ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ವಿದೇಶದಲ್ಲಿ ಫಾರ್ಮಾ ವೃತ್ತಿಗೆ ಸೇರುವುದು ಹೇಗೆ?

Published 2 ಜುಲೈ 2023, 9:24 IST
Last Updated 2 ಜುಲೈ 2023, 9:24 IST
ಅಕ್ಷರ ಗಾತ್ರ

1. ನಾನು ಮೂರನೇ ವರ್ಷದ ಫಾರ್ಮಾ. ಡಿ (ಡಾಕ್ಟರೇಟ್) ಕೋರ್ಸ್‌ ಮಾಡುತ್ತಿದ್ದೇನೆ. ಮುಂದೆ ಬ್ರಿಟನ್‌/ಅಮೆರಿಕ ದೇಶಗಳಲ್ಲಿ ವೃತ್ತಿಯನ್ನು ಅರಸಬೇಕು. ಹಾಗಾಗಿ, ಅಲ್ಲಿ ಪರವಾನಗಿ ಪಡೆಯಲು ಮಾಡಬೇಕಾದ ಅರ್ಹತಾ ಪರೀಕ್ಷೆಯ ವಿವರವನ್ನು ತಿಳಿಸಿ.

ಚರಣ್, ಊರು ತಿಳಿಸಿಲ್ಲ.

ನಮಗಿರುವ ಮಾಹಿತಿಯಂತೆ ಫಾರ್ಮಾ. ಡಿ ಕೋರ್ಸ್‌ ಮಾಡಿದ ನಂತರ ಅಮೆರಿಕ ದೇಶದಲ್ಲಿ ವೃತ್ತಿಯನ್ನು ಅರಸಬೇಕಾದರೆ, ಮೊದಲು ಇಂಗ್ಲಿಷ್ ಭಾಷಾ ಪರಿಣತಿ (The Test of English Language as a Foreign Language – ಟಿಒಇಎಫ್‌ಎಲ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ನಂತರ ಸ್ಥಳೀಯ ಅರ್ಹತಾ ಪರೀಕ್ಷೆ ( FPGE)ಯಲ್ಲಿ ಉತ್ತೀಣರಾಗಬೇಕು. ಇದಾದ ನಂತರ,  ನಾರ್ತ್‌ ಅಮೆರಿಕ ಫಾರ್ಮಾಸಿಸ್ಟ್ ಲೈಸೆನ್ಸ್ (ಎನ್‌ಎಪಿಎಲ್‌ಇ) ಎಕ್ಸಾಮ್‌ ಮೂಲಕ ಫಾರ್ಮಸಿ ಲೈಸೆನ್ಸ್ ಪಡೆಯಬೇಕು. ಬ್ರಿಟನ್‌ ದೇಶದಲ್ಲಿಯೂ ಸ್ಥಳೀಯ ಅರ್ಹತಾ ಪರೀಕ್ಷೆ ಮತ್ತು ಪ್ರಾಯೋಗಿಕ ತರಬೇತಿಯ ನಂತರ ಲೈಸೆನ್ಸ್ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://nabp.pharmacy/programs/foreign-pharmacy/


2. ನಾನು ಪಿಯುಸಿ ಓದುತ್ತಿದ್ದು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಸಂಸ್ಥೆಯಲ್ಲಿ ಬಿ.ಎಸ್ಸಿ/ಎಂ.ಎಸ್ಸಿ (ಸಂಶೋಧನೆ) ಕೋರ್ಸ್ ಮಾಡಲು ಬಯಸಿದ್ದೇನೆ. ಮಾರ್ಗದರ್ಶನ ನೀಡಿ.

-ರಿಷಿತ, ಬೆಂಗಳೂರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ನಾಲ್ಕು ವರ್ಷದ ಬಿ.ಎಸ್ಸಿ (ಸಂಶೋಧನೆ) ಕೋರ್ಸ್ ಮಾಡಲು ಜೆಇಇ (ಮೇನ್ಸ್ ಅಥವಾ ಅಡ್ವಾನ್ಸ್), ನೀಟ್, ಕೆವಿಪಿವೈ ಅಥವಾ ಐಐಎಸ್‌ಇಆರ್ ಪ್ರವೇಶ ಪರೀಕ್ಷೆಯನ್ನು ಬರೆಯಬೇಕು. ಈ ಪರೀಕ್ಷೆಗಳ ಫಲಿತಾಂಶದ ಆಧಾರದ ಮೇಲೆ ಸೀಟ್ ಹಂಚಿಕೆಯಾಗುತ್ತದೆ. ಈ ಕೋರ್ಸ್ ಅನ್ನು ಜೀವವಿಜ್ಞಾನ, ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ, ಪರಿಸರ ವಿಜ್ಞಾನ ಮುಂತಾದ ವಿಷಯಗಳಲ್ಲಿ ಮಾಡಬಹುದು. ಬಿ.ಎಸ್ಸಿ (ಸಂಶೋಧನೆ) ಕೋರ್ಸ್‌ ಅನ್ನು ಇನ್ನಿತರ ಪ್ರತಿಷ್ಠಿತ ಸಂಸ್ಥೆಗಳಲ್ಲಿಯೂ ಮಾಡಬಹುದು ಎನ್ನುವುದು ನಿಮ್ಮ ಗಮನದಲ್ಲಿರಲಿ. ಬಿ.ಎಸ್ಸಿ ನಂತರ ಹೆಚ್ಚಿನ ತಜ್ಞತೆಗಾಗಿ, ನೇರವಾಗಿ ಪಿಎಚ್.ಡಿ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://bs-ug.iisc.ac.in/info_brochure.html

2. ನಾನು ಬಿಎ (ಇಂಗ್ಲಿಷ್) ಪೂರ್ಣಗೊಳಿಸಿದೆ. ಬಿ.ಇಡಿ ಕೋರ್ಸ್‌ ಕಲಿಯುತ್ತಿದ್ದೆ. ಇಂಗ್ಲಿಷ್ ಕಷ್ಟವೆಂದು ಆ ಕೋರ್ಸ್‌ ಅನ್ನು ಅರ್ಧಕ್ಕೇ ನಿಲ್ಲಿಸಿದ್ದೇನೆ. ಮನೆಯಲ್ಲಿ, ಎಂ.ಎ (ಕನ್ನಡ) ಮಾಡು ಎನ್ನುತ್ತಿದ್ದಾರೆ. ನನಗೆ ರಂಗಭೂಮಿ ಕಲೆಯ ಬಗ್ಗೆ ಹೆಚ್ಚು ಆಸಕ್ತಿ ಇದೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಗೊಂದಲವಿದೆ. ಪರಿಹಾರ ತಿಳಿಸಿ.

-ಹೆಸರು, ಊರು ತಿಳಿಸಿಲ್ಲ.

ನಿಖರವಾದ ವೃತ್ತಿಯೋಜನೆಯಿಲ್ಲದೆ ವಿಭಿನ್ನವಾದ ಕೋರ್ಸ್‌ಗಳನ್ನು ಮಾಡಿದರೆ ಇಂತಹ ಗೊಂದಲಗಳಾಗುವುದು ಸಹಜ. ಈಗಲೂ ಕಾಲ ಮಿಂಚಿಲ್ಲ; ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ ಮತ್ತು ಅಭಿರುಚಿ ಯಾವ ಕ್ಷೇತ್ರದಲ್ಲಿದೆಯೆಂದು ಗುರುತಿಸಿ, ವೃತ್ತಿಯೋಜನೆಯನ್ನು ಮಾಡಿ, ಅದಕ್ಕೆ ಅನುಗುಣವಾಗಿ ಮುಂದಿನ ಕೋರ್ಸ್ ಆಯ್ಕೆಯಿರಲಿ. ಮೇಲ್ನೋಟಕ್ಕೆ ಬಿ.ಇಡಿ ಕೋರ್ಸ್ ಮಾಡುವುದರಿಂದ ವೃತ್ತಿಯನ್ನು ಅರಸಲು ಅನುಕೂಲವಾಗಬಹುದು.

ಔಪಚಾರಿಕ ಶಿಕ್ಷಣದ ಜೊತೆಗೆ ರಂಗಭೂಮಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂವಹನ, ಅಂತರ್-ವೈಯಕ್ತಿಕ ನೈಪುಣ್ಯ, ನಾಯಕತ್ವದ ಕೌಶಲ ಮುಂತಾದ ವೃತ್ತಿಗೆ ಪೂರಕವಾದ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಂಡು ವೃತ್ತಿಯಲ್ಲೂ, ವೈಯಕ್ತಿಕ ಬದುಕಿನಲ್ಲೂ ಸಂತೃಪ್ತಿಯನ್ನು ಗಳಿಸಬಹುದು. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

4. ನಾನು ಡಿಪ್ಲೊಮಾ (ಮೆಕ್ಯಾನಿಕಲ್) ಮಾಡುತ್ತಿದ್ದು, ಮುಂದೆ ಎಂಜಿನಿಯರಿಂಗ್ ಮಾಡುವ ಆಸೆಯಿದೆ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಸೇರುವುದು ಹೇಗೆ? ದಯವಿಟ್ಟು ತಿಳಿಸಿ.

-ಹೆಸರು, ಊರು ತಿಳಿಸಿಲ್ಲ.

ಮೂರು ವರ್ಷದ ಡಿಪ್ಲೊಮಾ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯೋಜಿಸುವ ಡಿಪ್ಲೊಮಾ ಸಿಇಟಿ ಪ್ರವೇಶ ಪರೀಕ್ಷೆಯ ಮೂಲಕ, 2ನೇ ವರ್ಷದ ಯಾವುದೇ ಎಂಜಿನಿಯರಿಂಗ್ ಕೋರ್ಸ್‌ಗೆ ಸೇರಬಹುದು. ಹೆಚ್ಚಿನ ಮಾಹಿತಿಗಾಗಿ, ಕಳೆದ ವರ್ಷದ ಈ ಸುತ್ತೋಲೆಯನ್ನು ಗಮನಿಸಿ:https://cetonline.karnataka.gov.in/keawebentry456/dcet22/20220924153843kannada.pdf

5. ನಾನು ಡಿಪ್ಲೊಮಾ (ಸಿವಿಲ್) ಮಾಡಿದ್ದೇನೆ. ಮುಂದೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಮನೆಯಲ್ಲಿ ಬಡತನವಿದೆ.  ದಯವಿಟ್ಟು ಉದ್ಯೋಗ ಹುಡುಕುವ ಮಾರ್ಗವನ್ನು ತಿಳಿಸಿ.

-ಹೆಸರು, ಊರು ತಿಳಿಸಿಲ್ಲ.

ನಿಮ್ಮ ಕಷ್ಟ ಅರ್ಥವಾಗುತ್ತದೆ. ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಅಭಿವೃದ್ಧಿ ಶೇ 6ರಷ್ಟಿದ್ದು, ಅಂದಾಜುಗಳ ಪ್ರಕಾರ ಮೂಲಸೌಕರ್ಯಗಳ ಕ್ಷೇತ್ರದ ಅಭಿವೃದ್ಧಿ ಸುಮಾರು ಶೇ 8 ರಷ್ಟಿದೆ. ಈ ಕ್ಷೇತ್ರದಲ್ಲಿ ಹೆದ್ದಾರಿಗಳು, ಸೇತುವೆಗಳ ನಿರ್ಮಾಣ, ನೀರಾವರಿ ಯೋಜನೆಗಳು, ರೈಲು, ಮೆಟ್ರೊ ಸೇರಿದಂತೆ ಸಾರ್ವಜನಿಕ ಸಾರಿಗೆ, ವಸತಿ ಸೌಕರ್ಯಗಳು, ಉದ್ದಿಮೆಗಳು ಸೇರಿದಂತೆ ಅನೇಕ ಅಭಿವೃದ್ಧಿಯ ಪಥದಲ್ಲಿರುವ ವಿಭಾಗಗಳಿವೆ. ಹಾಗಾಗಿ, ಅಭಿವೃದ್ಧಿಯ ಮುಂಚೂಣಿಯಲ್ಲಿರುವ ಕ್ಷೇತ್ರಕ್ಕೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆಯ ನಂತರವೂ ಉದ್ಯೋಗ ಸಿಗದಿರಲು ಕಾರಣಗಳೇನು ಎಂದು ವಿಶ್ಲೇಷಿಸಬೇಕು.

ಪ್ರಮುಖವಾಗಿ, ನಿಮ್ಮ ಬಯೋಡೇಟಾ ನಿಮ್ಮಲ್ಲಿರುವ ವಿಶಿಷ್ಟ ಅರ್ಹತೆ, ಕೌಶಲ ಮತ್ತು ಸಾಮರ್ಥ್ಯಗಳನ್ನು ಪ್ರತಿಬಿಂಬಿಸುವುದೇ? ನೀವು ಈವರೆಗೆ ಮಾಡಿರುವ ಪ್ರಯತ್ನಗಳಿಂದ ಸಂದರ್ಶನಗಳು ಸಿಗುತ್ತಿದೆಯೇ? ಅಥವಾ, ಸಂದರ್ಶನದಲ್ಲಿ ಸಮಸ್ಯೆಯಾಗುತ್ತಿದೆಯೇ? ಈ ಎಲ್ಲಾ ಸಾಧ್ಯತೆಗಳನ್ನು ಕೂಲಂಕಶವಾಗಿ ಪರಿಶೀಲಿಸಿ.

ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಮೂಲ ಎಂಜಿನಿಯರಿಂಗ್ ಕೌಶಲಗಳಾದ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ, ಕಂಪ್ಯೂಟರ್ ಕೌಶಲಗಳು, ಸೃಜನಶೀಲತೆ, ವಿಶ್ಲೇಷಣಾತ್ಮಕ ಕೌಶಲ, ನಾಯಕತ್ವ ಮತ್ತು ನಿರ್ವಹಣಾ ಕೌಶಲಗಳು, ಕಲಿಯುವ ಉತ್ಸಾಹ, ವಿವರಗಳಿಗೆ ಗಮನ, ಸಮಯದ ನಿರ್ವಹಣೆ, ಸಂಘಟನಾ ಸಾಮರ್ಥ್ಯ ಮುಂತಾದವುಗಳನ್ನು ಬೆಳೆಸಿಕೊಳ್ಳಬೇಕು. ಸಂದರ್ಶನವನ್ನು ಯಶಸ್ವಿಯಾಗಿ ಎದುರಿಸುವ ಕಾರ್ಯತಂತ್ರದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=T_z3ngIeyWk

6. ನಾನು ಎಂಬಿಎ (ಅರ್ಥಶಾಸ್ತ್ರ) ಮಾಡಬಹುದೇ? ಇದರಿಂದ ಅನುಕೂಲವಾಗುತ್ತದೆಯೇ? ಈ ಕೋರ್ಸ್‌ ಯಾವ ಸರ್ಕಾರಿ ಕಾಲೇಜುಗಳಲ್ಲಿವೆ. ತಿಳಿಸಿ.

-ಹೆಸರು, ಊರು ತಿಳಿಸಿಲ್ಲ.

ನಮ್ಮ ದೇಶದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಎಂಬಿಎ ಕಾಲೇಜುಗಳು/ವಿಶ್ವವಿದ್ಯಾಲಯಗಳಿವೆ. ಸಾಮಾನ್ಯವಾಗಿ ಎಲ್ಲಾ ಎಂಬಿಎ ಕೋರ್ಸ್‌ಗಳಲ್ಲಿ ಮಾರ್ಕೆಟಿಂಗ್, ಹಣಕಾಸು, ಮಾನವ ಸಂಪನ್ಮೂಲ, ಉತ್ಪಾದನೆ, ಲಾಜಿಸ್ಟಿಕ್ಸ್ ಮುಂತಾದ ವಿಭಾಗಗಳಿದ್ದು, ಈ ಎಲ್ಲಾ ಪಠ್ಯಕ್ರಮಗಳಲ್ಲಿ ಅರ್ಥಶಾಸ್ತ್ರ ಒಂದು ಪ್ರಮುಖ ಕಲಿಕೆಯ ವಿಷಯವಾಗಿರುತ್ತದೆ. ಆದರೂ, ಎಂಬಿಎ (ಅರ್ಥಶಾಸ್ತ್ರ) ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಮ್ಯಾನೇಜ್‌ಮೆಂಟ್, ಅಮಿಟಿ ವಿಶ್ವವಿದ್ಯಾಲಯ ಮುಂತಾದ ಕೆಲವೇ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮಾತ್ರ ಲಭ್ಯ. ಹಾಗಾಗಿ, ಸಾರ್ವಜನಿಕ ಅರ್ಥಶಾಸ್ತ್ರ, ಅಂತರಾಷ್ಟ್ರೀಯ ಅರ್ಥಶಾಸ್ತ್ರ, ಅನ್ವಯಿಕ ಅರ್ಥಶಾಸ್ತ್ರ, ಸಾರ್ವಜನಿಕ ವಲಯದ ಉದ್ಯಮಗಳು ಮುಂತಾದ ಕ್ಷೇತ್ರಗಳಲ್ಲಿ ವಿಶೇಷವಾದ ಆಸಕ್ತಿಯಿದ್ದು, ನಿರ್ದಿಷ್ಟ ವೃತ್ತಿಯನ್ನು ಅನುಸರಿಸುವ ಯೋಜನೆಯಿದ್ದರೆ, ಈ ಕೋರ್ಸ್ ಮಾಡಿ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

7. ನನಗೆ ನೀಟ್ ಮತ್ತು ಸಿಇಟಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳು ಬಂದಿಲ್ಲ. ಜೀವವಿಜ್ಞಾನದಲ್ಲಿ ಆಸಕ್ತಿಯಿದೆ. ಯಾವ ವಿಷಯದಲ್ಲಿ ಬಿ.ಎಸ್ಸಿ ಕೋರ್ಸ್‌ ಮಾಡಬಹುದು?

-ಹೆಸರು, ಊರು ತಿಳಿಸಿಲ್ಲ.

ಬಿ.ಎಸ್ಸಿ ಕೋರ್ಸ್ ಅನ್ನು ಬಯಾಲಜಿ, ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಬಯೋಇನ್‌ಫರ್‌ಮ್ಯಾಟಿಕ್ಸ್, ಮೈಕ್ರೊಬಯಾಲಜಿ, ಕ್ಲಿನಿಕಲ್ ರಿಸರ್ಚ್, ಜೆನೆಟಿಕ್ಸ್, ಸೈಕಾಲಜಿ, ಜೆರಿಯಾಟ್ರಿಕ್ ಕೇರ್, ಫೊರೆನ್ಸಿಕ್ ಸೈನ್ಸ್ ಮುಂತಾದ ವಿಷಯಗಳಲ್ಲಿ ಮಾಡಬಹುದು. ಆಸಕ್ತಿಯಿದ್ದರೆ, ಬಿ.ಎಸ್ಸಿ (ಪ್ಯಾರ ಮೆಡಿಕಲ್) ಮತ್ತು ಬಿ.ಫಾರ್ಮಾ ಕೋರ್ಸ್‌ಗಳನ್ನೂ ಮಾಡಬಹುದು.

8. ನಾನು ಇಷ್ಟಪಟ್ಟ ಯಾವುದೇ ವೃತ್ತಿ/ಕೋರ್ಸ್ ಮಾಡಲು ಸ್ವಾತಂತ್ರ್ಯ  ಸಿಗದೆ, ಜೀವನದಲ್ಲಿ ನನಗಾಗಿ ಏನು ಉಳಿದಿದೆ ಎನ್ನುವಷ್ಟು ಬೇಸರವಾಗಿದೆ. ನಾನು ಈಗ ಬಿ.ಎಸ್ಸಿ ಮುಗಿಸಿ ಬಿ.ಇಡಿ ಮಾಡುತ್ತಿದ್ದೇನೆ. ಜೀವನದಲ್ಲಿ ಉತ್ಸಾಹ  ವೃದ್ಧಿಸಿಕೊಳ್ಳಲು ಮಾರ್ಗದರ್ಶನ ನೀಡಿ. 

-ಹೆಸರು, ಊರು ತಿಳಿಸಿಲ್ಲ.‌

ಸಾಧನೆಯ ಹಾದಿಯಲ್ಲಿ ಇಂತಹ ಅಡಚಣೆಗಳು, ವಿಳಂಬಗಳು, ನಿರಾಸೆಗಳು ಸಾಮಾನ್ಯ. ಇವುಗಳ ಮಧ್ಯೆಯೂ ಮನಸ್ಸು ಸ್ಥಿತಪ್ರಜ್ಞೆ ಯಿಂದಿದ್ದರೆ ಸೃಜನಶೀಲ ಚಿಂತನೆ ಸಾಧ್ಯವಾಗಿ, ಸಾಧನೆಯ ಹಾದಿ ಸುಗಮವಾಗುತ್ತದೆ. ನಿಮ್ಮ ಬದುಕಿನ ಗುರಿ ಏನು ಎಂದು ನೀವು ತಿಳಿಸಿಲ್ಲ. ಸ್ಪಷ್ಟವಾದ, ಸಾಧಿಸಬಹುದಾದ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಗುರಿಗಳು ದೃಢವಾಗಿದ್ದರೆ, ಸ್ವಯಂ ಪ್ರೇರಣೆ ತಾನೇ ತಾನಾಗಿ ಮೂಡುತ್ತದೆ. ನಿಮ್ಮ ಆಸಕ್ತಿ, ಅಭಿರುಚಿಯ ಆಧಾರದ ಮೇಲೆ ವೃತ್ತಿಯ ಗುರಿಗಳನ್ನು ನಿರ್ಧರಿಸಿ. ಈ ಗುರಿಗಳನ್ನು ಸಾಕಾರಗೊಳಿಸಬೇಕಾದರೆ, ಸ್ವಯಂ ಪ್ರೇರಣೆಯೇ ನಿಮ್ಮ ಸಾಧನೆಗೆ ಸಂಜೀವಿನಿಯಾಗಬೇಕು. ಅತ್ಯಂತ ಶಕ್ತಿಶಾಲಿಯಾದ ಆಂತರಿಕ ಪ್ರೇರಣೆಯೇ ನಿಮ್ಮ ಸ್ಪೂರ್ತಿಗೂ, ಚೈತನ್ಯಕ್ಕೂ, ಕಾರ್ಯತತ್ಪರತೆಗೂ ಮೂಲ. ಪ್ರೇರಣೆ, ಬದುಕಿನ ಕನಸುಗಳನ್ನು ಕಾಣುವುದರ ಜೊತೆಗೆ, ನಮ್ಮಲ್ಲಿ ಅವುಗಳನ್ನು ಸಾಧಿಸುವ ಛಲ, ಆತ್ಮವಿಶ್ವಾಸವನ್ನು ಹುಟ್ಟುಹಾಕುತ್ತದೆ.

ಬಿ.ಇಡಿ ಕೋರ್ಸ್ ನಂತರ ಅತ್ಯಂತ ಪವಿತ್ರವಾದ ಮತ್ತು ಗೌರವಯುತವಾದ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡು ಮಾದರಿ ಶಿಕ್ಷಕರಾಗುವ ಅವಕಾಶ ನಿಮಗಿದೆ. ಇನ್ನೂ ಹೆಚ್ಚಿನ ಮಾರ್ಗದರ್ಶನ ಬೇಕಿದ್ದರೆ, ಈ ಅಂಕಣದ ಮೂಲಕ ಮತ್ತೊಮ್ಮೆ ಸಂಪರ್ಕಿಸಿ. ಶುಭಹಾರೈಕೆಗಳು.

9. ನಾನು ಬಿಎ 2ನೇ ಸೆಮಿಸ್ಟರ್ ಓದುತ್ತಿದ್ದೇನೆ. ಯುಪಿಎಸ್‌ಸಿ ಪರೀಕ್ಷೆ ಬರೆಯಲು ಇಚ್ಛಿಸಿದ್ದೇನೆ. ಕನ್ನಡ ಮಾಧ್ಯಮ ವಿದ್ಯಾರ್ಥಿಯಾಗಿದ್ದು, ಇಂಗ್ಲಿಷ್ ಅಷ್ಟು ಚೆನ್ನಾಗಿ‌‌ ಬರುವುದಿಲ್ಲ. ಹೀಗಿರುವುದರಿಂದ, ಪರೀಕ್ಷೆಗೆ ತಯಾರಿ ಮಾಡುವುದು ಹೇಗೆ?

ಹೆಸರು, ಊರು ತಿಳಿಸಿಲ್ಲ.

ಯುಪಿಎಸ್‌ಸಿ ಆಯೋಜಿಸುವ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆ:

• ಪೂರ್ವಭಾವಿ ಪರೀಕ್ಷೆ (ಬಹು ಆಯ್ಕೆ ಮಾದರಿ).
• ಮುಖ್ಯ ಪರೀಕ್ಷೆ (ಕನ್ನಡದಲ್ಲಿ ಬರೆಯಬಹುದು).
• ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ (ಕನ್ನಡದಲ್ಲಿ ನೀಡಬಹುದು).

ಈ ಸಲಹೆಗಳನ್ನು ಗಮನಿಸಿ:

• ಯುಪಿಎಸ್‌ಸಿಯ ಮುಖ್ಯ ಪರೀಕ್ಷೆ ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ. ಹಾಗಾಗಿ, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.

• ಮುಖ್ಯ ಪರೀಕ್ಷೆಯಲ್ಲಿರುವ ವಿಷಯಗಳ ಪಠ್ಯಕ್ರಮವನ್ನು ತಿಳಿದುಕೊಂಡು, ಅಗತ್ಯವಾದ ಪುಸ್ತಕಗಳು ಮತ್ತು ಇನ್ನಿತರ ಅಧ್ಯಯನದ ಮಾಹಿತಿಯನ್ನು ಸಂಗ್ರಹಿಸಿ.

• ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ, ಅಣಕು-ಪರೀಕ್ಷೆ ಆಧಾರಿತ ತಯಾರಿಯನ್ನು ಮಾಡುತ್ತಿರಬೇಕು.

• ಪರೀಕ್ಷೆಯಲ್ಲಿ ಯಶಸ್ವಿಯಾಗಲು, ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆ ಮತ್ತು ಉತ್ಕೃಷ್ಟವಾದ ಬರವಣಿಗೆ ಇರಬೇಕು.

• ನಿಮ್ಮ ಬರವಣಿಗೆ ಕಾಗುಣಿತ, ವ್ಯಾಕರಣ ದೋಷ ಮುಕ್ತವಾಗಿರಲಿ; ಓದಲು ಸುಲಭವಾಗಿರಲಿ.

• ಯೂಟ್ಯೂಬ್‌ನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ವಿಡಿಯೋಗಳನ್ನು ವೀಕ್ಷಿಸಿ. ಸಾಮಾಜಿಕ ತಾಲತಾಣದಿಂದ ದೂರವಿದ್ದರೆ ಏಕಾಗ್ರತೆ ಸುಲಭ.

• ಜೊತೆಗೆ, ಸಮಯದ ನಿರ್ವಹಣೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.

ಯುಪಿಎಸ್‌ಸಿ ಪರೀಕ್ಷೆಗೆ ಖುದ್ದಾಗಿ ತಯಾರಿಯಾಗಿ, ಯಶಸ್ವಿಯಾಗಿರುವ ಅನೇಕ ಉದಾಹರಣೆಗಳಿವೆ; ಹಾಗಾಗಿ, ಕೋಚಿಂಗ್ ಕಡ್ಡಾಯವಲ್ಲ. ಆದರೂ, ಕೋಚಿಂಗ್ ಸೆಂಟರ್‌ಗಳು ನೀಡುವ ಮಾರ್ಗದರ್ಶನ ಉಪಯುಕ್ತ. ಅಂತಿಮ ಆಯ್ಕೆ ನಿಮ್ಮದು.

ಇಂಗ್ಲಿಷ್ ಕಬ್ಬಿಣದ ಕಡಲೆಯಲ್ಲ; ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೂಕ್ತವಾದ ಕಾರ್ಯತಂತ್ರ ಮತ್ತು ಪರಿಶ್ರಮವಿದ್ದಲ್ಲಿ, ಇಂಗ್ಲಿಷ್ ಕಲಿಯಬಹುದು.

ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಇಂಗ್ಲಿಷ್ ಕಲಿಕೆ ಕುರಿತ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=NoFcIQAFDCA

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT