ಮಕ್ಕಳ ಮಧುಮೇಹ, ಮುಜುಗರ ಬೇಡ

7

ಮಕ್ಕಳ ಮಧುಮೇಹ, ಮುಜುಗರ ಬೇಡ

Published:
Updated:
Deccan Herald

‘ಸಾವಿಲ್ಲದ ಮನೆಯ ಸಾಸಿವೆ ತಾ’ ಎಂಬ ಬುದ್ಧನ ನುಡಿಯಂತೆ ‘ಮಧುಮೇಹಿಗಳಿಲ್ಲದ ಕುಟುಂಬ ಇಲ್ಲ’ ಎಂದು ಮಾತು ಶುರು ಮಾಡಿದವರು ವಿಕ್ರಂ ಆಸ್ಪತ್ರೆಯ ಹಿರಿಯ ವೈದ್ಯೆ, ಅಂತಃಸ್ರಾವಶಾಸ್ತ್ರಜ್ಞೆ ಡಾ. ಶಾರದಾ.

ಈ ವರ್ಷದ ವಿಶ್ವ ಮಧುಮೇಹ ದಿನದ (ನ.14)ಘೋಷಣೆ ‘ಕುಟುಂಬ ಮತ್ತು ಮಧುಮೇಹಿಗಳು’. ಮಧುಮೇಹಿಗಳಿರುವ ಕುಟುಂಬದ ಜವಾಬ್ದಾರಿಗಳೇನು? ಮಕ್ಕಳಿಗೆ ಹುಟ್ಟಿನಿಂದಲೇ ಮಧುಮೇಹವಿದ್ದರೆ ಅವರನ್ನು ನೋಡಿಕೊಳ್ಳುವ ಬಗೆ ಹೇಗೆ? ಊಟೋಪಚಾರ, ಇನ್ಸುಲಿನ್‌ ನೀಡುವ ಬಗ್ಗೆ ಮಹತ್ವದ ವಿಚಾರಗಳನ್ನು ಅವರು ‘ಮೆಟ್ರೊ’ ಜೊತೆ ಹಂಚಿಕೊಂಡಿದ್ದಾರೆ. ಅವರ ಮಾತಿನ ಹೂರಣ ಇಲ್ಲಿದೆ.

ಎಲ್ಲಾ ಸಮಸ್ಯೆಗಳಿಗೂ ಜೀವನಕ್ರಮವೇ ಕಾರಣ. ನಮ್ಮ ಹಿರಿಯರ ಕಾಲಕ್ಕೆ ಹೋಗೋಣ. ಆಗೆಲ್ಲ ನದಿಗೆ ಹೋಗಿ ಬಟ್ಟೆ ಒಗೆಯುತ್ತಿದ್ದೆವು. ಈಗ ವಾಷಿಂಗ್‌ ಮಷಿನ್‌ ಬಂದಿದೆ. ಬಾವಿಯಿಂದ ನೀರು ಸೇದ ಬೇಕಿತ್ತು; ಈಗ ಮನೆಯೊಳಗೆ ಕೊಳಾಯಿ ಇದೆ. ರುಬ್ಬುವ ಕಲ್ಲಿನಲ್ಲಿ ಅಕ್ಕಿರುಬ್ಬಿ ದೋಸೆ ಮಾಡುತ್ತಿದ್ದೆವು, ಸಾಂಬಾರು, ಚಟ್ನಿ ಎಲ್ಲವನ್ನೂ ರುಬ್ಬಬೇಕಿತ್ತು. ಈಗ ಮಿಕ್ಸಿ –ಗ್ರೈಂಡರ್‌ ಬಂದಿದೆ. ಬಗ್ಗಲ್ಲ, ಕುಟ್ಟಲ್ಲ, ಬಡಿಯಲ್ಲ... ಎಲ್ಲಾ ಕೆಲಸವೂ ಸುಲಭವಾಗಿಬಿಟ್ಟಿದೆ. ಗಂಡಸರು ಮೈಲಿಗಟ್ಟಲೆ ನಡೆದು ಹೋಗುತ್ತಿದ್ದರು. ಈಗ ಎಲ್ಲರೂ ಕಾರು, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ದೈಹಿಕ ಶ್ರಮಕ್ಕೆ ಕೊಕ್‌ ಕೊಟ್ಟ ಪರಿಣಾಮ ಮಧುಮೇಹ, ಕೊಬ್ಬಿನ ಸಮಸ್ಯೆ ಎಲ್ಲಾ ವಯಸ್ಸಿನವರನ್ನೂ ಬಿಡದೇ ಕಾಡುತ್ತಿದೆ.

ದೈಹಿಕ ಶ್ರಮ ಇಲ್ಲದಿರುವುದು ಒಂದು ಕಡೆಯಾದರೆ, ತಿನ್ನುವ ಶಿಸ್ತು ಇಲ್ಲದಿರುವುದು ಮತ್ತೊಂದು ಸಮಸ್ಯೆ. ಹೊತ್ತಲ್ಲದ ಹೊತ್ತಲ್ಲಿ ಉಣ್ಣುತ್ತೇವೆ. ಹಿಂದೆ ಸಂಜೆ 6 ಗಂಟೆಯೊಳಗೆ ಊಟ ಮಾಡುವುದು ಜೈನರಿಗೆ ಮಾತ್ರವಲ್ಲ, ಎಲ್ಲಾ ಪಂಗಡದವರಿಗೂ ರೂಢಿಯಿತ್ತು. ಆಗ ಕರೆಂಟ್‌ ಇರಲಿಲ್ಲ, ಹುಳು ಹುಪ್ಪಟೆ ಬಿದ್ದರೆ ಗೊತ್ತಾಗುವುದಿಲ್ಲ ಎಂಬುದು ಒಂದು ಕಾರರಣವಾಗಿತ್ತು. ಈ ನಗರದಲ್ಲಿ ರಾತ್ರಿ 12ಕ್ಕೆ ಉಂಡು ಮಲಗುವವರೂ ಇದ್ದಾರೆ. ರಾತ್ರಿ ಎಂಟು ಗಂಟೆಯ ನಂತರ ಊಟ ಮಾಡದಿರುವುದೇ ಉತ್ತಮ. ಉಂಡ ಊಟ ಮಲಗುವ ಮುನ್ನ ಕರಗದಿದ್ದರೆ ಕೊಬ್ಬು, ಮಧುಮೇಹ ಎಲ್ಲಕ್ಕೂ ಕಾರಣವಾಗುತ್ತದೆ. ಆಹಾರ ಸೇವನೆ ನಿಯಮಬದ್ಧವಾಗಿರಲಿ.

ಮನೆಯಲ್ಲಿ ಹಿರಿಯರಿಗೆ ಮಧುಮೇಹ ಇದೆಯೆಂದಾದರೆ ಮನೆಯವರೆಲ್ಲರೂ ಅವರೊಂದಿಗೆ ವಾಕಿಂಗ್‌, ವ್ಯಾಯಾಮ, ಪಥ್ಯಾಹಾರ ಅಳವಡಿಸಿಕೊಳ್ಳಿ. ಇದು ನಿಮಗೆ ಮುಂದೆ ಬರಬಹುದಾದ ಮಧುಮೇಹವನ್ನು ಒಂದಷ್ಟು ವರ್ಷ ದೂರ ತಳ್ಳಬಹುದು. ಅಥವಾ ಬರದಂತೆಯೂ ಮಾಡಬಹುದು. ಮಧುಮೇಹಿಗಳಲ್ಲಿ ಆತ್ಮ ವಿಶ್ವಾಸ ತುಂಬುತ್ತದೆ.

ವಂಶವಾಹಿಯಾಗಿ ಬರುವ ಟೈಪ್‌ 2: ವಂಶವಾಹಿಯಾಗಿ ಬರುವ ಮಧುಮೇಹ ಹಿಂದೆಯೆಲ್ಲ ನಲವತ್ತು ವರ್ಷದ ಆಸುಪಾಸಿನಲ್ಲಿ ಕಾಣಿಸಿಕೊಳ್ಳುತ್ತಿತ್ತು. ಈಗ ಮೂವತ್ತರ ಒಳಗಿನವರಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಉದ್ಯೋಗಕ್ಕೆ ಸೇರುವಾಗ ಮೆಡಿಕಲ್‌ ಚಕಪ್‌ಗೆ ಬರುವ ನಗರದ ಅನೇಕರಲ್ಲಿ ಮಧುಮೇಹ ಇರುವುದು ಪತ್ತೆಯಾಗಿದೆ. ಟೈಪ್‌ 2 ಇರುವವರ ದೇಹದಲ್ಲಿ ಇನ್ಸುಲಿನ್‌ ಸರಿಯಾಗಿ ಕೆಲಸ ಮಾಡದೇ ಇರಬಹುದು. ಇನ್ಸುಲಿನ್ ಪ್ರಮಾಣ ಹೆಚ್ಚುವಂತೆ ಮತ್ತು ಸರಿಯಾಗಿ ಕೆಲಸ ಮಾಡುವಂತೆ ಮಾತ್ರೆಗಳ ಮೂಲಕ ಮಾಡಬಹುದು.  ಆದರೆ ವಾಕಿಂಗ್‌, ವ್ಯಾಯಾಮ, ಪಥ್ಯ ಬಹುಳ ಮುಖ್ಯ. ಇದೆಲ್ಲ ಇದ್ದಾಗ ಮಾತ್ರೆಗಳು ಹೆಚ್ಚು ಪರಿಣಾಮಕಾರಿಯಾಗುತ್ತವೆ.

ಮಧುಮೇಹಿಗಳಿರುವ ಕುಟುಂಬದಲ್ಲಿ ಶೇ 50ರಷ್ಟು ಮಧುಮೇಹ ಬರುವ ಸಾಧ್ಯತೆ ಇರುತ್ತದೆ. ಆದರೆ, ಬಾಲ್ಯದಲ್ಲಿಯೇ ಪೂರಕ ಜೀವನಕ್ರಮ ರೂಢಿಸಿಕೊಂಡರೆ ಮಧುಮೇಹ ಬರುವುದನ್ನು ಮುಂದಕ್ಕೆ ಹಾಕಬಹುದು. 

ಆಹಾರದ ಬಗ್ಗೆ ನಿಗಾ ಇರಲಿ: ಮಧುಮೇಹ  ಇದೆಯೆಂದು ಗೊತ್ತಾದ ತಕ್ಷಣ ಆಹಾರದ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ. ಆದರೆ ಈ ಬಗ್ಗೆ ಸರಿಯಾದ ಮಾಹಿತಿ ವೈದ್ಯರಿಂದ ಪಡೆಯುವುದು ಸೂಕ್ತ. ಸಿರಿಧಾನ್ಯ ತಿಂದರೆ ಸಕ್ಕರೆ ಪ್ರಮಾಣ ಸಮತೋಲನದಲ್ಲಿರುತ್ತದೆ ಎಂಬುದು ಅನೇಕರ ನಂಬಿಕೆ. ಇದು ಸರಿಯಾದ ಮಾಹಿತಿ ಅಲ್ಲ. ಗೋಧಿ, ರಾಗಿಯಲ್ಲಿರುವಂತೆಯೇ ಸಿರಿಧಾನ್ಯದಲ್ಲಿಯೂ ಕಾರ್ಬೋಹೈಡ್ರೇಟ್ಸ್‌ ಇದೆ. ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದಷ್ಟೇ. ಗ್ಲುಕೋಸ್‌ ಮತ್ತು ಕಾರ್ಬೋಹೈಡ್ರೇಟ್ಸ್‌ ಎರಡೂ ದೇಹಕ್ಕೆ ಬೇಕೇ ಬೇಕು. 

ತರಕಾರಿಯಲ್ಲಿ ಹೆಚ್ಚು ನಾರಿನಾಂಶ ಇರುವ ಕಾರಣ, ಪ್ರತಿ ಊಟದಲ್ಲಿ ತರಕಾರಿ ಇರಲೇಬೇಕು. ನಮ್ಮ ಆಹಾರಕ್ರಮದಲ್ಲಿ ಬೆಳಗಿನ ತಿಂಡಿಯಲ್ಲಿ ತರಕಾರಿ ಇರುವುದಿಲ್ಲ. ಇಡ್ಲಿ ಚಟ್ನಿ, ದೋಸೆ ಚಟ್ನಿ, ಚಿತ್ರಾನ್ನ, ಪುಳಿಯೊಗರೆ ಹೀಗೆ ನಮ್ಮ ಬೆಳಗಿನ ತಿಂಡಿ ತರಕಾರಿ ಇಲ್ಲದೆಯೇ ಮುಗಿಯುತ್ತದೆ. ಇದು ಸರಿಯಲ್ಲ. ತರಕಾರಿ ಹೆಚ್ಚು ತಿನ್ನಬೇಕು. ಇದರ ಜೊತೆಗೆ ಹಾಲು, ಮೊಸರು, ಮೊಟ್ಟೆ, ಮೀನು, ಕೋಳಿಮಾಂಸ ದೇಹಕ್ಕೆ ಹೆಚ್ಚಿನ ಪ್ರೊಟೀನ್‌ ನೀಡುತ್ತದೆ. ಇವುಗಳನ್ನು ಸೇವಿಸುವುದು ಉತ್ತಮ. ಶುದ್ಧ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯ ಅಭ್ಯಾಸ ರೋಗಗಳಿಂದ ದೂರವಿಡುತ್ತದೆ. ಇದರ ಜೊತೆಗೆ ಸಾಧ್ಯವಾದಷ್ಟು ದೈಹಿಕ ಶ್ರಮವೂ ಬೇಕು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !