ಮಂಗಳವಾರ, ನವೆಂಬರ್ 19, 2019
29 °C

ನೆರೆ ಸಂತ್ರಸ್ತರಿಗೆ ₹80 ಸಾವಿರ ದೇಣಿಗೆ ಸಲ್ಲಿಕೆ

Published:
Updated:
Prajavani

ಚಿಕ್ಕಬಳ್ಳಾಪುರ: ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನೆರೆ ಸಂತ್ರಸ್ತರಿಗಾಗಿ ₹80 ಸಾವಿರ ದೇಣಿಗೆ ಸಂಗ್ರಹಿಸಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರಿಗೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಚೌಡರೆಡ್ಡಿ, ‘ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ರಾಜ್ಯದ ಸುಮಾರು 17 ಜಿಲ್ಲೆಗಳು ನೆರೆ ಪೀಡಿತವಾಗಿವೆ. ಪ್ರವಾಹದಿಂದಾಗಿ ಲಕ್ಷಾಂತರ ಜನರು ನಿರಾಶ್ರಿತರಾಗಿ, ಮೂಲ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಮಹಿಳೆಯರು, ಮಕ್ಕಳ ಗೋಳು ಹೇಳತೀರದಂತಾಗಿರುವುದು ತೀವ್ರ ಬೇಸರ ತಂದಿದೆ’ ಎಂದು ಹೇಳಿದರು.

‘ನೆರೆ ಸಂತ್ರಸ್ತರಿಗೆ ಸಹಾಯ ಮಾಡುವ ಸಲುವಾಗಿ ಜಿಲ್ಲೆಯಲ್ಲಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಸ್ವ ಇಚ್ಚೆಯಿಂದ ತಮ್ಮ ಕೈಲಾದ ದೇಣಿಗೆ ನೀಡಿದ್ದಾರೆ. ದೇಣಿಗೆ ಮೊತ್ತವನ್ನು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ಸಲ್ಲಿಸುವಂತೆ ಸಿಇಒ ಅವರಿಗೆ ಮನವಿ ಮಾಡಿದ್ದೇವೆ’ ಎಂದು ತಿಳಿಸಿದರು.

ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್.ಪ್ರಕಾಶ್, ಸಂಚಾಲಕ ಸಿ.ಎನ್.ಶ್ಯಾಮ್‌ಸುಂದರ್, ಖಜಾಂಚಿ ಬಾಲಕೃಷ್ಣ, ಸಂಯೋಜಕರಾದ ಎ.ಎಸ್.ನರಸಿಂಹರೆಡ್ಡಿ, ಪದಾಧಿಕಾರಿಗಳಾದ ವಿ.ಆರ್.ವಿನೋದ್ ಕುಮಾರ್, ಸಿ.ಎನ್.ಮನೋಹರ್, ಧನಂಜಯ್, ಚೇತನ್ ಕುಮಾರ್, ನಯಾಜ್ ಉಲ್ಲಾಖಾನ್, ಜಹೀರ್, ಗಾಯಿತ್ರಿ, ಕವಿತ, ಎಸ್‌.ವಿ.ಮೋಹನ್, ಸಿ.ಮೋಹನ್ ಬಾಬು ಹಾಜರಿದ್ದರು.

ಪ್ರತಿಕ್ರಿಯಿಸಿ (+)