ಸಾಮಾನ್ಯಸಭೆ ಅಸಿಂಧು: ಸ್ಥಾಯಿ ಸಮಿತಿಗಳಿಗೂ ಕುತ್ತು!

7

ಸಾಮಾನ್ಯಸಭೆ ಅಸಿಂಧು: ಸ್ಥಾಯಿ ಸಮಿತಿಗಳಿಗೂ ಕುತ್ತು!

Published:
Updated:

ಶಿವಮೊಗ್ಗ: ಜಿಲ್ಲಾ ಪಂಚಾಯಿತಿ ಮುಂದುವರಿದ ಸಾಮಾನ್ಯ ಸಭೆಗೂ ಕೋರಂ ಅಗತ್ಯವಿದೆ. ಹಾಗಾಗಿ, ಶಿವಮೊಗ್ಗ ಜಿಲ್ಲಾ ಪಂಚಾಯಿತಿಯಲ್ಲಿ ಜುಲೈ 24ರಂದು ನಡೆದ ಸಾಮಾನ್ಯ ಸಭೆಯ ಎಲ್ಲ ನಿರ್ಣಯಗಳೂ ಅಸಿಂಧು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ವಿ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

ಸ್ಥಾಯಿ ಸಮಿತಿ ರಚನೆ ವಿವಾದದ ಬಿಜೆಪಿ ಸದಸ್ಯರು ಧರಣಿ ನಡೆಸಿದ್ದರು. ಕಾರಣ ಜುಲೈ 17ರಂದು ಕರೆಯಲಾಗಿದ್ದ ಮತ್ತೆ ಸಾಮಾನ್ಯ ಸಭೆ ಮುಂದೂಡಲಾಗಿತ್ತು. ಅದೇ ತಿಂಗಳ 24ಕ್ಕೆ ಮತ್ತೆ ಸಭೆ ಕರೆದರೂ ಕೋರಂ ಇರಲಿಲ್ಲ. ಕೋರಂ ಕೊರತೆಯ ಮಧ್ಯೆ ಕಾಂಗ್ರೆಸ್, ಜೆಡಿಎಸ್ ಸದಸ್ಯರು ನಿರ್ಣಯ ಅಂಗೀಕರಿಸಿ ಸ್ಥಾಯಿ ಸಮಿತಿಗಳ ರಚನೆಯ ಅಧಿಕಾರವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಕುಮಾರ್‌ಗೆ ನೀಡಿದ್ದರು.

ಮುಂದುವರಿದ ಸಾಮಾನ್ಯ ಸಭೆಗೆ ಕೋರಂ ಅಗತ್ಯವಿದೆಯೇ? ಅಂದು ಅಂಗೀಕರಿಸಿದ ನಿರ್ಣಯ ಸಿಂಧುವೇ ಎಂದು ವಿವರಣೆ ಕೇಳಿ ಅಂದಿನ ಸಿಇಒ ರಾಕೇಶ್‌ ಕುಮಾರ್ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಸಾಮಾಜಿಕ ನ್ಯಾಯ ಸಮಿತಿಗೆ ಭದ್ರಾವತಿ ತಾಲ್ಲೂಕು ಸಿಂಗನಮನೆ ಕ್ಷೇತ್ರದ ಸದಸ್ಯ ಯೋಗೀಶ್ವರ್ (ಜೆಡಿಎಸ್), ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗೆ ಶಿಕಾರಿಪುರ ತಾಲ್ಲೂಕು ಕಪ್ಪನಹಳ್ಳಿ ಕ್ಷೇತ್ರದ ಸದಸ್ಯ ನರಸಿಂಗನಾಯ್ಕ (ಕಾಂಗ್ರೆಸ್), ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ ತೀರ್ಥಹಳ್ಳಿ ತಾಲ್ಲೂಕು ಮೇಗರವಳ್ಳಿ ಕ್ಷೇತ್ರದ ಸದಸ್ಯೆ ಭಾರತಿ ಬಾಳೆಹಳ್ಳಿ ಪ್ರಭಾಕರ್ (ಕಾಂಗ್ರೆಸ್) ಅವರನ್ನು ಅಧ್ಯಕ್ಷರು ನೇಮಿಸಿದ್ದರು.

ಈ ಮೂವರೂ ಜಿಲ್ಲಾ ಪಂಚಾಯಿತಿ ಸಂಕೀರ್ಣದಲ್ಲಿ ಕಚೇರಿಯನ್ನೂ ಉದ್ಘಾಟಿಸಿದ್ದರು. ನೇಮಕ ಪ್ರಶ್ನಿಸಿ ನಗರ ಕ್ಷೇತ್ರದ ಸದಸ್ಯ ಸುರೇಶ್‌ ಬಿ. ಸ್ವಾಮಿ ರಾವ್ ಹೈಕೋರ್ಟ್‌ ಮೊರೆ ಹೋಗಿದ್ದರು. ಕೋರ್ಟ್‌ ಸ್ಥಾಯಿ ಸಮಿತಿ ನೇಮಕಕ್ಕೆ ತಡೆಯಾಜ್ಞೆ ನೀಡಿತ್ತು. ಈಗ ಸರ್ಕಾರವೂ ಸಭೆಯನ್ನೇ ಅಸಿಂಧುಗೊಳಿಸಿದ ಪರಿಣಾಮ ಸ್ಥಾಯಿ ಸಮಿತಿ ನೇಮಕವೂ ರದ್ದಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !