ನಶೆಯಲ್ಲಿ ಕಟ್ಟಡ ಏರಲು ಹೋಗಿ ದುರ್ಮರಣ!

ಭಾನುವಾರ, ಏಪ್ರಿಲ್ 21, 2019
32 °C
2ನೇ ಮಹಡಿಯಿಂದ ಬಿದ್ದು ಯುವಕ ಸಾವು * ಗ್ರಿಲ್ ಹಿಡಿದು 2ನೇ ಮಹಡಿಗೆ ಹೋಗಿದ್ದ ವಿಜಯ್

ನಶೆಯಲ್ಲಿ ಕಟ್ಟಡ ಏರಲು ಹೋಗಿ ದುರ್ಮರಣ!

Published:
Updated:

ಬೆಂಗಳೂರು: ಕುಡಿದ ಅಮಲಿನಲ್ಲಿ ಯಾರದ್ದೋ ಅಪಾರ್ಟ್‌ಮೆಂಟ್ ಸಮುಚ್ಚಯದ ಆವರಣಕ್ಕೆ ನುಗ್ಗಿದ ವಿಜಯ್ (23) ಎಂಬುವರು, ಗ್ರಿಲ್ ಹಿಡಿದುಕೊಂಡೇ ಮಹಡಿಗೆ ಹತ್ತುವ ಯತ್ನದಲ್ಲಿ 2ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ.

ಗಾಯತ್ರಿನಗರದ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಸಮೀಪದ ‘ಜಿಎಲ್‌ವಿ ‌ಎನ್‌ಕ್ಲೇವ್’ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಮಂಗಳವಾರ ರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಶ್ರೀರಾಮಪುರದ ದೇವಯ್ಯಪಾರ್ಕ್ ನಿವಾಸಿಯಾದ ವಿಜಯ್, ಔಷಧ ವ್ಯಾಪಾರಿ ಉಮೇಶ್ ಎಂಬುವರ ಪುತ್ರ.

ಕೆಲಸವಿಲ್ಲದೆ ತಿರುಗಾಡುತ್ತಿದ್ದ ಮಗನಿಗೆ‌ ಉಮೇಶ್, ಇತ್ತೀಚೆಗೆ ಮತ್ತಿಕೆರೆಯಲ್ಲಿನ ತಮ್ಮ ಔಷಧ ಮಾರಾಟ ಮಳಿಗೆಯ ನಿರ್ವಹಣೆ ಜವಾಬ್ದಾರಿ ವಹಿಸಿದ್ದರು. ಆದರೆ, ಮದ್ಯ ಹಾಗೂ ಮಾದಕ ವ್ಯಸನಿಯಾಗಿದ್ದ ವಿಜಯ್, ವ್ಯವಹಾರದ ಕಡೆ ಲಕ್ಷ್ಯ ತೋರುತ್ತಿರಲಿಲ್ಲ. ಎಷ್ಟೋ ಸಲ ಅವರು ಮನೆಗೇ ಹೋಗದೆ, ಕಂಠಪೂರ್ತಿ ಕುಡಿದು ಬೀದಿ ಬೀದಿ ಸುತ್ತುತ್ತಿದ್ದರು. ಮಗನ ಈ ವರ್ತನೆಯಿಂದ ಪೋಷಕರು ಬೇಸತ್ತಿದ್ದರು ಎಂದು ಪೊಲೀಸರು ಹೇಳಿದರು.  

ಕುಡಿತ ತಂದ ಆಪತ್ತು: ಸಂಬಂಧಿಯೊಬ್ಬರ ಮದುವೆ ಆಮಂತ್ರಣ ಹಂಚಲು ಮಂಗಳವಾರ ಬೆಳಿಗ್ಗೆ ಮನೆಯಿಂದ ಹೊರ ಹೋಗಿದ್ದ ವಿಜಯ್, ಸಂಜೆ 6 ಗಂಟೆಗೆ ಮನೆಗೆ ಮರಳಿದ್ದರು. ಬಳಿಕ 7.30ರ ಸುಮಾರಿಗೆ ಗಾಯತ್ರಿನಗರಕ್ಕೆ ತೆರಳಿ ಬಾರ್‌ ಒಂದರಲ್ಲಿ ಪಾನಮತ್ತರಾಗಿದ್ದರು. ಕೊನೆಗೆ ಒರಾಯನ್ ಮಾಲ್ ಸಮೀಪದ ಮೆಟ್ರೊ ನಿಲ್ದಾಣದ ಬಳಿಯೇ ಸ್ಕೂಟರ್ ನಿಲ್ಲಿಸಿ, ರಸ್ತೆಯಲ್ಲಿ ತೂರಾಡಿಕೊಂಡು ಅಪಾರ್ಟ್‌ಮೆಂಟ್ ಸಮುಚ್ಚಯದ ಬಳಿ ಹೋಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

12 ಗಂಟೆ ಸುಮಾರಿಗೆ ಅವರು ಕಾಂಪೌಂಡ್ ಜಿಗಿದು ಆವರಣ ಪ್ರವೇಶಿಸಿದ್ದರು. ತಡರಾತ್ರಿ ಅಪರಿಚಿತನನ್ನು ನೋಡಿದ ಕಾವಲುಗಾರನ ಪತ್ನಿ ‘ಕಳ್ಳ.. ಕಳ್ಳ..’ ಎಂದು ಚೀರಿಕೊಂಡಿದ್ದರು. ಪತ್ನಿಯ ಚೀರಾಟ ಕೇಳಿ ಕಾವಲುಗಾರ ಸಹ ಎಚ್ಚರಗೊಂಡು, ವಿಜಯ್ ಅವರನ್ನು ಹಿಡಿದುಕೊಂಡಿದ್ದರು. ಆಗ, ‘ನಾನು ಕಳ್ಳ ಅಲ್ಲ. ದಾರಿ ತಪ್ಪಿ ಬಂದಿದ್ದೇನೆ’ ಎಂದು ಕ್ಷಮೆ ಕೋರಿದ್ದರು. ಹೊರಗೆ ಹೋಗುವುದಾಗಿ ಗೇಟ್‌ವರೆಗೂ ತೆರಳಿದ್ದ ವಿಜಯ್, ಕಾವಲುಗಾರ ದಂಪತಿ ತಮ್ಮ ಮನೆಗೆ ತೆರಳುತ್ತಿದ್ದಂತೆಯೇ ಪುನಃ ಆವರಣದೊಳಗೆ ಬಂದಿದ್ದರು.

ದೃಶ್ಯಾವಳಿ ಸೆರೆ: ಮೊದಲು ಕಾರಿನ ಮೇಲೆ ಹತ್ತಿದ್ದ ವಿಜಯ್, ನಂತರ ಗ್ರಿಲ್ ಹಿಡಿದುಕೊಂಡು ಕಟ್ಟಡ ಹತ್ತಿದ್ದರು. 2ನೇ ಮಹಡಿಗೆ ಹೋದಾಗ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದರು. ಈ ದೃಶ್ಯಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ತಡರಾತ್ರಿ ಜೋರಾದ ಶಬ್ದ ಕೇಳಿ ಅಪಾರ್ಟ್‌ಮೆಂಟ್ ವಾಸಿಗಳು ತಕ್ಷಣ ಹೊರಗೆ ಬಂದಿದ್ದರು. ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ವಿಜಯ್ ಸ್ಥಳದಲ್ಲೇ ಮೃತಪಟ್ಟಿದ್ದರು. ಸುಬ್ರಹ್ಮಣ್ಯನಗರ ಪೊಲೀಸರು ಸದ್ಯ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !