ದೋಸ್ತಿಯಲ್ಲಿ ಮಂಕು; ಬಿಜೆಪಿಯಲ್ಲಿ ಚುರುಕು..!

ಮಂಗಳವಾರ, ಏಪ್ರಿಲ್ 23, 2019
31 °C
ವರ್ಷದೊಳಗೆ ತೆನೆಯ ಹೊರೆಯಿಳಿಸಿ, ಕಮಲದೊಳಗೆ ಜಾರಿದ ಬೆಳ್ಳುಬ್ಬಿ..!

ದೋಸ್ತಿಯಲ್ಲಿ ಮಂಕು; ಬಿಜೆಪಿಯಲ್ಲಿ ಚುರುಕು..!

Published:
Updated:
Prajavani

ವಿಜಯಪುರ: ಬಿಸಿಲ ಝಳ ಹೆಚ್ಚಿದಂತೆ, ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರ ತೊಡಗಿದೆ. ಅಧಿಸೂಚನೆ ಪ್ರಕಟಕ್ಕೂ ಮುನ್ನವೇ ‘ಜಿಗಿತ’ ಬಿರುಸುಗೊಂಡಿದೆ.

ದೋಸ್ತಿ ಪಕ್ಷಗಳಲ್ಲಿ ಮಂಕು ಆವರಿಸಿದೆ. ಕಾಂಗ್ರೆಸ್‌–ಜೆಡಿಎಸ್‌ ಜಿಲ್ಲಾ ಕಚೇರಿಗಳಲ್ಲಿ ಕಲವರವೇ ನಡೆಯದಾಗಿದೆ. ಕಮಲ ಪಾಳೆಯದ ರಾಜಕೀಯ ಚಟುವಟಿಕೆ ಚುರುಕುಗೊಂಡಿವೆ.

ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪಕ್ಷದ ಜಿಲ್ಲಾ ಕಚೇರಿಗೆ ಭೇಟಿ ನೀಡಿ, ಪದಾಧಿಕಾರಿಗಳೊಂದಿಗೆ ಚುನಾವಣಾ ತಂತ್ರಗಾರಿಕೆ ಹೆಣೆಯಲು ಮುಂದಾಗಿದ್ದಾರೆ. ಈ ಹಿಂದೆ ಅಪರೂಪಕ್ಕೊಮ್ಮೆ ಪಕ್ಷದ ನಿರ್ದೇಶನದ ಮೇರೆಗೆ ಕಚೇರಿಗೆ ಭೇಟಿ ನೀಡುತ್ತಿದ್ದ ಜಿಗಜಿಣಗಿ, ಇದೀಗ ನಿಯಮಿತವಾಗಿ ಭೇಟಿ ನೀಡುತ್ತಿರುವುದು ಕಾರ್ಯಕರ್ತರಲ್ಲೇ ಅಚ್ಚರಿ ಮೂಡಿಸಿದೆ.

ತುಮಕೂರು, ಹಾಸನ, ಮಂಡ್ಯ ಕ್ಷೇತ್ರಗಳಲ್ಲಿನ ಬಿಕ್ಕಟ್ಟು ದಳಪತಿಗಳಲ್ಲಿ ತಳಮಳ ಸೃಷ್ಟಿಸಿದೆ. ಮುಜುಗರ ತಪ್ಪಿಸಿಕೊಳ್ಳಲು ಕಾಂಗ್ರೆಸ್‌ನ ವರಿಷ್ಠರು ದಳಪತಿಗಳ ಸಾಥ್‌ಗೆ ಮುಂದಾಗಿದ್ದಾರೆ. ಇದು ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದ ಮೇಲೆ ಕರಿನೆರಳು ಬೀರಿದೆ.

‘ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದ ಕ್ಷೇತ್ರಗಳ ಗೊಂದಲ ಪರಿಹಾರಗೊಂಡ ಬಳಿಕ ವಿಜಯಪುರದತ್ತ ಚಿತ್ತ ಹರಿಸಿದರಾಯ್ತು ಎಂಬುದು ದಳಪತಿಗಳ ನಿಲುವಾಗಿದೆ. ಕಾಂಗ್ರೆಸ್‌ ವಲಯದಲ್ಲಿ ಚುನಾವಣಾ ಸೋಲಿನ ನಂತರದ ಚಿತ್ರಣ ಗೋಚರಿಸುತ್ತಿದೆ. ಟಿಕೆಟ್‌ನ ಪ್ರಬಲ ಆಕಾಂಕ್ಷಿ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಮಾತ್ರ ಆಶಾಭಾವದಿಂದಿದ್ದಾರೆ. ಗೃಹ ಸಚಿವ ಎಂ.ಬಿ.ಪಾಟೀಲ ಕ್ಷೇತ್ರ ಮರಳಿ ‘ಕೈ’ ವಶ ಪಡಿಸಿಕೊಳ್ಳಲಿದ್ದಾರೆ ಎಂಬ ಭರವಸೆಯಿಂದ ಚಟುವಟಿಕೆ ನಡೆಸಿದ್ದಾರೆ’ ಎಂದು ಕೆಪಿಸಿಸಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಬೆಳ್ಳುಬ್ಬಿ ಮತ್ತೆ ಕಮಲಕ್ಕೆ..!

2018ರ ವಿಧಾನಸಭಾ ಚುನಾವಣೆಯಲ್ಲಿ ಬಸವನಬಾಗೇವಾಡಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊನೆ ಕ್ಷಣದಲ್ಲಿ ಕೈ ತಪ್ಪಿದ್ದರಿಂದ, ಪಕ್ಷ ತೊರೆದು ತೆನೆಯ ಹೊರೆ ಹೊತ್ತು, ವಿಜಯಪುರ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ, ತೀವ್ರ ಮುಖಭಂಗ ಅನುಭವಿಸಿದ್ದ ಸಂಗಣ್ಣ ಕೆ.ಬೆಳ್ಳುಬ್ಬಿ ಭಾನುವಾರ ಬೆಂಗಳೂರಿನಲ್ಲಿ ಪಕ್ಷಕ್ಕೆ ಮರಳಿದರು.

ಬಿಜೆಪಿಯಿಂದಲೇ ಎರಡು ಬಾರಿ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಸಚಿವರಾಗಿಯೂ ಅಧಿಕಾರ ನಿರ್ವಹಿಸಿದ್ದರು. ಒಂಬತ್ತು ವರ್ಷ ಜಿಲ್ಲಾ ಬಿಜೆಪಿಯ ಚುಕ್ಕಾಣಿ ಹಿಡಿದಿದ್ದರು.

‘ಹಿಂದಿನ ವಿಧಾನಸಭಾ ಚುನಾವಣೆ ಸಂದರ್ಭ ಕೊನೆ ಕ್ಷಣದ ಎಡವಟ್ಟಿನಿಂದ ನಿಮಗೆ ಅನ್ಯಾಯವಾಗಿದೆ. ಇದಕ್ಕೆ ಪಕ್ಷ ಸೂಕ್ತ ಬೆಲೆ ತೆತ್ತಿದೆ. ಇದು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು. ವಿಜಯಪುರ ಜಿಲ್ಲೆಯ ವಿದ್ಯಮಾನ ಗಮನಕ್ಕಿದೆ. ಎಲ್ಲವನ್ನೂ ಸರಿಪಡಿಸಿ, ಪಕ್ಷದ ಸಂಘಟನೆ ಬಲಪಡಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ನಿರ್ವಹಿಸಿ ಎಂದು ಯಡಿಯೂರಪ್ಪ ಬೆಳ್ಳುಬ್ಬಿ ಅವರಿಗೆ ಸೂಚಿಸಿದರು’ ಎಂದು ಸಂಗಣ್ಣ ಆಪ್ತ ವಲಯ ತಿಳಿಸಿದೆ.

ಯುಗಾದಿ ಪಾಡ್ಯದ ಬಳಿಕ ಬಲಪ್ರದರ್ಶನ

ಗಾಣಿಗ ಸಮಾಜದ ಪ್ರಬಲ ಮುಖಂಡರೂ ಆಗಿರುವ ಬೆಳ್ಳುಬ್ಬಿ ಬಿಜೆಪಿಗೆ ಮರು ಸೇರ್ಪಡೆಯಾದ ಬಳಿಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಇದೀಗ ಬಹುತೇಕ ಹಳ್ಳಿಗಳಿಂದ ಶ್ರೀಶೈಲಕ್ಕೆ ಮಲ್ಲಯ್ಯನ ಕಂಬಿ ತೆರಳಿವೆ. ಯುಗಾದಿ ಪಾಡ್ಯದ ಬಳಿಕ ಇವು ತಮ್ಮೂರುಗಳಿಗೆ ಮರಳಲಿವೆ. ಇದರ ಬಳಿಕವೇ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ಸಮಾರಂಭ ಏರ್ಪಡಿಸಿ, ಶಕ್ತಿ ಪ್ರದರ್ಶನ ನಡೆಸಲು ಈಗಿನಿಂದಲೇ ಸಿದ್ಧತೆ ನಡೆಸಿಕೊಳ್ಳಲಾಗುವುದು ಎಂದು ಎಸ್.ಕೆ.ಬೆಳ್ಳುಬ್ಬಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳ್ಳುಬ್ಬಿ ಬೆಂಬಲಿಗರಲ್ಲಿ ಸಂತಸ

ಕೊಲ್ಹಾರ: ಜೆಡಿಎಸ್‌ ತೊರೆದು ಬಿಜೆಪಿಗೆ ಎಸ್‌.ಕೆ.ಬೆಳ್ಳುಬ್ಬಿ ಮರಳಿದ್ದಕ್ಕೆ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗಾಗಿ ಬೆಳ್ಳುಬ್ಬಿ ಅಪಾರ ಶ್ರಮವಹಿಸಿದ್ದರು. ಹಿಂದಿನ ವಿಧಾನಸಭಾ ಚುನಾವಣೆ ಸಂದರ್ಭ ಸಂಗಣ್ಣರಿಗೆ ಅನ್ಯಾಯವಾಗಿತ್ತು. ಇದೀಗ ಮತ್ತೆ ಪಕ್ಷಕ್ಕೆ ಅವರು ಮರಳಿದ್ದು ಆನೆ ಬಲ ಬಂದಂತಾಗಿದೆ ಎಂದು ಅಸಂಖ್ಯಾತ ಕಾರ್ಯಕರ್ತರು, ಬೆಂಬಲಿಗರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳ್ಳುಬ್ಬಿ ಪಕ್ಷ ತೊರೆದಿದ್ದಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಹಿನ್ನಡೆಯಾಗಿತ್ತು. ಇದೀಗ ಲೋಕಸಭಾ ಚುನಾವಣೆಯಲ್ಲಿ ನಮ್ಮ ಶಕ್ತಿ ಏನು ಎಂಬುದು ಮತಗಳ ಮುನ್ನಡೆ ಮೂಲಕ ತಿಳಿಯಲಿದೆ’ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ವಿರೂಪಾಕ್ಷಿ ಕೋಲಕಾರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !