ಪ್ರಖ್ಯಾತಿ ಗಳಿಸಿದ್ದರೂ ತವರೂರು ಮರೆಯದವರು..!

7
ರೋಗಿಗಳ ಊಟಕ್ಕಾಗಿ ಎಪಿಎಂಸಿ ವರ್ತಕರಿಂದ ಪ್ರತಿ ವರ್ಷ ಧಾನ್ಯ ಸಂಗ್ರಹಿಸುತ್ತಿದ್ದ ಜೋಳಿಗೆ ವೈದ್ಯ

ಪ್ರಖ್ಯಾತಿ ಗಳಿಸಿದ್ದರೂ ತವರೂರು ಮರೆಯದವರು..!

Published:
Updated:

ವಿಜಯಪುರ: ಲಂಡನ್‌ನಲ್ಲಿ ಕಲಿತ ಈ ಭಾಗದ ಮೊದಲ ವೈದ್ಯ. ಲಂಡನ್‌, ಎಡಿನ್‌ಬರ್ಗ್‌ನ ಕಾಲೇಜುಗಳಲ್ಲಿ ಫೆಲೊ ಇನ್‌ ರಾಯಲ್‌ಕಾಲೇಜ್‌ ಸರ್ಜನ್‌ ಪದವಿ ಗಳಿಸಿದ ಭಾರತದ ಮೊದಲ ವೈದ್ಯ...

ಸ್ವಾತಂತ್ರ್ಯ ಪೂರ್ವದಲ್ಲೇ ದೇಶದ ಮೂವರು ಕ್ಯಾನ್ಸರ್‌ ಚಿಕಿತ್ಸಕರಲ್ಲಿ ಒಬ್ಬಾತ ಎಂಬ ಪ್ರಖ್ಯಾತಿ ಗಳಿಸಿದವರು ಬಸವನಬಾಗೇವಾಡಿ ತಾಲ್ಲೂಕಿನ ಅಂಗಡಗೇರಿಯ ಡಾ.ರೇವಣಸಿದ್ದಪ್ಪಗೌಡ ಬಿ.ಪಾಟೀಲ. ರಾಷ್ಟ್ರಪತಿ ಝಾಕೀರ್‌ ಹುಸೇನ್‌ ಅವರಿಂದ ‘ಪದ್ಮಶ್ರೀ’ ಪುರಸ್ಕೃತಗೊಂಡವರು.

‘ಕರ್ನಾಟಕದ ಎರಡನೇ ಪರಮಾತ್ಮ’ ಎಂದೇ ಗ್ರಾಮೀಣ ಜನರಿಂದ ಅಭಿಮಾನಪೂರ್ವಕವಾಗಿ ಕರೆಸಿಕೊಳ್ಳುತ್ತಿದ್ದ ಕ್ಯಾನ್ಸರ್‌ ತಜ್ಞ ಡಾ.ಆರ್‌.ಬಿ.ಪಾಟೀಲ ಹುಬ್ಬಳ್ಳಿಯಲ್ಲಿ ತಮ್ಮ 96ನೇ ಇಳಿ ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದ ಶನಿವಾರ ಇನ್ನಿಲ್ಲ ಎಂಬ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ, ತವರೂರ ಜನ ಕಂಬನಿ ಮಿಡಿಯಿತು.

ಮಹಾಮಾರಿ ಕ್ಯಾನ್ಸರ್‌ಗೆ ಪಾಟೀಲರಿಂದ ಚಿಕಿತ್ಸೆ ಪಡೆದು ಮರು ಜನ್ಮ ಪಡೆದ ಹಿರಿಯರು ಕಣ್ಣೀರಾದರು. ಪುಣ್ಯಾತ್ಮ ಎಂಬ ಉದ್ಗಾರ ತೆಗೆದರು.

‘ವಿಜಯಪುರ, ಬಾಗಲಕೋಟೆ ಜಿಲ್ಲೆಯ ಜನರು ಎಂದರೇ ವೈದ್ಯರಿಗೆ ಬಲು ಪ್ರೀತಿ. ಚಿಕಿತ್ಸೆಗಾಗಿ ಹೋದರೆ ಸಾಕು ಅಭಿಮಾನದಿಂದ ಕಾಣುತ್ತಿದ್ದರು. ಚಿಕಿತ್ಸಾ ವೆಚ್ಚ ಹೆಚ್ಚಾಯ್ತು ಎಂದರೇ ಕಡಿಮೆ ಮಾಡುತ್ತಿದ್ದರು. ರೋಗಿಗಳ ಸಂಬಂಧಿಕರಿಗೆ ವಸತಿ–ಊಟೋಪಚಾರ ಕಲ್ಪಿಸಿದ್ದರು.

ಬಡವರು ಎಂದರೇ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು. ಅವರೊಮ್ಮೆ ನಮ್ಮ ಕೈ ಮುಟ್ಟಿದರೆ ಸಾಕು. ಸರ್ವ ರೋಗವೂ ನಿವಾರಣೆಯಾಗುತ್ತದೆ ಎಂಬ ನಂಬಿಕೆ ರೋಗಿಗಳದ್ದಾಗಿತ್ತು. ವೈದ್ಯ ಲೋಕದ ಮಾಂತ್ರಿಕ ಎಂದರೂ ತಪ್ಪಿಲ್ಲ.

ಎರಡು ತಿಂಗಳಿಗೊಮ್ಮೆ ಕವಲಗಿಯಲ್ಲಿರುವ ತಮ್ಮ ತೋಟಕ್ಕೆ ಬರುತ್ತಿದ್ದರು. ಖಾಲಿ ಕೈಯಲ್ಲಿ ಎಂದೆಂದೂ ಬಂದವರಲ್ಲ. ತೋಟದಲ್ಲೇ ರೋಗಿಗಳನ್ನು ಪರೀಕ್ಷಿಸಿ, ಉಚಿತವಾಗಿ ಔಷಧೋಪಚಾರ ನಡೆಸುತ್ತಿದ್ದರು. ದೂರದ ಹುಬ್ಬಳ್ಳಿಗೆ ಹೋಗಿ ಬರಲು ತ್ರಾಸು ಎನ್ನುವವರು ಇಲ್ಲಿಗೆ ಬಂದು ತಪಾಸಣೆಗೊಳಪಡುತ್ತಿದ್ದರು’ ಎಂದು ಬಸವನಬಾಗೇವಾಡಿ ತಾಲ್ಲೂಕಿನ ಕವಲಗಿ ಗ್ರಾಮದ ಹಣಮಂತಗೌಡ ಚೀರಲದಿನ್ನಿ ಡಾ.ಆರ್‌.ಬಿ.ಪಾಟೀಲರ ಗುಣಗಾನ ಮಾಡಿದರು.

ಜೋಳಿಗೆ ಹಿಡಿದ ವೈದ್ಯ

‘ತಮ್ಮ ಆಸ್ಪತ್ರೆಗೆ ಬರುವ ದೂರದ ಊರುಗಳ ರೋಗಿಗಳು, ಅವರ ಜತೆಯಲ್ಲಿರುವವರಿಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸಲು ತವರೂರಲ್ಲಿ ಜೋಳಿಗೆ ಹಿಡಿದು ಧಾನ್ಯ ಸಂಗ್ರಹಿಸುತ್ತಿದ್ದ ಉದಾರಿ, ವಿಶಾಲ ಹೃದಯಿ ನಮ್ಮ ದೊಡ್ಡಪ್ಪ’ ಎಂದು ಆರ್‌.ಬಿ.ಪಾಟೀಲರ ತಮ್ಮನ ಪುತ್ರ ಡಾ.ಮಲ್ಲನಗೌಡ ಎಸ್‌.ಪಾಟೀಲ ತಿಳಿಸಿದರು.

‘ದೊಡ್ಡಪ್ಪನ ಸೂಚನೆಯಂತೆ ಹೋದ ವರ್ಷ ಸಹ ತಾಳಿಕೋಟೆ, ವಿಜಯಪುರ ಎಪಿಎಂಸಿಗಳಲ್ಲಿ, ಢವಳಗಿ, ಮುದ್ದೇಬಿಹಾಳ ಸೇರಿದಂತೆ ವಿವಿಧೆಡೆ ಧಾನ್ಯ ಸಂಗ್ರಹಿಸಿದ್ದೆ. ಡಾ.ಆರ್‌.ಬಿ.ಪಾಟೀಲ ಆಸ್ಪತ್ರೆಯಲ್ಲಿನ ಉಚಿತ ಊಟದ ವ್ಯವಸ್ಥೆಗೆ ಎನ್ನುತ್ತಿದ್ದಂತೆ ವ್ಯಾಪಾರಿಗಳು, ರೈತ ಸಮೂಹ ತಾ ಮುಂದು, ನಾ ಮುಂದು ಎಂಬಂತೆ ಕೊಡುಗೈ ಹೆಚ್ಚಿಸುತ್ತಿತ್ತು.

ಇದರ ಫಲವಾಗಿ ಹಿಂದಿನ ವರ್ಷದ ಸುಗ್ಗಿಯಲ್ಲಿ 60 ಚೀಳ ಬಿಳಿಜೋಳ, 40 ಚೀಲ ಗೋಧಿ, 20 ಚೀಲ ಬೆಲ್ಲ, 15 ಚೀಲ ನವಣೆ ಸೇರಿದಂತೆ ಇನ್ನಿತರೆ ಧಾನ್ಯಗಳು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಾಗಿತ್ತು. ಎಲ್ಲವನ್ನೂ ಒಟ್ಟುಗೂಡಿಸಿ ಆಸ್ಪತ್ರೆ ಸಿಬ್ಬಂದಿ ಜತೆ ಹುಬ್ಬಳ್ಳಿಗೆ ಕಳುಹಿಸಿಕೊಟ್ಟಿದ್ದೆ’ ಎಂದು ಎಂ.ಎಸ್.ಪಾಟೀಲ ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !