ಗುರುವಾರ , ಸೆಪ್ಟೆಂಬರ್ 23, 2021
21 °C

ಕೆಎಎಸ್‌ ಅಧಿಕಾರಿ ಸಂದರ್ಶನ: ಯೋಗ್ಯ ಮಾರ್ಗದರ್ಶನ ಯಶಸ್ಸಿಗೆ ರಹದಾರಿ

ಸಂದರ್ಶನ: ಚನ್ನಬಸಪ್ಪ ರೊಟ್ಟಿ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ ಜಿಲ್ಲೆ, ಅಥಣಿ ತಾಲ್ಲೂಕಿನ ತೆವರಟ್ಟಿ ಗ್ರಾಮದವರಾದ ಕಲಗೌಡ ಪಾಟೀಲ, 2018ರಲ್ಲಿ ನಿವೃತ್ತ ಯೋಧರ ಕೋಟಾದಲ್ಲಿ ಕೆಎಎಸ್‌ ಅಧಿಕಾರಿಯಾಗಿ ಆಯ್ಕೆಯಾದವರು. ಅವರು ಪ್ರಸ್ತುತ ಧಾರವಾಡ ಜಿಲ್ಲೆಯಲ್ಲಿ ಪ್ರೊಬೇಷನರಿ ಸೇವೆಯಲ್ಲಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 17ನೇ ವಯಸ್ಸಿನಲ್ಲಿಯೇ ಮಿಲಿಟರಿ ಸೇರಿದ್ದ ಅವರು, ಸೇನೆಯಿಂದ ನಿವೃತ್ತರಾದ ನಂತರ ‌ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶ ಸಾಧಿಸಿರುವ ಕುರಿತು ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಸಂದರ್ಶನ: ಚನ್ನಬಸಪ್ಪ ರೊಟ್ಟಿ

l ಶೈಕ್ಷಣಿಕ ಜೀವನ ಹೇಗಿತ್ತು?

ಆರಂಭಿಕ ಪ್ರಾಥಮಿಕ ಶಿಕ್ಷಣ ಸ್ವಗ್ರಾಮ ತೆವರಟ್ಟಿಯಲ್ಲಿ, ಹೈಸ್ಕೂಲ್‌ ಶಿಕ್ಷಣ ಖಿಳೇಗಾಂವದಲ್ಲಿ ನಂತರ ಅಥಣಿಯಲ್ಲಿ ಪಿಯು ಓದುತ್ತಿರುವಾಗಲೇ ಸೇನೆಗೆ ಆಯ್ಕೆ. ಸೇನೆಯಲ್ಲಿದ್ದಾಗಲೇ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಾಹ್ಯವಾಗಿ ಪರೀಕ್ಷೆ ಬರೆದು ಪದವಿ ಅಧ್ಯಯನ.

l ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಒಲವು ಬೆಳೆದಿದ್ದು ಹೇಗೆ?

ತೆವರಟ್ಟಿ ಊರು ಹಾಗೂ ಸುತ್ತಮುತ್ತಲಿನ ಊರುಗಳಿಂದ ಹಲವು ಜನ ಪೊಲೀಸ್‌ ಅಧಿಕಾರಿಗಳು, ಕೆ.ಎ.ಎಸ್‌ ಅಧಿಕಾರಿಗಳು ಹೊರಹೊಮ್ಮಿದ್ದು, ಅವರಿಂದ ಪ್ರೇರಣೆ ಪಡೆದೆ. 2016ರಲ್ಲಿ ಮಿಲಿಟರಿಯಿಂದ ಬಂದ ನಂತರ ಏನಾದರೂ ಸಾಧನೆ ಮಾಡಬೇಕು ಎಂಬ ದೃಢನಿಶ್ಚಯ ಮಾಡಿದೆ.

l ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿತ್ತು?

2016ರಲ್ಲಿ ಅಧ್ಯಯನಕ್ಕೆಂದೇ ಧಾರವಾಡಕ್ಕೆ ಕುಟುಂಬಸಹಿತ ಬಂದು ನೆಲೆಗೊಂಡೆ. ಮೂರು ತಿಂಗಳ ಕೋಚಿಂಗ್‌ ಪಡೆದು, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿತುಕೊಂಡೆ. ನಂತರ ಸ್ವಯಂ ಅಧ್ಯಯನ ಹಾಗೂ ಸ್ನೇಹಿತರ ಜೊತೆಗೂಡಿ ಗುಂಪು ಅಧ್ಯಯನ ಆರಂಭಿಸಿದೆ. ವಿವಿಧೆಡೆ ನಡೆಯುತ್ತಿದ್ದ ವಾರಾಂತ್ಯದ ಮಾದರಿ ಪರೀಕ್ಷೆಗಳನ್ನು ಎದುರಿಸುತ್ತಿದ್ದೆ. ದಿನಕ್ಕೆ ಕನಿಷ್ಠ 8ರಿಂದ 10 ಗಂಟೆ ಗ್ರಂಥಾಲಯದಲ್ಲಿ ಕುಳಿತು ಓದುತ್ತಿದ್ದೆ. ತದನಂತರ ಮನೆಗೆ ಬಂದು ಆಯಾ ದಿನದ ಓದಿನ ಕುರಿತು ನೋಟ್ಸ್‌ ಮಾಡಿಕೊಳ್ಳುತ್ತಿದ್ದೆ.

l ಆಕರ ಗ್ರಂಥಗಳು, ಪುಸ್ತಕ ಓದುವಿಕೆಯ ಕುರಿತು ನಿಮ್ಮ ಅನುಭವ?

ಮಾರುಕಟ್ಟೆಯಲ್ಲಿರುವ ಬಣ್ಣ-ಬಣ್ಣದ ಪುಸ್ತಕ, ಮ್ಯಾಗಜಿನ್‌ಗಳಿಗೆ ಮಾರುಹೋಗದೇ ಗುಣಮಟ್ಟದ ಗ್ರಂಥಗಳನ್ನು ಆಯ್ದುಕೊಳ್ಳಬೇಕು. 5ರಿಂದ 12ನೇ ತರಗತಿವರೆಗಿನ ರಾಜ್ಯ ಪಠ್ಯಕ್ರಮ ಆಧರಿಸಿದ ಪುಸ್ತಕಗಳನ್ನೇ ಓದುವುದು ಒಳಿತು. ಇದರ ಜೊತೆ ಹಳೆಯ ಪ್ರಶ್ನೆಪತ್ರಿಕೆಗಳ ಅವಲೋಕನ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾದವರು ಸಿದ್ಧಪಡಿಸಿದ್ದ ನೋಟ್ಸ್ ಮೇಲೆ ಕಣ್ಣಾಡಿಸುವುದು ಉತ್ತಮ. ಪ್ರಚಲಿತ ವಿದ್ಯಮಾನದ ಓದಿಗೆ ಪ್ರತಿನಿತ್ಯ ‘ಪ್ರಜಾವಾಣಿ’ಯ ಓದು ರೂಢಿಸಿಕೊಂಡು ಪೇಪರ್‌ ಕಟಿಂಗ್‌ ಮಾಡಿಟ್ಟುಕೊಳ್ಳಿ.

l ವೃತ್ತಿ ಜೀವನ ಆರಂಭಿಸಿದ್ದು ಯಾವ ಹುದ್ದೆಯಿಂದ?

ಎರಡು ವರ್ಷಗಳ ಅಧ್ಯಯನದ ನಂತರ 2018ರಲ್ಲಿ ಪಿಡಿಒ ಹಾಗೂ ಕೆ.ಎ.ಎಸ್‌ ಪರೀಕ್ಷೆ ಎದುರಿಸಿದೆ. ಎರಡರಲ್ಲೂ ಉತ್ತೀರ್ಣನಾದರೂ ಕೆ.ಎ.ಎಸ್‌ ಪೋಸ್ಟಿಂಗ್‌ ತಡವಾದ ಕಾರಣ 2 ವರ್ಷಗಳವರೆಗೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ಮರಗೂರು ಶಿವರ ಗ್ರಾಮದಲ್ಲಿ ಪಿಡಿಒ ಆಗಿ ಸೇವೆ ಸಲ್ಲಿಸಿದೆ. 2020ರ ಜೂನ್‌ ತಿಂಗಳಲ್ಲಿ ಬಿಬಿಎಂಪಿಯಲ್ಲಿ ಕೆ.ಎ.ಎಸ್‌ ಅಧಿಕಾರಿಯಾಗಿ ಸೇವೆ ಆರಂಭಿಸಿದೆ.

l ಸಂದರ್ಶನದ ಅನುಭವವೇನು?

ಸಂದರ್ಶನದಲ್ಲಿ ಮಿಲಿಟರಿ ಸೇವೆಯ ಅನುಭವವನ್ನು ಕುರಿತು ಸುಮಾರು 25 ಪ್ರಶ್ನೆಗಳನ್ನು ಕೇಳಿದರು. ಮಿಲಿಟರಿಯಲ್ಲಿ ಕಲಿತ ಮೌಲ್ಯಗಳನ್ನು ಸಿವಿಲ್‌ ಸರ್ವಿಸ್‌ನಲ್ಲಿ ಅನ್ವಯಿಸುವ ಕುರಿತು ಹಾಗೂ ವ್ಯವಸ್ಥೆಯೇ ಹೀಗಿದೆ ಎಂದು ದೂಷಿಸುವುದಕ್ಕಿಂತ ನಾವೇ ಮಾದರಿಯಾಗಿ ನಡೆದುಕೊಳ್ಳಬೇಕು ಎಂದು ಸಂದರ್ಶಕರ ಮುಂದೆ ವಿಶ್ಲೇಷಿಸಿದ್ದೆ.

l ಪ್ರಸ್ತುತ ನಾಗರಿಕ ಸೇವೆಯ ಅನುಭವವೇನು?

16 ವರ್ಷ, 7 ತಿಂಗಳವರೆಗೆ ಯೋಧನಾಗಿ ಜಮ್ಮು- ಕಾಶ್ಮೀರ, ಲೇಹ್‌– ಲಡಾಖ್‌, ದೆಹಲಿ, ಸಿಕ್ಕಿಂ, ಮಥುರಾ, ಅಂಬಾಲಾ, ಅಸ್ಸಾಂ, ಮಣಿಪುರ, ಮೇಘಾಲಯ, ಡೆಹರಾಡೂನ್‌ನಲ್ಲಿ ಸೇವೆ ಸಲ್ಲಿಸಿದ್ದೇನೆ. ಅಲ್ಲಿ ಎದುರಾದ ಕಠಿಣಾತಿ ಕಠಿಣ ಸನ್ನಿವೇಶಗಳು ನಾಗರಿಕ ಸೇವೆಯಲ್ಲಿ ಎದುರಾಗಲು ಸಾಧ್ಯವಿಲ್ಲ. ಆದರೆ, ಅಧಿಕಾರಿಯಾಗಿ ನಾವೇ ಶಿಸ್ತುಬದ್ಧತೆ ಮತ್ತು ಸಮಯಪಾಲನೆ ತೋರಿದರೆ, ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಶೇ 99ರಷ್ಟು ಬದಲಾವಣೆ ತರಲು ಖಂಡಿತ ಸಾಧ್ಯ ಎಂಬುದು ನನ್ನ ಅನುಭವ.

l ನಿವೃತ್ತ ಯೋಧ- ಸ್ಪರ್ಧಾರ್ಥಿಗಳಿಗೆ ನಿಮ್ಮ ಸಲಹೆ ಏನು?

ನನ್ನಿಂದ ಏನೂ ಮಾಡಲಾಗದು ಎಂಬ ಭಾವನೆ ಬಿಟ್ಟು ಮುಂದಡಿ ಇರಿಸಿ. ಚಿಕ್ಕವರಿರಲಿ ಅಥವಾ ದೊಡ್ಡವರಿರಲಿ ಯೋಗ್ಯರ ಮಾರ್ಗದರ್ಶನ ಪಡೆಯಿರಿ, ನಮ್ಮ ಬ್ಯಾಚ್‌ನಲ್ಲಿ 32 ಜನ ಮಾಜಿ ಯೋಧರು ಕೆ.ಎ.ಎಸ್‌ ಅಧಿಕಾರಿಗಳಾಗಿ ಆಯ್ಕೆ ಆಗಿದ್ದೇವೆ.
ನೇಮಕಾತಿ ಕೋಟಾದ ಸದುಪಯೋಗ ಪಡೆದು ಸಾಧನೆ ತೋರಿ.

(ಸಂದರ್ಶಕರು: ನಿರ್ದೇಶಕರು, ಸ್ಲೇಟ್‌ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು