ಭಾರತ ಸರ್ಕಾರದ ಕಾಯ್ದೆ–1935 ಅಡಿಯಲ್ಲಿ ದೇಶದಲ್ಲಿ ಪ್ರತಿಯೊಂದು ರಾಜ್ಯದಲ್ಲಿಯೂ ಲೋಕಸೇವಾ ಆಯೋಗವನ್ನು (ಪಿಎಸ್ಸಿ) ಸ್ಥಾಪನೆ ಮಾಡಲಾಗಿದೆ. ಆಯಾ ರಾಜ್ಯಗಳ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಸಂಬಂಧ ಅಧಿಸೂಚನೆ ಹೊರಡಿಸುವುದು, ಪರೀಕ್ಷೆಗಳನ್ನು ನಡೆಸುವುದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸುವುದು ಅವುಗಳ ಕೆಲಸವಾಗಿದೆ. ಆದರೆ, ದೇಶದಲ್ಲಿ ಎಷ್ಟು ಲೋಕಸೇವಾ ಆಯೋಗಗಳು ಈ ಕೆಲಸವನ್ನು ಪಾರದರ್ಶಕವಾಗಿ, ವಿವಾದಕ್ಕೆ ಆಸ್ಪದವಿಲ್ಲದಂತೆ ಮಾಡುತ್ತಿವೆ ಎನ್ನುವುದನ್ನು ಪರಿಶೀಲಿಸಿದರೆ, ಸಿಗುವ ಚಿತ್ರಣವು ಅತ್ಯಂತ ನಿರಾಶಾದಾಯಕವಾಗಿದೆ.

ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿ ಅಗತ್ಯವಿಲ್ಲದಿರುವುದು, ಆರ್ಥಿಕ ಸಮಸ್ಯೆ ಇತ್ಯಾದಿ ಕಾರಣಗಳಿಂದ ಪಿಎಸ್ಸಿಗಳು ನಿಯಮಿತವಾಗಿ ನೇಮಕಾತಿ ಮಾಡಿಕೊಳ್ಳುವುದಿಲ್ಲ. ಆದರೆ, ಬಹುತೇಕ ಪಿಎಸ್ಸಿಗಳಲ್ಲಿ ಅವು ನಡೆಸುವ ಪ್ರತಿಯೊಂದು ಪರೀಕ್ಷೆಯಲ್ಲೂ ಅಕ್ರಮಗಳು, ಭ್ರಷ್ಟಾಚಾರ, ಸ್ವಜನಪಕ್ಷಪಾತದಂಥ ಆರೋಪಗಳು ಕೇಳಿಬರುವುದು ಸಾಮಾನ್ಯವಾಗಿಬಿಟ್ಟಿದೆ. ಹಾಗೆಯೇ ಪರೀಕ್ಷೆಗೂ ಮುಂಚೆಯೇ ಪ್ರಶ್ನೆಪತ್ರಿಕೆ ಬಹಿರಂಗವಾಗುವುದು, ಪರೀಕ್ಷೆ ರದ್ದು, ಮುಂದೂಡಿಕೆ, ಫಲಿತಾಂಶ ವಿಳಂಬ, ಫಲಿತಾಂಶ ತಡೆಹಿಡಿಯುವುದು ಕೂಡ ಸಾಮಾನ್ಯ ವಿದ್ಯಮಾನಗಳಾಗಿವೆ.

ಅಕ್ರಮ, ಅವ್ಯವಹಾರಗಳಿಗೆ ಜಾರ್ಖಂಡ್ ಲೋಕಸೇವಾ ಆಯೋಗವು ದೇಶದಲ್ಲಿಯೇ ಕುಖ್ಯಾತಿ ಗಳಿಸಿದೆ. 2006ರಲ್ಲಿ ಅಲ್ಲಿ ನಡೆದಿದ್ದ ‘ಎ’ ಶ್ರೇಣಿಯ ಹುದ್ದೆಗಳ ನೇಮಕಾತಿ ಪರೀಕ್ಷೆಯ ಫಲಿತಾಂಶವು ಹಲವು ರೀತಿಯ ಅಕ್ರಮಗಳ ಆರೋಪದಿಂದಾಗಿ ವಿಳಂಬವಾಗಿ, ಕೊನೆಗೆ 15 ವರ್ಷಗಳ ನಂತರ ಪ್ರಕಟವಾಗಿತ್ತು. ಹರಿಯಾಣ, ಛತ್ತೀಸಗಢ, ಉತ್ತರಾಖಂಡ ಪಿಎಸ್ಸಿಗಳದ್ದೂ ಇದೇ ಕಥೆ. ಮಧ್ಯಪ್ರದೇಶದ 60 ಅಭ್ಯರ್ಥಿಗಳು ಗೆಜೆಟೆಡ್ ಹುದ್ದೆಗಳ ಪರೀಕ್ಷೆಗೆ ಸಂಬಂಧಿಸಿದ ಅಲ್ಲಿನ ಲೋಕಸವಾ ಆಯೋಗದ ಮೌಲ್ಯಮಾಪನದಲ್ಲಿ ತಮಗೆ ಅನ್ಯಾಯ ಮಾಡಲಾಗಿದೆ ಎಂದು ಕೋರ್ಟ್ ಮೊರೆ ಹೋಗಿದ್ದರು. ಅವರಿಗೆ ಮುಂದಿನ ಹಂತದ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಕೋರ್ಟ್ ಆದೇಶಿಸಿತ್ತು. ಬಿಹಾರದಲ್ಲಿ 2017ರಲ್ಲಿ ಗೆಜೆಟೆಡ್ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದವು. ಕೆಲವು ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಪ್ರಶ್ನೆಪತ್ರಿಕೆ ಒದಗಿಸಿ, ಪರೀಕ್ಷೆ ಬರೆಯುವಂತೆ ಮಾಡಿದ ಘಟನೆಯೂ ಬಿಹಾರದಲ್ಲಿ ನಡೆದಿತ್ತು. ರಾಜಸ್ಥಾನದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಕಳೆದ ವರ್ಷ ಪಿಎಸ್ಸಿ ಸದಸ್ಯರೊಬ್ಬನನ್ನು ಬಂಧಿಸಲಾಗಿತ್ತು.

ಗುಜರಾತ್ ಲೋಕಸೇವಾ ಆಯೋಗವು ನೇಮಕಾತಿಗಳಿಗೆ ಸಂಬಂಧಿಸಿ ಹಲವು ಬಾರಿ ವಿವಾದಕ್ಕೆ ಗುರಿಯಾಗಿದೆ. ಉದ್ಯೋಗಾಕಾಂಕ್ಷಿಗಳಿಗೆ ಕೋಚಿಂಗ್ ನೀಡುವ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಅಣಕು ಸಂದರ್ಶನ ನಡೆಸುವ ಒಬ್ಬ ಅಧಿಕಾರಿಯೇ ವಾಸ್ತವವಾಗಿ ಲೋಕಸೇವಾ ಆಯೋಗದಲ್ಲಿಯೂ ಸಂದರ್ಶನಗಳನ್ನು ಮಾಡುವ ಸಮಿತಿಯಲ್ಲಿದ್ದುದನ್ನು (2025 ಮೇ) ಆಮ್ ಆದ್ಮಿ ಪಕ್ಷದ ಮುಖಂಡರೊಬ್ಬರು ಬಹಿರಂಗಪಡಿಸಿದ್ದರು. ಗುಜರಾತ್ ಲೋಕಸೇವಾ ಆಯೋಗ ನಡೆಸಿದ್ದ ಪರೀಕ್ಷೆಯಲ್ಲಿ ಅತ್ಯಂತ ಕಡಿಮೆ ಅಂಕ ಪಡೆದು ವಿಫಲವಾಗಿದ್ದ ಯುವಕನೊಬ್ಬ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದನ್ನು ಪ್ರಸ್ತಾಪಿಸಿದ್ದ ಬಿಜೆಪಿ ಮುಖಂಡರೊಬ್ಬರು, ಗುಜರಾತ್ ಲೋಕಸೇವಾ ಆಯೋಗದಲ್ಲಿ ಪ್ರಬಲ ಜಾತಿಯ ಅಭ್ಯರ್ಥಿಗಳ ಪರವಾಗಿ ಪಕ್ಷಪಾತ ಮಾಡಲಾಗುತ್ತಿದೆ; ಎಸ್ಸಿ, ಎಸ್ಟಿ, ಒಬಿಸಿ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಕಳೆದ ವರ್ಷ ಆರೋಪಿಸಿದ್ದು ವಿವಾದವಾಗಿತ್ತು.

ಬಹುತೇಕ ಎಲ್ಲ ರಾಜ್ಯಗಳ ಪಿಎಸ್ಸಿಗಳಲ್ಲೂ ಇಂಥವೇ ಸಮಸ್ಯೆಗಳು. ಕಳೆದ ಐದು ವರ್ಷಗಳಲ್ಲಿ ವಿವಿಧ ರಾಜ್ಯಗಳ ಪಿಎಸ್ಸಿಗಳು ನಡೆಸುವ 40 ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದು, ಇದು ಸುಮಾರು 50 ಲಕ್ಷ ಉದ್ಯೋಗಾಕಾಂಕ್ಷಿಗಳ ಮೇಲೆ ಪರಿಣಾಮ ಬೀರಿದೆ ಎಂದು ವರದಿಯೊಂದು ತಿಳಿಸಿದೆ. ಪಿಎಸ್ಸಿಗಳ ರಾಜಕೀಯ, ಭ್ರಷ್ಟಾಚಾರ, ಸ್ವಜನಪಕ್ಷಪಾತಗಳಿಂದ ಕೋಟ್ಯಂತರ ಯುವಜನರ ಉದ್ಯೋಗದ ಕನಸು ಕಮರುತ್ತಲೇ ಇದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-51-1945423874

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.