ಬರಕ್ಕೆ ಪರಿಹಾರ ನೈಜ ಅರಣ್ಯೀಕರಣ

ಶುಕ್ರವಾರ, ಏಪ್ರಿಲ್ 19, 2019
22 °C
ಸಮುದಾಯ ಸಹಭಾಗಿತ್ವ ಹಾಗೂ ಸ್ಥಳೀಯ ಸಸ್ಯಗಳಿಗೆ ಸಿಗಬೇಕಿದೆ ಆದ್ಯತೆ

ಬರಕ್ಕೆ ಪರಿಹಾರ ನೈಜ ಅರಣ್ಯೀಕರಣ

Published:
Updated:
Prajavani

ಚುನಾವಣಾ ಜ್ವರದ ಸುದ್ದಿಗಳ ತೆರೆ ಸರಿಸಿ ನೋಡಿದರೆ, ಎಲ್ಲೆಡೆ ಅನುಭವಕ್ಕೆ ಬರುತ್ತಿರುವುದು ಬೇಸಿಗೆಯ ಬಿಸಿ. ಬರಪೀಡಿತವೆಂದು ಗುರುತಿಸಿರುವ 156 ತಾಲ್ಲೂಕುಗಳಷ್ಟೇ ಅಲ್ಲ, ಮಲೆನಾಡಿನ ಹೃದಯ ಭಾಗಗಳ ಹೊಳೆ-ಕೆರೆಗಳೂ ಒಣಗಿವೆ. ಬಯಲುನಾಡು ಹಾಗೂ ಕರಾವಳಿಗೆ ನೀರುಣಿಸುವ ಗಂಗಾವಳಿ, ವರದಾ, ತುಂಗಾ, ನೇತ್ರಾವತಿಯಂಥ ಜೀವನದಿಗಳೇ ಬತ್ತಿವೆ. ನೆಲ-ಜಲ-ಕಾಡಿನ ನಿರ್ವಹಣೆಯಲ್ಲಿ ತೋರಿದ ಬೇಜವಾಬ್ದಾರಿಯ ಫಲವಾಗಿ, ಸಹಜವಾಗಿ ಬರುವ ಬೇಸಿಗೆಯೂ ಕ್ರೂರವಾದ ‘ಬಿರುಬೇಸಿಗೆ’ಯಾಗಿ ಬದಲಾಗುತ್ತಿದೆ!

ತಾಪಮಾನ ಏರಿಕೆ ಮತ್ತು ಮಳೆ ಕೊರತೆಯ ಕಾರಣಗಳು ತಿಳಿಯದ್ದಲ್ಲ. ಹವಾಮಾನ ಬದಲಾವಣೆಯಿಂದ ಆಗುತ್ತಿರುವ ಈ ವಿದ್ಯಮಾನಗಳಿಗೆ ಸ್ಥಳೀಯವಾದ ಅರಣ್ಯನಾಶವೂ ಮುಖ್ಯ ಕಾರಣ. ಕಾಡು-ಗುಡ್ಡ, ನದಿಕೆರೆಗಳಂಥ ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಹಸಿರುಕವಚವನ್ನು ವಿಸ್ತರಿಸುವುದೊಂದೇ ಇದಕ್ಕೆ ಪರಿಹಾರ. ಹೀಗಾಗಿಯೇ ರಾಷ್ಟ್ರೀಯ ಅರಣ್ಯ ನೀತಿಯು ಕನಿಷ್ಠ ಶೇ 33ರಷ್ಟಾದರೂ ಅರಣ್ಯವಿರಬೇಕೆಂದು ಪ್ರತಿಪಾದಿಸಿದ್ದು. ರಾಜ್ಯದಲ್ಲಿ ಈಗ ಸುಮಾರು ಶೇ 22ರಷ್ಟು ಅರಣ್ಯಪ್ರದೇಶವಿದೆ ಎಂದು ಸರ್ಕಾರ ಹೇಳುವುದಾದರೂ, ವಾಸ್ತವದಲ್ಲಿ ನೈಜಕಾಡು ಉಳಿದಿರುವುದು ಶೇ 10ಕ್ಕಿಂತಲೂ ಕಡಿಮೆ! ಅವೈಜ್ಞಾನಿಕ ಅರಣ್ಯಭೂಮಿ ಪರಿವರ್ತನೆ, ಗಣಿಗಾರಿಕೆ, ಅತಿಕ್ರಮಣ, ನಗರೀಕರಣ, ಮರಕಡಿತ– ಎಲ್ಲ ಸೇರಿ ಈ ಗಂಭೀರ ಪರಿಸ್ಥಿತಿಯನ್ನು ಹುಟ್ಟುಹಾಕಿವೆ. ನಾಡನ್ನು ಬೆಂಗಾಡಾಗಿಸುತ್ತಿರುವ ಈ ಘೋರಸ್ಥಿತಿ ತಡೆಗಟ್ಟಲು ಉಳಿದಿರುವುದೊಂದೇ ಮಾರ್ಗ, ನೈಜ ಅರಣ್ಯೀಕರಣ.

ನೈಜ ಅರಣ್ಯೀಕರಣವೆಂದರೆ, ಅವೈಜ್ಞಾನಿಕ ಯೋಜನೆಗಳು ಹಾಗೂ ಅವುಗಳ ಅನುಷ್ಠಾನದಲ್ಲಿನ ಅಸಡ್ಡೆ, ಭ್ರಷ್ಟಾಚಾರಗಳನ್ನು ತೊರೆದು, ನಿಜವಾಗಿ ಕಾಡು ಬೆಳೆಸುವ ವಿಧಾನಗಳನ್ನು ಕಂಡುಕೊಳ್ಳುವುದು. ಇಲ್ಲಿ ಎರಡು ಅಂಶಗಳಿಗೆ ಮಹತ್ವ ನೀಡಬೇಕೆಂದು ಅಧ್ಯಯನಗಳು ಸಾರಿ ಹೇಳುತ್ತಿವೆ. ಮೊದಲಿನದು ತಾಂತ್ರಿಕ ವಿಚಾರ. ಕಾಡನ್ನು ಸಂರಕ್ಷಿಸುವುದಾಗಲೀ ಅಥವಾ ಬೆಳೆಸುವುದಾಗಲೀ ಅವಕ್ಕೆ ಪರಿಸರಶಾಸ್ತ್ರೀಯ ಆಧಾರವಿರಬೇಕು. ಸ್ಥಳೀಯ ಸಸ್ಯ ಪ್ರಭೇದಗಳನ್ನು ನೆಡುವುದರ ಜೊತೆಗೆ, ಜಲಮರುಪೂರಣ, ಮಣ್ಣು ಸಂರಕ್ಷಣೆಯಂಥ ಜಲಾನಯನ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ಎರಡನೇ ಅಂಶವು ಸಾಮಾಜಿಕ ಆಯಾಮದ್ದು. ಯೋಜನೆ
ಗಳ ಅನುಷ್ಠಾನದಲ್ಲಿ ಸ್ಥಳೀಯರ ಸಹಭಾಗಿತ್ವಕ್ಕೆ ಆದ್ಯತೆ ನೀಡಲೇಬೇಕು. ಬುಡಕಟ್ಟು ಜನರು, ರೈತರು, ವನವಾಸಿಗಳು- ಇವರೆಲ್ಲರ ಅಗತ್ಯಗಳಾದ ಮೇವು, ಉರುವಲು, ಗಿಡಮೂಲಿಕೆ, ಬಿದಿರಿನಂಥ ಅರಣ್ಯ ಉತ್ಪತ್ತಿ ಇತ್ಯಾದಿಗಳನ್ನೆಲ್ಲ ಆ ಕಾಡು ಪೂರೈಸುವಂತಾಗಬೇಕು. ಈ ನೈಜ ಅರಣ್ಯೀಕರಣದ ಅಗತ್ಯವನ್ನು ಹಲವಾರು ತಜ್ಞವರದಿಗಳು ಸರ್ಕಾರಕ್ಕೆ ತಿಳಿಸಿವೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಇತ್ತೀಚೆಗೆ ಪ್ರಕಟಿಸಿದ ‘ಜಾಗತಿಕ ಅರಣ್ಯ ಪರಿಸ್ಥಿತಿ ವರದಿ- 2018’ ಸಹ ಇವೆರಡು ಅಂಶಗಳೇ ಇಂದಿನ ಜರೂರತ್ತೆಂದು ಜಾಗತಿಕವಾಗಿ ಸಾರಿದೆ.

ಹಾಗಾದರೆ, ಈಗಿರುವ ಅರಣ್ಯೀಕರಣ ವಿಧಾನಗಳು ಹೇಗಿವೆ? ಸರ್ಕಾರದಲ್ಲಿ ಯೋಜನೆಗಳಿಗೇನೂ ಕೊರತೆಯಿಲ್ಲ. ಆದರೆ, ಅರಣ್ಯ ಇಲಾಖೆಯು ಅವನ್ನು ನಿರ್ವಹಿಸುತ್ತಿರುವ ರೀತಿ ಮಾತ್ರ ದಯನೀಯವಾಗಿದೆ. ಎಪ್ಪತ್ತರ ದಶಕದಲ್ಲಿಯೇ ಪ್ರಾರಂಭವಾದ ಜಂಟಿ ಅರಣ್ಯ ನಿರ್ವಹಣೆ (JFM) ಯೋಜನೆಗೆ ಇನ್ನೂ ಸಾಂಸ್ಥಿಕ ಮಾನ್ಯತೆ ಒದಗಿಸಲಾಗಿಲ್ಲ. ನೆಪಮಾತ್ರಕ್ಕೆ ಸ್ಥಳೀಯರನ್ನು ಒಳಗೊಂಡು ಇಲಾಖೆಯು ರಚಿಸುವ ‘ಗ್ರಾಮ ಅರಣ್ಯ ಸಮಿತಿಗಳು’ ಪಾರದರ್ಶಕತೆ ಮತ್ತು ಕ್ಷಮತೆಯಿಲ್ಲದ ಯೋಜನೆಗಳನ್ನು ರೂಪಿಸುತ್ತಿವೆ. ತಮ್ಮ ಹಕ್ಕಿನ ಲಾಭಾಂಶ ಪಡೆಯಲೂ, ರೈತಸದಸ್ಯರು ವರ್ಷಾನುಕಾಲ ಇಲಾಖೆಯ ಕಚೇರಿಗಳಿಗೆ ಅಲೆಯಬೇಕು! ಇನ್ನು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಸಾಮಾಜಿಕ ಅರಣ್ಯ ವಿಭಾಗವು ಸ್ಥಳೀಯರ ಅಗತ್ಯಗಳನ್ನು ಪೂರೈಸುತ್ತಲೇ, ಕಾಡನ್ನು ವಿಸ್ತರಿಸುವ ಘನೋದ್ದೇಶ ಹೊಂದಿತ್ತು. ಅದರೆ, ಸೂಕ್ತ ಸಿಬ್ಬಂದಿ, ಅನುದಾನ ಹಾಗೂ ಕಾರ್ಯಕ್ರಮಗಳನ್ನು ಒದಗಿಸದೆ ಸರ್ಕಾರವೇ ಅದನ್ನು ಮುಚ್ಚುವ ಹಂತಕ್ಕೆ ತಂದಿದೆ!

ಕಳೆದ ಮೂರು ದಶಕಗಳಿಂದ ಅರಣ್ಯೀಕರಣಕ್ಕೆಂದೇ ವಿಶ್ವಬ್ಯಾಂಕ್, ಇಂಗ್ಲೆಂಡ್ ಮತ್ತು ಜಪಾನ್ ಸರ್ಕಾರಗಳಿಂದ ರಾಜ್ಯಕ್ಕೆ ಹರಿದುಬಂದ ಬೃಹತ್ ಅನುದಾನಗಳನ್ನು ಬಳಸಿ, ಕನಿಷ್ಠ ಫಲಶ್ರುತಿ ಸಾಧಿಸುವ ಉತ್ತರದಾಯಿತ್ವವೂ ಸರ್ಕಾರಕ್ಕಿಲ್ಲ. ಖಾಲಿಭೂಮಿಯನ್ನೆಲ್ಲ ಹಸಿರಾಗಿಸುವ ಮಹತ್ವಾಕಾಂಕ್ಷೆಯಿಂದ ಕೇಂದ್ರದ ಅನುದಾನದಲ್ಲಿ ಈಗ ಜಾರಿಯಲ್ಲಿರುವ ‘ಗ್ರೀನ್ ಇಂಡಿಯಾ ಮಿಶನ್’ ಅನುಷ್ಠಾನ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಇವೆಲ್ಲ ಕಾರಣಗಳಿಂದಾಗಿ, ಅರಣ್ಯೀಕರಣ ಯೋಜನೆಗಳೆಲ್ಲವೂ ಅಂತಿಮವಾಗಿ ಒಂದಷ್ಟು ಅಕೇಶಿಯಾ ಗಿಡ ನೆಡುವ ಕಾರ್ಯಕ್ರಮಗಳಾಗಿ ಬದಲಾಗಿವೆ!

ಅರಣ್ಯೀಕರಣ ಯೋಜನೆಗಳು ಹೀಗೆ ಹಳಿತಪ್ಪಿರುವುದನ್ನು ಹಲವಾರು ಸ್ವತಂತ್ರ ತನಿಖೆಗಳು ಹಾಗೂ ಅಧ್ಯಯನಗಳು ಗುರುತಿಸಿವೆ. ಅರಣ್ಯ ಬೆಳೆಸಿರುವ ಪ್ರದೇಶಗಳೆಂದು ಸರ್ಕಾರ ದಾಖಲಿಸಿದ ಅದೆಷ್ಟೋ ಸ್ಥಳಗಳಲ್ಲಿ ಕನಿಷ್ಠ ಪ್ರಮಾಣದ ಗಿಡಗಳೂ ಇರದಿರುವುದನ್ನು ಸ್ಥಳಾಧ್ಯಯನಗಳು ಸಾಬೀತುಪಡಿಸಿವೆ. ರಾಜ್ಯದ ವಿವಿಧೆಡೆ ಇರುವ ಇಂಥ ಅನೇಕ ‘ಅದೃಶ್ಯ ನೆಡುತೋಪು’ಗಳನ್ನು ಸಾಮಾಜಿಕ ಆಡಿಟ್ ಪ್ರಯತ್ನಗಳು ದಾಖಲಿಸಿವೆ! ಮಲೆನಾಡಿನ ಮಳೆಕಾಡುಗಳ ನಡುವೆಯೇ ಅಕೇಶಿಯಾ ಪ್ಲಾಂಟೇಶನ್ ನಿರ್ಮಿಸಿದ್ದಂತೂ ಇನ್ನೊಂದು ದುರಂತ. ಪರಿಸರ ಹಾಗೂ ಜೀವನಾಧಾರ ಸುರಕ್ಷತೆ ದೃಷ್ಟಿಯಿಂದ ಮಹತ್ವದ್ದಾದ ಗೋಮಾಳವೂ ಏಕಸಸ್ಯ ನೆಡುತೋಪುಗಳಿಗೆ ಬಲಿಯಾಗಿದೆ. ಅರಣ್ಯೀಕರಣ ಯೋಜನೆಗಳಲ್ಲಿನ ಈ ಎಲ್ಲ ಅಧ್ವಾನಗಳು, ಭ್ರಷ್ಟಾಚಾರವನ್ನು ಕಂಡು ರಾಜ್ಯದ ಪ್ರಧಾನ ಲೆಕ್ಕಾಧಿಕಾರಿಯೇ (ಸಿ.ಎ.ಜಿ.) ಬೆಚ್ಚಿ, ಸರಿಪಡಿಸಲು ಸರ್ಕಾರಕ್ಕೆ ಅದೇಶಿಸಿಯೂ ಆಗಿದೆ! ಈ ತೆರನ ಅರಣ್ಯೀಕರಣದಿಂದ ಹವಾಮಾನ ಬದಲಾವಣೆಯಂಥ ಗಂಭೀರ ಸಮಸ್ಯೆಗಳನ್ನು
ಎದುರಿಸಲಾದೀತೇ?

ಅರಣ್ಯೀಕರಣಕ್ಕೆ ಹಣಕಾಸಿನ ಕೊರತೆಯೇನೂ ಇಲ್ಲ. ಅರಣ್ಯ ಇಲಾಖೆಗೆ ದೊರೆಯುವ ವಾರ್ಷಿಕ ಬಜೆಟ್ ಅಲ್ಲದೆ, ‘ಗ್ರೀನ್ ಇಂಡಿಯಾ ಮಿಶನ್’ ಯೋಜನೆಯಿದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಂತೂ ಸಾಕಷ್ಟು ಅನುದಾನ ಲಭ್ಯವಿದೆ. ಅಭಿವೃದ್ಧಿ ಯೋಜನೆಗಳಿಗಾಗಿ ಸರ್ಕಾರ ಬಿಟ್ಟುಕೊಟ್ಟ ಅರಣ್ಯಭೂಮಿಗೆ ಪ್ರತಿಯಾಗಿ ಬದಲೀ ಅರಣ್ಯ ಬೆಳೆಸಲಿಕ್ಕಾಗಿ ‘ಬದಲೀ ಅರಣ್ಯನಿಧಿ’ ಯೊಂದನ್ನೂ ಸ್ಥಾಪಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ 2016ರಲ್ಲಿ ರಚಿತವಾದ ಈ ನಿಧಿಯ ಬಳಕೆಯ ನಿಯಮಾವಳಿಗಳನ್ನು ಇತ್ತೀಚೆಗೆ ರೂಪಿಸಲಾಗಿದ್ದು, ಕರ್ನಾಟಕಕ್ಕೆ ಸುಮಾರು ₹ 10 ಸಾವಿರ ಕೋಟಿ ರೂಪಾಯಿಗೂ ಮಿಕ್ಕಿ ಅನುದಾನ ಲಭ್ಯವಾಗಲಿದೆ! ಹಣವನ್ನು ಬಳಸುವ ಕ್ಷಮತೆಯನ್ನು ಮೈಗೂಡಿಸಿಕೊಳ್ಳುವುದು ಮಾತ್ರ ಬಾಕಿಯಿದೆ.  

ಹೀಗಾಗಿ, ಈಗಿರುವ ಅರಣ್ಯೀಕರಣ ಯೋಜನೆಗಳನ್ನೆಲ್ಲ ಜನಸಹಭಾಗಿತ್ವ ಮತ್ತು ಪರಿಸರಶಾಸ್ತ್ರದ ತಳಹದಿಯಲ್ಲಿ ಮರುರೂಪಿಸುವುದೇ ಇಂದಿನ ಸವಾಲು. ಗ್ರಾಮಸಭೆಗಳಲ್ಲಿ ವ್ಯಕ್ತವಾಗುವ ಸಮುದಾಯಗಳ ಆಶಯಗಳನ್ನಾಧರಿಸಿ ಯೋಜನೆಗಳನ್ನು ರೂಪಿಸಬೇಕು. ಅರಣ್ಯಹಕ್ಕು ಹಾಗೂ ಗ್ರಾಮ ಅರಣ್ಯ ಸಮಿತಿಗಳಂಥ ತಳಮಟ್ಟದ ಸಮುದಾಯ ಸಹಭಾಗಿತ್ವದೊಂದಿಗೆ ಅವುಗಳನ್ನು ಅನುಷ್ಠಾನ ಮಾಡಬೇಕು. ಜೀವವೈವಿಧ್ಯ ಮತ್ತು ಪರಿಸರ ಸ್ಥಿರತೆಯನ್ನೂ ಕಾಪಾಡಬಲ್ಲ ಸ್ಥಳೀಯ ಸಸ್ಯಪ್ರಭೇದಗಳನ್ನೇ ಬೆಳೆಸಬೇಕು. ಈ ವಿವೇಕವಿದ್ದರೆ ಮಾತ್ರ ನೈಜ ಅರಣ್ಯಗಳು ಬೆಳೆದಾವು. ಚುನಾವಣಾ ಪ್ರಣಾಳಿಕೆ, ಚರ್ಚೆ ಮತ್ತು ವಾಗ್ದಾನಗಳಲ್ಲಿ ಇಂಥ ಮೂಲಭೂತ ವಿಷಯಗಳಿಗೆ ಆದ್ಯತೆ ನೀಡಲು, ಭೀಕರ ಬರವೂ ರಾಜಕೀಯ ಪಕ್ಷಗಳಿಗೆ ಪ್ರಚೋದಿಸುತ್ತಿಲ್ಲವಲ್ಲ! ನಿರಂತರವಾಗಿ ಹಕ್ಕೊತ್ತಾಯ ಮಾಡುವುದೊಂದೇ ನಾಗರಿಕರ ಮುಂದಿರುವ ಆಯ್ಕೆ.   

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !