ಶುಕ್ರವಾರ, ನವೆಂಬರ್ 22, 2019
26 °C

‘ಡಿ.ಕೆ.ಶಿವಕುಮಾರ್ ಆಪ್ತರ ಬಂಧನವಿಲ್ಲ’

Published:
Updated:

ಬೆಂಗಳೂರು: ‘ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ ಬೆಂಗಳೂರು ಮತ್ತು ನವದೆಹಲಿಯ ವಿವಿಧೆಡೆ ನಡೆಸಲಾಗಿದ್ದ ಆದಾಯ ತೆರಿಗೆ (ಐ.ಟಿ) ದಾಳಿಗೆ ಸಂಬಂಧಿಸಿದ ಪ್ರಕರಣದ ಮೂವರು ಆರೋಪಿಗಳನ್ನು ಇದೇ 16ರವರೆಗೆ ಬಂಧಿಸುವುದಿಲ್ಲ’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತಂತೆ ಪ್ರಕರಣದ ಆರೋಪಿಗಳಾದ ಸಚಿನ್ ನಾರಾಯಣ, ಸುನಿಲ್ ಕುಮಾರ್ ಶರ್ಮ ಹಾಗೂ ಆಂಜನೇಯ ಹನುಮಂತಯ್ಯ ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಇ.ಡಿ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ.ಬಿ‌.ನರಗುಂದ ಅವರು, ‘ಈಗಾಗಲೇ ಪ್ರಕರಣದ ಮೊದಲ ಆರೋಪಿ ಡಿ.ಕೆ.ಶಿವಕುಮಾರ್ ಇ.ಡಿ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಉಳಿದ ಆರೋಪಿಗಳು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಬೇಕಿದೆ’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ‘ವಿಚಾರಣೆಗೆ ಹಾಜರಾದಾಗ ಅರ್ಜಿದಾರರಿಂದ ಬಲವಂತದ ಹೇಳಿಕೆ ಪಡೆಯಬಹುದು’ ಎಂಬ ಆತಂಕ ವ್ಯಕ್ತಪಡಿಸಿದರು. ಆದರೆ, ನರಗುಂದ ಅವರು ಇದನ್ನು ಅಲ್ಲಗಳೆದರು.

‘ಹೈಕೋರ್ಟ್ ಮುಂದೆ ಮೇಲ್ಮನವಿ ಬಾಕಿ ಇರುವ ಹಿನ್ನೆಲೆಯಲ್ಲಿ ಇಂತಹ ಆತಂಕ ಪಡುವ ಅಗತ್ಯವಿಲ್ಲ’ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿದೆ.

ಪ್ರತಿಕ್ರಿಯಿಸಿ (+)