ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ: ಪರಿಸರ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ

Published 17 ಮೇ 2023, 19:35 IST
Last Updated 17 ಮೇ 2023, 19:35 IST
ಅಕ್ಷರ ಗಾತ್ರ

ಯು.ಟಿ. ಆಯಿಶ ಫರ್ಝಾನ

ಯುಪಿಎಸ್‌ಸಿ -ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪರಿಸರ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ದೇಶದ ವಿವಿಧ ರಾಜ್ಯಗಳಲ್ಲಿರುವ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದೆ.  ಹಾಗೆಯೇ, ಅನನ್ಯ ಜೈವಿಕ ಸಂಪನ್ಮೂಲಗಳನ್ನು ಹೊಂದಿರುವ ಪ್ರದೇಶಗಳ ಸಂರಕ್ಷಣೆಗೂ ಮುಂದಾಗಿದೆ.

ಹಿಮಾಚಲ ಪ್ರದೇಶ ಸೇರಿದಂತೆ 13 ರಾಜ್ಯಗಳಲ್ಲಿ 92 ಪರಿಸರ ಸೂಕ್ಷ್ಮ ವಲಯಗಳು(Eco Sensitive Zone) ಮತ್ತು ಎರಡು ಪರಿಸರ ಸೂಕ್ಷ್ಮ ಪ್ರದೇಶಗಳನ್ನು(Eco Sensitive Area) ಗುರುತಿಸಿ ಅಧಿಸೂಚನೆ ಹೊರಡಿಸಲಾಗಿದೆ. ಈ ಕುರಿತು ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಅಶ್ವಿನಿ ಚೌಬೆ ಅವರು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ, ’ಸಂರಕ್ಷಿತ ಪ್ರದೇಶಗಳಲ್ಲಿ ಜೀವವೈವಿಧ್ಯ ನಿರ್ವಹಣೆ ಮತ್ತು ಸಂರಕ್ಷಣೆಯ ಸಲುವಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಸಂರಕ್ಷಿತ ಪ್ರದೇಶಗಳ ಸುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯಗಳೆಂದು ಅಧಿಸೂಚಿಸಿದೆ’ ಎಂದು ತಿಳಿಸಿದ್ದಾರೆ.

ಜೀವ ಭೌಗೋಳಿಕ ವಲಯಗಳು: ಭಾರತದ 10 ಜೀವ ಭೌಗೋಳಿಕ ವಲಯಗಳು ಈ ಕೆಳಕಂಡಂತಿದೆ.

1. ಹೊರ ಹಿಮಾಲಯ 

ಇದು ಟಿಬೆಟ್ ಪ್ರಸ್ತಭೂಮಿ, ಲಡಾಕ್ ಮತ್ತು ಲಾಹುಲ್ ಸ್ಪಿತಿ ಕಣಿವೆ ಒಳಗೊಂಡಂತೆ ಭಾರತದ ಭೂಪ್ರದೇಶದ ಶೇ 5.7 ರಷ್ಟು ಪ್ರದೇಶವನ್ನು ಒಳಗೊಂಡಿದೆ. ಈ ವಲಯವು ಆಲ್‌ಪೈನ್ಸ್‌ ಸ್ಟೆಪೀಸ್(Alpine Stepp's) ಸಸ್ಯವರ್ಗದಿಂದ ಕೂಡಿದೆ. ಹಿಮ ಚಿರತೆ ಮತ್ತು ಕಪ್ಪು ಕತ್ತಿನ ಕೊಕ್ಕರೆಯಂತಹ ಅಪರೂಪದ ಜೀವಿಗಳು ಇಲ್ಲಿ ಕಂಡುಬರುತ್ತವೆ. ಈ ವಲಯ ಶೀತಭರಿತ ಸೂಕ್ಷ್ಮ ಪರಿಸರ ವ್ಯವಸ್ಥೆ ಹೊಂದಿದೆ.

2. ಹಿಮಾಲಯ ಶ್ರೇಣಿಗಳು

ಭಾರತದ ಭೂಪ್ರದೇಶದ ಶೇ 7.2 ರಷ್ಟು ಹಿಮಾಲಯದ ಪರ್ವತ ಶ್ರೇಣಿಗಳು ವ್ಯಾಪಿಸಿವೆ. ವಾಯವ್ಯದಿಂದ ಈಶಾನ್ಯ ಕಡೆಗೆ ಸಾಗುವ ಪೂರ್ಣ ಪರ್ವತಗಳನ್ನು ಒಳಗೊಂಡಿದೆ. ಆಲ್ಫೈನ್ ಹಾಗೂ ಉಪ ಆಲ್ಫೈನ್ ಕಾಡುಗಳ ಹುಲ್ಲುಗಾವಲುಗಳು ಹಾಗೂ ತೇವ ಮಿಶ್ರಿತ ಎಲೆ ಉದುರಿಸುವ ಅರಣ್ಯಗಳನ್ನು ಹೊಂದಿದೆ. ಇಲ್ಲಿನ ಅಪರೂಪದ ಪ್ರಭೇದಗಳಿಂದರೆ ಹಂಗೂಲ್ ಮತ್ತು ಕಸ್ತೂರಿ ಜಿಂಕೆ.

3. ಮರುಭೂಮಿ ಪ್ರದೇಶ 

ದೇಶದ ಭೂಪ್ರದೇಶದ ಶೇ 6.7ರಷ್ಟು ಮರುಭೂಮಿ ಪ್ರದೇಶವಿದೆ. ರಾಜಸ್ಥಾನದ ಮರಳು ಮರುಭೂಮಿ ಹಾಗೂ ಗುಜರಾತಿನ ಉಪ್ಪಿನ ಮರುಭೂಮಿ( ರನ್‌ ಆಫ್ ಕಚ್ )ಗಳಿವೆ. ತೋಳ, ಮರುಭೂಮಿಯ ಬೆಕ್ಕು ಮತ್ತು ಗ್ರೇಟ್‌ ಇಂಡಿಯನ್ ಬಸ್ಟರ್ಡ್ ಮುಂತಾದ ಅಳಿವಿನಂಚಿನ ಪ್ರಭೇದಗಳಿವೆ.

4. ಅರೆಶುಷ್ಕ ಪ್ರದೇಶ

ಅರಾವಳಿ ಬೆಟ್ಟಗಳನ್ನು ಒಳಗೊಂಡು ಮರುಭೂಮಿ ಹಾಗೂ ದಕ್ಷಿಣ ಪ್ರಸ್ತಭೂಮಿ ನಡುವಿನ ಪ್ರದೇಶವೇ ಶುಷ್ಕ ಪ್ರದೇಶ. ಇದು ಭೂಪ್ರದೇಶದ ಶೇ 15.6 ರಷ್ಟಿದೆ. ಅನೇಕ ಕೃತಕ ಹಾಗು ನೈಸರ್ಗಿಕ ಸರೋವರಗಳು ಮತ್ತು ಜೌಗು ಪ್ರದೇಶಗಳನ್ನು ಹೊಂದಿದೆ. ಇಲ್ಲಿನ ಹುಲ್ಲುಗಾವಲು ಪ್ರದೇಶಗಳು ಅನೇಕ ವನ್ಯಜೀವಿಗಳಿಗೆ ಆಶ್ರಯ ನೀಡಿವೆ. ತೋಳ, ಸಿಂಹ, ಚಿರತೆ, ಕ್ಯಾರಕಲ್ ಮತ್ತು ಗುಳ್ಳೇನರಿ ಮುಂತಾದವು.

5. ಪಶ್ಚಿಮ ಘಟ್ಟ ಶ್ರೇಣಿಗಳು

ಗುಜರಾತ್‌ನ ತಪತಿ ನದಿಯ ದಕ್ಷಿಣ ಭಾಗದಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಪಶ್ಚಿಮ ಕರಾವಳಿ ತೀರ ಪ್ರದೇಶಕ್ಕೆ ಸಮಾನಾಂತರವಾಗಿ ಹಬ್ಬಿರುವುದು. ಇದು ಭೂ ವಿಸ್ತೀರ್ಣದ ಶೇ. 5.8ರಷ್ಟಿದೆ.

6. ದಕ್ಷಿಣ ಪ್ರಸ್ತಭೂಮಿ

ಭೂಪ್ರದೇಶದ ಶೇ 42ರಷ್ಟು ದಕ್ಷಿಣ ಪ್ರಸ್ತಭೂಮಿ ಇದೆ. ಈ ಭಾಗದಲ್ಲಿರುವ ಹೆಚ್ಚಿನ ಪ್ರಮಾಣದ ಎಲೆ ಉದುರಿಸುವ ಕಾಡುಗಳಿವೆ. ಚಿರತೆ, ಸಾಂಬಾರ ಜಿಂಕೆ, ನೀಲ್ ಗಾಯ್ ಮತ್ತು ಚೌಸಿಂಗ ಇತ್ಯಾದಿ ವನ್ಯ ಜೀವಿಗಳು ಹೇರಳವಾಗಿವೆ. ಜಿಂಕೆ, ಗೌರ್ ಮತ್ತು ಕೆಸರು ಜಿಂಕೆ ಮುಂತಾದವು ತೇವ ಪ್ರದೇಶದಲ್ಲಿ ಕಂಡು ಬರುತ್ತವೆ.

7. ಗಂಗಾ ಮೈದಾನ

ದೇಶದ ಒಟ್ಟು ಭೂಪ್ರದೇಶದ ಶೇ 11ರಷ್ಟು ಒಳಗೊಂಡಿದೆ. ಪ್ರಮುಖ ಪ್ರಾಣಿಗಳಾದ ಘೇಂಡಾಮೃಗ, ಆನೆ, ಎಮ್ಮೆ, ಬೊಗಳುವ ಜಿಂಕೆ(Barking Deer) ಕೆಸರು ಜಿಂಕೆ ಮತ್ತು ಚಿಕ್ಕ ಜಾತಿಯ ಜಿಂಕೆಗಳು ಇಲ್ಲಿ ಕಂಡು ಬರುತ್ತವೆ.

8. ಈಶಾನ್ಯ ವಲಯ

ದೇಶದ ವಿಸ್ತೀರ್ಣದ ಶೇ 5.2 ರಷ್ಟಿದೆ. ಇಂಡೊ- ಮಲಯನ್ ಹಾಗೂ ಇಂಡೊ- ಚೀನಾ ಜೀವಿ ಭೌಗೋಳಿಕ ಪ್ರದೇಶಗಳ ನಡುವಿನ ಸ್ಥಿತ್ಯಂತರ ವಲಯವಾಗಿದೆ. ಆದ್ದರಿಂದ ಈ ಪ್ರದೇಶವನ್ನು ಜೀವಿ ಭೌಗೋಳಿಕ ಪ್ರದೇಶಗಳ ಹೆಬ್ಬಾಗಿಲು ಎನ್ನುವರು.

9. ಕರಾವಳಿ ತೀರ ಪ್ರದೇಶ

ಇದು ಭಾರತದ ಭೂ ವಿಸ್ತೀರ್ಣದ ಶೇ 2.5 ರಷ್ಟಿದೆ. ಮರಳು ಬೀಚ್‌ಗಳು ಮತ್ತು ಮ್ಯಾಂಗ್ರೋವ್ ಕಾಡುಗಳಿಂದ ಕೂಡಿದೆ. ಕರಾವಳಿಯ ಉದ್ದ 6100 ಕಿಲೋಮೀಟರ್ ಎಂದು ಗುರುತಿಸಲಾಗಿದೆ.

10. ದ್ವೀಪಗಳು

ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು ಭಾರತದ ಭೂಪ್ರದೇಶದ ಶೇ 0.3ರಷ್ಟಿದೆ. ಲಕ್ಷದ್ವೀಪಗಳು ಹವಳದ ದಿಬ್ಬಗಳ ಲಗೂನ್ ವ್ಯವಸ್ಥೆಯಿಂದ ಕೂಡಿದೆ.

ಭಾರತದ ಜೀವ ವೈವಿಧ್ಯದ ಸೂಕ್ಷ್ಮ ಪ್ರದೇಶಗಳು

1. ಹಿಮಾಲಯ 

ಇದು ಭಾರತದ ಪೂರ್ವ ಹಿಮಾಲಯ ಪ್ರದೇಶದ ಜೊತೆಗೆ ಪಾಕಿಸ್ತಾನ, ಟಿಬೆಟ್, ಭೂತಾನ್, ಚೀನಾ ಮತ್ತು ಮ್ಯಾನ್ಮಾರ್‌ ಪ್ರದೇಶಗಳನ್ನು ಒಳಗೊಂಡಿದೆ.

2. ಇಂಡೊ- ಬರ್ಮಾ 

ಇದು ಈಶಾನ್ಯ ಭಾರತದ ಅಂಡಮಾನ್ ದ್ವೀಪಗಳ ಜೊತೆಗೆ  ಮ್ಯಾನ್ಮಾರ್, ಥಾಯ್ಲೆಂಡ್‌, ವಿಯೆಟ್ನಾಮ್ ಲಾವೋಸ್, ಕಾಂಬೋಡಿಯಾ ಮತ್ತು ದಕ್ಷಿಣ ಚೀನಾದ ಪ್ರದೇಶಗಳನ್ನು ಒಳಗೊಂಡಿದೆ.

3. ಸುಂಡಾಲ್ಯಾಂಡ್ 

ನಿಕೋಬಾರ್ ಗುಂಪಿನ ದ್ವೀಪಗಳನ್ನು ಒಳಗೊಂಡಿದೆ. ಜೊತೆಗೆ ಇಂಡೋನೇಷ್ಯಾ, ಮಲೇಶಿಯಾ, ಸಿಂಗಾಪುರ, ಬ್ರುನೈ ಮತ್ತು ಫಿಲಿಪ್ಪೈನ್ಸ್ ಗಳ ಪ್ರದೇಶಗಳನ್ನು ಒಳಗೊಂಡಿದೆ.

4. ಪಶ್ಚಿಮ ಘಟ್ಟ ಮತ್ತು ಶ್ರೀಲಂಕ 

ಇದು ಪೂರ್ವ ಘಟ್ಟಗಳು, ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾವನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT