ಆರ್‌.ಬಿ.ತಾಂಡ, ಜಿ.ಟಿ.ದೊಡ್ಡಿಗೆ ವೈದ್ಯರ ತಂಡ ಭೇಟಿ

ಮಂಗಳವಾರ, ಜೂನ್ 25, 2019
27 °C
ಕಾಯಿಲೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ, ಗಂಭೀರ ಸಮಸ್ಯೆ ಇಲ್ಲ–ಆರೋಗ್ಯಾಧಿಕಾರಿಗಳ ಸ್ಪಷ್ಟನೆ

ಆರ್‌.ಬಿ.ತಾಂಡ, ಜಿ.ಟಿ.ದೊಡ್ಡಿಗೆ ವೈದ್ಯರ ತಂಡ ಭೇಟಿ

Published:
Updated:
Prajavani

ಕೊಳ್ಳೇಗಾಲ: ತಾಲ್ಲೂಕಿನ ಆರ್.ಬಿ.ತಾಂಡ, ಟಿ.ಜಿ.ದೊಡ್ಡಿ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿರುವ ವೈದ್ಯರ ಮೂರು ತಂಡಗಳು ವಿಚಿತ್ರ ಕಾಯಿಲೆಯಿಂದ ಬಳಲು‌ತ್ತಿರುವವರನ್ನು ಕಂಡು ಚಿಕಿತ್ಸೆ ನೀಡಿತು.

4 ತಿಂಗಳಿಂದ ಈ ಗ್ರಾಮದ ಜನರು ವಿಚಿತ್ರ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಆರೋಗ್ಯ ಇಲಾಖೆ ಬುಧವಾರ ವೈದ್ಯರ ತಂಡಗಳನ್ನು ಕಳುಹಿಸಿದೆ. ಗ್ರಾಮದ ಹಲವು ಮಂದಿ ಜ್ವರ ಕೆಮ್ಮು, ಮೈ–ಕೈ ನೋವು, ತಲೆಸುತ್ತಿನಿಂದ ಬಳಲುತ್ತಿದ್ದಾರೆ. ಇದು ವೈರಲ್‌ ಜ್ವರ ಎಂದು ಆರೋಗ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

‘20 ದಿನಗಳ ಹಿಂದೆ ನಾವು ಈ ಗ್ರಾಮಗಳಿಗೆ ತಂಡವನ್ನು ಕಳುಹಿಸಿ ಅಲ್ಲಿಂದ ಮಾಹಿತಿ ಪಡೆದಿದ್ದೆವು. ಅಲ್ಲಿನ ಜನರಿಗೆ ರಕ್ತ ಪರೀಕ್ಷೆ, ಡೆಂಗಿ, ಚಿಕುನ್‌ಗುನ್ಯಾ ಸೇರಿದಂತೆ ಅನೇಕ ಪರೀಕ್ಷೆ ನಡೆಸಿದ್ದೆವು. ಯಾವುದೇ ರೋಗ ಪತ್ತೆಯಾಗಿಲ್ಲ. ಈಗಾಗಲೇ ಚಿಕಿತ್ಸೆ ನೀಡುತ್ತಿದ್ದೇವೆ. ಯಾರಿಗೂ ಹೆಚ್ಚು ತೊಂದರೆಯಾಗಿಲ್ಲ. ಕೈ–ಕಾಲುಗಳಲ್ಲಿ ಮಾತ್ರ ನೋವು ಕಂಡು ಬಂದಿದೆ. 

ಗ್ರಾಮದ ಮೈಲುಸ್ವಾಮಿ ಅವರು ಮಾತನಾಡಿ, ‘4 ತಿಂಗಳ ಹಿಂದೆ ಗ್ರಾಮದಿಂದ ಇಬ್ಬರು ಹೆಂಗಸರು ತಮಿಳುನಾಡಿಗೆ ಹೋಗಿದ್ದರು. ಅಲ್ಲಿನ ಗ್ರಾಮದಲ್ಲಿ ಈ ರೀತಿಯ ಕಾಯಿಲೆ ಇದ್ದುದರಿಂದ ಈ ಕಾಯಿಲೆ ನಮಗೂ ಬಂದಿದೆ. ಈ ರೋಗದಿಂದ ನಾವು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದೇವೆ. ದೇಹ ಮತ್ತು ಕೈ ಕಾಲುಗಳ ನೋವಿನಿಂದ ನಿರಂತರವಾಗಿ ಬಳಲುತ್ತಿದ್ದಾರೆ. ಯಾವ ಕಾಯಿಲೆ ಎಂಬುದೇ ಗೊತ್ತಾಗುತ್ತಿಲ್ಲ’ ಎಂದರು.

ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿ ಮಂಚಯ್ಯ, ದಯಾನಂದ್, ದ್ವಾರಕೀಷ್‌, ನಾಗೇಶ್, ನಾಗರಾಜು ಸೇರಿದಂತೆ ಅನೇಕರು ಇದ್ದರು.

ಗಂಭೀರ ಸಮಸ್ಯೆ ಇಲ್ಲ: ಆರೋಗ್ಯಾಧಿಕಾರಿ

‘ಮೇ 17ರಿಂದ ನಾವು ಗ್ರಾಮಕ್ಕೆ ಪದೇ ಪದೇ ಭೇಟಿ ಗ್ರಾಮಸ್ಥರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದೇವೆ. ಆಗ 20 ಮಂದಿಗೆ ಜ್ವರ ಇತ್ತು. ಡೆಂಗಿ, ಚಿಕುನ್‌ಗುನ್ಯಾ ಎಲ್ಲ ಪ‍ರೀಕ್ಷೆಗಳನ್ನು ಮಾಡಿದ್ದೇವೆ. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿ ಹೇಳಿದ್ದೇವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್‌.ಪ್ರಸಾದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬುಧವಾರ ನಾಲ್ಕು ಜನರಲ್ಲಿ ಮಾತ್ರ ಜ್ವರ ಕಂಡು ಬಂದಿದೆ. ಇದು ವೈರಲ್‌ ಸೋಂಕು ಆಗಿದ್ದು ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಅದು ಬಿಟ್ಟರೆ ಗಂಭೀರ ಸಮಸ್ಯೆ ಅಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !