ತುಂಬಿ ತುಳುಕಿದ ಸರ್ಕಾರಿ ಆಸ್ಪತ್ರೆಗಳು

ಭಾನುವಾರ, ಜೂಲೈ 21, 2019
25 °C
ವೈದ್ಯರ ಮುಷ್ಕರಕ್ಕೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಬೆಂಬಲ, ಒಪಿಡಿ ಬಂದ್‌, ತುರ್ತು ಚಿಕಿತ್ಸೆ ಮಾತ್ರ

ತುಂಬಿ ತುಳುಕಿದ ಸರ್ಕಾರಿ ಆಸ್ಪತ್ರೆಗಳು

Published:
Updated:
Prajavani

ಚಾಮರಾಜನಗರ/ಕೊಳ್ಳೇಗಾಲ/ಹನೂರು: ಕೋಲ್ಕತ್ತದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ದೇಶದಾದ್ಯಂತ ಖಾಸಗಿ ಆಸ್ಪತ್ರೆಗಳ ವೈದ್ಯರು ಸೋಮವಾರ ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲೂ ಬೆಂಬಲ ವ್ಯಕ್ತವಾಯಿತು. 

ಜಿಲ್ಲಾ ಕೇಂದ್ರ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಯಳಂದೂರು ಸೇರಿದಂತೆ ಎಲ್ಲ ಕಡೆಗಳಲ್ಲಿ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗಗಳನ್ನು (ಒಪಿಡಿ) ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಬಂದ್‌ ಮಾಡಲಾಗಿತ್ತು. ವೈದ್ಯರು ತುರ್ತು ಚಿಕಿತ್ಸೆ ಸೇವೆಗಳನ್ನು ಮಾತ್ರ ನೀಡಿದರು.

ಜಿಲ್ಲಾಸ್ಪತ್ರೆ, ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಸರ್ಕಾರದ ಎಲ್ಲ ಆಸ್ಪತ್ರೆಗಳು ಎಂದಿನಂತೆ ಕಾರ್ಯಾಚರಿಸಿದವು. ಮುಷ್ಕರ ಇದ್ದುದರಿಂದ ಹಾಗೂ ಸೋಮವಾರ ಆಗಿದ್ದರಿಂದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದವು.

ಜಿಲ್ಲಾ ಕೇಂದ್ರದಲ್ಲಿ ಸೋಮವಾರ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದ ರೋಗಿಗಳ ಸಂಖ್ಯೆ ವಿರಳವಾಗಿತ್ತು. ಮುಷ್ಕರದ ಬಗ್ಗೆ ಮಾಹಿತಿ ಇಲ್ಲದೇ ಆಸ್ಪತ್ರೆಗಳಿಗೆ ಬಂದವರು, ಮುಷ್ಕರಕ್ಕೆ ಸಂಬಂಧಿಸಿದಂತೆ ಗೋಡೆಯಲ್ಲಿ ಅಂಟಿಸಿದ್ದ ಕರ ಪತ್ರ ನೋಡಿ ವಾಪಸ್‌ ಆಗುತ್ತಿದ್ದರು.

ಕೆಲವು ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸಿದರೆ, ಇನ್ನೂ ಕೆಲವು ಬಂದ್‌ ಆಗಿದ್ದವು. ರೋಗ ಪತ್ತೆ ಕೇಂದ್ರಗಳು ಎಂದಿನಂತೆ ತೆರೆದಿದ್ದವು. 

ಕೊಳ್ಳೆಗಾಲ ವರದಿ: ನಗರದ ಖಾಸಗಿ ಆಸ್ಪತ್ರೆಗಳನ್ನು ಸೋಮವಾರ ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ಬಂದ್‌ ಮಾಡಲಾಗಿತ್ತು. 

ಮುಷ್ಕರದ ಬಗ್ಗೆ ತಿಳಿಯದೆ ಚಿಕಿತ್ಸೆಗಾಗಿ ತಾಲ್ಲೂಕಿನ ಎಲ್ಲಾ ಭಾಗಗಳಿಂದ ರೋಗಿಗಳು ಬಂದಿದ್ದರು. ಹಾಗಾಗಿ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ತೆರಳಿದರು. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಸೋಮವಾರ ಹೆಚ್ಚಿತ್ತು. 

ಖಾಸಗಿ ವೈದ್ಯರ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಡಾ.ಜೆ.ವಿ ಶಿವಕಿಶೋರ್ ಅವರು ಮಾತನಾಡಿ, ‘ಕೋಲ್ಕತ್ತದಲ್ಲಿ ವ್ಯೆದ್ಯರ ಮೇಲೆ ಹಲ್ಲೆ ಮಾಡಿರುವುದು ದುರದೃಷ್ಟಕರ. ಭಾರತ ಸರ್ಕಾರ ವೈದ್ಯರ ರಕ್ಷಣೆಗೆ ಕೂಡಲೇ ವಿಶೇಷ ಕಾನೂನು ಜಾರಿ ಮಾಡಬೇಕು. ವೈದ್ಯರ ಮೇಲೆ ನಡೆಯುತ್ತಿರುವ ನಿರಂತರ ದಬ್ಬಾಳಿಕೆ ನಿಲ್ಲಬೇಕು’ ಎಂದು ಆಗ್ರಹಿಸಿದರು. 

ಹನೂರು ವರದಿ: ಖಾಸಗಿ ವೈದ್ಯರು ಸೋಮವಾರ ಮುಷ್ಕರ ಹಮ್ಮಿಕೊಂಡಿದ್ದರಿಂದ ತಾಲ್ಲೂಕಿನ ರೋಗಿಗಳು ಚಿಕಿತ್ಸೆಗಾಗಿ ಸ್ವಲ್ಪ ಪರದಾಡಿದರು. ಆಸ್ಪತ್ರೆಗಳಲ್ಲಿ, ಕ್ಲಿನಿಕ್‌ಗಳಲ್ಲಿ ಸೂಚನಾ ಫಲಕಗಳು ಇಲ್ಲದೇ ಇದ್ದುದರಿಂದ ಜನರು ಗೊಂದಲಕ್ಕೀಡಾದರು. 

ಪಟ್ಟಣದಲ್ಲಿರುವ ಖಾಸಗಿ ಆಸ್ಪತ್ರೆಗಳು ಬೆಳಿಗ್ಗೆಯಿಂದಲೇ ಮುಚ್ಚಿದ್ದವು. ಚಿಕಿತ್ಸೆಗಾಗಿ ವಿವಿಧ ಗ್ರಾಮಗಳಿಂದ ಪಟ್ಟಣಕ್ಕೆ ಬಂದ ರೋಗಿಗಳಲ್ಲಿ ಕೆಲವರು ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರೆ, ಉಳಿದವರು ನಿರಾಶರಾಗಿ ತಮ್ಮ ಗ್ರಾಮಗಳಿಗೆ ಹಿಂದಿರುಗಿದರು.

‘ಮಗುವಿಗೆ ಮೂರು ದಿನಗಳಿಂದ ತೀವ್ರ ಜ್ವರವಿತ್ತು. ನಿನ್ನೆ ಬಂದು ಚಿಕಿತ್ಸೆ ಕೊಡಿಸಿದ್ದೆ. ಮೂರು ದಿನಗಳ ಕಾಲ ನಿರಂತರವಾಗಿ ಚಿಕಿತ್ಸೆ ಕೊಡಿಸುವಂತೆ ವೈದ್ಯರು ಸೂಚಿಸಿದ್ದರು. ಅದರಂತೆ ಬಂದೆ. ಆದರೆ, ಆಸ್ಪತ್ರೆ ಬಾಗಿಲು ಹಾಕಿದ್ದಾರೆ. ಇನ್ನೇನು ಮಾಡುವುದು? ನಾಳೆ ಪುನಃ ಬರಬೇಕು’ ಎಂದು ಅರಬಗೆರೆ ಗ್ರಾಮದ ಚಂದ್ರಮ್ಮ ತಮ್ಮ ಅಳಲು ತೋಡಿಕೊಂಡರು.

ಖಾಸಗಿ ಆಸ್ಪತ್ರೆಗಳು ಮುಚ್ಚಿದ್ದರಿಂದ ಸರ್ಕಾರಿ ಆಸ್ಪತ್ರೆ ರೋಗಿಗಳಿಂದ ತುಂಬಿ ತುಳುಕುತ್ತಿತ್ತು. ಚಿಕಿತ್ಸೆಗಾಗಿ ಬಂದಿದ್ದ ರೋಗಿಗಳು ಸಂಜೆಯವರೆಗೆ ಸರತಿ ಸಾಲಿನಲ್ಲಿ ನಿಂತು ವೈದ್ಯರನ್ನು ಭೇಟಿ ಮಾಡಿದರು.

ಗುಂಡ್ಲುಪೇಟೆ ವರದಿ: ಗುಂಡ್ಲುಪೇಟೆಯಲ್ಲೂ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳು ಸೋಮವಾರ ಕಾರ್ಯನಿರ್ವಹಿಸಲಿಲ್ಲ. ಹಾಗಾಗಿ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದ ಹೊರ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡು ಬಂತು. 

ಮುಷ್ಕರಕ್ಕೆ ಯಳಂದೂರಿನಲ್ಲೂ ಬೆಂಬಲ

ಯಳಂದೂರು: ಕೋಲ್ಕತ್ತದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ತಾಲ್ಲೂಕಿನ ಖಾಸಗಿ ವೈದ್ಯರು ಸೋಮವಾರ ಮುಷ್ಕರ ನಡೆಸಿದರು. 

ತಾಲ್ಲೂಕಿನಾದ್ಯಂತ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ವಿಭಾಗಗಳು ಮುಚ್ಚಿದ್ದವು. ಇದರ ಅರಿವಿಲ್ಲದೆ ಖಾಸಗಿ ಆಸ್ಪತ್ರಗೆ ಬರುತ್ತಿದ್ದ ರೋಗಿಗಳನ್ನು ಕಳುಹಿಸುತ್ತಿದ್ದ ದೃಶ್ಯ ಕಂಡು ಬಂತು.

ಪಟ್ಟಣದ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಎಂದಿನಂತೆ ಕಾರ್ಯ ನಿರ್ವಹಿಸಿದರು. ಸೋಮವಾರ ಸರ್ಕಾರಿ ಆಸ್ಪತ್ರೆ ಒಪಿಡಿಯಲ್ಲಿ ರೋಗಿಗಳ ಸಂಖ್ಯೆ ಎಂದಿಗಿಂತ ತುಸು ಹೆಚ್ಚಾಗಿತ್ತು. 

‘ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆ ಆಗದಂತೆ, ವೈದ್ಯರಿಗೆ ರಜೆ ನೀಡಿದೆ ಕರ್ತವ್ಯ ನಿರ್ವಹಿಸುವಂತೆ ಆರೋಗ್ಯ ಇಲಾಖೆ ಕಟ್ಟುನಿಟ್ಟಾಗಿ ಆದೇಶಿಸಿತು. ಅದರಂತೆ ಖಾಸಗಿ ವೈದ್ಯರ ಮುಷ್ಕರದಿಂದ ಎಲ್ಲಿಯೂ ತೊಂದರೆ ಆಗದ ರೀತಿ ಸರ್ಕಾರಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸಿವೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ್‌ ತಿಳಿಸಿದರು.

‘ಕೋಲ್ಕತ್ತದ ಎನ್‌ಆರ್‌ಎಸ್‌ ಆಸ್ಪತ್ರೆಯಲ್ಲಿ ವೃದ್ಧರೊಬ್ಬರ ಸಾವಿನ ಬೆನ್ನಲ್ಲೇ ನೂರಾರು ಗೂಂಡಾಗಳು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ವಿರೋಧಿಸಿ, ವೈದ್ಯರ ಮೇಲಿನ ಹಲ್ಲೆ ತಡೆಗೆ ಕಠಿಣ ಕಾನೂನು ತರಬೇಕು ಎಂದು ಒತ್ತಾಯಿಸಿ ಮುಷ್ಕರಕ್ಕೆ ಬೆಂಬಲ ನೀಡಿದ್ಧೇವೆ’ ಎಂದು ಖಾಸಗಿ ಆಸ್ಪತ್ರೆ ವೈದ್ಯ ಶ್ರೀಕಂಠಮೂರ್ತಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !