ಸೋಮವಾರ, ಸೆಪ್ಟೆಂಬರ್ 20, 2021
21 °C
ಶುದ್ಧ ನೀರು ಪೂರೈಕೆ, ಡಿಜಿಟಲ್ ಲೈಬ್ರರಿ, ಎಲ್‌ಇಡಿ ಬಲ್ಬ್‌ ಅಳವಡಿಕೆ, ಎಸಿ ಸಭಾಂಗಣ

ನಂದಗಡದ ‘ಇ–ಪಂಚಾಯ್ತಿ’

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಒಂದು ಗ್ರಾಮ ಪಂಚಾಯ್ತಿ ಕಚೇರಿ ಬಗ್ಗೆ ನಿಮ್ಮ ಕಲ್ಪನೆ ಏನು?

ಮಾಸಲಾದ ಹಳೆಯ ಕಟ್ಟಡ. ಕಿಷ್ಕಿಂದೆಯಂತಿರುವ ಆವರಣ. ಮುರುಕಲು ಕುರ್ಚಿ–ಟೇಬಲ್‌ಗಳು. ಸಭೆ ನಡೆಸುವು ದಕ್ಕೂ ಜಾಗದ ಕೊರತೆ. ದೂಳು ತಿನ್ನುತ್ತಿರುವ ಫೈಲ್‌ಗಳು. ಕಾಗದಪತ್ರಗಳನ್ನು ಬಟ್ಟೆಗಳಲ್ಲಿ ಕಟ್ಟಿಟ್ಟು, ಮೂಟೆಗಳಲ್ಲಿ ತುಂಬಿಟ್ಟಿರುವುದು... ಮನದಲ್ಲಿ ಮೂಡುವ ಚಿತ್ರಣ ಹೀಗೆ ಅಲ್ಲವೇ?.

ಹಾಗಾದರೆ, ಒಮ್ಮೆ ನೀವು ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ನಂದಗಡಕ್ಕೆ ಬನ್ನಿ. ಇಲ್ಲಿನ ಗ್ರಾಮ ಪಂಚಾಯ್ತಿ ಕಚೇರಿ ಹಾಗೂ ಆ ಕಚೇರಿಯ ಆಡಳಿತ ವ್ಯವಸ್ಥೆಯನ್ನು ಗಮನಿಸಿ. ಆಗ, ನಿಮ್ಮೊಳಗಿನ ಪಂಚಾಯ್ತಿ ಕಚೇರಿಯ ಕಲ್ಪನೆಗಳೇ ಬದಲಾಗದಿದ್ದರೆ ಕೇಳಿ..!

ನಿಜ, ಈ ಪಂಚಾಯ್ತಿ ಕೇವಲ ಭೌತಿಕವಾಗಿ ಆಧುನಿಕಗೊಂಡಿಲ್ಲ. ತನ್ನ ಆಡಳಿತ ವೈಖರಿಗೂ ಆಧುನಿಕತೆಯ ಸ್ಪರ್ಶ ನೀಡಿದೆ. ಗ್ರಾಮ ಪಂಚಾಯ್ತಿಯ ಸಂಪನ್ಮೂಲ ಮತ್ತು ಸರ್ಕಾರದ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಇಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ.

ಏನೆಲ್ಲ ಸೌಲಭ್ಯಗಳಿವೆ?

ಪಂಚಾಯ್ತಿ ಆವರಣದಲ್ಲಿ ಮುಖ್ಯ ಕಟ್ಟಡ, ನೀರು ಶುದ್ಧೀಕರಣ ಘಟಕ, ರಾಜೀವ್‌ಗಾಂಧಿ ಸೇವಾ ಕೇಂದ್ರ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಬ್ರೌಸಿಂಗ್ ಸೆಂಟರ್, ಬಾಪೂಜಿ ಸೇವಾ ಕೇಂದ್ರ, ವಾಹನಗಳ ನಿಲುಗಡೆಗೆ ಜಾಗವಿದೆ.

ದೇವಸ್ಥಾನ,‌ ಸಮುದಾಯ ಭವನ, ಜಿಮ್, ಮಿನಿ ಬಸ್ ನಿಲ್ದಾಣ, ರಂಗಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪಂಚಾಯ್ತಿ ನಿಧಿಯಿಂದ ರಾಜೀವ್‌ಗಾಂಧಿ ಸೇವಾ ಕೇಂದ್ರ ಕಟ್ಟಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷರಿಗೆ ಪ್ರತ್ಯೇಕ ಕೊಠಡಿ. ಅತ್ಯಾಧುನಿಕ ಪೀಠೋಪಕರಣ ಅಳವಡಿಕೆ. ಪ್ರೊಜೆಕ್ಟರ್‌ ಜತೆಯಲ್ಲಿ, ಹವಾನಿಯಂತ್ರಿತ ಸಭಾಂಗಣ. ಅತಿಥಿಗಳಿಗೂ ಪ್ರತ್ಯೇಕ ಕೊಠಡಿ ಇದೆ.

ಪ್ರಗತಿಯಲ್ಲೂ ಮುಂದು

ಗ್ರಾಮದಲ್ಲಿ ಶೇ 95ರಷ್ಟು ರಸ್ತೆ, ಶೇ 90ರಷ್ಟು ಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ಇಲ್ಲಿರುವ 400 ವಿದ್ಯುತ್‌ ಕಂಬಗಳಲ್ಲಿ ಸಾಂಪ್ರದಾಯಿಕ ಬಲ್ಬ್‌ಗಳ ಬದಲಿಗೆ ಇಂಧನ ಮಿತವ್ಯಯದ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಿದ್ದಾರೆ. ಹೀಗಾಗಿ ತಿಂಗ ಳಿಗೆ ₹25ಸಾವಿರ ಬರುತ್ತಿದ್ದ ಬಿಲ್‌ ಈಗ ₹12ಸಾವಿರಕ್ಕೆ ಇಳಿದಿದೆ. ‘ಪಂಚಾಯ್ತಿಗೆ ಬರುವ ಅನುದಾನವೆಲ್ಲಾ ವಿದ್ಯುತ್‌ ಬಿಲ್‌ಗಾಗಿಯೇ ಖರ್ಚಾಗುತ್ತದೆ’ ಎನ್ನುವ ಮಾತು ಸಾಮಾನ್ಯ. ಆದರೆ, ಎಲ್‌ಇಡಿ ಬಲ್ಬ್‌ಗಳು, ಆ ಖರ್ಚು ತಗ್ಗಿಸಿವೆ.

2011ರ ಜನಗಣತಿ ಪ್ರಕಾರ ಇಲ್ಲಿ 9,257 ಜನಸಂಖ್ಯೆ ಇದೆ. 23 ಜನ ಪಂಚಾಯ್ತಿ ಸದಸ್ಯರಿದ್ದಾರೆ. ಇಲ್ಲಿ ನೀರಿನ ವ್ಯವಸ್ಥೆ ಅಷ್ಟಾಗಿ ಉತ್ತಮವಾಗಿರಲಿಲ್ಲ. ಹೀಗಾಗಿ, ಸಮೀಪದ ‘ಬೀಡಿ‌’ ಗ್ರಾಮದಲ್ಲಿ 6 ಕೊಳವೆಬಾವಿಗಳನ್ನು ಕೊರೆದು ಪಂಪ್ ಮಾಡಿ ಗ್ರಾಮದ ಐದು ಓವರ್‌ಹೆಡ್‌ ಟ್ಯಾಂಕ್‌ಗಳಿಗೆ ತುಂಬಿಸಿ, ಮನೆಗಳಿಗೆ ಶುದ್ಧೀಕರಿಸಿದ ನೀರು ಪೂರೈಸಲಾಗುತ್ತಿದೆ. ಗ್ರಾಮದಲ್ಲಿ ನಾಲ್ಕು ನೀರು ಶುದ್ಧೀಕರಣ ಘಟಕಗಳಿವೆ.

ತೆರಿಗೆ ಸಂಗ್ರಹ ಹೆಚ್ಚಳ

ಗ್ರಾಮ ಪಂಚಾಯ್ತಿಗಳಲ್ಲಿ ತೆರಿಗೆ ಪಾವತಿಯೇ ಒಂದು ದೊಡ್ಡ ಸಮಸ್ಯೆ. ಆದರೆ, ಇಲ್ಲಿ ಈ ವರ್ಷ ₹ 36 ಲಕ್ಷ ತೆರಿಗೆ ವಸೂಲಿಯಾಗಿದೆ. ಆಯಾ ತಿಂಗಳು ಆದ ಖರ್ಚು, ತೆರಿಗೆ ಸಂಗ್ರಹದ ಮಾಹಿತಿಯನ್ನು ಪಂಚಾಯ್ತಿಯ ಟಿ.ವಿ.ಯಲ್ಲಿ ಪ್ರದರ್ಶಿಸಲಾಗುತ್ತದೆ. 

‘ಪಂಚಾಯ್ತಿ ಸಂಪನ್ಮೂಲಗಳಿಂದಲೇ ಬಹುತೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಂಡಿದ್ದೇವೆ. ತೆರಿಗೆ ಸಂಗ್ರಹದಲ್ಲಿ ಖಾನಾಪುರ ತಾಲ್ಲೂಕಿಗೆ ಪ್ರಥಮ ಸ್ಥಾನದಲ್ಲಿದ್ದೇವೆ’ ಎನ್ನುತ್ತಾರೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೆ.ಎಸ್. ಗಣೇಶ್.

ಪಂಚಾಯ್ತಿಯು ಅಭಿವೃದ್ಧಿ ಹೊಂದುತ್ತಿರುವುದು, ಸುಧಾರಣಾ ಕ್ರಮಗಳನ್ನು ಕೈಗೊಂಡಿರುವುದು, ಸೌಲಭ್ಯ ಕಲ್ಪಿಸುತ್ತಿರುವುದರಿಂದಾಗಿ ಜನರು ಸ್ವಯಂಪ್ರೇರಿತರಾಗಿ ತೆರಿಗೆ ಕಟ್ಟುತ್ತಿದ್ದಾರೆ. ಕಾಲಕಾಲಕ್ಕೆ ತೆರಿಗೆ ಪರಿಷ್ಕರಿಸಿದರೂ, ಯಾರೂ ತಕರಾರು ಮಾಡುತ್ತಿಲ್ಲ. ಹಿಂದಿನ ವರ್ಷಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹ ಶೇ 30ರಷ್ಟು ಹೆಚ್ಚಾಗಿದೆ ಎಂದು ಗಣೇಶ್ ಅಂಕಿ ಅಂಶ ನೀಡುತ್ತಾರೆ.

ಡಿಜಿಟಲೀಕರಣ

ನರೇಗಾದಲ್ಲಿ ₹18.22 ಲಕ್ಷ ಸದ್ಬಳಕೆ ಮಾಡಲಾಗಿದೆ. ಇದೇ ಯೋಜನೆಯಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಡಿಜಿಟಲ್ ಲೈಬ್ರರಿ ನಿರ್ಮಾಣವಾಗಿದೆ. ಇಲ್ಲಿ ಅಂತರ್ಜಾಲ ಸಂಪರ್ಕವಿರುವ 5 ಕಂಪ್ಯೂಟರ್‌ಗಳಿವೆ. ಅಂತರ್ಜಾಲ ಸೇವೆ ಉಚಿತ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಅನುಕೂಲವಾಗಿದೆ. ಲೈಬ್ರರಿಯಲ್ಲಿ ಕಥೆ, ಕಾದಂಬರಿ, ಕವನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಒಂದು ಸಾವಿರ ಪುಸ್ತಕಗಳಿವೆ. ನಿರಂತರ ಜ್ಯೋತಿ ಯೋಜನೆಯಿಂದಾಗಿ ವಿದ್ಯುತ್‌ಗೆ ತೊಂದರೆ ಇಲ್ಲ.

ಗ್ರಾಮ ವಿಕಾಸ ಯೋಜನೆಯಲ್ಲಿ ₹ 2.93 ಕೋಟಿ ಬಂದಿದೆ. ಪಂಚಾಯ್ತಿಯ ಎಲ್ಲ ವ್ಯವಹಾರವೂ ಗಣಕೀಕೃತವಾಗಿದೆ. ಹೀಗಾಗಿ ಕಾಗದದ ಬಳಕೆ ತಗ್ಗಿದೆ. ಕಚೇರಿಯಲ್ಲಿ ಕಾಫಿ–ಟೀ ಕುಡಿಯುವುದಕ್ಕೂ ವೆಂಡಿಂಗ್ ಮಷಿನ್ ಇದೆ. ಸಾರ್ವಜನಿಕರು ಸುಲಭವಾಗಿ ಇವುಗಳನ್ನು ಬಳಸುತ್ತಿದ್ದಾರೆ.

‘ಆನಂದ ಜಲ’ ಕಾರ್ಯಕ್ರಮದಲ್ಲಿ, ಮದುವೆ, ಹಬ್ಬ, ಜಾತ್ರೆ ವೇಳೆಯಲ್ಲಿ 20 ಲೀಟರ್ ಶುದ್ಧ ನೀರಿನ ಕ್ಯಾನನ್ನು ತಲಾ ₹ 15ಕ್ಕೆ ಮನೆಗಳಿಗೆ ತಲುಪಿಸುತ್ತಿದೆ. ‘ಸಾಂತ್ವನ’ ಯೋಜನೆಯಲ್ಲಿ ಅಂತ್ಯಸಂಸ್ಕಾರಕ್ಕಾಗಿ ₹ 2,500 ಸಹಾಯಧನ ನೀಡಲಾಗುತ್ತಿದೆ. ಕಾಡಿನ ಸಮೀಪವಿದ್ದರೂ ಶವಸಂಸ್ಕಾರದ ವೇಳೆ ಕಟ್ಟಿಗೆಗೆ ಪರದಾಡುತ್ತಿದ್ದನ್ನು ಗಮನಿಸಿ, ಪಂಚಾಯ್ತಿಯಿಂದಲೇ ಕಟ್ಟಿಗೆ ಪೂರೈಸಲಾಗುತ್ತಿದೆ. ಅರಣ್ಯ ಇಲಾಖೆಯಿಂದ ಖರೀದಿಸಿದ ತಂದು ಸಂಗ್ರಹಿಸಿ, ಕಡಿಮೆ ದರದಲ್ಲಿ ಜನರಿಗೆ ಕೊಡುತ್ತಿದ್ದಾರೆ.

₹ 60 ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮನೆ–ಮನೆಗಳಿಗೆ ತೆರಳಿ ಕಸ ಸಂಗ್ರಹ ಮಾಡಲು ಮೊದಲ ಹಂತದಲ್ಲಿ ಒಂದು ವಾಹನ ಖರೀದಿಸಲಾಗಿದೆ. 1,850 ಮನೆಗಳಿರುವ ಈ ಊರು ‘ಬಯಲು ಬಹಿರ್ದೆಸೆ ಮುಕ್ತ’ ಗ್ರಾಮವಾಗಿದೆ.

‘ಸರ್ಕಾರದ ಯೋಜನೆಗಳಲ್ಲಿ ದೊರೆಯುವ ಅನುದಾನ ವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರಿಂದ ಈ ಸುಧಾರಣೆ ಸಾಧ್ಯವಾಗಿದೆ. ಇದರಿಂದಾಗಿ ನಮ್ಮ ಪಂಚಾಯ್ತಿಯು ಅಧಿಕಾರಿಗಳು ಹಾಗೂ ಜನರ ಗಮನಸೆಳೆಯುತ್ತಿದೆ. ಮಕ್ಕಳನ್ನು ಆಕರ್ಷಿಸಲು ಎಲ್ಲ 11 ಅಂಗನವಾಡಿಗಳ ಗೋಡೆಗಳ ಮೇಲೂ ಆಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ. ಪಂಚಾಯ್ತಿಯನ್ನು ಇನ್ನಷ್ಟು ಸುಧಾರಿಸಲು ಯೋಜನೆ ರೂಪಿಸಿದ್ದೇವೆ’ ಎಂದವರು ಅಧ್ಯಕ್ಷ ಪ್ರಭು ಆರ್. ಪಾರಿಶ್ವಾಡಕರ.

‘ಇಲ್ಲಿರುವ ಕೇಬಲ್ ಟಿವಿ ಮೂಲಕ, ಸಭೆಯನ್ನು ನೇರಪ್ರಸಾರ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈಗಾಗಲೇ ಕ್ಯಾಮೆರಾ ಖರೀದಿಸಿದ್ದೇವೆ. ಶೀಘ್ರವೇ ನಗದುರಹಿತ ವಹಿವಾಟು ಆರಂಭಕ್ಕೂ ಸಿದ್ಧತೆ ಮಾಡಿಕೊಂಡಿದ್ದೇವೆ. ಹಿಂದೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್. ರಾಮಚಂದ್ರನ್ ಬಹಳಷ್ಟು ಸಹಕಾರ ನೀಡಿದ್ದರು. ಇಲ್ಲಿನ ವ್ಯವಸ್ಥೆಯನ್ನು ವೀಕ್ಷಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಬೆನ್ನು ತಟ್ಟಿದರು. ಹಿರಿಯ ಅಧಿಕಾರಿಗಳೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದು ಹೆಮ್ಮೆಯ ವಿಷಯ’ ಎನ್ನುತ್ತಾರೆ ಪಿಡಿಒ.

(ಚಿತ್ರಗಳು: ಲೇಖಕರವು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು