ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆಗೆ ಇರಲಿ ಸಿದ್ಧತೆ ಜತೆ ಕೌಶಲ

Last Updated 6 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ನಾವು ಯೋಜಿಸಿಕೊಂಡ ಯಾವುದೇ ಕೆಲಸ ಸುಸೂತ್ರವಾಗಿ ನಡೆದು ಫಲಪ್ರದವಾಗಬೇಕಾದರೆ ಸಂಕಲ್ಪದ ಜೊತೆಗೆ ಸಿದ್ಧತೆ, ಪರಿಶ್ರಮ, ದೃಢ ಮನಸ್ಸು, ಧೈರ್ಯ ಮತ್ತು ಕೌಶಲಗಳೂ ಮುಖ್ಯವಾಗಿ ಇರಬೇಕು. ಪರೀಕ್ಷೆಗಾಗಿ ತಯಾರಿ ಎಂಬುದು ಕೊನೆ ಗಳಿಗೆಯಲ್ಲಿ ಮಾಡಬೇಕಾದ ಕೆಲಸವಲ್ಲ, ಅದು ಶೈಕ್ಷಣಿಕ ವರ್ಷದ ಮೊದಲಿನಿಂದಲೇ ಆರಂಭವಾಗಬೇಕು. ಪಠ್ಯವಿಷಯಗಳನ್ನು ಅರ್ಥಮಾಡಿಕೊಳ್ಳಲು, ಮನನ ಮಾಡಿ ನೆನಪಿಟ್ಟುಕೊಂಡು ಪರೀಕ್ಷೆಯಲ್ಲಿ ಪ್ರಸ್ತುತಪಡಿಸಲು ಸಾಕಷ್ಟು ಸಮಯಾವಕಾಶ ಬೇಕು. ಓದುವ ವಿಧಾನಗಳಲ್ಲಿ ಪ್ರಯೋಗಗಳನ್ನು ಮಾಡಿ, ನಮಗೆ ಸೂಕ್ತವಾದುದನ್ನು ಆಯ್ದುಕೊಳ್ಳಲು, ನಮಗೆ ನೆನಪಿಟ್ಟುಕೊಳ್ಳಲು ಅನುಕೂಲವಾಗುವಂತಹ ಟಿಪ್ಪಣಿಗಳನ್ನು ತಯಾರಿಸಿಕೊಳ್ಳಲು, ಒಮ್ಮೆ ಅರ್ಥಮಾಡಿಕೊಂಡ ವಿಷಯವನ್ನು ಅಭ್ಯಾಸದ ಮೂಲಕ ಹೃದ್ಗತ ಮಾಡಿಕೊಳ್ಳಲು ಸಮಯ ಬೇಕು.

ಪರೀಕ್ಷೆಗೆ ಸಿದ್ಧವಾಗುವ ಸಮಯ ಕೇವಲ ಉತ್ತಮ ಶ್ರೇಣಿಗಳಿಸುವುದಕ್ಕಾಗಿಯಷ್ಟೇ ಅಲ್ಲದೆ, ಆ ಸಮಯವನ್ನು ಶಿಸ್ತು, ಶ್ರದ್ಧೆಗಳನ್ನು ರೂಢಿಸಿಕೊಳ್ಳುವ ಕಾಲವಾಗಿಯೂ ಕಾಣಬಹುದು. ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ಸಮಯದಲ್ಲಿ ಕೆಲವು ಜೀವನ ಮೌಲ್ಯಗಳನ್ನು ಅನ್ವೇಷಿಸಿಕೊಂಡು ಅದನ್ನು ಅಳವಡಿಸಿಕೊಳ್ಳುವುದೂ ಸಾಧ್ಯವಿದೆ, ಹಾಗೆಯೇ ನಮ್ಮಲ್ಲಿನ ಸಾಮರ್ಥ್ಯ, ಸಂಪನ್ಮೂಲಗಳನ್ನು ಕಂಡುಕೊಂಡು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದನ್ನೂ ಕಲಿಯಲು ಸರಿಯಾದ ಸಮಯ.

ಕಲಿಕೆಯ ಮೆಟ್ಟಿಲುಗಳನ್ನು ಒಂದೊಂದಾಗಿ ಏರುವಾಗಿನ ಹಾದಿಯಲ್ಲುಂಟಾಗುವ ಏಳು –ಬೀಳುಗಳನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನು ತಿಳಿದುಕೊಳ್ಳುವ ಅವಕಾಶವನ್ನು ಪರೀಕ್ಷಾ ಸಿದ್ಧತೆಯ ಕಾಲ ವಿದ್ಯಾರ್ಥಿ ಹಾಗೂ ಪೋಷಕರು ಇಬ್ಬರಿಗೂ ಒದಗಿಸುತ್ತದೆ. ಬದುಕಿನ ಬಗ್ಗೆ ಎಷ್ಟೆಲ್ಲಾ ಅರಿಯಲು, ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಲು, ಕೆಲವೊಂದನ್ನು ಸಮಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲು, ಮತ್ತೆ ಕೆಲವು ಪೂರಕವಲ್ಲದ ಅಭ್ಯಾಸಗಳನ್ನು ತ್ಯಜಿಸಲು, ಅನೇಕ ಮೌಲಿಕ ಜೀವನಕೌಶಲಗಳನ್ನು ಕಲಿಯುವುದರ ಜತೆಗೆ ಪರೀಕ್ಷೆಯನ್ನು ಒತ್ತಡವಿಲ್ಲದೇ ಎದುರಿಸಲು ನೆರವಾಗುತ್ತದೆ. ಆ ನಿಟ್ಟಿನಲ್ಲಿ ಸಹಕಾರಿಯಾಗುವಂತಹ ಕೆಲವು ವಿಚಾರಗಳು ಇಲ್ಲಿವೆ:

1. ಎಲ್ಲ ಒತ್ತಡವೂ ಕೆಟ್ಟದ್ದೇನಲ್ಲ, ಒತ್ತಡ ಒಳ್ಳೆಯದೂ ಆಗಿರುತ್ತದೆ. ‘ಪರೀಕ್ಷೆ ಹತ್ತಿರವಾಗುತ್ತಿದೆ, ಅದಕ್ಕಾಗಿ ಓದಿ ತಯಾರಾಗಬೇಕು’ ಎನ್ನುವ ಸಣ್ಣ ಪ್ರಮಾಣದ ಆತಂಕ ಒಳ್ಳೆಯದೇ. ಇಂತಹ ಸಕಾರಾತ್ಮಕ ಆತಂಕವಿಲ್ಲದಿದ್ದರೆ ಮಕ್ಕಳಲ್ಲಿ ಓದಿನ ಕಡೆಗೆ ಗಮನ ಕಡಿಮೆಯಾಗುತ್ತದೆ. ಪೋಷಕರು ‘ನೀನು ಸರಿಯಾಗಿ ಓದಿಕೊಳ್ಳಬೇಕು’ ಎಂದು ಎಷ್ಟು ಹೇಳಿದರೂ ಕೇಳದ ಮಕ್ಕಳು ತಾವೇ ‘ಓದದೇ ಇದ್ದರೆ ಏನಾಗುತ್ತದೆ’ ಎನ್ನುವುದನ್ನು ಮನಸ್ಸಿಗೆ ತಂದುಕೊಂಡಾಗ ಓದಿನ ಬಗ್ಗೆ ಜಾಗೃತರಾಗುತ್ತಾರೆ. ಹಾಗಾಗಿ ಒತ್ತಡ ವಿದ್ಯಾರ್ಥಿಯ ಮನಸ್ಸಿನೊಳಗಿನದಾಗಿರಬೇಕೇ ಹೊರತು ಹೊರಗಿನಿಂದ ಬಂದದ್ದಾಗಿರಬಾರದು.

2. ದಿನವೂ ನಿಯಮಿತ ಅಭ್ಯಾಸ ಮಾಡಲು ಮಕ್ಕಳಿಗೆ ತಮ್ಮ ಜೀವನಶೈಲಿಯಲ್ಲಿ ಒಂದು ಸ್ಥಿರತೆಯ ಅವಶ್ಯಕತೆಯಿರುತ್ತದೆ. ದಿನಚರಿ ಏರುಪೇರಾಗದಂತೆ, ಓದುವ ಸಮಯ ಯಾವ ರೀತಿಯಲ್ಲೂ ಕಳೆದುಹೋಗದಂತೆ ಜಾಗರೂಕರಾಗಿರುವ ಮತ್ತು ಎಷ್ಟೇ ಕಷ್ಟವಾದರೂ ಒಂದು ವೇಳಾಪಟ್ಟಿಗೆ ಬದ್ಧರಾಗಿರುವ ನಿಷ್ಠೆ ಬೆಳೆಸಿಕೊಳ್ಳುವುದು ಅವಶ್ಯಕ. ಪರೀಕ್ಷೆ ಸಮಯದಲ್ಲಿ ಮಕ್ಕಳಿಗೆ ಅನಾರೋಗ್ಯವಿರಬಹುದು ಅಥವಾ ಕುಟುಂಬದಲ್ಲಿನ ಕೆಲವು ಪ್ರತಿಕೂಲ ಸಂದರ್ಭಗಳಿರಬಹುದು ಅವುಗಳನ್ನೇ ನೆಪವಾಗಿಸಿಕೊಳ್ಳದಂತೆ ನೋಡಬೇಕಿದೆ.

3. ಪ್ರಯೋಜನವನ್ನರಿಯದೆ ಯಾವ ಜೀವಿಯೂ ಯಾವ ಕೆಲಸವನ್ನೂ ಮಾಡುವುದಿಲ್ಲ, ಅಂದ ಮೇಲೆ ಮಕ್ಕಳು ಮಾತ್ರ ತಮ್ಮ ಓದಿನ ಪ್ರಯೋಜನವನ್ನರಿಯದೆ ಸುಮ್ಮನೆ ಓದಿ ಪರೀಕ್ಷೆ ಬರೆಯಬೇಕೆನ್ನುವುದು ನ್ಯಾಯವೇ? ವಿದ್ಯೆಯಿಂದ ಮನುಷ್ಯನ ಜೀವನ ಹೇಗೆ ಉದಾತ್ತತೆಯನ್ನು ಪಡೆಯುತ್ತದೆ ಎನ್ನುವುದಷ್ಟೇ ಅಲ್ಲದೆ ತಾವು ಕಲಿಯುತ್ತಿರುವ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ಭಾಷೆಗಳು ಹೇಗೆ ಮನುಷ್ಯನ ಏಳಿಗೆಗೆ, ನೆಮ್ಮದಿಗೆ ಕಾರಣವಾಗಿದೆ ಎನ್ನುವುದನ್ನು ತಿಳಿಹೇಳಬೇಕಿದೆ.

4. ಯಾವ ಕೆಲಸವೇ ಆಗಲಿ ಪ್ರೀತಿಯಿಂದ ಮಾಡಿದಾಗ ಅದರಿಂದ ದೊರಕುವ ಸಂತೃಪ್ತಿ, ಸಮಾಧಾನ ಹೊರಪ್ರಪಂಚದ ಅಳತೆಗೋಲುಗಳಾದ ಸೋಲು–ಗೆಲುವುಗಳನ್ನು ಮೀರಿದ್ದು ಎಂದು ಮನವರಿಕೆಯಾದರೆ ಮಕ್ಕಳು ಕಲಿಕೆಯನ್ನು ಒಂದು ಸಂಭ್ರಮವಾಗಿಸಿಕೊಳ್ಳುತ್ತಾರೆ. ಪಠ್ಯೇತರ ಚಟುವಟಿಕೆಗಳು ಕಲಿಕೆಯ ಆನಂದವನ್ನು ಹೆಚ್ಚಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಶೈಕ್ಷಣಿಕ ವರ್ಷದ ಆರಂಭದಿಂದಲೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ನಡುವೆ ಸಮತೋಲನ ಕಂಡುಕೊಳ್ಳುವುದು ಪರೀಕ್ಷೆಯ ಸಮಯದಲ್ಲಿ ಉಪಯೋಗಕ್ಕೆ ಬರುತ್ತದೆ.

5. ಸಹಪಾಠಿಗಳೊಂದಿಗಿನ ಸೌಹಾರ್ದ ಸಂಬಂಧವೂ ಮಕ್ಕಳನ್ನು ಓದಿನೆಡೆಗೆ ಪ್ರೇರೇಪಿಸುತ್ತದೆ. ಗುಂಪು ಕಲಿಕೆಯಿಂದ ಮಕ್ಕಳ ಆಲೋಚನಾ ಸಾಮರ್ಥ್ಯ, ಸಂವಹನ ಶಕ್ತಿ ಬೆಳೆಯುತ್ತದೆ. ಮೊದಲಿನಿಂದಲೂ ಸಹಪಾಠಿಗಳ ಒಡನಾಟದಲ್ಲಿ ಕಲಿಯುವ ಮಕ್ಕಳು ಓದಿನ ಕಷ್ಟ–ಸುಖಗಳನ್ನು ಪರಸ್ಪರ ಹಂಚಿಕೊಂಡ ಕಾರಣದಿಂದ ಪರೀಕ್ಷೆಯ ಸಮಯದಲ್ಲಿ ಧೈರ್ಯದಿಂದ ಇರುತ್ತಾರೆ.

6. ಮಕ್ಕಳ ಪ್ರತಿಯೊಂದು ನಡೆ, ನುಡಿ, ನಿರ್ಧಾರ ಎಲ್ಲದರಲ್ಲೂ ಪೋಷಕರು ಅತಿಕ್ರಮಣ ಪ್ರವೇಶ ಮಾಡಿದರೆ, ಓದುವ ಕೋಣೆಯಲ್ಲಿ ನಿರಂತರ ಅವರನ್ನು ಕಾವಲು ಕಾಯುವುದು ಮಕ್ಕಳಿಗೆ ತಮ್ಮ ಮೇಲೇ ಅಪನಂಬಿಕೆ ಉಂಟಾಗಲು ಕಾರಣವಾದೀತು. ಅವರವರ ನಡೆಗೆ, ಸಾಫಲ್ಯ-ವೈಫಲ್ಯಗಳಿಗೆ ಅವರನ್ನೇ ಹೊಣೆಗಾರರಾಗಿಸುವುದನ್ನು ಪರೀಕ್ಷಾಕಾಲದಿಂದಲೇ ಆರಂಭಿಸುವುದೊಳಿತು.

7. ಓದದೇ ಪರೀಕ್ಷೆಯಲ್ಲಿ ಫೇಲಾಗುವುದು ಅವಮಾನ, ದುಃಖಕ್ಕೆ ಕಾರಣವಾಗುತ್ತದೆ ಎಂಬ ನಕಾರಾತ್ಮಕ ಮಾತುಗಳನ್ನಾಡದೆ ಒಂದು ಪರೀಕ್ಷೆ ಪಾಸಾದಾಗ ತೆರೆದುಕೊಳ್ಳುವ ಮುಂದಿನ ಶೈಕ್ಷಣಿಕ ಹಾದಿಯ ಅನೇಕ ಅವಕಾಶಗಳ ಬಗ್ಗೆ ಮಾತನಾಡಿದಾಗ ಮಕ್ಕಳ ಬುದ್ಧಿ, ಮನಸ್ಸು ವಿಸ್ತಾರಗೊಳ್ಳುತ್ತದೆ. ಸಣ್ಣಪುಟ್ಟ ಸೋಲು ನಿರಾಶೆಗಳಿಗೆ ಎದೆಗುಂದದೆ ಅವನ್ನು ಮೀರಿ ಗುರಿಸಾಧನೆಯ ಕಡೆಗೆ ಲಕ್ಷ್ಯ ಕೊಟ್ಟಾಗ ಮಕ್ಕಳ ಮನೋಬಲ ವೃದ್ಧಿಸುತ್ತದೆ.

8. ಪರೀಕ್ಷೆಗೆ ಎಷ್ಟೇ ಚೆನ್ನಾಗಿ ತಯಾರಾಗಿದ್ದರೂ ಪಾಸಾಗುವುದು/ಫೇಲಾಗುವುದು, ಪಡೆಯುವ ಅಂಕಗಳು, ಮುಂದಿನ ಶೈಕ್ಷಣಿಕ/ಔದ್ಯೋಗಿಕ ಅವಕಾಶಗಳೂ ಎಲ್ಲವೂ ಅನಿಶ್ಚಿತತೆಯಿಂದ ಕೂಡಿರುತ್ತವೆ; ಇದು ಜೀವನದ ಸಹಜ ಲಕ್ಷಣ. ಅನಿಶ್ಚಿತತೆ ನಮ್ಮನ್ನು ನಿಷ್ಕ್ರಿಯರನ್ನಾಗಿಸದಂತೆ ಎಚ್ಚರವಹಿಸುತ್ತಾ ನಮ್ಮ ಕೈಲಿರುವ ಕೆಲಸವನ್ನು ಚೆನ್ನಾಗಿ ಮಾಡಿ, ಕೈಮೀರಿದ್ದನ್ನೂ ಶಾಂತವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದು ಒಂದು ಅತ್ಯಂತ ಮೌಲಿಕ ಜೀವನಕೌಶಲವನ್ನು ಕರಗತಮಾಡಿಕೊಂಡಂತೆಯೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT