'ಕುಡಿಯುವ ನೀರಿನ ಸಮಸ್ಯೆಯಾಗದಿರಲಿ'

7
ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ

'ಕುಡಿಯುವ ನೀರಿನ ಸಮಸ್ಯೆಯಾಗದಿರಲಿ'

Published:
Updated:
Prajavani

ವಿಜಯಪುರ: ಭೀಕರ ಬರದಿಂದ ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹ್ಮದ್ ಮೊಹಸೀನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಪರಿಶೀಲಿಸಿ ಸಚಿವ ಸಂಪುಟ ಉಪ ಸಮಿತಿ ಸೂಚಿಸಿದಂತೆ, ಲಭ್ಯವಿರುವ ಕೊಳವೆ ಬಾವಿಗಳ ಜಲಸಂಪನ್ಮೂಲ ಆಧಾರದ ಮೇಲೆ ಕೊಳವೆ ಬಾವಿಗಳ ಪ್ಲಶ್ಶಿಂಗ್, ಹೈಡ್ರೋಫ್ಯಾಕ್ಚರಿಂಗ್, ಡಿಪನಿಂಗ್ ಮಾಡುವ ಕುರಿತು ಅವಶ್ಯ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು.

ಸರ್ಕಾರಿ ಕೊಳವೆ ಬಾವಿಗಳು. ಜಲಸಂಪನ್ಮೂಲ ಲಭ್ಯವಿರುವ ಬಗ್ಗೆ ಮತ್ತು ಕೊಳವೆ ಬಾವಿಗಳ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಯನ್ವಯ ಅವಶ್ಯಕ ಕ್ರಮ ಕೈಗೊಳ್ಳಬೇಕು. ಜನವಸತಿಗಳಿಗೆ ಅವಶ್ಯಕತೆಯನುಸಾರ ನೀರು ಪೂರೈಸಬೇಕು. ಖಾಸಗಿ ಕೊಳವೆ ಬಾವಿಗಳ ಮಾಲೀಕರ ಜಲಸಂಪನ್ಮೂಲ ಹೆಚ್ಚಿರುವ ಬಗ್ಗೆ ಗುರುತಿಸಿ, ಆ ನೀರು ಪಡೆಯುವ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.

ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಗೆ ಸಂಬಂಧಪಟ್ಟಂತೆ 90 ದಿನಗಳ ನಂತರವೂ ಸಹ ಕುಡಿಯುವ ನೀರು ಸರಬರಾಜಿಗೆ ಉಪ ಸಮಿತಿ ಸೂಚಿಸಿದೆ. ಈ ದಿಸೆಯಲ್ಲಿ ಜನರಿಗೆ ನೀರು ಪೂರೈಸುವ ಜತೆಗೆ ಗೋಶಾಲೆಗಳಲ್ಲಿರುವ ಜಾನುವಾರುಗಳಿಗೂ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ತಾಲ್ಲೂಕು ಟಾಸ್ಕ್‌ಪೋರ್ಸ್‌ಗಳ ಮೂಲಕ ನಿರಂತರ ಸಭೆ ನಡೆಸಿ ಬರ ಪರಿಹಾರ ಕಾಮಗಾರಿ ಚುರುಕುಗೊಳಿಸಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಪ್ರಗತಿ ತೀವ್ರಗೊಳಿಸಬೇಕು ಎಂದು ಹೇಳಿದರು.

ಸಾಲ ಮನ್ನಾ ಯೋಜನೆಯಡಿ ನಿಗದಿತ ಗುರಿಗೆ ತಕ್ಕಂತೆ ಪ್ರಗತಿ ಸಾಧಿಸಬೇಕು. ಪ್ರತಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಪ್ರತಿ ದಿನ ಗುರಿ ನಿಗದಿಪಡಿಸಿ, ಅರ್ಹ ರೈತ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ದೊರಕಿಸಬೇಕು. ಇದರಲ್ಲಿ ನಿರ್ಲಕ್ಷ್ಯ ತೋರುವ ಗ್ರಾಮ ಲೆಕ್ಕಾಧಿಕಾರಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ. ಸಹಕಾರ ಇಲಾಖೆಯಿಂದ ಮುಂಬರುವ ಒಂದು ವಾರದ ಅವಧಿಯಲ್ಲಿ ಸೂಕ್ತ ಪ್ರಗತಿ ಸಾಧಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಸ್ಮಶಾನ ಭೂಮಿ ಹಾಗೂ ಕಬರಸ್ತಾನಗಳಿಗೆ ಅವಶ್ಯಕವಿರುವ ನಿವೇಶನವನ್ನು ಗುರುತಿಸಿ ಮೀಸಲಿಡಬೇಕು. ಸ್ಮಶಾನ ಭೂಮಿ ಇಲ್ಲದಿರುವ ಕುರಿತಂತೆ ಪ್ರಸ್ತಾವನೆ ಸಲ್ಲಿಸಬೇಕು. ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಿವಿಧ ನ್ಯಾಯಾಲಯದ ಪ್ರಕರಣಗಳನ್ನು ಆದ್ಯತೆ ಮೇಲೆ ಇತ್ಯರ್ಥಪಡಿಸಬೇಕು. ಸಂಬಂಧಪಟ್ಟ ಉಪ ವಿಭಾಗಾಧಿಕಾರಿಗಳು ಪ್ರತಿ ತಿಂಗಳು ಸಭೆ ನಡೆಸಿ, ಇಂತಹ ಪ್ರಕರಣ ಇತ್ಯರ್ಥಕ್ಕೆ ನಿಗಾ ವಹಿಸಬೇಕು ಎಂದರು.

ಗ್ರಾಮ ಪಂಚಾಯ್ತಿ ಕ್ರಿಯಾ ಯೋಜನೆಯನ್ವಯ ಅರ್ಹ ಫಲಾನುಭವಿಗಳಿಗೆ ವಿವಿಧ ವಸತಿ ಯೋಜನೆಗಳಡಿ ಸೌಲಭ್ಯ ಕಲ್ಪಿಸಬೇಕು. ಒಟ್ಟಾರೆ ತೀವ್ರ ಬರ ಇರುವುದರಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ, ಜಾನುವಾರುಗಳಿಗೆ ಮೇವಿನ ಸೌಲಭ್ಯ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಸೂಕ್ತ ಪ್ರಗತಿ ಸಾಧಿಸಬೇಕು.

ಜಿಲ್ಲಾ ಪಂಚಾಯ್ತಿ ಸಿಇಒ ವಿಕಾಸ್‌ ಕಿಶೋರ್‌ ಸುರಳಕರ್‌ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ನೋಟಿಸ್‌ ಜಾರಿಗೊಳಿಸಿ

ರೇಷ್ಮೆ ಇಲಾಖೆ ಉಪ ನಿರ್ದೇಶಕರು ತಮ್ಮ ಕರ್ತವ್ಯದಲ್ಲಿ ಗಂಭೀರತೆಯನ್ನು ತೋರಿಸುತ್ತಿಲ್ಲ. ಗುರಿಗೆ ತಕ್ಕಂತೆ ಪ್ರಗತಿ ಸಾಧಿಸದಿರುವುದಕ್ಕೆ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಿ. ಕೃಷಿ ಇಲಾಖೆ, ತೋಟಗಾರಿಕಾ ಉಪ ನಿರ್ದೇಶಕರು ಸಹ ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರತೆ ತೋರಿಸುತ್ತಿಲ್ಲ. ಈ ಕುರಿತಂತೆ ಸೂಕ್ತ ಗಮನ ನೀಡುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹ್ಮದ್ ಮೊಹಸೀನ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !