ರಸ್ತೆಯಲ್ಲಿ ದೂಳು ಮಿಶ್ರಿತ ಮರಳು, ಕೇಳುವವರಿಲ್ಲ ಜನರ ಗೋಳು

7
ಕಾಂಕ್ರೀಟ್‌ ರಸ್ತೆಯಾದರೂ ಜನರು ದೂಳು ತಿನ್ನಬೇಕಾದ ಸ್ಥಿತಿ

ರಸ್ತೆಯಲ್ಲಿ ದೂಳು ಮಿಶ್ರಿತ ಮರಳು, ಕೇಳುವವರಿಲ್ಲ ಜನರ ಗೋಳು

Published:
Updated:
ಭುವನೇಶ್ವರಿ ವೃತ್ತದಿಂದ ಸಂತೇಮರಹಳ್ಳಿ ವೃತ್ತದತ್ತ ಹೋಗುವಾಗ ಸಿಗುವ ತಿರುವಿನಲ್ಲಿ ದೂಳು ಶೇಖರಣೆಗೊಂಡಿರುವುದು ಪ್ರಜಾವಾಣಿ ಚಿತ್ರ/ ಸಿ.ಆರ್‌. ವೆಂಕಟರಾಮು

ಚಾಮರಾಜನಗರ: ಪಟ್ಟಣದಲ್ಲಿ ನಿರ್ಮಿಸಲಾಗಿರುವ ಕಾಂಕ್ರೀಟ್‌ ರಸ್ತೆಗಳ ಇಕ್ಕೆಲಗಳಲ್ಲಿ ದೂಳು ಮಿಶ್ರಿತ ಮರಳು ಭಾರಿ ಪ್ರಮಾಣದಲ್ಲಿ ಸಂಗ್ರಹಗೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಸಂತೇಮರಹಳ್ಳಿ ವೃತ್ತದಿಂದ ಆರಂಭವಾಗುವ ಡಿವೀಯೇಷನ್‌ ರಸ್ತೆ ಹಾಗೂ ನ್ಯಾಯಾಲಯಕ್ಕೆ ಹೋಗುವ ರಸ್ತೆಗಳಲ್ಲಿ ಮರಳು ಸಂಗ್ರಹಗೊಂಡಿದ್ದು ಸಾರ್ವಜನಿಕರಿಗೆ, ವಾಹನಗಳಲ್ಲಿ ಸಂಚರಿಸುವವರಿಗೆ ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

ಪಟ್ಟಣದ ಪ್ರಮುಖ ರಸ್ತೆಯಾಗಿರುವ ಡಿವೀಯೇಷನ್‌ ರಸ್ತೆಯ ವಿಭಜಕಗಳ ಬುಡದಲ್ಲಂತೂ ರಾಶಿ ರಾಶಿ ಮರಳು ಇದೆ. ಭುವನೇಶ್ವರಿ ವೃತ್ತದಿಂದ (ಪಚ್ಚಪ್ಪ ವೃತ್ತ) ಸಂತೇಮರಹಳ್ಳಿ ವೃತ್ತದ ಕಡೆಗೆ ಹೋಗುವಾಗ ಸಿಗುವ ತಿರುವಿನಲ್ಲಿ ವಿಭಜಕದಿಂದ ಸುಮಾರು 4 ಅಡಿಗಳಷ್ಟು ಅಗಲದಲ್ಲಿ ಮರಳು ಹರಡಿಕೊಂಡಿದೆ. ದ್ವಿಚಕ್ರ ಸವಾರರು ಇಲ್ಲಿ ಕೊಂಚ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.

ಡಿವೈಎಸ್‌ಪಿ ಕಚೇರಿಯಿಂದ ನ್ಯಾಯಾಲಯದತ್ತ ಹೋಗುವ ರಸ್ತೆಯ ಎರಡೂ ಕಡೆಗಳಲ್ಲೂ ಇದೇ ಸಮಸ್ಯೆ ಇದೆ. ಸುಮಾರು ರಸ್ತೆಯ ಅರ್ಧಭಾಗದಲ್ಲಿ (ಎರಡೂ ಬದಿಯನ್ನೂ ಸೇರಿಸಿದರೆ) ಮರಳು ದೂಳು ಹರಡಿಕೊಂಡಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರು ಪ್ರತಿ ದಿನ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. 

ನಿಜಗುಣ ರೆಸಿಡೆನ್ಸಿಯಿಂದ ರಾಷ್ಟ್ರೀಯ ಹೆದ್ದಾರಿವರೆಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್‌ ರಸ್ತೆಯಲ್ಲೂ ದೂಳು ಸಂಗ್ರಹಗೊಂಡಿದೆ. ಆದರೆ, ಉಳಿದ ಎರಡು ರಸ್ತೆಗಳಲ್ಲಿ ಇರುವಷ್ಟು ಪ್ರಮಾಣದಲ್ಲಿ ಇಲ್ಲಿ ಇಲ್ಲ.

ಸಹಜ ಪ್ರಕ್ರಿಯೆ: ರಸ್ತೆಗಳಲ್ಲಿ ವಾಹನಗಳು ಸಾಗುವ ವೇಗಕ್ಕೆ ರಸ್ತೆಯ ಎರಡೂ ಬದಿಗೂ ದೂಳು ಸಾಗಿ, ಅಲ್ಲಿ ಶೇಖರಣೆಗೊಳ್ಳುವುದು ಸಹಜ ಪ್ರಕ್ರಿಯೆ. ವಿಭಜಕಗಳು ಇರುವ ಬದಿ ಹೆಚ್ಚು ರಾಶಿ ಬೀಳುತ್ತವೆ. ಸಾಮಾನ್ಯವಾಗಿ ಸ್ಥಳೀಯ ಆಡಳಿತ ಇವುಗಳನ್ನು ತೆರವುಗೊಳಿಸುತ್ತವೆ. ಬೆಂಗಳೂರಿನಂತಹ ನಗರಗಳಲ್ಲಿ ಯಂತ್ರಗಳ ಮೂಲಕ ರಸ್ತೆಗಳನ್ನು ಸ್ವಚ್ಛಗೊಳಿಸುವ ವ್ಯವಸ್ಥೆ ಇದೆ. ಆದರೆ, ಪಟ್ಟಣದ ನಗರಸಭೆ ಆಡಳಿತ ಈ ಮರಳು ದೂಳನ್ನು ತೆಗೆಯಲು ಕ್ರಮ ತೆಗೆದುಕೊಳ್ಳದೇ ಇರುವುದು ಸಮಸ್ಯೆಗೆ ಕಾರಣವಾಗಿದೆ.

ತೊಂದರೆ ಹಲವು: ರಸ್ತೆ ಬದಿಯಲ್ಲಿ ಈ ರೀತಿ ದೂಳು ಶೇಖರಣೆಗೊಳ್ಳುವುದರಿಂದ ವಾಹನ ಸವಾರರಿಗೆ ಮಾತ್ರವಲ್ಲ; ರಸ್ತೆಯ ಅಕ್ಕ ಪಕ್ಕದಲ್ಲಿರುವ ಜನರಿಗೂ ತೊಂದರೆಯಾಗುತ್ತದೆ. ಲಾರಿ, ಬಸ್‌ನಂತಹ ದೊಡ್ಡ ವಾಹನಗಳು ಸಾಗಿದಾಗ ಭಾರಿ ಪ್ರಮಾಣದಲ್ಲಿ ದೂಳು ಏಳುವುದರಿಂದ ಅಂಗಡಿಯವರು, ಅವುಗಳ ಹಿಂದಿನಿಂದ ಬರುತ್ತಿರುವ ವಾಹನ ಸವಾರರು, ಪಾದಚಾರಿಗಳಿಗೆ ದೂಳಿನ ಸ್ನಾನ ಆಗುತ್ತದೆ. ಅಲ್ಲದೇ, ದೂಳು ಮಿಶ್ರಿತ ಗಾಳಿಯನ್ನೇ ಅವರು ಸೇವಿಸಬೇಕಾಗುತ್ತದೆ. 

ಸೌಂದರ್ಯಕ್ಕೂ ಧಕ್ಕೆ: ದೂಳು ಶೇಖರಣೆಗೊಂಡಿರುವುದರಿಂದ ರಸ್ತೆಯ ಸೌಂದರ್ಯ ಕೆಡುತ್ತದೆ. ಡಿವೈಎಸ್‌ಪಿ ಕಚೇರಿಯಿಂದ ಜಿಲ್ಲಾ ಕಾರಾಗೃಹದವರೆಗಿನ ರಸ್ತೆಯನ್ನು ಅತ್ಯಂತ ಸುವ್ಯವಸ್ಥಿತ‌ವಾಗಿ ನಿರ್ಮಿಸಲಾಗಿದೆ. ಬಹುತೇಕ ಎಲ್ಲ ಕಾಮಗಾರಿಗಳೂ ಮುಗಿದಿವೆ. ರಸ್ತೆಯ ಇಕ್ಕೆಲಗಳಲ್ಲಿ ಶೇಖರಣೆಗೊಂಡಿರುವ ದೂಳು ಮಿಶ್ರಿತ ಮರಳನ್ನು ತೆರವುಗೊಳಿಸಿದರೆ, ರಸ್ತೆಯ ಸೌಂದರ್ಯ ವೃದ್ಧಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ.

ನಡೆದಾಡಲೂ ಕಷ್ಟ: ಈ ರಸ್ತೆಯು ಹೌಸಿಂಗ್‌ ಬೋರ್ಡ್‌ ಕಾಲೋನಿಯ ಪಕ್ಕದಲ್ಲೇ ಇರುವುದರಿಂದ, ಸ್ಥಳೀಯ ನಿವಾಸಿಗಳು ಬೆಳಿಗ್ಗೆ ವಾಯು ವಿಹಾರಕ್ಕಾಗಿ ಇಲ್ಲಿಗೆ ಬರುತ್ತಾರೆ. ಆದರೆ, ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸದೇ ಇರುವುದು ಮತ್ತು ರಸ್ತೆ ಬದಿಯಲ್ಲಿ ದೂಳು ಇರುವುದರಿಂದ ಅವರು ರಸ್ತೆ ಮಧ್ಯದಲ್ಲೇ ನಡೆಯಬೇಕಾದ ಸ್ಥಿತಿ ಇದೆ.

‘ಈ ಪ್ರಮಾಣದಲ್ಲಿ ದೂಳು ಇದ್ದರೆ ವಾಹನ ಸವಾರರಿಗೆ ತೊಂದರೆಯಾಗುತ್ತದೆ. ದೂಳಿನ ಸಮಸ್ಯೆಯೂ ತಲೆ ತೋರುತ್ತದೆ. ರಸ್ತೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಆದರೆ, ನಗರಸಭೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆಟೊ ಚಾಲಕ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !