ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಎಸ್‌ಡಿಎಎ ಹುದ್ದೆಗಳ ನೇರ ನೇಮಕಾತಿ

ಗ್ರಾ.ಪಂ ನೌಕರರಿಗೆ ಬಡ್ತಿ ಭಾಗ್ಯ
Last Updated 6 ಸೆಪ್ಟೆಂಬರ್ 2021, 11:18 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್‌–2) ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ (ಎಸ್‌ಡಿಎಎ) ಹುದ್ದೆಗಳಿಗೆ ಗ್ರಾಮ ಪಂಚಾಯಿತಿ ನೌಕರರ ವೃಂದದಿಂದ ನೇರ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೋವಿಡ್‌ ಕಾರಣದಿಂದ ನೇರ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿತ್ತು. ಇದೀಗ ತಡೆಯನ್ನು ತೆರವುಗೊಳಿಸಲಾಗಿದೆ. ಆ ಮೂಲಕ, ಹಲವು ವರ್ಷಗಳಿಂದ ಪದೋನ್ನತಿಗೆ ಕಾಯುತ್ತಿರುವ ಗ್ರಾಮ ಪಂಚಾಯಿತಿಯ ವಿವಿಧ ವೃಂದಗಳ ಸಿಬ್ಬಂದಿಗೆ ಅನುಕೂಲ ಆಗಲಿದೆ.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್‌–2) ಮತ್ತು ಎಸ್‌ಡಿಎಎ ಹುದ್ದೆಗಳಿಗೆ ಬಿಲ್‌ ಕಲೆಕ್ಟರ್‌, ಅಕೌಂಟೆಂಟ್‌, ಕ್ಲರ್ಕ್‌, ಟೈಪಿಸ್ಟ್‌, ಕ್ಲರ್ಕ್‌ ಕಂ ಡೇಟಾ ಎಂಟ್ರಿ ಆಪರೇಟರ್‌ ವೃಂದದ ಹುದ್ದೆಗಳಿಂದ ನೇರ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸುವಂತೆ ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ (ಆರ್‌ಡಿಪಿಆರ್‌) ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ.

ಈ ರೀತಿಯ ನೇರ ನೇಮಕಾತಿಗೆ ಅವಕಾಶ ಕಲ್ಪಿಸಲು ‘ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) (ವೃಂದ ಮತ್ತು ನೇಮಕಾತಿ) ನಿಯಮಗಳು– 2008’ಕ್ಕೆ ತಿದ್ದುಪಡಿ ತರಬೇಕಾಗಿದೆ. ಆದರೆ, ತಿದ್ದುಪಡಿಗೆ ಹೆಚ್ಚಿನ ಕಾಲಾವಕಾಶ ಬೇಕಾಗಿರುವುದರಿಂದ ಅದರ ಬದಲು ಕಾರ್ಯಕಾರಿ ಆದೇಶದ ಮೂಲಕ ನೇಮಕಾತಿ ವಿಧಾನವನ್ನು ರೂಪಿಸಲಾಗಿದೆ.

ನೇಮಕಾತಿ ಹೇಗೆ?: ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ ಆರು ವರ್ಷ ಕೆಲಸ ಮಾಡಿದ ಸಿಬ್ಬಂದಿ ನೇರ ನೇಮಕಾತಿಗೆ ಅರ್ಹತೆ ಪಡೆಯಲಿದ್ದಾರೆ. ಈ ರೀತಿ ಬಡ್ತಿಗೆ ಅರ್ಹತೆ ಪಡೆದವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ 100 ಅಂಕಗಳ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್‌–2) ವೃಂದದ ಶೇ 70ರಷ್ಟು ಹುದ್ದೆಗಳನ್ನು 3:2 ಅನುಪಾತದಲ್ಲಿ ನೇಮಕಾತಿಗೆ ಅವಕಾಶ ನೀಡಲಾಗಿದೆ. ಅಂದರೆ, ಮೊದಲ ಮೂರು ಹುದ್ದೆಗಳನ್ನು ಬಿಲ್‌ ಕಲೆಕ್ಟರ್‌ ವೃಂದದ ನೌಕರರಿಂದ, ನಂತರ ಎರಡು ಹುದ್ದೆಗಳನ್ನು ಅಕೌಂಟೆಂಟ್‌, ಕ್ಲರ್ಕ್‌, ಟೈಪಿಸ್ಟ್‌, ಕಂ ಡೇಟಾ ಎಂಟ್ರಿ ಆಪರೇಟರ್‌ ವೃಂದದಿಂದ ನೇಮಕಾತಿ ಮಾಡಿಕೊಳ್ಳಬೇಕು.

ಸಿಬ್ಬಂದಿಯ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ, ಮೀಸಲಾತಿ ನಿಯಮ ಅನ್ವಯ ಆಯ್ಕೆ ಪಟ್ಟಿ ಪ್ರಕಟಿಸಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಉಳಿದ ಶೇ 30ರಷ್ಟು ಖಾಲಿ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದದ ಶೇ 50ರಷ್ಟು ಹುದ್ದೆಗಳನ್ನು 1:1 ಅನುಪಾತದಲ್ಲಿ ನೇಮಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಅಂದರೆ, ಮೊದಲ ಖಾಲಿ ಹುದ್ದೆಯನ್ನು ಬಿಲ್‌ ಕಲೆಕ್ಟರ್‌ ವೃಂದಿಂದ, ಎರಡನೇ ಹುದ್ದೆಯನ್ನು ಅಕೌಂಟೆಂಟ್‌, ಕ್ಲರ್ಕ್‌, ಟೈಪಿಸ್ಟ್‌, ಕಂ ಡೇಟಾ ಎಂಟ್ರಿ ಆಪರೇಟರ್‌ ವೃಂದದಿಂದ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಉಳಿದ ಶೇ 50ರಷ್ಟು ಖಾಲಿ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT