ಪ್ರವಾಹ: ಕಾರಿನಲ್ಲೇ ಚಾಲಕ ಜಲಸಮಾಧಿ

7

ಪ್ರವಾಹ: ಕಾರಿನಲ್ಲೇ ಚಾಲಕ ಜಲಸಮಾಧಿ

Published:
Updated:
ಕಾರು ಚಾಲಕನ ಶವವನ್ನು ಹೊರತರುತ್ತಿರುವುದು

ಹೈದರಾಬಾದ್‌: ಅಪಾರ್ಟ್‌ಮೆಂಟ್‌ನ ನೆಲಮಾಳಿಗೆಯಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಮಲಗಿದ್ದ ಚಾಲಕರೊಬ್ಬರು ಪ್ರವಾಹದಿಂದಾಗಿ ಜಲಸಮಾಧಿಯಾಗಿದ್ದಾರೆ. 

ಕುಕಟಪಲ್ಲಿಯ ಜಯನಗರದಲ್ಲಿರುವ ಮಯೂರಿ ಅಪಾರ್ಟ್‌ಮೆಂಟ್‌ನಲ್ಲಿ ಶನಿವಾರ ಬೆಳಿಗ್ಗೆ ಈ ದುರ್ಘಟನೆ ನಡೆದಿದೆ. ಚಾಲಕ ಬೋಸಲೆ ಗೋಪಿನಾಥ (30) ಮೃತಪಟ್ಟಿರುವ ಚಾಲಕ.  

‘ಶುಕ್ರವಾರ ಮಧ್ಯರಾತ್ರಿ ಮಾಲೀಕರನ್ನು ಕರೆತಂದ ಚಾಲಕ ಗೋಪಿನಾಥ, ಮಳೆ ಸುರಿಯುತ್ತಿದ್ದುದರಿಂದ ಕಾರಿನಲ್ಲೇ ಮಲಗಲು ನಿರ್ಧರಿಸಿದರು. ಮಹಡಿಗೆ ಬಂದು ಅಪಾರ್ಟ್‌ಮೆಂಟ್‌ನ ಒಳಗಡೆ ಮಲಗು ಎಂದು ಮಾಲೀಕರು ಹೇಳಿದರೂ ಗೋಪಿ ಕಾರಿನಲ್ಲೇ ಉಳಿದುಕೊಂಡರು’ ಎಂದು ಕಾವಲುಗಾರ ಹೇಳಿದ್ದಾರೆ. 

‘ಶುಕ್ರವಾರ ಮಧ್ಯರಾತ್ರಿಯಿಂದ ಜೋರು ಮಳೆ ಬಂದಿದೆ. ತಗ್ಗು ಪ್ರದೇಶಗಳಿಗೆ ಹೆಚ್ಚು ನೀರು ನುಗ್ಗಿದೆ. ಗೋಪಿನಾಥ ಮದ್ಯ ಸೇವಿಸಿರುವ ಸಾಧ್ಯತೆ ಇದ್ದು, ಈ ವೇಳೆ ಅವರಿಗೆ ಎಚ್ಚರವಾಗಿಲ್ಲ. ನೀರಿನಲ್ಲಿಯೇ ಮುಳುಗಿದ್ದಾರೆ’ ಎಂದು ಕುಕಟಪಲ್ಲಿ ಪೊಲೀಸರು ತಿಳಿಸಿದ್ದಾರೆ.

ನೀರನ್ನು ಪಂಪ್‌ನಿಂದ ಹೊರಗೆ ತೆಗೆಸಿ, ಶವವನ್ನು ಮೇಲೆತ್ತಲಾಗಿದ್ದು, ಗಾಂಧಿ ಆಸ್ಪತ್ರೆಗೆ ಶವಪರೀಕ್ಷೆಗೆ ಕಳುಹಿಸಲಲಾಗಿದೆ ಎಂದು ಅವರು ಹೇಳಿದ್ದಾರೆ. 
 
‘ಈ ಬಗ್ಗೆ ಯಾವುದೇ ಸಂಶಯವಿಲ್ಲ. ಭಾರೀ ಮಳೆ ಸುರಿದಿದ್ದರಿಂದ ದುರ್ಘಟನೆ ಸಂಭವಿಸಿದೆ’ ಎಂದು ಗೋಪಿನಾಥ ಸಹೋದರ ಅಮರ್‌ನಾಥ ಹೇಳಿದ್ದಾರೆ. 
 
‘ಕಾರಿನೊಳಗೆ ಮತ್ತೊಬ್ಬರಿದ್ದು, ಗೋಪಿಯವರೊಂದಿಗೆ ಮದ್ಯ ಸೇವಿಸಿರಬಹುದೇ’ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಾಲಕ ಮದ್ಯಸೇವಿಸಿದ್ದರೂ, ಕಾರಿನೊಳಗೆ ನೀರು ನುಗ್ಗಿದಾಗ ಎಚ್ಚರಗೊಳ್ಳಬೇಕಿತ್ತು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮಳೆ: ಮಹಾರಾಷ್ಟ್ರದಲ್ಲಿ 12 ಸಾವು

ಮುಂಬೈ: ಸತತ ಮಳೆಯಿಂದ ಮಹಾರಾಷ್ಟ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಎರಡು ದಿನಗಳಲ್ಲಿ 12 ಜನ ಸಾವಿಗೀಡಾಗಿದ್ದಾರೆ. 

ಮುಂಬೈ ಮಹಾನಗರ ವ್ಯಾಪ್ತಿಯಲ್ಲಿ ಸರಾಸರಿ 25ರಿಂದ 30 ಮಿ.ಮೀ. ಮಳೆಯಾಗಿದೆ. ನಾಂದೇಡ, ಲಾತೂರ್‌ ಹಾಗೂ ಉಸ್ಮಾನಾಬಾದ್‌ ಜಿಲ್ಲೆಗಳಲ್ಲಿ ಸಿಡಿಲಿಗೆ ಎಂಟು ಮಂದಿ ಬಲಿಯಾಗಿದ್ದಾರೆ. ಅಂಜನಾ ನದಿಯಲ್ಲಿ ಒಬ್ಬ ವ್ಯಕ್ತಿ ಮುಳುಗಿ ಸಾವಿಗೀಡಾಗಿದ್ದಾರೆ.  25 ವರ್ಷದ ಯುವಕನೊಬ್ಬ ಹಳ್ಳದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. 

ಪುಣೆ ಬಳಿಯ ಲೋನವಾಲಾ ಹಾಗೂ ಪವಾನಾ ಡ್ಯಾಂ ಸಂಪರ್ಕಿಸುವ ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ. 

ರಾಯಗಡದ ಹರ್ನಾಯ್‌ ಗ್ರಾಮದಲ್ಲಿ 174 ಮಿ.ಮೀ. ಮಳೆಯಾಗಿದ್ದರೆ, ರತ್ನಗಿರಿ ಜಿಲ್ಲೆಯಲ್ಲಿ 210 ಮಿ.ಮೀ. ಮಳೆ ಸುರಿದಿದೆ. ಮಳೆಯ ನಡುವೆಯೇ, ಸತಾರಾ ಜಿಲ್ಲೆಯಲ್ಲಿ ಮಹಾಬಳೇಶ್ವರ ಗಿರಿಧಾಮದ ಸೌಂದರ್ಯ ಕಣ್ತುಂಬಿಕೊಳ್ಳಲು ನೂರಾರು ಪ್ರವಾಸಿಗರು ಬರುತ್ತಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !