ಸಂವಿಧಾನ ಶಿಲ್ಪಿಗೆ ಸಾವಿರ ನಮನ

ಶುಕ್ರವಾರ, ಏಪ್ರಿಲ್ 26, 2019
24 °C
ನಗರದ ವಿವಿಧೆಡೆ ಅಂಬೇಡ್ಕರ್‌ ದಿನಾಚರಣೆ

ಸಂವಿಧಾನ ಶಿಲ್ಪಿಗೆ ಸಾವಿರ ನಮನ

Published:
Updated:
Prajavani

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರ 128ನೇ ಜನ್ಮದಿನಾಚರಣೆಯನ್ನು ನಗರದಲ್ಲಿ ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ‌ಎಲ್ಲೆಲ್ಲೂ ಜೈ ಭೀಮ್‌ ಘೋಷಣೆಗಳು ಮೊಳಗಿದವು.

ಜಯಂತಿ ಪ್ರಯುಕ್ತ ‍ವಿವಿಧೆಡೆ ಅಂಬೇಡ್ಕರ್‌ ಹಬ್ಬ, ಪ್ರಶಸ್ತಿ ಪ್ರದಾನ, ಸಾಮೂಹಿಕ ಧಮ್ಮ ದೀಕ್ಷಾ ಸಮಾರಂಭಗಳು ನಡೆದವು. ಸಂವಿಧಾನ ರಕ್ಷಣೆಗೆ ಸಂಬಂಧಿಸಿದಂತೆ ಸಂವಾದ, ವಿಚಾರ ಸಂಕಿರಣ, ಕವಿಗೋಷ್ಠಿ, ಮತದಾನ ಜಾಗೃತಿ ಕಾರ್ಯಕ್ರಮಗಳು ಜರುಗಿದವು. ಅಂಬೇಡ್ಕರ್‌ ನಡೆದು ಬಂದ ದಾರಿ' ಕುರಿತ ಸಾಕ್ಷ್ಯಚಿತ್ರಗಳನ್ನು ಪ್ರಸ್ತುತಪಡಿಸಲಾಯಿತು.

ಅಂಬೇಡ್ಕರ್‌ ಸೇನೆಯ ಸದಸ್ಯರು ಮೈಸೂರು ಬ್ಯಾಂಕ್‌ ವೃತ್ತದಿಂದ ವಿಧಾನಸೌಧ ಮುಂಭಾಗದ ಅಂಬೇಡ್ಕರ್‌ ಪ್ರತಿಮೆವರೆಗೂ 101 ಜನಪದ ಕಲಾ ತಂಡಗಳ ಜೊತೆ ಮೆರವಣಿಗೆಯಲ್ಲಿ ಸಾಗಿದರು. ದಲಿತ ಸಂಘರ್ಷ ಸಮಿತಿಯ ಸದಸ್ಯರು ಬೆಳ್ಳಿ ರಥದೊಂದಿಗೆ ನಡಿಗೆ ಜಾಥಾ ನಡೆಸಿದರು.

ಬೈಕ್‌ ರ‍್ಯಾಲಿ: ಯುವಕರ ತಂಡವೊಂದು ಅಂಬೇಡ್ಕರ್ ಭಾವಚಿತ್ರದೊಂದಿಗೆ ಯಲಹಂಕದಿಂದ ಹೆಬ್ಬಾಳದವರೆಗೆ ಬೈಕ್ ರ‍್ಯಾಲಿ ನಡೆಸಿತು. ಫೇಸ್‌ಬುಕ್, ವ್ಯಾಟ್ಯ್‌ಆ್ಯಪ್‌ಗಳಲ್ಲಿ ಸಂವಿಧಾನ ಶಿಲ್ಪಿಯ ಭಾವಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಶುಭಾಶಯ ಕೋರಿದರು.

ವಿಧಾನಸೌಧ ಮುಂಭಾಗದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ಬಿಬಿಎಂಪಿ ಕಚೇರಿಯಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಮೇಯರ್‌ ಗಂಗಾಂಬಿಕೆ, ಉಪಮೇಯರ್ ಭದ್ರೇಗೌಡ, ಆಯುಕ್ತ ಮಂಜುನಾಥ ಪ್ರಸಾದ್, ಪಾಲಿಕೆ ಸದಸ್ಯ ಸಂಪತ್‌ರಾಜ್ ಪುಷ್ಪನಮನ ಸಲ್ಲಿಸಿದರು.

ಬಿರುಸಿನ ಪ್ರಚಾರದ ನಡುವೆಯೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರು ಯಶವಂತಪುರ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಿದರು. ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಕೆ.ಎ.ಆನಂದ ಅವರು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸಮಾನತೆ ಸಾರಿದ ಹರಿಕಾರನ ತತ್ವ, ಆದರ್ಶಗಳನ್ನು ಪಾಲಿಸಬೇಕು ಎಂದು ಶಾಲಾ–ಕಾಲೇಜುಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಪ್ರಾಂಗಣದಲ್ಲಿರುವ ಸ್ನಾತಕೋತ್ತರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ತಳಿರು ತೋರಣದಿಂದ ಹಾಸ್ಟೆಲ್‌ ಕಟ್ಟಡವನ್ನು ಸಿಂಗರಿಸಿದರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಅವರು ಸಸಿ‌ನೆಡುವ ಮೂಲಕ ಸಂವಿಧಾನ ಶಿಲ್ಪಿಯನ್ನು ಸ್ಮರಿಸಿದರು. ನಂತರ ವಿದ್ಯಾರ್ಥಿಗಳೂ ಸಸಿ ನೆಟ್ಟರು. ಅಂಬೇಡ್ಕರ್‌ ಅಧ್ಯಯನ ಕೇಂದ್ರದಲ್ಲೂ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

‘ಸರ್ವಜನಾಂಗದ ಏಳಿಗೆಗೆ ಶ್ರಮಿಸಿದ ನಾಯಕ’

ಕೆ.ಆರ್.ಪುರ: ಬೆಂಗಳೂರು ಪೂರ್ವ ತಾಲ್ಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ‌ಜಯಂತ್ಯುತ್ಸವನ್ನು ಆಚರಿಸಲಾಯಿತು. ತಹಶೀಲ್ದಾರ್ ರಾಮಲಕ್ಷ್ಮಯ್ಯ, ‘ಅಂಬೇಡ್ಕರ್ ಅವರು ಮಹಿಳೆಯರಿಗಾಗಿ ವಿಶೇಷ ಕಾನೂನುಗಳನ್ನು ರಚನೆ ಮಾಡಿ ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಕಲ್ಪಿಸಿಕೊಟ್ಟರು. ಅವರ ಉದಾತ್ತ ಚಿಂತನೆಗಳಿಂದ ಸಂವಿಧಾನ ರಚನೆಯಾಗಿದೆ’ ಎಂದರು.

ದಲಿತ ಮುಖಂಡ ಎಂ.ಆರ್.ವೆಂಕಟೇಶ್, ‘ಸರ್ವಜನಾಂಗದ ಏಳಿಗೆಗಾಗಿ ಅಂಬೇಡ್ಕರ್ ಹಗಲಿರಳು ಶ್ರಮಿಸಿದ್ದರು. ಅವರ ಆದರ್ಶ ಗುಣಗಳನ್ನು ಎಲ್ಲ ಜಾತಿಬಾಂಧವರು ಮೈಗೂಡಿಸಿಕೊಂಡು ಬಾಳಬೇಕು’ ಎಂದರು.

ಪೌರಕಾರ್ಮಿಕರ ಸಂಘದಿಂದ ಜಯಂತಿ

ಯಲಹಂಕ: ಕೋಗಿಲು ಬಡಾವಣೆಯ ಪೌರಕಾರ್ಮಿಕರ ಸಂಘದಿಂದ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.

ಬಡಾವಣೆಯಿಂದ ಆರಂಭವಾದ ಬೈಕ್ ರ‍್ಯಾಲಿಯಲ್ಲಿ ತಮಟೆ ವಾದನದೊಂದಿಗೆ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಕೋಗಿಲು ವೃತ್ತ, ಸಂತೆ ವೃತ್ತ ಹಾಗೂ ಠಾಣೆ ವೃತ್ತದ ಮೂಲಕ ಮೆರವಣಿಗೆ ಸಾಗಿ ಮಿನಿ ವಿಧಾನಸೌಧಕ್ಕೆ ತಲುಪಿತು.

ನಂತರ ಸಾರ್ವಜನಿಕರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪಾರ್ಚನೆ ಮಾಡಿದರು. ಪಟಾಕಿ ಸಿಡಿಸಿ, ಜೈಕಾರಗಳನ್ನು ಕೂಗಿ ಸಂಭ್ರಮಿಸಿದರು.

‘ಶೋಷಿತರ ಧ್ವನಿಯಾಗಿದ್ದ ಅಂಬೇಡ್ಕರ್‌’

ದಾಬಸ್‌ಪೇಟೆ: ಇಲ್ಲಿನ ದಲಿತಪರ ಸಂಘಟನೆಗಳು ಹಾಗೂ ದಲಿತ ಕಾಲೋನಿಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್‌ ಜಯಂತಿ ಆಚರಣೆ ಮಾಡಲಾಯಿತು.

‘ಅಂಬೇಡ್ಕರ್‌ ಅವರು ಸಮಾಜದಲ್ಲಿ ಧ್ವನಿ ಇಲ್ಲದ ಶೋಷಿತರು, ದಮನಿರತರ ದಾರಿದೀಪವಾಗಿದ್ದರು. ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ದೊರಕಿಸಿದ ಮಹಾನ್ ಚೇತನರಾಗಿದ್ದರು’ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಮಾರುತಿ ಹೇಳಿದರು. 

‘ಸಂವಿಧಾನ ರಚನೆ ಮಾಡಿ, ದೇಶದ ಆಡಳಿತ ವ್ಯವಸ್ಥೆಗೆ ಹೊಸ ಆಯಾಮ ನೀಡಿದರು. ಯುವ ಜನಾಂಗ ಅವರ ತತ್ವ–ಸಿದ್ಧಾಂತಗಳನ್ನು ರೂಢಿಸಿಕೊಂಡು ಅಸಮಾನತೆ, ಅಸ್ಪೃಶ್ಯತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !