ವೈದ್ಯ ನಾರಾಯಣನೂ ರೋಗಿಯೇ?

ಬುಧವಾರ, ಮೇ 22, 2019
29 °C

ವೈದ್ಯ ನಾರಾಯಣನೂ ರೋಗಿಯೇ?

Published:
Updated:
Prajavani

ಯಾವಾಗಲಾದರೊಮ್ಮೆ ನೆಗಡಿಯಂಥ ಸಮಸ್ಯೆಯುಂಟಾದಾಗ ಎಲ್ಲ ಮನುಷ್ಯಜೀವಿಗಳು ಮಾಡುವಂತೆ ನಾನೂ ಕೂಡ ಕೆಮ್ಮುವುದು, ಸೀನುವುದು, ಮೂಗು ಒರೆಸಿಕೊಳ್ಳುವುದು ಮುಂತಾದ ಕ್ರಿಯೆಗಳನ್ನು ಮಾಡುತ್ತಿರುತ್ತೇನೆ. ಆಗ ಮಕ್ಕಳನ್ನು ಚಿಕಿತ್ಸೆಗೆಂದು ನನ್ನ ಬಳಿ ಕರೆತರುವ ಪೋಷಕರು, ‘ಏನ್ಸಾರ್, ನೀವೇ ಡಾಕ್ಟ್ರು... ನಿಮಗೇ ಹುಷಾರಿಲ್ಲವಾ?’ ಎಂದು ಉದ್ಗಾರ ತೆಗೆಯುತ್ತಾರೆ. ಅವರ ಮುಖದಲ್ಲಿ ಯಾವುದೋ ವಿಚಿತ್ರ ಸಂಗತಿಯೊಂದನ್ನು ಕಂಡ ಭಾವ. ಆಗೆಲ್ಲ ನಾನು, ‘ನೋಡಿ, ನಾನೂ ಕೂಡ ಮನುಷ್ಯನೇ ಹೊರತು ಮರವಲ್ಲ. ಎಲ್ಲ ಮನುಷ್ಯ ಪ್ರಾಣಿಗಳಿಗೆ ಬರುವಂತೆ ನನಗೂ ಆರೋಗ್ಯ ಸಮಸ್ಯೆಗಳುಂಟಾಗುತ್ತವೆ’ ಎಂದಾಗ, ‘ಹೌದಾ?’ ಎಂದು ಕಣ್ಣರಳಿಸುತ್ತಾರೆ ಆಶ್ಚರ್ಯಭರಿತರಾಗಿ.

ಮೇಲಿನ ಪ್ರಸಂಗವನ್ನು ಇಲ್ಲಿ ಪ್ರಸ್ತಾಪಿಸಿದ್ದೇಕೆಂದರೆ ಕಳೆದ ಐದಾರು ವರ್ಷಗಳಲ್ಲಿ ನನಗೆ ಪರಿಚಿತರಾದ ಹಲವಾರು ವೈದ್ಯರು ಅನಾರೋಗ್ಯ, ಅಪಘಾತ, ಆತ್ಮಹತ್ಯೆ ಮುಂತಾದ ಕಾರಣಗಳಿಂದಾಗಿ ಇಹಲೋಕ ತ್ಯಜಿಸಿದ್ದಾರೆ. ಅವರಲ್ಲಿ ಬಹುತೇಕರು ಎಳೆಯಪ್ರಾಯದವರು. ಸಮಾಜಕ್ಕೆ ತಮ್ಮ ಅತ್ಯಮೂಲ್ಯ ಸೇವೆಯನ್ನು ಸಲ್ಲಿಸಬೇಕಾದವರು ಅತಿ ಬೇಗ ಕಾಲನ ಕರೆಗೆ ಓಗೊಟ್ಟುದು ದುರದೃಷ್ಟಕರವೆಂದೇ ಹೇಳಬೇಕು. ಕಳೆದ ವರ್ಷ ಸಂಭವಿಸಿದ ಎರಡು ಸಾವುಗಳಂತೂ ನನ್ನ ಮನಸ್ಸನ್ನು ತೀವ್ರವಾಗಿ ಕಲಕಿಬಿಟ್ಟವು. ಆ ಇಬ್ಬರು ವೈದ್ಯರನ್ನು ನಾನು ಅತ್ಯಂತ ಸಮೀಪದಿಂದ ಬಲ್ಲವನಾಗಿದ್ದೆ ಮತ್ತು ಅವರಿಬ್ಬರೂ ನಲವತ್ತರ ಆಸುಪಾಸಿನಲ್ಲಿದ್ದವರು.

ಅಕಾಲ ಸಾವಿಗೀಡಾದ ಒಬ್ಬನನ್ನಂತೂ ಅವನ ವಿದ್ಯಾರ್ಥಿದೆಸೆಯಿಂದಲೂ ನಾನು ಬಲ್ಲೆ. ತಾನೇ ಒಬ್ಬ ಹೃದ್ರೋಗ ತಜ್ಞನಾಗಿ, ಹೃದ್ರೋಗಗಳ ಕುರಿತು ವಿದೇಶದಲ್ಲಿ ವಿಶೇಷ ಪರಿಣಿತಿ ಪಡೆದು ಆಗಷ್ಟೇ ಸ್ವದೇಶಕ್ಕೆ ಹಿಂತಿರುಗಿದ್ದವನು. ತಾನು ಆರ್ಜಿಸಿದ ಜ್ಞಾನವನ್ನೆಲ್ಲಾ ಬಳಸಿಕೊಂಡು ಇಲ್ಲಿಯ ರೋಗಿಗಳ ಮೊಗದಲ್ಲಿ ಮಂದಹಾಸ ಮಿನುಗಿಸುವ ತುಡಿತ ಹೊಂದಿದ್ದಂಥವನು. ವಿಪರ್ಯಾಸವೆಂದರೆ ತಾನೇ ಹೃದಯಾಘಾತಕ್ಕೆ ಬಲಿಯಾಗಿಬಿಟ್ಟ. ಇನ್ನು ಎರಡನೇ ವೈದ್ಯ, ಸದಾ ಮುಗುಳ್ನಗೆ ಬೀರುತ್ತಾ, ವಿದ್ಯಾರ್ಥಿಗಳಿಗೆ ತನ್ನ ಜ್ಞಾನವನ್ನು ಧಾರೆಯೆರೆಯುತ್ತಾ, ನನ್ನೆದುರಲ್ಲೇ ಚಕಮಕಿಯಾಗಿ ಓಡಾಡಿಕೊಂಡಿದ್ದವನು. ಒಂದಿನಿತೂ ಸುಳಿವು ನೀಡದೆ ಮಿದುಳನ್ನು ಆಕ್ರಮಿಸಿಕೊಂಡಿದ್ದ ಗಂಭೀರ ಸ್ವರೂಪದ ಗಡ್ಡೆಯೊಂದು, ಪತ್ತೆಯಾದ ಕೆಲವೇ ತಿಂಗಳುಗಳಲ್ಲಿ ಸಾವಿನ ದವಡೆಗೆ ನೂಕಿಬಿಟ್ಟಿತು. ಇವರಿಬ್ಬರಿಗೂ ಪುಟ್ಟ ಪುಟ್ಟ ಮಕ್ಕಳಿದ್ದಾರೆ. ಅವರೆಷ್ಟೇ ಆರ್ಥಿಕ ಭದ್ರತೆ ಒದಗಿಸಿಟ್ಟಿದ್ದರೂ ತಂದೆಯ ಸ್ಥಾನವನ್ನು ಯಾರೂ ತುಂಬಲಾರರು. ಆ ಶೂನ್ಯಭಾವ ಮಕ್ಕಳಿಗೆ ಶಾಶ್ವತವಾಗಿ ಉಳಿದುಬಿಡುತ್ತದೆ. ಆರ್ಥಿಕ ಭದ್ರತೆಯೂ ಇಲ್ಲದೆ, ತಂದೆಯ ಪ್ರೀತಿಯೂ ಇಲ್ಲದೆ ಬೆಳೆದ ನನಗೆ ಆ ಅನುಭವ ಅತ್ಯಂತ ಗಾಢವಾಗಿದೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ವೈದ್ಯರು ಪೈಪೋಟಿಗೆ ಬಿದ್ದು ಗಳಿಕೆಯಲ್ಲಿ ತೊಡಗಿರುವುದು ಸುಳ್ಳಲ್ಲ. ಇದಕ್ಕಾಗಿ ಅವರು ತೆರುತ್ತಿರುವುದು ಆರೋಗ್ಯ, ನೆಮ್ಮದಿಯೆಂಬ ದೊಡ್ಡ ಬೆಲೆಯನ್ನು. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ, ಕೆಲವೊಮ್ಮೆ ಮಲಗಿದ ನಂತರವೂ ರೋಗಿಗಳು–ದುಡಿಮೆ ಎಂದು ತಲೆಕೆಡಿಸಿಕೊಂಡು ಜೀವನದ ಅತ್ಯಂತ ಪ್ರಮುಖ ಘಟ್ಟದಲ್ಲೇ ಸಾಕಷ್ಟು ಮಾನಸಿಕ ಒತ್ತಡ ಮತ್ತು ಕ್ಲೇಶಗಳಿಗೊಳಗಾಗುತ್ತಾರೆ. ಇದರ ಪರಿಣಾಮಗಳು ನೇತ್ಯಾತ್ಮಕವಾಗಿದ್ದು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಮುಂತಾದ ಆರೋಗ್ಯ ಸಮಸ್ಯೆಗಳು ಬಹಳ ಬೇಗ ಅಮರಿಕೊಳ್ಳುತ್ತವೆ. ಹಾಗಾಗಿಯೇ ಈ ಬಗೆಯ ಸಾವುನೋವುಗಳನ್ನು ಇತ್ತೀಚಿನ ದಿನಗಳಲ್ಲಿ ವೈದ್ಯರಲ್ಲಿ ನೋಡುವಂತಾಗಿರುವುದು. ಇದಕ್ಕೆ ವ್ಯತಿರಿಕ್ತವಾಗಿ ಹಳೆಯ ತಲೆಮಾರಿನ ಹಲವಾರು ವೈದ್ಯರು ತಮ್ಮ ಇಳಿವಯಸ್ಸಿನಲ್ಲಿಯೂ ಅತ್ಯಂತ ಚಟುವಟಿಕೆಯಿಂದ ಓಡಾಡಿಕೊಂಡಿರುವುದನ್ನು ಕಾಣುತ್ತೇವೆ. ಇದಕ್ಕೆ ನಿದರ್ಶನವೆಂಬಂತೆ ನನಗೆ ಪಾಠ ಹೇಳಿಕೊಟ್ಟ ಪ್ರಾಧ್ಯಾಪಕರೇ ಇದ್ದಾರೆ.

ಹಿಂದಿನ ಮತ್ತು ಇಂದಿನ ತಲೆಮಾರಿನ ವೈದ್ಯರ ಜೀವನಶೈಲಿಯಲ್ಲಿನ ವ್ಯತ್ಯಾಸಕ್ಕೆ ಕಾರಣಗಳನ್ನು ಸ್ಥೂಲವಾಗಿ ವಿಶ್ಲೇಷಿಸಿದಾಗ, ಆ ಕಾಲದ ಬಹುತೇಕ ವೈದ್ಯರು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲೇ ಓದಿದವರಾಗಿರುತ್ತಿದ್ದರು ಮತ್ತು ವಿದ್ಯಾಭ್ಯಾಸದ ಖರ್ಚುವೆಚ್ಚಗಳೂ ದುಬಾರಿಯಾಗಿರುತ್ತಿರಲಿಲ್ಲ. ಹಾಗಾಗಿ ಅವರ ಆದಾಯದ ನಿರೀಕ್ಷೆಗಳೂ ಮಿತಿಮೀರಿ ಇರುತ್ತಿರಲಿಲ್ಲ. ಅನೇಕ ವೈದ್ಯರು ಸ್ನಾತಕ ಪದವಿ ಪಡೆದ ಕೂಡಲೇ ಸರ್ಕಾರಿ ಉದ್ಯೋಗ ಗಿಟ್ಟಿಸಿಯೋ ಖಾಸಗಿ ಪ್ರಾಕ್ಟೀಸ್ ಮಾಡಿಯೋ ಚಿಕ್ಕ ವಯಸ್ಸಿಗೇ ದುಡಿಮೆಗೆ ತೊಡಗಿಕೊಳ್ಳುತ್ತಿದ್ದರು. ಈಗಿನ ಪರಿಸ್ಥಿತಿ ಅದಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ.

ಮೂವತ್ತರ ಹರೆಯದಲ್ಲಿ ಸ್ನಾತಕೋತರ ಪದವಿ ಪಡೆದು, ಮತ್ತಿನ್ನೆರಡು ವರ್ಷ ವಿಶೇಷ ಪರಿಣಿತಿಗೆಂದು ಮೀಸಲಿಟ್ಟು, ಹೆಚ್ಚೂಕಡಿಮೆ ಮೂವತ್ತೈದರ ಸುಮಾರಿಗೆ ದುಡಿಯಲು ಪ್ರಾರಂಭಿಸುವ ಇಂದಿನ ಹೆಚ್ಚಿನ ವೈದ್ಯರು, ಲಭ್ಯವಿರುವ ಅತ್ಯಲ್ಪ ಅವಧಿಯಲ್ಲಿಯೇ ಪಡೆದ ಶಿಕ್ಷಣ ಸಾಲ, ಮನೆ, ವಾಹನ, ಮಕ್ಕಳ ವಿದ್ಯಾಭ್ಯಾಸ ಮುಂತಾದ ಅನಿವಾರ್ಯ ಕಾರಣಗಳಿಗಷ್ಟೇ ಅಲ್ಲದೆ, ತಮ್ಮ ಇಳಿ ವಯಸ್ಸಿನ ಆರ್ಥಿಕ ಭದ್ರತೆ ಮತ್ತು ಮಕ್ಕಳ ಮುಂದಿನ ಭವಿಷ್ಯವನ್ನೂ ಗಮನದಲ್ಲಿರಿಸಿಕೊಂಡು ಶಕ್ತಿಮೀರಿ ದುಡಿಯಲು ಹಾತೊರೆಯುತ್ತಾರೆ. ಅಷ್ಟೇ ಅಲ್ಲದೆ ಕೆಲವು ವೈದ್ಯರು ವಿದ್ಯಾರ್ಥಿದೆಸೆಯಲ್ಲಿ ಕಲಿತದ್ದನ್ನು ಸುಲಭವಾಗಿ ತ್ಯಜಿಸಲಾಗದೆಯೋ, ‘ಇಷ್ಟೆಲ್ಲ ದುಡಿಯುತ್ತೇವೆ; ಒಂದಷ್ಟು ಮೋಜುಮಸ್ತಿ ಮಾಡುವುದರಲ್ಲಿ ತಪ್ಪೇನು?’ ಎನ್ನುವ ಧೋರಣೆಯಿಂದಲೋ ಧೂಮಪಾನ, ಮದ್ಯಪಾನಗಳಂಥ ದುಶ್ಚಟಗಳಿಗೆ ದಾಸರಾಗಿಬಿಡುತ್ತಾರೆ. ತಾತ್ಕಾಲಿಕವಾಗಿ ಮನಸ್ಸಿಗೆ ನಿರಾಳಭಾವ ನೀಡುವ ಈ ದುಶ್ಚಟಗಳು ಇಡೀ ದೇಹವನ್ನೇ ಅಣು ಅಣುವಾಗಿ ನಾಶ ಮಾಡಿಬಿಡುತ್ತವೆ. ಅಂಥವರಲ್ಲಿ ಖಿನ್ನತೆ, ನಿದ್ರಾಹೀನತೆ, ಲೈಂಗಿಕ ಅಸಮರ್ಥತೆ ಮುಂತಾದ ಮಾನಸಿಕ ಸಮಸ್ಯೆಗಳೂ ಸರ್ವೇಸಾಮಾನ್ಯ.

ಅತಿ ಚಿಕ್ಕ ವಯಸ್ಸಿಗೇ ದೇಹಕ್ಕೆ ಮುಪ್ಪಡರುತ್ತಾ ಜೀವಿತಾವಧಿಯೂ ಕುಂಠಿತವಾಗಿಬಿಡುತ್ತದೆ. ಅಷ್ಟೇ ಅಲ್ಲದೆ ಕೌಟುಂಬಿಕ ಕಲಹ, ವಿವಾಹ ವಿಚ್ಛೇದನ, ದಾರಿ ತಪ್ಪಿದ ಮಕ್ಕಳು ಮುಂತಾದ ಸಾಮಾಜಿಕ ಸಮಸ್ಯೆಗಳೂ ತಲೆದೋರುತ್ತವೆ. ಒಟ್ಟಿನಲ್ಲಿ ಈ ಎಲ್ಲಾ ಕಾರಣಗಳಿಂದ ದೈಹಿಕ, ಮಾನಸಿಕ ಮತ್ತು ಕೌಟುಂಬಿಕ ಸಮಸ್ಯೆಗಳು ಇತ್ತೀಚೆಗೆ ವೈದ್ಯರಲ್ಲಿ ಹೆಚ್ಚು ಹೆಚ್ಚಾಗಿ ಕಂಡುಬರುತ್ತಿರುವ ಸಂಗತಿಯನ್ನು ಅಲ್ಲಗಳೆಯಲಾಗದು.

ಧೂಮಪಾನ–ಮದ್ಯಪಾನಗಳ ದುಷ್ಪರಿಣಾಮಗಳು, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರಪದ್ಧತಿಗಳ ಕುರಿತು ರೋಗಿಗಳಿಗೆ ಗಂಟೆಗಟ್ಟಲೆ ಉಪದೇಶ ಮಾಡಬಲ್ಲ ಅನೇಕ ವೈದ್ಯರು ಅವುಗಳನ್ನೆಲ್ಲಾ ತಮ್ಮ ಜೀವನದಲ್ಲಿ ಎಷ್ಟರಮಟ್ಟಿಗೆ ಅಳವಡಿಸಿಕೊಳ್ಳುತ್ತಾರೆಂಬುದು ಸಂದೇಹಾರ್ಹ. ಹಾಗೆಯೇ ಮನಸ್ಸಿಗೆ ಒಂದಿಷ್ಟು ಉಲ್ಲಾಸ ನೀಡುವ ಸಾಹಿತ್ಯ, ಸಂಗೀತ ಮತ್ತು ಕಲೆಗಳಂತಹ ಅಭಿರುಚಿಗಳನ್ನು ಬೆಳೆಸಿಕೊಳ್ಳುವ ವೈದ್ಯರು ಅತ್ಯಂತ ವಿರಳವೆಂದೇ ಹೇಳಬೇಕು. 

ಅನಿರೀಕ್ಷಿತವಾಗಿ ಘಟಿಸುವ ಅಪಘಾತ ಮತ್ತು ಬಯಸದೇ ಬಂದೆರಗುವ ವ್ಯಾಧಿಗಳನ್ನು ಹೊರತುಪಡಿಸಿ, ಮಿಕ್ಕಂತೆ ಅಜಾಗರೂಕತೆಯಿಂದಲೋ ಉದಾಸೀನತೆಯಿಂದಲೋ ತಮ್ಮನ್ನು ತಾವು ಸಾವಿನ ಕುಣಿಕೆಗೊಡ್ಡಿಕೊಳ್ಳುವ ಮುನ್ನ – ತಮ್ಮ ಸಾಂಗತ್ಯಕ್ಕಾಗಿ ಹಾತೊರೆಯುವ, ತಮ್ಮ ಇರುವಿಕೆಯಿಂದಲೇ ನೆಮ್ಮದಿಯ ಭಾವ ಹೊಂದುವ ಮಡದಿ–ಮಕ್ಕಳು ಮತ್ತು ಪ್ರೀತಿಯ ಮಹಾಪೂರವನ್ನೇ ಹರಿಸಿ, ಕಣ್ಣಲ್ಲಿ ಕಣ್ಣಿಟ್ಟು ಜತನ ಮಾಡಿರುವ ಹೆತ್ತಜೀವಗಳಿರುತ್ತವೆ ಎಂಬುದನ್ನು ಮಹತ್ವಾಕಾಂಕ್ಷಿ ವೈದ್ಯರು ನೆನಪಿನಲ್ಲಿಟ್ಟುಕೊಳ್ಳುವುದು ಒಳಿತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !