ಬರ ನೀಗಬಲ್ಲ ಗ್ರಾಮಸ್ವರಾಜ್ಯದ ಚಿಲುಮೆ

7
ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯಲ್ಲಿ ಅಡಗಿದೆ ಸುಸ್ಥಿರ ಅಭಿವೃದ್ಧಿಯ ಸೂತ್ರ

ಬರ ನೀಗಬಲ್ಲ ಗ್ರಾಮಸ್ವರಾಜ್ಯದ ಚಿಲುಮೆ

Published:
Updated:
Prajavani

ವರ್ಷ ಉರುಳಿದಂತೆಲ್ಲ ದೇಶದ ಹೆಚ್ಚಿನ ಭಾಗಗಳು ಬರದ ತೆಕ್ಕೆಗೆ ಬೀಳುವ ಸಾಧ್ಯತೆಗಳನ್ನು, ತೊಂಬತ್ತರ ದಶಕದಲ್ಲಿಯೇ ದೆಹಲಿಯ ಪರಿಸರ ಮತ್ತು ವಿಜ್ಞಾನ ಕೇಂದ್ರವು ‘ಪರಿಸರ ಪರಿಸ್ಥಿತಿ ವರದಿ’ಯಲ್ಲಿ ಸೂಚಿಸಿತ್ತು. ಮಳೆಯ ಪ್ರಮಾಣದಲ್ಲಿ ವ್ಯತ್ಯಯವಾಗುವುದು ಹವಾಮಾನ ಬದಲಾವಣೆಯಿಂದ ಇರಬಹುದಾದರೂ, ಬರದ ಘೋರ ಪರಿಣಾಮಗಳು ಉಂಟಾಗುವುದು ಮಾತ್ರ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯ ವೈಫಲ್ಯದಿಂದಲೇ ಎಂದು ಪರಿಸರಶಾಸ್ತ್ರಜ್ಞ ಅನಿಲ್ ಅಗರವಾಲ್ ಅದರಲ್ಲಿ ಪ್ರತಿಪಾದಿಸಿದ್ದರು.

ರಾಜ್ಯದ 150ಕ್ಕೂ ಮಿಕ್ಕಿ ತಾಲ್ಲೂಕುಗಳು ಸತತವಾಗಿ ಬರಕ್ಕೆ ತುತ್ತಾಗುತ್ತಿರುವುದನ್ನು ಗಮನಿಸಿದರೆ, ಆ ಭವಿಷ್ಯವಾಣಿ ನಿಜವಾಗುತ್ತಿರುವುದು ಗೋಚರಿಸುತ್ತಿದೆ. ಅಧಿಕಾರ ರಾಜಕಾರಣವೇನೋ ಈಗ ‘ಬರ ಸಮೀಕ್ಷೆ’, ‘ಅನುದಾನ’, ‘ತುರ್ತು ಪರಿಹಾರ’ದ ಪರಿಭಾಷೆಯಲ್ಲಿ ಮಾತನಾಡಬಹುದು. ಆದರೆ, ತೀವ್ರವಾಗುತ್ತಿರುವ ಈ ಪರಿಸರ ತುರ್ತುಪರಿಸ್ಥಿತಿಗೆ ಶಾಶ್ವತ ಪರಿಹಾರ ಕೈಗೊಳ್ಳುವತ್ತ ಚಿಂತನೆ ನಡೆಸಬೇಕಲ್ಲವೇ?

ಪ್ರದೇಶವೊಂದು ಬರದ ಬೀಡಾಗಿ ಪರಿವರ್ತಿತವಾಗುವ ಪ್ರಕ್ರಿಯೆಯೇ ಸಂಕೀರ್ಣವಾದದ್ದು. ಗ್ರಾಮೀಣ ಪರಿಸರದಲ್ಲಾಗುತ್ತಿರುವ ಪಲ್ಲಟಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದು ಅರ್ಥವಾಗಬಲ್ಲದು. ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನಂಚಿನ ತಾಲ್ಲೂಕು ಮುಂಡಗೋಡಿನಲ್ಲಿ ಎರಡೂವರೆ ದಶಕಗಳಲ್ಲಾದ ಬದಲಾವಣೆಗಳು ಇದಕ್ಕೆ ಒಳ್ಳೆಯ ನಿದರ್ಶನವಾಗಬಲ್ಲವು. ಇಲ್ಲಿನ ಸುಮಾರು 66 ಸಾವಿರ ಹೆಕ್ಟೇರಿಗೂ ಹೆಚ್ಚಿನ ಪ್ರದೇಶದಲ್ಲಿದ್ದ ಸಮೃದ್ಧವಾದ ಅರಣ್ಯದ ಮೂರರಲ್ಲಿ ಒಂದು ಭಾಗವು ಕಳೆದ ಎರಡು ದಶಕಗಳಲ್ಲಿ ಕಣ್ಮರೆಯಾಗಿದೆ.

ಅರಣ್ಯ ಇಲಾಖೆಯು ಕಾಡು ಕಡಿದು ತೇಗ, ನೀಲಗಿರಿ ಬೆಳೆಸಿದ್ದು, ಅಕೇಶಿಯಾ ವನ ನಿರ್ಮಿಸಿದ್ದು, ಅಕ್ರಮ ಕ್ವಾರಿ, ಬಲಾಢ್ಯರು ಅರಣ್ಯ ಒತ್ತುವರಿ ಮಾಡಿದ್ದು- ಎಲ್ಲವೂ ಇದಕ್ಕೆ ಕಾರಣಗಳೇ. ಕಾಡು ಬರಿದಾದಂತೆ, ಫಲವತ್ತಾದ ಮೇಲ್ಮಣ್ಣು ಮಳೆಯಲ್ಲಿ ಕೊಚ್ಚಿಹೋಗಿ ನೈಸರ್ಗಿಕ ಕೆರೆ ಮತ್ತು ಕಿರು ನೀರಾವರಿ ಜಲಾಶಯಗಳಲ್ಲಿ ಹೂಳು ತುಂಬಿತು. ಕೆರೆಗಳು ಒಣಗತೊಡಗಿದಂತೆ, ಕೃಷಿಯು ಕಷ್ಟವಾಗತೊಡಗಿತು. ಮಳೆ ಕಡಿಮೆಯಾದ ವರ್ಷಗಳಲ್ಲಂತೂ ಕುಡಿಯುವ ನೀರಿಗೂ ತತ್ವಾರ. ಕೊಳವೆ ಬಾವಿಗಳ ಅಂತರ್ಜಲವೇ ಜನರಿಗೆ ಅನಿವಾರ್ಯವಾಯಿತು. ಕೊಳವೆ ಬಾವಿಗಳನ್ನು ತೆಗೆಸಿದಾಗ ಶೇ 90ಕ್ಕೂ ಹೆಚ್ಚಿನ ಸಂದರ್ಭಗಳಲ್ಲಿ ಜಿನುಗಿದ್ದು ಸಾಲ ಮಾಡಿದ ರೈತರ ಕಣ್ಣೀರು ಮಾತ್ರ. ಸರ್ಕಾರ ಈಗ ಮನ್ನಾ ಮಾಡಲು ಚಿಂತಿಸುತ್ತಿರುವ ಸಾಲದ ಕನಿಷ್ಠ ಎರಡು ಪಟ್ಟಾದರೂ ಹಣವನ್ನು ಇಲ್ಲಿನ ಬಹುತೇಕ ಕುಟುಂಬಗಳು ಕೆಲವೇ ವರ್ಷಗಳಲ್ಲಿ, ನೀರು ಬರದ ಬಾವಿಗಳಲ್ಲಿ ಕಳೆದುಕೊಂಡಿವೆ!

ಇದರಿಂದೇನಾಯಿತು? ಮುಂಗಾರಿನಲ್ಲಿ ಭತ್ತವನ್ನೂ, ಹಿಂಗಾರಿನಲ್ಲಿ ಉದ್ದು, ಮೆಣಸು ಶೇಂಗಾ, ತರಕಾರಿ ಬೆಳೆದುಕೊಂಡು ಹಾಯಾಗಿದ್ದ ರೈತರ ಹೊಲಕ್ಕೆ, ಹತ್ತಿಯ ಪ್ರವೇಶವಾಯಿತು. ಈ ಕೆಲವು ವರ್ಷಗಳಲ್ಲಿ ಅದೂ ಮಾಯವಾಗಿ, ಮುಂಗಾರಿನ ಗದ್ದೆಗೂ ಡಿಎಂಎಚ್ ಮೆಕ್ಕೆಜೋಳ ಕಾಲಿರಿಸಿದೆ. ರೈತರೀಗ ಊಟದ ಅಕ್ಕಿ, ತರಕಾರಿಗೆ ಪಡಿತರ ಮತ್ತು ಮಾರುಕಟ್ಟೆಯನ್ನೇ ಅವಲಂಬಿಸಬೇಕು. ಹೊಳೆ-ಕೆರೆ
ಗಳು ಬತ್ತಿ ಒಳನಾಡು ಮೀನುಗಾರಿಕೆ ಕ್ಷಯಿಸಿದ ಮೇಲೆ, ಬಹುಜನರ ಪ್ರೋಟೀನ್ ಮೂಲವಾದ ಮೀನು ಸಹ ದೂರದ ಕರಾವಳಿಯಿಂದ ಬರಬೇಕಿದೆ.

ನೀರು-ಮೇವಿನ ಕೊರತೆಯಲ್ಲಿ ಎತ್ತುಗಳು ಮಾಯವಾಗಿ, ಸಾಲದಲ್ಲಿ ಕೊಂಡುತಂದ ಪವರ್-ಟಿಲ್ಲರ್, ಟ್ರ್ಯಾಕ್ಟರುಗಳು ಹಟ್ಟಿಗೆ ಬಂದಿಳಿದಿವೆ. ಛಿದ್ರವಾದ ಕಾಡಲ್ಲಿ ನೀರು-ಆಹಾರ ಸಿಗದೆ, ನಾಡಿಗೆ ದಾಳಿಯಿಡುವ ವನ್ಯಪ್ರಾಣಿಗಳಿಂದಾಗುವ ಜೀವ-ಬೆಳೆಹಾನಿ ಬೇರೆ. ಇದರಿಂದೆಲ್ಲ ಬಸವಳಿದಿರುವ ನೂರಕ್ಕೂ ಹೆಚ್ಚಿನ ಗ್ರಾಮಗಳ ಗಮನಾರ್ಹಸಂಖ್ಯೆಯ ಸಣ್ಣ ರೈತರೀಗ, ಗುಳೆ ಹೋಗುವ ಕೂಲಿಗಳಾಗತೊಡಗಿದ್ದಾರೆ! ಎರಡೂವರೆ ಸಾವಿರ ಮಿ.ಮೀ. ಮಳೆ ಬೀಳುವ ಮುಂಡಗೋಡು ತಾಲ್ಲೂಕು ಬರಡಾದ ಬಗೆಯಿದು.

ನಾಡಿನ ಬಹುಪಾಲು ಗ್ರಾಮೀಣ ಭಾಗವು ಈ ಹಾದಿಯಲ್ಲಿ ಸಾಗುತ್ತಿರುವುದೀಗ ಸ್ಪಷ್ಟವಾಗುತ್ತಿದೆ. ಇವನ್ನೆಲ್ಲ ಆರಂಭದಲ್ಲೇ ಗುರುತಿಸಿ, ಪರಿಹಾರ ಹುಡುಕಬಹುದಾಗಿದ್ದ ಸಾಂಸ್ಥಿಕ ಅವಕಾಶಗಳು ಸರ್ಕಾರದಲ್ಲಿದ್ದವು. ದೇಶಕ್ಕೆ ಮಾದರಿಯೆಂಬಂತೆ ರಾಜ್ಯದಲ್ಲಿ ಜಾರಿಗೆ ಬಂದ ಪಂಚಾಯತ್ ರಾಜ್, ಇದಕ್ಕೆ ಬೇಕಾದ ಆಡಳಿತಯಂತ್ರ, ಯೋಜನೆಗಳು, ಅನುದಾನ ಎಲ್ಲವನ್ನೂ ಒಳಗೊಂಡಿತ್ತು. ಆದರೆ, ಪಂಚಾಯಿತಿ ಪ್ರತಿನಿಧಿಗಳು ಅಧಿಕಾರ ರಾಜಕಾರಣದ ತಾಳಕ್ಕೆ ಕುಣಿಯಬೇಕಾದ ಗೊಂಬೆಗಳಾಗತೊಡಗಿದಂತೆ, ಪಂಚಾಯಿತಿಗಳು ಸರ್ಕಾರ ನೀಡುವ ಅನುದಾನ ವಿತರಿಸುವ ತಾಂತ್ರಿಕ ವ್ಯವಸ್ಥೆಯಾದವಷ್ಟೇ!

ಜಿಲ್ಲಾಭಿವೃದ್ಧಿ ನೀಲನಕ್ಷೆ ರಚಿಸಿ, ಗ್ರಾಮಸಭೆಯ ಅಶಯದಂತೆ ಯೋಜನೆಗಳನ್ನು ರೂಪಿಸಿ, ಅನುದಾನವು ಪಾರದರ್ಶಕವಾಗಿ ಬಳಕೆಯಾಗುತ್ತಿದ್ದರೆ, ನಾಡಿನ ಚಿತ್ರವೇ ಬದಲಾಗುತ್ತಿತ್ತೇನೋ. ಆದರೆ, ಆಡಳಿತಾರೂಢರನ್ನು ಮೆಚ್ಚಿಸುವ ಮತ್ತು ಮತ ಗಿಟ್ಟಿಸುವ ಜನಪ್ರಿಯ ಯೋಜನೆಗಳೇ ಆದ್ಯತೆಯಾಗತೊಡಗಿದವು. ಜಲಾನಯನ ಅಭಿವೃದ್ಧಿ ಯೋಜನೆಗಳು ಅನುದಾನದ ಕೊರತೆ ಮತ್ತು ಭ್ರಷ್ಟಾಚಾರದಿಂದ ಕರಗಿಹೋದವು.

ಸ್ಥಳೀಯರ ಮೇವು-ಉರುವಲು ಬೇಡಿಕೆ ಪೂರೈಸಿ, ಹಸಿರು ಕವಚವನ್ನೂ ಹೆಚ್ಚಿಸಬಹುದಾಗಿದ್ದ ಸಾಮಾಜಿಕ ಅರಣ್ಯ ಯೋಜನೆಯು ಮಾರುಕಟ್ಟೆಗೆ ಅಕೇಶಿಯಾ ಪೂರೈಸುವುದಕ್ಕೆ ಸೀಮಿತಗೊಂಡಿತು. ಅರಣ್ಯ ಇಲಾಖೆಯಂತೂ ಗ್ರಾಮ ಅರಣ್ಯ ಸಮಿತಿಗಳಲ್ಲಿ ಜನಸಹಭಾಗಿತ್ವವನ್ನು ಪೋಷಿಸುತ್ತಲೇ ಇಲ್ಲ. ಪಾರಂಪರಿಕ ವನವಾಸಿಗಳು ಮತ್ತು ಕುಣಬಿ, ಗೌಳಿಯಂಥ ಬುಡಕಟ್ಟು ಕುಟುಂಬಗಳಿಗೆ ಇಂದಿಗೂ ಭೂಮಿ ದೊರಕದಿದ್ದರೂ, ರಾಜಕೀಯ ಕೃಪೆಯಿಂದಾಗುವ ಬಲಾಢ್ಯರ ಅರಣ್ಯಭೂಮಿ ಒತ್ತುವರಿ ಮಾತ್ರ ಇಂದಿಗೂ ಸಾಗಿದೆ. ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಂತೂ ವಾಸ್ತವದಲ್ಲಿ ಸಹಾಯಧನ ವಿತರಿಸುವ ಕೇಂದ್ರಗಳಷ್ಟೇ. ಉದ್ಯೋಗ ಖಾತರಿ ಯೋಜನೆಯು ಸುಳ್ಳು ‘ಕೆಲಸದ-ಪತ್ರ’ ಜಾಲದಿಂದ ಹೊರಬರುತ್ತಲೇ ಇಲ್ಲ! ಕೃಷಿಭೂಮಿ, ಕಾಡು, ನೀರು, ಉದ್ಯೋಗ, ಜನಾರೋಗ್ಯ- ಎಲ್ಲವನ್ನೂ ಪೋಷಿಸಿ, ಗ್ರಾಮಸ್ವರಾಜ್ಯ ಸಾಧಿಸಬೇಕಿದ್ದ ಪಂಚಾಯತ್ ರಾಜ್ ಕುಸಿದ ಪರಿಯಿದು!

ಬರ ಮತ್ತು ಹವಾಮಾನ ಬದಲಾವಣೆ ಹುಟ್ಟುಹಾಕುತ್ತಿರುವ ವಿಪ್ಲವಗಳೆಲ್ಲವನ್ನೂ, ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಯೋಜನೆ ಮತ್ತು ಅನುದಾನವೇ ಪರಿಹರಿಸಿಬಿಡಲು ಸಾಧ್ಯವಿಲ್ಲ. ಇವನ್ನೆದುರಿಸಲು ಸಜ್ಜಾಗಬೇಕಾದ್ದು ಗ್ರಾಮೀಣ ಜನ ಮತ್ತು ಪರಿಸರ ತಾನೇ? ಪಂಚಾಯತ್‌ ವ್ಯವಸ್ಥೆ ಸಶಕ್ತವಾದರೆ ಮಾತ್ರ ಇದು ಸಾಧ್ಯ. ಕೇಂದ್ರ ಕೃಷಿ ಇಲಾಖೆಯ ತಜ್ಞರು 2017ರಲ್ಲಿ ಪ್ರಕಟಿಸಿದ, ‘ಬರ ನಿರ್ವಹಣೆ ಕಾರ್ಯತಂತ್ರ’ಗಳ ಯೋಜನಾ ವರದಿಯಲ್ಲಿ, ಪಂಚಾಯತ್‌ ವ್ಯವಸ್ಥೆಯ ಪುನರುಜ್ಜೀವನವೇ ಇರುವ ಏಕೈಕ ದಾರಿಯೆಂದು ಒತ್ತಿ ಹೇಳಲಾಗಿದೆ. ನೀತಿ ಆಯೋಗವು 2018ರಲ್ಲಿ ಸರ್ಕಾರಕ್ಕೊಪ್ಪಿಸಿದ ‘ಹೊಸ ಸವಾಲುಗಳನ್ನು ಮೀರುವ ಕಾರ್ಯನೀತಿ’ ವರದಿಯೂ ನೆಲ-ಜಲ-ಕಾಡಿನ ನಿರ್ವಹಣಾಧಾರಿತ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಬೇಕಾದರೆ, ಪಂಚಾಯತ್‌ ತತ್ವವನ್ನು ನಿಜಾರ್ಥದಲ್ಲಿ ಅನುಷ್ಠಾನಕ್ಕೆ ತರಬೇಕೆಂದು ಹೇಳಿದೆ.

ದೂರದೃಷ್ಟಿರಹಿತ ಹಾಗೂ ಭ್ರಷ್ಟಾಚಾರಯುಕ್ತ ಯೋಜನೆಗಳಿಂದ ಬಿಡುಗಡೆ ದೊರೆಯಬೇಕಾದರೆ, ಗ್ರಾಮೀಣ ಜನರ ಪ್ರಜಾತಾಂತ್ರಿಕ ಮತ್ತು ವಿವೇಕಯುಕ್ತ ತೀರ್ಮಾನಗಳಿಗೆ ಬೆಲೆ ಬರಬೇಕು. ಪಂಚಾಯತ್‌ ರಾಜ್ ವ್ಯವಸ್ಥೆ ಜಾರಿಯಾದದ್ದು ಈ ನಿಟ್ಟಿನಲ್ಲಾದ ಮೊದಲ
ಕ್ರಾಂತಿಯೆನ್ನುವುದಾದರೆ, ಅದನ್ನು ಪುನರುಜ್ಜೀವನಗೊಳಿಸುವ ಎರಡನೇ ಕ್ರಾಂತಿಗೀಗ ನಾಡು ಕಾಯುತ್ತಿದೆ.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !