ಒತ್ತಡವಿದ್ದಾಗ ಐಸ್‌ಕ್ರೀಂ ತಿನ್ನುವೆ !

7
ಸೆಲೆಬ್ರಿಟಿ ಅ–ಟೆನ್ಷನ್‌

ಒತ್ತಡವಿದ್ದಾಗ ಐಸ್‌ಕ್ರೀಂ ತಿನ್ನುವೆ !

Published:
Updated:
Deccan Herald

‘ಹುಟ್ಟಿನಿಂದ ಸಾಯುವವರೆಗೂ ಅಸಂಖ್ಯಾತ ಕ್ಷಣಗಳಲ್ಲಿ ಬದುಕಿರುತ್ತೇವೆ. ಎಲ್ಲವನ್ನು ನೆನಪಿಟ್ಟುಕೊಂಡು, ಎಲ್ಲದಕ್ಕೂ ಕಾರಣಗಳನ್ನು ಹುಡುಕುತ್ತಾ ಕೂರುವುದು ಉಚಿತವಲ್ಲ ಎನ್ನುವುದು ನನ್ನ ಭಾವನೆ. ಹಲವನ್ನು ಮರೆಯಬೇಕು. ಬೇಡದೆ ಇರುವುದನ್ನು ತಲೆಗೆ ತುಂಬಿಕೊಳ್ಳುವುದೇ ಒತ್ತಡ ಎನ್ನಿಸಿಕೊಳ್ಳುತ್ತದೆ. ನಮಗೆ ಏನು ಬೇಕೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು. ಹೀಗೆ ಹೇಳಿದೆ ಎಂದಾಕ್ಷಣ ನನಗೆ ಒತ್ತಡ ಕಾಡಿಯೇ ಇಲ್ಲ ಎಂದಲ್ಲ. ನಾನು ಸಹ ಒತ್ತಡವನ್ನು ಅನುಭವಿಸಿದ್ದೇನೆ. ನನ್ನ ಅನುಭವಗಳಿಂದಲೇ ಕಲಿತ ಪಾಠ ಇದು’ ಎನ್ನುತ್ತಾರೆ ನಟಿ, ನಿರ್ದೇಶಕಿ ಮತ್ತು ನಿರ್ಮಾಪಕಿ ಸ್ವಪ್ನ ಕೃಷ್ಣ.

ಬದುಕಿನಿಂದ ನಾವು ಬಹಳಷ್ಟನ್ನು ನಿರೀಕ್ಷಿಸುತ್ತೇವೆ. ಸಣ್ಣ ಉದಾಹರಣೆಯೊಂದನ್ನು ನೀಡುತ್ತೇನೆ. ನಮಗೆ ಯಾರಾದರೂ ಎದುರಾದರೆ, ನಾವು ಮುಗುಳು ನಗುವುದು, ಪ್ರತಿಯಾಗಿ ಅವರೂ ಮುಗುಳು ನಗುವುದು ರೂಢಿ. ನಮಗೆ ಸಮಸ್ಯೆ ಆಗುವುದೇ ಇಲ್ಲೇ. ನಾವು ನಕ್ಕು ಪ್ರತಿಯಾಗಿ ಅವರು ನಗುವುದಿಲ್ಲ ಎಂದಿಟ್ಟುಕೊಳ್ಳಿ, ನಾವು ಆಲೋಚನೆಗೆ ಬೀಳುತ್ತೇವೆ. ‘ಯಾಕೆ ಅವರು ನಗಲಿಲ್ಲ, ನಾನೇನು ಮಾಡಿದೇ’ ಎಂದೆಲ್ಲಾ ಪ್ರಶ್ನೆಗಳು ನಮ್ಮನ್ನು ಸುತ್ತಿಕೊಂಡು ಹಿಂಡಿಬಿಡುತ್ತವೆ; ಆಗ ಒತ್ತಡಕ್ಕೆ ಒಳಗಾಗುತ್ತೇವೆ. ಆದರೆ, ಒಮ್ಮೆ ಯೋಚಿಸಿ, ನಾವು ನಕ್ಕಾಗ ಪ್ರತಿಯಾಗಿ ಅವರು ನಕ್ಕರೆ ಒಳ್ಳೆಯದೇ. ಒಂದೊಮ್ಮೆ ನಗಲಿಲ್ಲ ಎಂದಾದರೆ, ಚಿಂತೆ ಬೇಡ. ನಮ್ಮ ಕೆಲಸವನ್ನು ನಾವು ಮಾಡಿಬಿಡಬೇಕು. ಪ್ರತಿಫಲಾಪೇಕ್ಷೆ ಅಥವಾ ಅವರು ನಗಲೇಬೇಕು ಎನ್ನುವ ನಿರೀಕ್ಷೆ ಮಾಡುವುದು, ಅದು ಆಗಲಿಲ್ಲ ಎಂದು ಕೊರಗುವುದು ಯಾವುದೂ ಬೇಡ. ಆಗ ಒತ್ತಡವೂ ಕಾಡುವುದಿಲ್ಲ.

ನಟಿ, ನಿರ್ದೇಶಕಿ, ನಿರ್ಮಾಪಕಿ, ಜೊತೆಗೆ ಬಹಳ ಮುಖ್ಯವಾಗಿ ತಾಯಿ ಆಗಿ ನನಗೆ ಹಲವು ಜವಾಬ್ದಾರಿಗಳಿವೆ. ತಾಯಿಯ ಜವಾಬ್ದಾರಿ ನನಗೆ ಹೆಚ್ಚು ಮುಖ್ಯ. ಇದರ ಮಧ್ಯೆ ನಿರ್ದೇಶನವೂ ಸಾಗಬೇಕು. ಮಕ್ಕಳನ್ನು ಬೆಳಿಗ್ಗೆ ಎಬ್ಬಿಸಬೇಕು, ಅವರ ಪರೀಕ್ಷೆಗಳು, ಹೋಮ್‌ವರ್ಕ್‌... ಇದರ ಮಧ್ಯೆ ನಿರ್ದೇಶನ, ಸ್ಟುಡಿಯೊ ಕೆಲಸ ಬಹಳ ಒತ್ತಡ ಎನಿಸುತ್ತದೆ. ಧಾರಾವಾಹಿ ನಿರ್ದೇಶನ ನಿರಂತರ ಪ್ರಕ್ರಿಯೆ. ಸಿನಿಮಾವಾದರೆ, ಇಷ್ಟು ತಿಂಗಳಲ್ಲಿ ಅಥವಾ ವರ್ಷದಲ್ಲಿ ಮುಗಿಯುತ್ತದೆ. ಆದರೆ, ಇದು ಹಾಗಲ್ಲ. ಇವೆಲ್ಲವೂ ಒತ್ತಡಕ್ಕೆ ಕಾರಣವಾಗಿವೆ ಎನ್ನುವ ಕಾರಣಕ್ಕೆ ನಾನು ಮಕ್ಕಳ ಮೇಲೆ ಒತ್ತಡವನ್ನು ಹಾಕುವುದು ಸಲ್ಲ.   

ಮಕ್ಕಳನ್ನು ಬೆಳೆಸುವುದು ಎಂದರೆ, ಯಾರದೋ ಉಪಕಾರಕ್ಕೆ ನಾವು ಮಾಡುತ್ತಿರುವುದಲ್ಲ. ಅದು ನಮ್ಮ ಹೊಣೆಗಾರಿಕೆ. ಹಾಗಿದ್ದಾಗ, ಒತ್ತಡ ಎನ್ನುವ ಪ್ರಶ್ನೆಯೇ ಇಲ್ಲ. ಈ ಮಾನಸಿಕ ಸ್ಥಿತಿ ಇದೊಂದೆ ವಿಷಯಕ್ಕೆ ಸೀಮಿತವಾದುದ್ದಲ್ಲ. ನಿರ್ದೇಶನವನ್ನು ನಾನು ಇಷ್ಟಪಟ್ಟು ಮಾಡುತ್ತೇನೆ. ಅಂತೆಯೇ ಪ್ರತಿಯೊಂದು ಕೆಲಸವೂ. ನಾವು ಯಾರದೋ ಇಚ್ಛೆಗೆ, ಯಾರನ್ನೋ ಮೆಚ್ಚಿಸಲು ಕೆಲಸ ಮಾಡುವುದಕ್ಕೆ ಪ್ರಾರಂಭ ಮಾಡುತ್ತೇವೋ ಆಗ ಒತ್ತಡ ನಮ್ಮನ್ನು ಕಾಡುತ್ತದೆ. ಅದೇ, ನಾವು ಮಾಡುವ ಕೆಲಸವನ್ನು ಇಷ್ಟಪಟ್ಟು, ಆಸ್ಥೆಯಿಂದ ಮಾಡದಾಗ ಆಗ ಅದು ನಮಗೆ ಒತ್ತಡ ಎನಿಸುವುದೇ ಇಲ್ಲ. ಕಿರಿ ಕಿರಿಯೂ ಎನಿಸುವುದಿಲ್ಲ. 

ನಾನು ಎಲ್ಲವನ್ನೂ ತಲೆಗೆ ಹಚ್ಚಿಕೊಳ್ಳುವುದಿಲ್ಲ. ಇದು ನನ್ನ ಸ್ವಭಾವ. ಹಾಗಾಗಿ, ಒತ್ತಡದ ಬಗ್ಗೆಯೂ ಜಾಸ್ತಿ ತಲೆ ಕೆಡಿಸಿಕೊಂಡಿಲ್ಲ. ಒತ್ತಡ ಬಂದರೇನೆ ಅಲ್ಲವೇ ಅದರಿಂದ ಹೊರ ಬರುವುದಕ್ಕೆ ದಾರಿ ಕಾಣುವುದು? ಒತ್ತಡ ಅಥವಾ ಸವಾಲು ಏನೇ ಇರಲಿ, ಅವುಗಳು ನಮ್ಮನ್ನು ಬೆಳೆಸುತ್ತವೆ. ಅದರಿಂದ ಖಿನ್ನರಾಗಬಾರದಷ್ಟೆ. ಇಂತಹ ಒತ್ತಡದಿಂದಲೇ ನಮಗೆ ಹೊಸ ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ನಮ್ಮನ್ನು ಅವು ಎತ್ತರಕ್ಕೆ ಬೆಳೆಸುತ್ತವೆ. 

ಸೆಟ್‌ನಲ್ಲಿ ಇರಬಹುದು ಅಥವಾ ಯಾವ ಕೆಲಸದಲ್ಲಿ ಇರಬಹುದು; ಒತ್ತಡ ಕಾಡಿದ ತಕ್ಷಣ ನಾನು ಆ ಜಾಗದಲ್ಲಿ ಇರುವುದೇ ಇಲ್ಲ. ಒಂದಿಪ್ಪತ್ತು ನಿಮಿಷ ಆ ಜಾಗದಿಂದ ಕಾಣೆ ಆಗಿ ಐಸ್‌ಕ್ರೀಂ ತಿಂದುಬಿಡುತ್ತೇನೆ! ಅತವಾ, ನನಗೆ ಚಾಟ್ಸ್‌ ಅಂದರೆ ಬಹಳ ಇಷ್ಟ. ಅದನ್ನು ತಿನ್ನುತ್ತೇನೆ. ಹೀಗೆ ಒತ್ತಡದ ಸಂದರ್ಭದಲ್ಲಿ ನನಗೆ ಇಷ್ಟವಾದ ತಿಂಡಿಗಳನ್ನು ತಿಂದರೆ ಬಹಳ ಬೇಗ ಅದರಿಂದ ಹೊರಬರಲು ಸಾಧ್ಬವಾಗುತ್ತದೆ.   

ಬರಹ ಇಷ್ಟವಾಯಿತೆ?

 • 14

  Happy
 • 2

  Amused
 • 0

  Sad
 • 3

  Frustrated
 • 1

  Angry

Comments:

0 comments

Write the first review for this !