‘ಬದಲಾವಣೆಯ ಕನಸಿದೆ; ಪ್ರಾಮಾಣಿಕವಾಗಿ ಶ್ರಮಿಸುವೆ’

7
ದೇಶದಲ್ಲೇ ಮೊದಲಿಗರಾಗುವ ಗುರಿಯಿದೆ; ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿಕೆ

‘ಬದಲಾವಣೆಯ ಕನಸಿದೆ; ಪ್ರಾಮಾಣಿಕವಾಗಿ ಶ್ರಮಿಸುವೆ’

Published:
Updated:

ವಿಜಯಪುರ: ‘ಗೃಹ ಇಲಾಖೆಯಲ್ಲಿ ಬದಲಾವಣೆ ತರುವ ಕನಸಿದೆ. ಉನ್ನತ ಹಂತದ ಅಧಿಕಾರಿಗಳಿಂದ ಹಿಡಿದು, ತಳ ಹಂತದಿಂದಲೂ ಮಾಹಿತಿ ಸಂಗ್ರಹಣೆ ಆರಂಭಿಸಿರುವೆ. ಫೆ.15ರಿಂದ ನನ್ನ ನೀಲನಕ್ಷೆಯ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ದುಡಿಯುವೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

‘ದೇಶದ ವಿವಿಧ ರಾಜ್ಯಗಳು ಅಳವಡಿಸಿಕೊಂಡಿರುವ ಅತ್ಯುತ್ತಮ ಯೋಜನೆಗಳನ್ನು ರಾಜ್ಯ ಗೃಹ ಇಲಾಖೆಯಲ್ಲೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಚಿಂತನೆ ನಡೆದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅಧ್ಯಯನ ಆರಂಭಗೊಂಡಿದೆ’ ಎಂದು ಶುಕ್ರವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮಕ್ಕಳ ಕಳ್ಳ ಸಾಗಣೆ ಅನಿಷ್ಟ ಪದ್ಧತಿ. ಶಾಲಾ–ಕಾಲೇಜುಗಳ ಬಳಿ ಮಾದಕ ವಸ್ತು ಮಾರಾಟ ಜಾಲ ವ್ಯಾಪಕವಾಗಿದೆ. ಇವೆರೆಡನ್ನೂ ಬೇರು ಸಮೇತ ಕಿತ್ತು ಹಾಕಲಾಗುವುದು. ಜೂಜು, ಮಟ್ಕಾ, ಕ್ರಿಕೆಟ್‌ ಬೆಟ್ಟಿಂಗ್‌ ಸಾಮಾಜಿಕ ದುಷ್ಪರಿಣಾಮ ಬೀರಲಿದ್ದು, ಇವುಗಳ ಕಡಿವಾಣಕ್ಕಾಗಿ ಜಾಮೀನು ರಹಿತ ಬಂಧನಕ್ಕೆ ಪೂರಕವಾದ ಕಾಯ್ದೆಯೊಂದನ್ನು ಜಾರಿಗೊಳಿಸಲು ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿರುವೆ’ ಎಂದು ಇದೇ ಸಂದರ್ಭ ಗೃಹ ಸಚಿವರು ತಿಳಿಸಿದರು.

‘ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಿಕೆ, ಪೊಲೀಸ್ ಆಡಳಿತದಲ್ಲಿ ಆಧುನಿಕ ವ್ಯವಸ್ಥೆಯ ಅಳವಡಿಕೆ, ಸಿಬ್ಬಂದಿಯ ಜೀವನಮಟ್ಟ ಸುಧಾರಿಸುವಿಕೆ, ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ಅಪರಾಧ ನಿಯಂತ್ರಿಸುವಿಕೆಯ ಅತ್ಯಾಧುನಿಕ ಮಾದರಿ ಸೇರಿದಂತೆ ಪೊಲೀಸ್ ಠಾಣೆಗಳಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದೇನೆ’ ಎಂದರು.

‘ಮರಳು ಮಾಫಿಯಾ ದಂಧೆ ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಪ್ರಸ್ತುತ ಯಾವುದೇ ಹೆಚ್ಚಿನ ಅಧಿಕಾರವಿಲ್ಲ. ಎನ್ಎಂಆರ್‌ಡಿ ಕಾಯ್ದೆಗೆ ಸಂಬಂಧಿಸಿದ ತೀರ್ಪನ್ನು ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸಿದ್ದೇವೆ. ಅಲ್ಲಿವರೆಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಟ್ಟಿಗೆ ಸಮನ್ವಯದಿಂದ ಕೆಲಸ ನಿರ್ವಹಿಸಿ, ಮರಳು ದಂಧೆ ಮಟ್ಟ ಹಾಕುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿರುವೆ’ ಎಂದು ಹೇಳಿದರು.

‘ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಸಮಗ್ರ ತನಿಖೆ ನಡೆಸಿದೆ. ಶೀಘ್ರದಲ್ಲೇ ಫಲಿತಾಂಶವೂ ಸಿಗಲಿದೆ. ಪೊಲೀಸರಿಗೆ ಮನೆಕಟ್ಟಿಕೊಳ್ಳಲು ಅನುಕೂಲವಾಗುವಂತೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಲಿಂಕ್‌ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಆರೋಪಿಗಳ ಅಪರಾಧ ಸಾಬೀತುಪಡಿಸಿ, ಶಿಕ್ಷೆಯಾಗುವಂತೆ ಕ್ರಮ ಜರುಗಿಸಬೇಕು ಎಂದು ಈಗಾಗಲೇ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವೆ’ ಎಂದು ಎಂ.ಬಿ.ಪಾಟೀಲ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !