ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ವಿಸ್ತಾರ ಓದು ಯಶಸ್ಸಿನ ಗುಟ್ಟು: ಕೆಎಎಸ್‌ ಅಧಿಕಾರಿ ಚನ್ನಕೇಶವ

Last Updated 13 ಜನವರಿ 2022, 2:11 IST
ಅಕ್ಷರ ಗಾತ್ರ

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮುದಗನೂರು ಕಾವಲು ಗ್ರಾಮದ ಚನ್ನಕೇಶವ ಎಂ.ಬಿ ಅವರು 2017ರಲ್ಲಿ ಕೆಎಎಸ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ವಾಣಿಜ್ಯ ತೆರಿಗೆ ಇಲಾಖೆಯ ಹಾಸನ ಜಿಲ್ಲಾ ಕಚೇರಿಯಲ್ಲಿ ಪ್ರೊಬೆಷನರಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡುತ್ತಿದ್ದಾರೆ. ಬಡತನದ ಕಾರಣಕ್ಕೆ ನಿರಂತರ ಶಿಕ್ಷಣ ಮುಂದುವರಿಸಲಾಗದೆ, ದೂರ ಶಿಕ್ಷಣದಲ್ಲಿ ಪದವಿ ಪಡೆದು ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದ್ದಾರೆ. ಅವರು ಯಶಸ್ಸಿನ ಸೂತ್ರದ ಗಂಟನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.

1. ನಿಮ್ಮ ಶೈಕ್ಷಣಿಕ ಜೀವನ ಪಯಣಹೇಗಿತ್ತು ?
ನಮ್ಮದು ಬಡ ಕುಟುಂಬ. ತಂದೆ–ತಾಯಿ ಅನಕ್ಷರಸ್ಥರು. ಹುಟ್ಟೂರಿನಲ್ಲಿಯೇ 4ನೇ ತರಗತಿವರೆಗೂ ವ್ಯಾಸಂಗ ಮಾಡಿದೆ. ಹುಲಿಕಲ್‌ ಹಾಗೂ ಅರಕಲಗೂಡಿನಲ್ಲಿ ಮಾಧ್ಯಮಿಕ, ಪ್ರೌಢ ಹಾಗೂ ಡಿ.ಇಡಿ ಶಿಕ್ಷಣ ಮುಗಿಸಿದೆ. ಬಳಿಕ ಎರಡು ವರ್ಷ ಖಾಸಗಿ ಶಾಲೆ ಶಿಕ್ಷಕನಾಗಿ ಕೆಲಸ ಮಾಡಿದೆ. ಅಂದಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಆರಂಭಿಸಿದೆ. ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದೆ, ಆದರೂ ಗುರಿ ಸಾಧಿಸಬೇಕು ಎನ್ನುವ ಛಲ ಕಡಿಮೆಯಾಗಲಿಲ್ಲ. ಕೊನೆಗೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದುಕೊಂಡೇ, ಕೆಎಎಸ್‌ಗೆ ತಯಾರಿ ನಡೆಸಿ, ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆ.

2. ಕೆಎಎಸ್‌ ಅಧಿಕಾರಿಯಾಗಲು ಏನು ಸ್ಫೂರ್ತಿ?
ಮುದಗನೂರು ಕಾವಲು ಗ್ರಾಮದಲ್ಲಿ ತಂದೆ–ತಾಯಿ ಸಾಹುಕಾರರೊಬ್ಬರ ಮನೆಗೆ ಕೆಲಸಕ್ಕೆ ತೆರಳುತ್ತಿದ್ದರು. ಕೆಲವೊಮ್ಮೆ ನಾನೂ ಜತೆಗೆ ಹೋಗುತ್ತಿದ್ದೆ, ಅವರ ಮನೆಯಲ್ಲಿ ಒಬ್ಬರು ಕೆಎಎಸ್‌ ಅಧಿಕಾರಿ ಇದ್ದರು, ಅವರು ಕಾರಿನಲ್ಲಿ ಬರುತ್ತಿದ್ದರು. ಅದನ್ನು ನೋಡಿ ‘ನಾನೂ ಅವರಂತೆ ಆಗಬೇಕು‌. ನನ್ನ ಹೆಸರಿನ ಮುಂದೆಯೂ ಕೆಎಎಸ್‌ ಎಂದು ಬರೆದು ಕೊಳ್ಳಬೇಕು‘ ಎನ್ನುವ ಆಸೆ ಹುಟ್ಟಿತು. ಅಂದಿನಿಂದ ಕೆಎಎಸ್‌ ಅಧಿಕಾರಿಯಾಗಬೇಕೆಂಬ ಗುರಿ ಇಟ್ಟುಕೊಂಡೆ. 2014ರಲ್ಲಿ ಮೊದಲ ಬಾರಿಗೆ ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಪಾಸ್‌ ಮಾಡಿದೆ. ಆದರೆ, ಯುಜಿಸಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆ ರದ್ದು ಮಾಡಿದ ಕಾರಣ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿರಲಿಲ್ಲ. ಕೊನೆಗೆ 2017ರಲ್ಲಿ ಮತ್ತೊಮ್ಮೆ ಪೂರ್ವಭಾವಿ ಪರೀಕ್ಷೆ ಮತ್ತು 2018ರಲ್ಲಿ ಮುಖ್ಯಪರೀಕ್ಷೆಯನ್ನೂ ಬರೆದು ಪಾಸ್ ಮಾಡಿದೆ. 2020ರಲ್ಲಿ ಕೆಲಸಕ್ಕೆ ಸೇರಿದೆ.

3.ಪೂರ್ವಭಾವಿ ಪರೀಕ್ಷೆಗೆ ತಯಾರಿ ಹೇಗಿರಬೇಕು?
5 ರಿಂದ 12 ನೇ ತರಗತಿವರೆಗಿನ ರಾಜ್ಯ ಸರ್ಕಾರದ ಪಠ್ಯಪುಸ್ತಕಗಳು ಹಾಗೂ ದಿನ ಪತ್ರಿಕೆಗಳನ್ನು ನಿರಂತರವಾಗಿ ಓದಬೇಕು. ಆಕಾಶವಾಣಿಯಲ್ಲಿ ಬರುವ ಕನ್ನಡ ಹಾಗೂ ಇಂಗ್ಲಿಷ್‌ ವಾರ್ತೆಗಳನ್ನು ಕೇಳಿಸಿಕೊಳ್ಳಬೇಕು. ಪ್ರತಿದಿನ ಕನಿಷ್ಠ ಮೂರು ಗಂಟೆ ಓದುವುದನ್ನು ರೂಢಿಸಿಕೊಳ್ಳಬೇಕು. ಓದಿದ ಪ್ರಮುಖ ಅಂಶಗಳನ್ನು ಟಿಪ್ಪಣಿ ಮಾಡಿಟ್ಟುಕೊಳ್ಳುವುದು ಅಗತ್ಯ. ಸ್ನೇಹಿತರೊಂದಿಗೆ ಗುಂಪು ಚರ್ಚೆ ಮಾಡಬೇಕು. ಅದರಿಂದ ಓದಿದ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಕೆಎಎಸ್ ಪರೀಕ್ಷೆಯ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು. ಇದರಿಂದ ಪ್ರಶ್ನೆಗಳ ಸ್ವರೂಪ ತಿಳಿದುಕೊಂಡು ಉತ್ತರಿಸಲು ಅನುಕೂಲವಾಗುತ್ತದೆ.

4.ಮುಖ್ಯ ಪರೀಕ್ಷೆ ಎದುರಿಸಲು ಸಿದ್ಧತೆ ಹೇಗಿರಬೇಕು ?
ಮುಖ್ಯ ಪರೀಕ್ಷೆಗೆ ವಿಸ್ತಾರವಾದ ಓದಿನ ಅಗತ್ಯ ಇರುತ್ತದೆ. ಮೊದಲು ಕರ್ನಾಟಕ ಲೋಕಸೇವಾ ಆಯೋಗ ನೀಡಿದ ಪಠ್ಯಕ್ರಮ ಅಧ್ಯಯನ ಮಾಡಬೇಕು. ಅದನ್ನು ಇಟ್ಟು ಕೊಂಡು ನಿರ್ದಿಷ್ಟ ಲೇಖಕರ ಪುಸ್ತಕಗಳನ್ನು ಓದಬೇಕು. ಪತ್ರಿಕೆಗಳಲ್ಲಿ ಪ್ರಕಟವಾಗುವ ಸಂಪಾದಕೀಯ ಹಾಗೂ ಲೇಖನಗಳನ್ನು ಓದಿ ಬರೆದಿಟ್ಟುಕೊಳ್ಳಬೇಕು. ಇದರಿಂದ ಪ್ರಬಂಧ ಬರಹಕ್ಕೆ ಅನುಕೂಲವಾಗುತ್ತದೆ. ಸರ್ಕಾರ ಪ್ರಕಟಿಸುವ ಆರ್ಥಿಕ ಸಮೀಕ್ಷೆ, ಯೋಜನಾ ಹಾಗೂ ಜನಪದ ನಿಯತಕಾಲಿಕೆ ಓದಬೇಕು. ಮುಖ್ಯ ಪರೀಕ್ಷೆಯಲ್ಲಿ ಕೈ ಬರಹಕ್ಕೆ ಮಹತ್ವ ನೀಡುವುದರಿಂದ ಮೊದಲಿಂದಲೇ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಮಾದರಿ ಪರೀಕ್ಷೆಗಳನ್ನು ತೆಗೆದುಕೊಂಡರೆ, ಸಮಯ ನಿರ್ವಹಣೆ ಅಭ್ಯಾಸವಾಗುತ್ತದೆ. ಆದ್ದರಿಂದ ಸಾಧ್ಯವಾದರೆ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳಲ್ಲಿ ಮಾದರಿ ಪರೀಕ್ಷೆಗಳನ್ನು (ಅಣಕು ಪರೀಕ್ಷೆಗಳು) ತೆಗೆದುಕೊಳ್ಳಬೇಕು.

5. ಸ್ಪರ್ಧಾಕಾಂಕ್ಷಿಗಳಿಗೆ ನಿಮ್ಮ ಸಲಹೆ ಏನು?
ಸಮಯ ವ್ಯರ್ಥ ಮಾಡದೆ, ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಗುರಿ ಮುಟ್ಟುವವರೆಗೂ ವಿಶ್ರಮಿಸಬಾರದು. ಆತ್ಮವಿಶ್ವಾಸ ನಿಮ್ಮನ್ನು ಕಾಪಾಡುತ್ತದೆ. ಆರಂಭದ ಉತ್ಸಾಹವನ್ನು ಕೊನೆಯವರೆಗೂ ಕಾಪಿಟ್ಟುಕೊಳ್ಳುವುದು ಅಗತ್ಯ. ಗ್ರಂಥಾಲಯವನ್ನು ಸಮರ್ಪಕವಾಗಿ ಬಳಸಿಕೊಳ್ಳಿ, ಸರ್ಕಾರದ ವಿವಿಧ ಇಲಾಖೆಗಳು ಪ್ರವೇಶ ಪರೀಕ್ಷೆ ನಡೆಸುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕೊಡಿಸುತ್ತವೆ. ಅದರ ಸದುಪಯೋಗ ಪಡೆಯಿರಿ. ಯಾವ ವಿಷಯವನ್ನೂ ಕಷ್ಟದಿಂದ ಓದಬೇಡಿ, ಸಂಪೂರ್ಣವಾಗಿ ತೊಡಗಿಸಿಕೊಂಡು, ಆಸಕ್ತಿಯಿಂದ ಓದಿ ಅಂದುಕೊಂಡ ಗುರಿ ತಲುಪಿ.

ಪರೀಕ್ಷಾ ಮಾರ್ಗದರ್ಶಿಯಾದ ‘ಪ್ರಜಾವಾಣಿ’
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಆರಂಭಿಸಿದ ದಿನದಿಂದಲೂ ‘ಪ್ರಜಾವಾಣಿ’ ಪತ್ರಿಕೆಯನ್ನು ಓದುತ್ತಿದ್ದೇನೆ. ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳು, ಸಂಪಾದಕೀಯವನ್ನು ನಿರಂತರವಾಗಿ ಓದಿದ್ದರಿಂದ ಪರೀಕ್ಷೆಯಲ್ಲಿ ಬಹಳ ಅನುಕೂಲವಾಯಿತು. ನನ್ನಂಥ ಅನೇಕರಿಗೆ ‘ಪ್ರಜಾವಾಣಿ’ ಪರೀಕ್ಷಾ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದೆ.

ಚನ್ನಕೇಶವ ಎಂ.ಬಿ
ಚನ್ನಕೇಶವ ಎಂ.ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT