ರಾಜ್ಯದ ಆರ್ಥಿಕತೆ ಗಮನಾರ್ಹ ವೃದ್ಧಿ

ಶನಿವಾರ, ಏಪ್ರಿಲ್ 20, 2019
32 °C
2011ರ ಬಳಿಕ ಶೇ 132ರಷ್ಟು ಹೆಚ್ಚಳ: ವಿವಿಧ ಸಾಲದ ಮೊತ್ತ ₹ 1.95 ಲಕ್ಷ ಕೋಟಿಗೆ ಏರಿಕೆ

ರಾಜ್ಯದ ಆರ್ಥಿಕತೆ ಗಮನಾರ್ಹ ವೃದ್ಧಿ

Published:
Updated:

ನವದೆಹಲಿ: ಕರ್ನಾಟಕದ ಆರ್ಥಿಕತೆಯು 2011ರಿಂದೀಚೆಗೆ ಶೇ 132ರಷ್ಟು ಹೆಚ್ಚಳಗೊಂಡಿದ್ದು, ಈ ಬೆಳವಣಿಗೆ ದರವು ದಕ್ಷಿಣ ಭಾರತದಲ್ಲಿಯೇ ಗರಿಷ್ಠ ಮಟ್ಟದಲ್ಲಿ ಇದೆ. ಕೈಗಾರಿಕಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿರುವ ರಾಜ್ಯಗಳ ಸಾಲಿನಲ್ಲಿ ಮಾತ್ರ, ಕರ್ನಾಟಕದ ಆರ್ಥಿಕ ವೃದ್ಧಿ ದರ (ಎಸ್‌ಜಿಡಿಪಿ) ಹೆಚ್ಚಳವು ಗುಜರಾತ್‌ ನಂತರದ ಸ್ಥಾನದಲ್ಲಿ ಇದೆ.

ರಾಜ್ಯದ ಆರ್ಥಿಕತೆಯ ಗಾತ್ರವು 2011–12ರಲ್ಲಿ ₹ 6.06 ಲಕ್ಷ ಕೋಟಿಗಳಷ್ಟಿತ್ತು. 2018–19ರಲ್ಲಿ ಇದು ₹ 14.08 ಲಕ್ಷ ಕೋಟಿಗೆ ಏರಿಕೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ ಮತ್ತು ರಾಜ್ಯದ ಬಜೆಟ್‌ ಅಂಕಿ ಅಂಶಗಳಿಂದ ಈ ಸಂಗತಿ ದೃಢಪಡುತ್ತದೆ. 

ಸಾಲ ನೀಡಿಕೆ ಹೆಚ್ಚಳ: ಸಮೃದ್ಧ ಆರ್ಥಿಕತೆ ಮತ್ತು ಸುಸ್ಥಿರ ಉಪಭೋಗದ ಪ್ರತೀಕಗಳಾಗಿರುವ ವೈಯಕ್ತಿಕ ಸಾಲ, ಮನೆ, ಕಾರ್‌ ಖರೀದಿ ಸಾಲ ಮತ್ತು ಗೃಹೋಪಯೋಗಿ ಸಲಕರಣೆಗಳ ಖರೀದಿಗೆ ಬ್ಯಾಂಕ್‌ಗಳು ನೀಡಿರುವ ಸಾಲದ ಪ್ರಮಾಣವೂ ಈ ದಶಕದ ಆರಂಭದಿಂದ ಶೇ 217ರಷ್ಟು ಹೆಚ್ಚಳಗೊಂಡಿದೆ. ಗ್ರಾಹಕರಿಗೆ ನೀಡಿದ ವಿವಿಧ ಸಾಲಗಳ ಮೊತ್ತವು ₹ 61,300 ಕೋಟಿಗಳಿಂದ ₹ 1.95 ಲಕ್ಷ ಕೋಟಿಗೆ ಏರಿಕೆಯಾಗಿದೆ. ವೈಯಕ್ತಿಕ ಸಾಲ ವಲಯದಲ್ಲಿನ ಬೆಳವಣಿಗೆಯು ಗುಜರಾತ್‌ನಲ್ಲಿ ಗರಿಷ್ಠ ಮಟ್ಟದಲ್ಲಿ ಇದೆ. 9 ವರ್ಷಗಳಲ್ಲಿ ಇದು ಶೇ 306ರಷ್ಟು ಏರಿಕೆ ಕಂಡಿದೆ.

ಸಾಮಾಜಿಕ ವಲಯ: ಸಾಮಾಜಿಕ ವಲಯದಲ್ಲಿನ ಸರ್ಕಾರದ ವೆಚ್ಚವು ಶೇ 186ರಷ್ಟು ಏರಿಕೆಯಾಗಿರುವುದು ಕರ್ನಾಟಕದ ಇನ್ನೊಂದು ಹೆಗ್ಗಳಿಕೆಯಾಗಿದೆ. ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ಇದು ಗರಿಷ್ಠ ಪ್ರಮಾಣದಲ್ಲಿ ಇದೆ. ಮನೆ, ಶಿಕ್ಷಣ, ಆರೋಗ್ಯ, ನೈರ್ಮಲ್ಯ, ನಗರಾಭಿವೃದ್ಧಿ ಸೇರಿದಂತೆ ವಿವಿಧ ವಲಯಗಳು ಇದರ ವ್ಯಾಪ್ತಿಗೆ ಬರುತ್ತವೆ.

ಒಂಬತ್ತು ವರ್ಷಗಳಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಮಾಡಿದ ವೆಚ್ಚವು ₹ 32,300 ಕೋಟಿಗಳಿಂದ ₹ 92,300 ಕೋಟಿಗೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿನ ಈ ಕ್ಷೇತ್ರದ ವೆಚ್ಚ ಶೇ 142ರಷ್ಟಿದ್ದು , 2ನೆ ಸ್ಥಾನದಲ್ಲಿ ಇದೆ.ರಾಜ್ಯದಲ್ಲಿ ಕೈಗಾರಿಕಾ ವಲಯದ ಸಾಲದ ಪ್ರಮಾಣವೂ ಉತ್ತಮ (ಶೇ 86) ಪ್ರಗತಿ ಕಂಡಿದೆ. ದಕ್ಷಿಣ ರಾಜ್ಯಗಳ ಪೈಕಿ ತಮಿಳುನಾಡು ರಾಜ್ಯವು ಗಾತ್ರದಲ್ಲಿ ಕರ್ನಾಟಕಕ್ಕಿಂತ ದೊಡ್ಡದಾಗಿದ್ದರೂ, ಪ್ರಸಕ್ತ ದಶಕದಲ್ಲಿನ ಅದರ ಬೆಳವಣಿಗೆ ದರವು ಶೇ 101ರಷ್ಟಿದೆ.

ಆಂಧ್ರಪ್ರದೇಶದ ವೃದ್ಧಿ ದರ ಶೇ 129 ಆಗಿದೆ. ಆದರೆ, ಅದರ ಆರ್ಥಿಕತೆಯ ಗಾತ್ರ ಚಿಕ್ಕದಾಗಿದ್ದು, ತಮಿಳುನಾಡಿನ ಅರ್ಧದಷ್ಟು ಇದೆ.

ಬರಹ ಇಷ್ಟವಾಯಿತೆ?

 • 18

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !