ಸೋಮವಾರ, ಏಪ್ರಿಲ್ 12, 2021
30 °C
ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ * ನಡುರಸ್ತೆಯಲ್ಲೇ ಕಲ್ಲು, ದೊಣ್ಣೆ ಹಿಡಿದು ಹೊಡೆದಾಟ

ಎರಡು ಎಕರೆ ಜಮೀನಿಗಾಗಿ ಜೋಡಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು, ಕಲ್ಲು ಹಾಗೂ ದೊಣ್ಣೆಯಿಂದ ಹೊಡೆದು ಇಬ್ಬರನ್ನು ಕೊಲೆ ಮಾಡಲಾಗಿದೆ.

ಇಂದಿರಾನಗರದ ಆನಂದ್ ರೆಡ್ಡಿ ಹಾಗೂ ಬಾಣಸವಾಡಿಯ ಪ್ರಕಾಶ್ ರೆಡ್ಡಿ ಮೃತರು. ಅವರಿಬ್ಬರನ್ನು ಕೊಲೆ ಮಾಡಿದ ಆರೋಪದಡಿ ಬೇಗೂರಿನ ರಾಮಯ್ಯರೆಡ್ಡಿ ಹಾಗೂ ಅವರ ನಾಲ್ವರು ಮಕ್ಕಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ದೇವರ ಚಿಕ್ಕನಹಳ್ಳಿಯಲ್ಲಿ‌ ಎರಡು ಎಕರೆ ಜಮೀನು ಇದೆ. ಅಲ್ಲಿಯೇ ಮನೆ ಮಾಡಿಕೊಂಡು ರಾಮಯ್ಯ ಕುಟುಂಬ ವಾಸವಿತ್ತು. ಆ ಜಮೀನಿನ ಮಾಲೀಕತ್ವದ ಸಂಬಂಧ ಪ್ರಕಾಶ್, ಆನಂದ್‌ ಹಾಗೂ ಕೋದಂಡ ಎಂಬುವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಇತ್ತೀಚೆಗೆ ಮೂವರ ಪರವೇ ತೀರ್ಪು ಬಂದಿತ್ತು’ ಎಂದು ಬೇಗೂರು ಪೊಲೀಸರು ಹೇಳಿದರು.

‘ಮಂಗಳವಾರ ಮಧ್ಯಾಹ್ನ ಜಮೀನು ಬಳಿ ಬಂದಿದ್ದ ಪ್ರಕಾಶ್, ಆನಂದ್‌ ಹಾಗೂ ಕೋದಂಡ, ‘ನಮ್ಮ ಪರ ತೀರ್ಪು ಬಂದಿದೆ. ಈಗಲೇ ಜಾಗ ಖಾಲಿ ಮಾಡಿ’ ಎಂದು ರಾಮಯ್ಯ ಹಾಗೂ ಅವರ ಮಕ್ಕಳಿಗೆ ಸೂಚಿಸಿದ್ದರು. ಅದೇ ವೇಳೆ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆಯಿತು. ಕಲ್ಲು ಹಾಗೂ ದೊಣ್ಣೆ ಹಿಡಿದು ದಾಳಿ ಮಾಡಿದ್ದ ಆರೋಪಿಗಳು, ಪ್ರಕಾಶ್ ಹಾಗೂ ಆನಂದ್‌ ಅವರನ್ನು ಸ್ಥಳದಲ್ಲೇ ಹೊಡೆದು ಕೊಂದರು. ಕೋದಂಡ ತಪ್ಪಿಸಿಕೊಂಡು ಓಡಿಹೋದರು. ಈ ಸಂಬಂಧ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ’ ಎಂದು ತಿಳಿಸಿದರು.

‘ರಾಮಯ್ಯ ಅವರ ಪತ್ನಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ದಂಪತಿಗೆ ಪುತ್ರಿ ಹಾಗೂ ಮೂವರು ಪುತ್ರರಿದ್ದು, ಯಾರೊಬ್ಬರಿಗೂ ಮದುವೆ ಸಹ ಆಗಿಲ್ಲ. ತಾವು ಉಳಿದುಕೊಂಡಿದ್ದ ಜಮೀನು, ಕೈ ತಪ್ಪುವ ಭೀತಿಯಲ್ಲಿ ಅವರೆಲ್ಲರೂ ಈ ಕೃತ್ಯ ಎಸಗಿದ್ದಾರೆ’ ಎಂದು ವಿವರಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು