೊಗಸಾಲೆಗೆ ಬರುತ್ತಿದ್ದುದೇ ಕಡಿಮೆ. ಆದರೆ, ಶನಿವಾರ ಮೊಗಸಾಲೆಯಲ್ಲಿ ಹೆಚ್ಚಿನ ಹೊತ್ತು ಕಳೆದರು. ಮುಖ್ಯಮಂತ್ರಿಯಾಗಿದ್ದಾಗ ಅವರ ಸುತ್ತಲೂ ಸದಾ ದೊಡ್ಡ ಗುಂಪು ಇರುತ್ತಿತ್ತು. ಇಂದು ಬೆಳಿಗ್ಗೆ ಮೊಗಸಾಲೆಯಲ್ಲಿ ಕುಳಿತಿದ್ದಾಗ ಅವರ ಸುತ್ತ ಹೆಚ್ಚು ಜನರೇ ಇರಲಿಲ್ಲ.

ಕ್ಯಾಂಟೀನ್‌ನ ಸಿಬ್ಬಂದಿಯೊಬ್ಬರು, ‘ಸಾರ್‌ ತಿಂಡಿ ತಿಂದ್ರಾ. ಏನಾದ್ರೂ ಕೊಡ್ಲಾ’ ಎಂದು ಕೇಳಿ, ಪುಳಿಯೋಗರೆ ತಂದುಕೊಟ್ಟರು.

ಅದನ್ನು ಸವಿದ ಸಿದ್ದರಾಮಯ್ಯ, ‘ಯಾರೋ ಹೇಳಿದ್ದು ಇದು ಪುಳಿಯೋಗರೆ ಅಂತ... ಇದರಲ್ಲಿ ಬರೇ ಅನ್ನ ಇದೆ ಕಣಯ್ಯಾ. ಯಾರು ಕೊಟ್ಟಿದ್ದೋ ಇದನ್ನು’ ಎಂದು ಗುಡುಗಿದರು. ಸಿಬ್ಬಂದಿಯನ್ನು ಬಳಿಗೆ ಕರೆದು ₹ 500ರ ನೋಟು ಕೊಟ್ಟರು.

ಸ್ವಲ್ಪ ಹೊತ್ತಿನಲ್ಲೇ ಮಗ ಯತೀಂದ್ರ ಅಲ್ಲಿಗೆ ಬಂದಾಗ, ‘ಏನೋ... ತಿಂಡಿ ತಿಂದ್ಯಾ’ ಎಂದು ವಿಚಾರಿಸಿದರು.

ಪಕ್ಕದಲ್ಲಿದ್ದ ಮುಖಂಡರೊಬ್ಬರ ಬಳಿ, ‘ಇವನು ಸ್ವಲ್ಪ ಸಾಫ್ಟ್... ರಾಜಕೀಯ ಎಲ್ಲಾ ಇವನಿಗೆ ಅರ್ಥ ಆಗಲ್ಲ’ ಎಂದರು.

ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಅವರನ್ನು ಸೋಲಿಸಿರುವ ಶಾಸಕ ಸತ್ಯನಾರಾಯಣ ಅವರು ಸಿದ್ದರಾಮಯ್ಯ ಅವರನ್ನು ಎದುರಾದರು. ‘ಹಿಂದೆ, ಲೇಬರ್‌ ಮಿನಿಸ್ಟರ್‌ ಆಗಿದ್ದೀಯಲ್ಲಯ್ಯಾ. ಮತ್ತೆ ಬಂದ್ಯಾ, ಬಾ ವಿಧಾನಸಭೆಗೆ’ ಎಂದು ಬೆನ್ನು ತಟ್ಟಿದರು.

ಬಿ.ಎಸ್‌.ಯಡಿಯೂರಪ್ಪ ವಿಶ್ವಾಸಮತ ಗೆಲ್ಲಲು ವಿಫಲರಾದ ಬಳಿಕ ಸಿದ್ದರಾಮಯ್ಯ ಮತ್ತೆ ಮೊಗಸಾಲೆಗೆ ಬಂದರು. ಪಕ್ಷದ ಹಿರಿಯ ಮುಖಂಡರಾದ ಗುಲಾಂ ನಬಿ ಆಜಾದ್‌, ಅಶೋಕ್‌ ಗೆಹ್ಲೋಟ್‌, ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರು ಅಲ್ಲಿಗೆ ಬಂದು ಅಭಿನಂದನೆ ಸಲ್ಲಿಸಿದರು. ಆಗ ಅವರ ಖದರ್‌ ಮತ್ತೆ ಬದಲಾಗಿತ್ತು. ಅವರ ಮೊಗದಲ್ಲಿ ಎಂದಿನ ಕಳೆ ಮತ್ತೆ ಕಾಣಿಸಿಕೊಂಡಿತು.

ಎಂ.ಬಿ.ಪಾಟೀಲ ಹಿಂದೆ ಓಡಿದ ದಿನೇಶ್‌ ಗುಂಡೂರಾವ್‌

ಉಳಿದ ಶಾಸಕರಿಗಿಂತ ಲಿಂಗಾಯತ ಶಾಸಕರ ಮೇಲೆ ಕಾಂಗ್ರೆಸ್‌ ಮುಖಂಡರಿಗೆ ಹೆಚ್ಚಿನ ಶಂಕೆ ಇದ್ದಂತಿತ್ತು. ಊಟದ ವಿರಾಮದ ಬಳಿಕ ಮತ್ತೆ ಕರೆಗಂಟೆ ಮೊಳಗಿದ ಬಳಿಕ ಶಾಸಕ ಎಂಬಿ.ಪಾಟೀಲ ಅವರು ಫೋನ್‌ನಲ್ಲಿ ಮಾತನಾಡುತ್ತಾ ಮೊಗಸಾಲೆಯಿಂದ ಹೊರಗೆ ಹೋದರು.

ಅಷ್ಟರಲ್ಲಿ ಬಾಗಿಲ ಬಳಿಗೆ ಧಾವಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ‘ಪಾಟೀಲರು ಎಲ್ಲಿ ಹೋದರು. ಕರೀರಿ ಅವರನ್ನು...’ ಎಂದು ಓಡುತ್ತಲೇ ಅವರನ್ನು ಹಿಂಬಾಲಿಸಿದರು.

ಮಧ್ಯಾಹ್ನ ಸದನ ಮತ್ತೆ ಸೇರಿದಾಗ ಶಾಸಕ ಎಚ್‌.ಕೆ.ಪಾಟೀಲ ಕಾಣಿಸಿಕೊಳ್ಳಲಿಲ್ಲ. ಇದರಿಂದ ಕಾಂಗ್ರೆಸ್‌ ನಾಯಕರು ಆತಂಕಗೊಂಡರು. ಅವರನ್ನು ಹುಡುಕಲು ರಾಮಲಿಂಗಾರೆಡ್ಡಿ ಹೊರಗೆ ಹೋದರು. ಐದು ನಿಮಿಷ ಬಿಟ್ಟು ಪಾಟೀಲ ಸದನಕ್ಕೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT