ಬುಧವಾರ, ನವೆಂಬರ್ 13, 2019
22 °C
ಆಧುನಿಕ ಸಮುದ್ರಮಥನದಿಂದ ಉಕ್ಕುವುದು ಅಮೃತವೋ? ಹಾಲಾಹಲವೋ?

ಸಂಪನ್ಮೂಲಕ್ಕಾಗಿ ಸಮುದ್ರ ಮಥನ

Published:
Updated:
Prajavani

ಹಿಂದೂ ಮಹಾಸಾಗರದ ಮಧ್ಯ ಭಾಗದಲ್ಲಿ ದೊಡ್ಡ ಪ್ರಮಾಣದ ಗಣಿಗಾರಿಕೆ ನಡೆಸಲು ಭಾರತ ಈಗ ಸಿದ್ಧತೆ ಮಾಡಿಕೊಂಡಿದೆ. 1982ರಲ್ಲಿ ವಿಶ್ವಸಂಸ್ಥೆಯು ಅಂತರ ರಾಷ್ಟ್ರೀಯ ಸಾಗರ ಕಾನೂನು ರಚಿಸುವಾಗ ಯಾವುದೇ ದೇಶ ತನ್ನ ತೀರದಿಂದ 37 ಕಿಲೊ ಮೀಟರ್ ದೂರದವರೆಗೆ ಸಾಗರದ ಭಾಗವನ್ನು ನೆಲದ ಮುಂದುವರಿಕೆ ಎಂದೇ ಪರಿಗಣಿಸಿಕೊಳ್ಳಬಹುದು ಎಂಬ ಉದಾರ ನೀತಿಯನ್ನು ಸೇರಿಸಿತ್ತು.

ಎಲ್ಲ ದೇಶಗಳ ಹೆಚ್ಚಿನ ಮೀನುಗಾರಿಕೆ ನಡೆಯುವುದು ಈ ವಲಯದಲ್ಲೇ. ಇದರ ಜೊತೆಗೆ 370 ಕಿಲೊ ಮೀಟರ್ ದೂರದವರೆಗೆ ಸಾಗರದ ವಿಶೇಷ ಆರ್ಥಿಕ ವಲಯ ಎಂದು ಕಾನೂನು ತಂದಿತು. ಭಾರತ ಈ ವಲಯವನ್ನು ವಾಣಿಜ್ಯಕ್ಕೆ, ತೈಲ ಸಂಪನ್ಮೂಲಗಳ ಗಣಿಗಾರಿಕೆಗೆ, ಹಡಗು ಸಾಗಾಣಿಕೆಗೆ ಧಾರಾಳವಾಗಿ ಬಳಸಿಕೊಂಡಿದೆ. ಸುಮಾರು 7,500 ಕಿಲೊ ಮೀಟರ್ ತೀರ ಪ್ರದೇಶವಿರುವ ಭಾರತಕ್ಕೆ 20 ಲಕ್ಷ ಚದರ ಕಿಲೊ ಮೀಟರ್ ವಿಶೇಷ ಆರ್ಥಿಕ ವಲಯವಿದೆ. ಈ ವಲಯವನ್ನು ಕಲಷಿತಗೊಳಿಸದೆ ಬಳಸಿಕೊಳ್ಳುವುದು ದೊಡ್ಡ ಸವಾಲು.

ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಹಿಂದೂ ಮಹಾಸಾಗರದಲ್ಲಿನ ಮಧ್ಯ ಭಾಗದಲ್ಲಿ ಸಾಗರದ ತಳದಲ್ಲಿ ರೂಪುಗೊಂಡಿರುವ ಬಹುಲೋಹದ ಉಂಡೆಗಳನ್ನು ಗಣಿಗಾರಿಕೆ ಮಾಡುವ ಹಕ್ಕನ್ನು ಪಡೆದುಕೊಂಡಿದೆ. ಈ ಹಕ್ಕನ್ನು ನೀಡಿರುವುದು ಅಂತರರಾಷ್ಟ್ರೀಯ ಸಾಗರಸ್ತರ ಪ್ರಾಧಿಕಾರ (ಇಂಟರ್‌ನ್ಯಾಷನಲ್ ಸೀಬೆಡ್ ಅಥಾರಿಟಿ). ಇದು ಗಮನಿಸಿರುವಂತೆ, ಭಾರತಕ್ಕೆ ಉಳಿದ ದೇಶಗಳಿಗಿಂತ ಈ ಭಾಗದಲ್ಲಿ ಗಣಿಗಾರಿಕೆ ಮಾಡಲು ಹೆಚ್ಚಿನ ಅನುಭವವಿದೆ. ಇಷ್ಟು ಆಳಸಾಗರದಲ್ಲಿ ಗಣಿಗಾರಿಕೆ ಮಾಡುವುದು ಎಂದರೆ ಭಾರಿ ಯಂತ್ರೋಪಕರಣಗಳೂ ಬೇಕು, ಭಾರಿ ಹಡಗುಗಳೂ ಬೇಕು. ಇದರ ವೆಚ್ಚವನ್ನೆಲ್ಲ ಗಮನಿಸಿ ಸುಮಾರು ₹ 8,000 ಕೋಟಿ ಆಗಬಹುದೆಂದು ಲೆಕ್ಕ ಹಾಕಿದೆ. ಸರ್ಕಾರ ಈ ಯೋಜನೆಗೆ ಹಸಿರು ನಿಶಾನೆ ತೋರಿಸಿದೆ. ಇಷ್ಟೊಂದು ಆಸಕ್ತಿಗೆ ಕಾರಣವೇನು? ಆ ಆಳ ಭಾಗದಲ್ಲಿ, ಅಂದರೆ ಸಾಗರದ 6,000 ಮೀಟರ್ ಆಳದಲ್ಲಿ ಆಲೂಗಡ್ಡೆ ಗಾತ್ರದ, ಬೆಟ್ಟದಂತೆ ಬಿದ್ದಿರುವ ಬಹು ಲೋಹದ ಉಂಡೆಗಳಿವೆ. ಇದರಲ್ಲಿ ನಿಕ್ಕಲ್, ತಾಮ್ರ, ಕೊಬಾಲ್ಟ್, ಮ್ಯಾಂಗನೀಸ್ ಲೋಹಗಳು ಅಡಗಿವೆ. ಇಷ್ಟೊಂದು ಸಂಪತ್ತು ಒಂದೇ ಕಡೆ ಭೂಮಿಯಲ್ಲಿ ಎಲ್ಲೂ ಲಭ್ಯವಿಲ್ಲ.

ನಿಸರ್ಗ ಒಂದೇ ಉಂಡೆಯಲ್ಲಿ ಹಲವು ಲೋಹಗಳನ್ನು ಇಟ್ಟಿರುವಾಗ ಹಡಗಿನಿಂದ ನೇರವಾಗಿ ಹೀರಿಕೆ ಪಂಪು ಇಳಿಯಬಿಟ್ಟು ಉಂಡೆಗಳನ್ನೆಲ್ಲ ಹೀರಿ, ಹಡಗಿಗೆ ಸಾಗಿಸಿ, ಅಲ್ಲಿ ಕುಟ್ಟಿ ಪುಡಿಮಾಡಿ ಲೋಹಗಳನ್ನು ಪ್ರತ್ಯೇಕಿಸಬಹುದು. ಇದು ಸುಲಭ, ಲಾಭದಾಯಕ ಕೂಡ. ಭಾರತಕ್ಕೆ 2002ರಲ್ಲೇ 1.5 ಲಕ್ಷ ಚದರ ಕಿಲೊ ಮೀಟರ್ ಸಾಗರದ ಭಾಗವನ್ನು ಹಿಂದೂ ಮಹಾಸಾಗರದ ಮಧ್ಯದಲ್ಲಿ ಗಣಿಗಾರಿಕೆ ಮಾಡಲು 15 ವರ್ಷಗಳ ಕಾಲಮಿತಿ ವಿಧಿಸಿ ಪರವಾನಗಿಯನ್ನು ಸಾಗರಸ್ತರ ಪ್ರಾಧಿಕಾರ ನೀಡಿದೆ. ಭಾರತ ಅದರ ಹಿಂದೆಯೇ ಸಮೀಕ್ಷೆ ಮಾಡಿ ಅದರ ಅರ್ಧ, ಅಂದರೆ 75,000 ಚದರ ಕಿಲೊ ಮೀಟರ್ ಸಾಕು ಎಂದೂ, ಸದ್ಯದಲ್ಲಿ 18,000 ಚದರ ಕಿಲೊ ಮೀಟರ್ ಪ್ರದೇಶದಲ್ಲಿ ಗಣಿಗಾರಿಕೆ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದೆ. ಈ ಅವಧಿಯನ್ನು 2022ರವರೆಗೆ ವಿಸ್ತರಿಸಿ ಎಂದು ಕೂಡ ಚೌಕಾಸಿ ಮಾಡಿದೆ.

ಭಾರತ ಮಾಡಿರುವ ಅಂದಾಜಿನಂತೆ ಈಗ ಆಯ್ಕೆ ಮಾಡಿರುವ ಸಾಗರದ ತಳದಲ್ಲಿ 38 ಕೋಟಿ ಟನ್ನು ಬಹುಲೋಹದ ಉಂಡೆಗಳಿವೆ. ಇದರಲ್ಲಿ ನಿಕ್ಕಲ್ ಪ್ರಮಾಣ 47 ಲಕ್ಷ ಟನ್ನು, ತಾಮ್ರ 42.9 ಲಕ್ಷ ಟನ್ನು, ಕೊಬಾಲ್ಟ್ 5.5 ಲಕ್ಷ ಟನ್ನು. ಇನ್ನು ಉಳಿದದ್ದೆಲ್ಲ ಮ್ಯಾಂಗನೀಸ್ ಸಂಪನ್ಮೂಲ. ಈ ಒಂದೊಂದು ಲೋಹವೂ ಇಂದಿನ ಎಲೆಕ್ಟ್ರಾನಿಕ್ ಸಾಧನಗಳಲ್ಲಿ, ಮಿಶ್ರ ಲೋಹಗಳಲ್ಲಿ ಮತ್ತು ಬ್ಯಾಟರಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಭಾರತದಲ್ಲಿ ಮ್ಯಾಂಗನೀಸ್ ಬಿಟ್ಟರೆ ಇಲ್ಲಿ ತಿಳಿಸಿರುವ ಬೇರೆ ಲೋಹಗಳೆಲ್ಲವನ್ನೂ ಆಮದು ಮೂಲಕವೇ ಪೂರೈಸಿಕೊಳ್ಳಬೇಕು. ಕೊಬಾಲ್ಟನ್ನು 40 ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆಯೆಂದರೆ, ಇವುಗಳ ಪ್ರಾಮುಖ್ಯ ಎಷ್ಟೆಂದು ಊಹಿಸಿಕೊಳ್ಳಬಹುದು. ಇದೇ ಅಕ್ಟೋಬರ್‌ ನಲ್ಲಿ ಮೊದಲು 900 ಮೀಟರ್ ಆಳದಲ್ಲಿ ಆನಂತರ 5,500 ಮೀಟರ್ ಆಳದ ಸಾಗರದಲ್ಲಿ ಗಣಿಗಾರಿಕೆ ಮಾಡುವ ಪ್ರಾಯೋಗಿಕ ಪರೀಕ್ಷೆ ಕೂಡ ನಡೆಯಲಿದೆ. ವಾಸ್ತವವಾಗಿ 5,500 ಮೀಟರ್ ಆಳಕ್ಕೆ ಕಾರನ್ನಿಳಿಸಿದರೆ ಅದು ನಜ್ಜುಗುಜ್ಜಾಗುವಷ್ಟು ಒತ್ತಡ ಅಲ್ಲಿ ಬೀಳುತ್ತದೆ.

ಒಂದನ್ನು ಪಡೆಯಲು ಮುಂದಾದರೆ ಇನ್ನೊಂದನ್ನು ಕಳೆದುಕೊಳ್ಳಲು ಸಿದ್ಧವಾಗಬೇಕು ಎನ್ನುವುದನ್ನು ಆಳಸಾಗರದ ಗಣಿಗಾರಿಕೆ ಮತ್ತೊಮ್ಮೆ ನೆನಪಿಸುತ್ತದೆ. ಎಲ್ಲಕ್ಕಿಂತ ಮೊದಲು ಎದುರಾಗುವುದು ಸಾಗರ ತಳದ ಮಾಲಿನ್ಯ. ಇದನ್ನು ನಿವಾರಿಸಲು ಸಾಧ್ಯವೇ ಇಲ್ಲ.
ಅಂತರರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಒಕ್ಕೂಟ (ಐ.ಯು.ಸಿ.ಎನ್.) ಸಾಗರ ಗಣಿಗಾರಿಕೆಗೆ ಹೊರಟಿರುವ ಎಲ್ಲ ದೇಶಗಳಿಗೂ ಈ ಎಚ್ಚರಿಕೆಯನ್ನು ಕಳಿಸಿದೆ. ಈ ಆಳ ಭಾಗದಲ್ಲಿ ಆಕ್ಸಿಜನ್ ಕೊರತೆ ಇದ್ದರೂ, ಬೆಳಕು ತೂರದಿದ್ದರೂ ಆ ಪರಿಸರದಲ್ಲಿ ವಾಸಿಸುವ ಸಾಗರ ಜೀವಿಗಳಿಗೆ ಈ ಬಗೆಯ ಗಣಿಗಾರಿಕೆ ಅವುಗಳ ನೈಸರ್ಗಿಕ ಆವಾಸವನ್ನೇ ಕಿತ್ತುಕೊಂಡು ಬಿಡುತ್ತದೆ. ಅಲ್ಲದೆ ಈ ಆಳದಲ್ಲಿ ಜೀವಿವೈವಿಧ್ಯ ಹೇಗಿರಬಹುದು ಎಂಬುದನ್ನು ಇನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ. ಅದಕ್ಕೆ ಮೊದಲೇ ಗಣಿಗಾರಿಕೆ ಪ್ರಾರಂಭಿಸಿದರೆ ಅಂಥ ಜೀವಿಗಳು ಬೆಳಕಿಗೆ ಬರುವುದಕ್ಕೆ ಮೊದಲೇ ಕಣ್ಮರೆಯಾಗುತ್ತವೆ ಎಂಬ ಅಪಾಯವನ್ನು ಪರಿಸರ ತಜ್ಞರು ಬೊಟ್ಟುಮಾಡಿ ತೋರಿಸಿದ್ದಾರೆ.

ಲೋಹದ ಉಂಡೆಗಳನ್ನು ಎತ್ತುವಾಗ ಬಗ್ಗಡದ ನೀರು, ವಿಶೇಷವಾಗಿ ಜಲ ಮತ್ತು ಆಹಾರವನ್ನು ಪ್ರತ್ಯೇಕವಾಗಿ ಸೋಸುವ ಜೀವಿಗಳ ಒಡಲು ತುಂಬುತ್ತದೆ ಎನ್ನುವುದು ಅಪಾಯದ ಇನ್ನೊಂದು ಮಗ್ಗುಲು. ಒಂದು ಟನ್ನು ಉಂಡೆ ಎತ್ತಿದರೆ ಒಂದು ಟನ್ನು ಬಗ್ಗಡ ಮೇಲೇರುತ್ತದೆ. ಅಷ್ಟೇ ಅಲ್ಲ, ಅಲೆಗಳು ಬಗ್ಗಡದ ನೀರನ್ನು ತೀರಗಳತ್ತ ಒಯ್ದರೆ ದೊಡ್ಡ ಪೆಟ್ಟಾಗುವುದು ಮತ್ಸ್ಯೋದ್ಯಮಕ್ಕೆ. ಅಲ್ಲದೆ ದೀರ್ಘಕಾಲ ಹಡಗುಗಳು ಅಲ್ಲೇ ಮೊಕ್ಕಾಂ ಮಾಡುವುದರಿಂದ ತೈಲ ಮಾಲಿನ್ಯ ತಪ್ಪದೇ ಕಾಡುತ್ತದೆ. ಅಂತರರಾಷ್ಟ್ರೀಯ ಸಾಗರಸ್ತರ ಪ್ರಾಧಿಕಾರವು ಗಣಿಗಾರಿಕೆಗೆ ಸಮ್ಮತಿಸುವ ಮೊದಲೇ ಏಕೆ ಇದಕ್ಕೆ ಕರಾರು ಹಾಕಿಲ್ಲ? ಇದಕ್ಕೆ ಉತ್ತರವಿಲ್ಲ.

ನೈಋತ್ಯ ಪೆಸಿಫಿಕ್ ಸಾಗರದಲ್ಲಿರುವ ಸ್ವತಂತ್ರ ರಾಷ್ಟ್ರ ಪಪುವಾ ನ್ಯೂಗಿನಿ, ಸಾಗರ ಗಣಿಗಾರಿಕೆಗೆ ನಾಂದಿ ಹಾಕಿತು. ಅಲ್ಲಿನ ಆರ್ಥಿಕ ವಲಯದಲ್ಲೇ ಕೇವಲ ಒಂದೂವರೆ ಕಿಲೊ ಮೀಟರ್ ಆಳದಲ್ಲಿ ಚಿನ್ನ ಹಾಗೂ ತಾಮ್ರದ ಬಹು ದೊಡ್ಡ ನಿಕ್ಷೇಪವನ್ನು 2011ರಲ್ಲೇ ಗಣಿಗಾರಿಕೆ ಮಾಡಲು ಹೊರಟಿತು. ಅಲ್ಲಿನ ದ್ವೀಪ ಗಳಲ್ಲಿದ್ದ 30,000 ಮಂದಿ ಮೂಲನಿವಾಸಿಗಳು ಕಂಗೆಟ್ಟರು. ಗಣಿಗಾರಿಕೆಯ ಪರಿಣಾಮ ಏನೆಂದು ತಿಳಿಯದೆ ಅವರ ಸಾಮಾಜಿಕ ಎಳೆಗಳೇ ಕಿತ್ತುಹೋಗುತ್ತಿವೆ ಎಂದು ಭಾವಿಸಿದ ಆ ದೇಶದ ಅಟಾರ್ನಿ ಜನರಲ್, ಸರ್ಕಾರದ ಮೇಲೆಯೇ ತಿರುಗಿಬಿದ್ದಿದ್ದರು. ಅಂತಿಮವಾಗಿ ಗಣಿಗಾರಿಕೆಯೇ ನಿಂತುಹೋಯಿತು.

ಚೀನಾ ಇತ್ತೀಚೆಗೆ ಎಲ್ಲ ರಂಗಗಳಲ್ಲೂ ದಾಪುಗಾಲು ಹಾಕುತ್ತ ಜಗತ್ತನ್ನೇ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಹೊರಟಿರುವುದು ಸ್ಪಷ್ಟವಾಗಿಯೇ ಇದೆ. ಪೂರ್ವ ಪೆಸಿಫಿಕ್ ಸಾಗರದಲ್ಲಿ 72,000 ಚದರ ಕಿಲೊ ಮೀಟರ್ ಸಾಗರ ಪ್ರದೇಶದಲ್ಲಿ ಬಹುಲೋಹದ ಉಂಡೆಗಳನ್ನು ಗಣಿಗಾರಿಕೆ ಮಾಡಲು ಅನುಮತಿ ಪಡೆದಿದೆ. ಹಾಗೆಯೇ ರಷ್ಯಾ, ಜರ್ಮನಿ, ಫ್ರಾನ್ಸ್, ಪೋರ್ಚುಗಲ್, ಕೊರಿಯಾ, ಬ್ರೆಜಿಲ್ ದೇಶಗಳು ಸ್ಪರ್ಧೆಗಿಳಿದಂತೆ ಅಟ್ಲಾಂಟಿಕ್ ಸಾಗರದ ಸಮಭಾಜಕ ವೃತ್ತದಿಂದ ತೊಡಗಿ ಉತ್ತರ ಧ್ರುವದವರೆಗೆ ಸಾಗರ ತಳವನ್ನೆಲ್ಲ ಶೋಧಿಸಿ, ಭಾರಿ ಖನಿಜ ಸಂಪನ್ಮೂಲ ಪತ್ತೆ ಹಚ್ಚಿ ತಮ್ಮ ಹಕ್ಕನ್ನು ಸ್ಥಾಪಿಸಲು ಹೊರಟಿವೆ. ಆಧುನಿಕ ಸಮುದ್ರಮಥನದಿಂದ ಬಹುಶಃ ಅಮೃತಕ್ಕಿಂತ ಹಾಲಾಹಲವೇ ಹೆಚ್ಚಾಗುತ್ತದೇನೋ.

ಪ್ರತಿಕ್ರಿಯಿಸಿ (+)