ಬರಪೀಡಿತ ಸ್ಥಳಗಳ ಪರಿಶೀಲನೆ, ನರೇಗಾ ಕಾಮಗಾರಿ ವೀಕ್ಷಣೆ

7
ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳಿಗೆ ಭೇಟಿ ನೀಡಿದ ಸಚಿವ ಸಂಪುಟದ ಉಪಸಮಿತಿ

ಬರಪೀಡಿತ ಸ್ಥಳಗಳ ಪರಿಶೀಲನೆ, ನರೇಗಾ ಕಾಮಗಾರಿ ವೀಕ್ಷಣೆ

Published:
Updated:
Prajavani

ಚಾಮರಾಜನಗರ/ಗುಂಡ್ಲುಪೇಟೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಮೈಸೂರು ಕಂದಾಯ ವಿಭಾಗದ ಪ್ರವಾಹ ಪೀಡಿತ ಹಾಗೂ ಬರಪೀಡಿತ ಪ್ರದೇಶಗಳ ಅಧ್ಯಯನ ಸಚಿವ ಸಂಪುಟದ ಉಪಸಮಿತಿಯು ಶುಕ್ರವಾರ ಜಿಲ್ಲೆಯ ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕಿನ ವಿವಿಧ ಬರಪೀಡಿತ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿತು. 

ಸಚಿವರಾದ ಜಿ.ಟಿ. ದೇವೇಗೌಡ, ಸಿ.ಎಸ್‌. ಪುಟ್ಟರಾಜು ಮತ್ತು ಸಿ.ಪುಟ್ಟರಂಗಶೆಟ್ಟಿ ಅವರು ಬರಪೀಡಿತ ಪ್ರದೇಶಕ್ಕೆ ತೆರಳಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‌ ಕುಮಾರ್‌ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಜೊತೆಗೆ ರೈತರು ಹಾಗೂ ನರೇಗಾ ಕಾರ್ಮಿಕರ ಜೊತೆ ಮಾತನಾಡಿ ವಸ್ತುಸ್ಥಿತಿಯನ್ನು ಅರಿತರು.

ಚಾಮರಾಜನಗರ ತಾಲ್ಲೂಕಿನ ಯಡಪುರದಲ್ಲಿ ಮಾದಯ್ಯ ಎಂಬ ರೈತರ ಜಮೀನಿಗೆ ಭೇಟಿ ನೀಡಿದ ತಂಡ, ಅವರು ಬೆಳೆದಿದ್ದ ರಾಗಿ ಹಾಗೂ ಹುರುಳಿ ಬೆಳೆ ಸಂಪೂರ್ಣ ನಷ್ಟವಾಗಿದ್ದನ್ನು ಪರಿಶೀಲಿಸಿತು. 

ಈ ಸಂದರ್ಭದಲ್ಲಿ ಮಾತನಾಡಿದ ರೈತರು, ‘ಆಗಿರುವ ನಷ್ಟಕ್ಕೆ ವೈಜ್ಞಾನಿಕವಾಗಿ ಪರಿಹಾರ ಕೊಡಿ. ಹಾಗೂ ಮೊತ್ತವನ್ನು ನೇರವಾಗಿ ನಮ್ಮ ಖಾತೆಗೆ ಹಾಕಿ’ ಎಂದು ಮನವಿ ಮಾಡಿದರು. ಸೂಕ್ತ ಪರಿಹಾರ ನೀಡಿರುವ ಭರವಸೆಯನ್ನು ಸಚಿವರು ನೀಡಿದರು.

ನಂತರ, ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಗ್ರಾಮದಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಘಟಕಕ್ಕೆ ಭೇಟಿ ಮಾಡಿ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು. ಬಳಿಕ, ಅಣ್ಣೂರು ಕೇರಿ ಗ್ರಾಮದಲ್ಲಿ ನರೇಗಾ ಅಡಿಯಲ್ಲಿ ನಡೆಯುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. 

‘ಎಷ್ಟು ದಿನದಿಂದ ಕೆಲಸ ಮಾಡುತ್ತಿದ್ದೀರಿ? ಸಮಯಕ್ಕೆ ಸರಿಯಾಗಿ ಖಾತೆಗೆ ಹಣ ಬರುತ್ತಿದೆಯಾ? ಎಲ್ಲಿ ಕೆಲಸ ಮಾಡಿದ್ದೀರಿ? ಕಳೆದ ವರ್ಷವೂ ಈ ಯೋಜನೆಯಲ್ಲಿ ಕೆಲಸ ಮಾಡಿದ್ದರೀರಾ? ನರೇಗಾದಿಂದ ಏನಾದರೂ ಪ್ರಯೋಜನವಾಗುತ್ತಿದೆಯಾ’ ಎಂದು ಕೃಷ್ಣ ಬೈರೇಗೌಡ ಅವರು ಕಾರ್ಮಿಕರನ್ನು ವಿಚಾರಿಸಿದರು.

ಅದಕ್ಕೆ ಉತ್ತರಿಸಿದ ಕಾರ್ಮಿಕರು, ‘ಜೀವನಕ್ಕೆ ಉಪಯೋಗವಂತೆ ಹಣ ಬರುತ್ತಿದೆ. ಆದರೆ, ಹಣ ಬರುವುದು ಸ್ವಲ್ಪ ತಡವಾಗುತ್ತಿದೆ. ಕೆಲಸ ಸಿಗುತ್ತಿರುವುದರಿಂದ ಬೇರೆ ಕಡೆ ಹೋಗಿ ದುಡಿಯುವುದು ತಪ್ಪಿದೆ’ ಎಂದು ಹೇಳಿದರು.

ಆಕ್ಷೇಪ: ಸ್ಥಳದಲ್ಲಿದ್ದ ರೈತ ಸಂಘದ ಕಾರ್ಯಕರ್ತರು ಸಚಿವರ ಮುಂದೆ ಸ್ಥಳೀಯ ಅಧಿಕಾರಿಗಳ ಮೇಲೆ ದೂರು ನೀಡಿದ ಪ್ರಸಂಗವೂ ಜರುಗಿತು. 

‘ಸಚಿವರು ಭೇಟಿ ಮಾಡುತ್ತಾರೆ ಎಂದು ಹೇಳಿ ಜನರನ್ನು ಕರೆಸಿ ಕೆಲಸ ಮಾಡಿಸುತ್ತಿದ್ದಾರೆ. ಉಳಿದ ದಿನಗಳಲ್ಲಿ ಜೆಸಿಬಿಗಳನ್ನು ಬಳಸಿ ಕೆಲಸ ಮಾಡಿಸುತ್ತಾರೆ’ ಎಂದು ಆರೋಪಿಸಿದರು. ಇರುವ ಸತ್ಯಾಂಶವನ್ನು ತಿಳಿಸುವಂತೆ ಕಾರ್ಮಿಕರ ಮೇಲೂ ಒತ್ತಡ ಹಾಕಿದರು. 

ಮಧ್ಯಪ್ರವೇಶಿಸಿದ ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ಕೃಷ್ಣ ಬೈರೇಗೌಡ ಅವರು, ‘ಕೆಲಸ ಮಾಡುವವರೆಲ್ಲರಿಗೂ ಅವಕಾಶ ಮಾಡಿಕೊಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಲ್ಲಿಂದ ಸಚಿವರು ಹಸಗೂಲಿ ಗ್ರಾಮದ ಮಹದೇವಪ್ಪ ಎಂಬುವವರ ಜಮೀನಿಗೆ ತೆರಳಿ ಬೆಳೆ ವೀಕ್ಷಣೆ ಮಾಡಿದರು. ಕೃಷಿಗೆ ಉದ್ಯೋಗ ಖಾತ್ರಿ ಯೋಜನೆಯಂದ ಆಗುವ ಅನುಕೂಲಗಳ ಬಗ್ಗೆ ವಿವರಿಸಿ, ರೈತರಿಗೆ ಹೇಗೆ ಉಪಯೋಗವಾಗುತ್ತಿದೆ ಎಂದು ವಿಚಾರಿಸಿದರು.

ಆಗ ಕೆಲ ರೈತರು, ‘ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಯೋಜನೆಗಳ ಬಗ್ಗೆಯೂ ತಿಳಿಸುತ್ತಿಲ್ಲ’ ಎಂದು ಆರೋಪಿಸಿದರು.

‘ರೈತರಿಗೆ ಮಾಹಿತಿ ನೀಡುವುದು ಅಧಿಕಾರಿಗಳ ಕೆಲಸ. ಅದನ್ನು ಸರಿಯಾಗಿ ಮಾಡುವವರೆಗೂ ಅವರನ್ನು ಬಿಡಬೇಡಿ’ ಎಂದು ಹೇಳಿ ಸಚಿವರು ರೈತರನ್ನು ಸಮಾಧಾನ ಪಡಿಸಿದರು.

ಶಾಸಕ ನಿರಂಜನ್‌ ಕುಮಾರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ.ಯೋಗೇಶ್‌, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರ ಆರಂಭ’

ಜಿಲ್ಲೆಯ ಯಳಂದೂರು ಮತ್ತು ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರವಾಗಿ ಆರಂಭವಾಗಲಿದೆ’ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

‘ನಮ್ಮ ಕಳೆದ ಸರ್ಕಾರದ ಅವಧಿಯಲ್ಲಿ ಸರ್ಕಾರ ಗುಂಡ್ಲುಪೇಟೆ ತಾಲ್ಲೂಕಿನ 131 ಗ್ರಾಮಗಳಿಗೆ ₹200 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಿದ್ದೇವೆ. ಚಾಮರಾಜನಗರ ತಾಲ್ಲೂಕಿನಲ್ಲಿ 166 ಜನ ವಸತಿ ಪ್ರದೇಶಗಳಿಗೆ ₹300 ಕೋಟಿ ವೆಚ್ಚದಲ್ಲೂ ಯೋಜನೆ ಅನುಷ್ಠಾನವಾಗಿದೆ. ಇನ್ನು ಕೊಳ್ಳೇಗಾಲ–ಹನೂರು ಭಾಗ ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ಯೋಜನೆ ಅನುಷ್ಠಾನ ಆಗಬೇಕಿದೆ’ ಎಂದರು.

‘ಕೊಳ್ಳೇಗಾಲ ಮತ್ತು ಹನೂರು ಭಾಗಕ್ಕೆ ₹350 ಕೋಟಿ ಯೋಜನೆಯನ್ನು ಮಂಜೂರು ಮಾಡಿ ಟೆಂಡರ್‌ ಕರೆದಿದ್ದೇವೆ. ಮೊದಲನೇ ಟೆಂಡರ್‌ನಲ್ಲಿ ದರ ಜಾಸ್ತಿ ಮಾಡಿದ್ದರಿಂದ ಮರು ಟೆಂಡರ್‌ ಮಾಡಿದ್ದೇವೆ. ಕೆಲವೇ ದಿನಗಳಲ್ಲಿ ಟೆಂಡರ್‌ ನೀಡಿ ಯೋಜನೆ ಅನುಷ್ಠಾನಗೊಂಡರೆ, ಇಲ್ಲಿನ ನೀರಿನ ಸಮಸ್ಯೆಯೂ ನೀಗಲಿದೆ. ಯಳಂದೂರು ಭಾಗದ ಟಗರಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ₹113 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲು ಇತ್ತೀಚೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಇವುಗಳು ಅನುಷ್ಠಾನಗೊಂಡರೆ ಜಿಲ್ಲೆಯ ಶೇ 90ರಷ್ಟು ಜಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !