ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟಿಷರ ನಿದ್ದೆಗೆಡಿಸಿದ ಸ್ವಾತಂತ್ರ್ಯ ವೀರರು

Last Updated 14 ಆಗಸ್ಟ್ 2019, 13:24 IST
ಅಕ್ಷರ ಗಾತ್ರ

ಸುಮಾರು 300 ವರ್ಷಗಳ ಕಾಲ ಭಾರತೀಯರನ್ನು ಗುಲಾಮರನ್ನಾಗಿಸಿಕೊಂಡು ದುರಾಡಳಿತ ನಡೆಸಿದ ಬ್ರಿಟಿಷರ ವಿರುದ್ಧ ಧ್ವನಿ ಎತ್ತಿ, ಹೋರಾಡಿ ಮಡಿದವರು ಹಲವರು. ಸ್ವಾತಂತ್ರ್ಯ ಹೋರಾಟ ಎಂದ ಕೂಡಲೇ ಮಹಾತ್ಮ ಗಾಂಧಿ, ಸುಭಾಷ್‌ ಚಂದ್ರ ಬೋಸ್‌, ಭಗತ್‌ಸಿಂಗ್‌ರಂತಹ ಮಹನೀಯರು ನೆನಪಾಗುತ್ತಾರೆ. ಇವರಂತೆಯೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರು ಹಲವರು ಇದ್ದಾರೆ. 73ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಅಂಗವಾಗಿ ಅವರ ಬಗ್ಗೆ ಒಂದಿಷ್ಟು ತಿಳಿಯೋಣ.

ಸೂರ್ಯಸೇನ

ಬಂಗಾಳದಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದವರಲ್ಲಿ ಇವರೂ ಒಬ್ಬರು. ಬಂಗಾಳಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 1930ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಚಿಟ್ಟಗಾಂಗ್ ಆಯುಧ ದಾಳಿಯ ನೇತೃತ್ವ ವಹಿಸಿದ್ದರು. ಬ್ರಿಟಿಷರ ಕೈಗೆ ಸಿಲುಕಿ, ಜೈಲಿನಲ್ಲಿ ಚಿತ್ರಹಿಂಸೆ ಅನುಭವಿಸುತ್ತಲೇ ಪ್ರಾಣ ಬಿಟ್ಟರು.

ಬಾಜಿ ರೌತ್‌

ಬ್ರಿಟಿಷರ ವಿರುದ್ಧ ಎದೆಯೊಡ್ಡಿ ಪ್ರಾಣಿಬಿಟ್ಟ ಅತಿ ಕಿರಿಯ ಸ್ವತಂತ್ರ ಹೋರಾಟಗಾರ ಬಾಜಿ ರೌತ್‌. ಈಗ ಒಡಿಶಾದಲ್ಲಿರುವ ಬ್ರಾಹ್ಮಿಣಿ ನದಿಯನ್ನು ದಾಟಿಸುವಂತೆ ಬ್ರಿಟಿಷರು ಆದೇಶಿಸಿದಾಗ, ಅವರನ್ನು ನದಿ ದಾಟಿಸಲು ವಿರೋಧಿಸುತ್ತಾನೆ. ಇದರಿಂದ ಕೆರಳಿದ ಬ್ರಿಟಿಷರು ಬಾಲಕ ಎಂಬುದನ್ನೂ ನೋಡದೆ ಗುಂಡಿಟ್ಟು ಕೊಲ್ಲುತ್ತಾರೆ. ಆಗ ಈ ಬಾಲಕನ ವಯಸ್ಸು ಕೇವಲ 13 ವರ್ಷ.

ತಿರುಪೂರ್ ಕುಮರನ್

ಇವರು ಸ್ವಾತಂತ್ರ್ಯಕ್ಕಾಗಿ ‘ದೇಶಬಂಧು ಯೂತ್ ಅಸೋಷಿಯೇಷನ್’ ಸ್ಥಾಪಿಸಿದರು. 1932 ಜನವರಿ 11ರಂದು ನಡೆದ ಬ್ರಿಟಿಷ್ ಆಡಳಿತ ವಿರೋಧಿ ಆಂದೋಲನದಲ್ಲಿ ಭಾಗವಹಿಸಿ, ಭಾರತದ ಬಾವುಟವನ್ನು ಕೈಯಲ್ಲಿ ಹಿಡಿದುಕೊಂಡೇ ಬ್ರಿಟಿಷರ ಗುಂಡಿಗೆ ಬಲಿಯಾದರು.

ಚಾಫೇಕರ್ ಸೋದರರು

ಈ ಮೂವರು ಸೋದರರು. ಬಾಲ ಗಂಗಾಧರ್ ತಿಲಕ್ ಶಿಷ್ಯರು. ಪುಣೆಯಲ್ಲಿ ಪ್ಲೇಗ್ ನಿವಾರಣಾ ಕಮಿಷನರ್ ಆಗಿದ್ದ ಡಬ್ಲ್ಯೂ ಸಿ. ರ‍್ಯಾಂಡ್‌ ನೇತೃತ್ವದ ಬ್ರಿಟಿಷರ ನಿರಂಕುಶ ಆಡಳಿತ ವಿರೋಧಿಸಿ ಪ್ರತಿಭಟನೆ ನಡೆಸಿ ರ‍್ಯಾಂಡ್ ಹತ್ಯೆ ಮಾಡಿ ಗಲ್ಲಿಗೇರಿದರು.

ವಿ.ಒ. ಚಿದಂಬರಂ ಪಿಳ್ಳೈ

ಬಾಲ ಗಂಗಾಧರ್‌ ತಿಲಕ್ ಅವರ ಸ್ವಾತಂತ್ರ್ಯ ಹೋರಾಟದಿಂದ ಪ್ರೇರಿತರಾಗಿ ಇವರೂ ಹೋರಾಟಕ್ಕೆ ಇಳಿದರು. ಬ್ರಿಟಿಷರು ದೇಶದಲ್ಲಿ ತಮ್ಮ ನೆಲೆಯನ್ನು ವಿಸ್ತರಿಸಿಕೊಳ್ಳುವುದನ್ನು ಹತ್ತಿಕ್ಕಲು ತಮ್ಮದೇ ಆದ ಶೈಲಿಯಲ್ಲಿ ಪ್ರತಿಭಟಿಸಿದ ಉದ್ಯಮಿ ಇವರು.

ವಾಸುದೇವ್ ಬಲವಂತ್ ಫಡ್ಕೆ

ಇವರನ್ನು ರಾಮೋಷಿ ಎಂದೂ ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿನ ಹಲವು ಬುಡಕಟ್ಟು ಸಮುದಾಯಗಳನ್ನು ಕೂಡಿಸಿಕೊಂಡು ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದರು. ಬ್ರಿಟಿಷರಿಗೆ ಸೆರೆಯಾಗಿ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಮಾಡಿ ಅಮರನಾದ ವೀರ. ಇವರು ಮಹಾರಾಷ್ಟ್ರ ಎಜುಕೇಷನ್ ಸೊಸೈಟಿ ವ್ಯವಸ್ಥಾಪಕರು ಕೂಡ.

ಬಾಘಾ ಜತಿನ್

ಹದಿಹರೆಯದಲ್ಲಿದ್ದಾಗಲೇ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ ವೀರ. ಜತಿನ್ ಮುಖರ್ಜಿಯಾಗಿದ್ದ ಇವರು ಸ್ವಾತಂತ್ರ್ಯ ಹೋರಾಟದಿಂದಾಗಿಯೇ ಬಾಘಾ ಜತಿನ್ ಎಂದು ಖ್ಯಾತರಾದರು. ಬಂಗಾಳದ ಈ ಯುವಕ ಬ್ರಿಟಿಷರ ವಿರುದ್ಧ ಹಲವು ರಹಸ್ಯ ಸಭೆಗಳನ್ನು ನಡೆಸಿ ಸ್ವಾತಂತ್ರ್ಯ ಪಡೆಯುವ ದಾರಿ ಹುಡುಕಿದರು.

ರಾಣಿ ಗೈದಿನ್ಲಿಯು

ನಾಗ ಜನಾಂಗದ ನಾಯಕಿಯಾಗಿ ಇವರು ಈಶಾನ್ಯ ರಾಜ್ಯಗಳಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದರು. 16ನೇ ವಯಸ್ಸಿಗೇ ಸ್ವಾತಂತ್ರ್ಯ ಸಂಗ್ರಾಮದ ಹಾದಿ ಹಿಡಿದಿದ್ದರು. ಇವರ ಧೈರ್ಯ ಸಾಹಸಗಳನ್ನು ಮೆಚ್ಚಿ ಜವಾಹರಲಾಲ್ ನೆಹರೂ ಅವರು ‘ರಾಣಿ’ ಬಿರುದು ನೀಡಿದರು.

ಬಿರ್ಸಾ ಮುಂಡ

ಗಿರಿಜನರ ಹಕ್ಕುಗಳಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಅಮರ ವೀರ. ಮಿಲಯನೇರಿಯನ್ ಸಂಗ್ರಾಮದ ನೇತೃತ್ವ ವಹಿಸಿ ಸ್ವಾತಂತ್ರ್ಯಕ್ಕಾಗಿ ಜನರಲ್ಲಿ ಚೈತನ್ಯ ಮೂಡಿಸಿದ ಮಹಾ ಚೇತನ.

ಕನಕ್ಲತಾ ಬಾರ್ವಾ

ಇವರನ್ನು ಬೀರ್ಬಲಾ ಎಂದೂ ಕರೆಯುತ್ತಾರೆ. ಅಸ್ಸಾಂನ ಎಐಎಸ್‌ಎಫ್ ನಾಯಕಿಯಾಗಿ ಹೋರಾಡಿದವರು. ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ, ಬ್ರಿಟಿಷರು ಗುಂಡಿನ ದಾಳಿ ನಡೆಸಿದಾಗ ತ್ರಿವರ್ಣಧ್ವಜವನ್ನು ಕೈಲಿ ಹಿಡಿದುಕೊಂಡೇ ಪ್ರಾಣ ಬಿಟ್ಟ ವೀರ ಮಹಿಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT