ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಪಿ & ಐಆರ್‌ಬಿ ಸ್ಪರ್ಧಾತ್ಮಕ ಮಾರ್ಗದರ್ಶಿ: ಪ್ರಬಂಧ ರಚನೆ ಹೀಗಿರಲಿ...

Last Updated 5 ಜನವರಿ 2022, 20:30 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ 70 ವಿಶೇಷ ಮೀಸಲು ಸಬ್ಇನ್‌ಸ್ಪೆಕ್ಟರ್‌ (ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ) ಹುದ್ದೆಗಳ ನೇಮಕಾತಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎರಡು ಪಶ್ನೆ ಪತ್ರಿಕೆಗಳಿರುತ್ತವೆ. ಪತ್ರಿಕೆ–1ರ ಮೊದಲ ಭಾಗದಲ್ಲಿ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿಪ್ರಬಂಧ ರಚನೆ ಇರುತ್ತದೆ. ಈ ಹಿನ್ನೆಲೆಯಲ್ಲಿ ‘ಪ್ರಬಂಧ ರಚಿಸುವುದು ಹೇಗೆ?’ ಎಂಬುದರ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ಪ್ರಬಂಧ ರಚನೆ

ಪ್ರಬಂಧ ರಚನೆ – ಇದೊಂದು ವಿಷಯ ಬಂಧವನ್ನು ಹೊಂದಿರುವ ಸಾಹಿತ್ಯವಾಗಿದೆ. ವಸ್ತು, ಶೈಲಿ, ನಿರೂಪಣೆಗಳಲ್ಲಿ ಯಾವುದೇ ಕಟ್ಟಳೆಗಳಿರದ ಕ್ರಿಯಾತ್ಮಕವಾಗಿ ಸೃಷ್ಟಿಸುವ ಸಾಹಿತ್ಯವೇ ಪ್ರಬಂಧವಾಗಿದೆ.

ಅರ್ಥಪೂರ್ಣ ವಾಕ್ಯಗಳ ಮೂಲಕ ತನ್ನೊಳಗಿನ ಆಲೋಚನೆಗಳನ್ನು ಲಿಖಿತವಾಗಿ ಅಭಿವ್ಯಕ್ತಪಡಿಸುವ ಹಾಗೂ ನಿರ್ದಿಷ್ಟ ವಿಷಯಗಳನ್ನು ಸಮರ್ಪಕವಾಗಿ ನಿರೂಪಿಸುವ ವಿಧಾನ ಪ್ರಬಂಧ ರಚನೆ.

ಪ್ರಬಂಧ ಎಂದರೆ ಹೀಗೆ ಇರಬೇಕು ಎಂಬ ನಿಯಮವಿಲ್ಲ. ಪ್ರಬಂಧ ರಚನೆಯಲ್ಲಿ ಮೂರು ಮುಖ್ಯ ಅಂಗಗಳಿವೆ. ಅವುಗಳೆಂದರೆ; ಪೀಠಿಕೆ/ ಪ್ರಸ್ತಾವನೆ, ವಿಷಯ ನಿರೂಪಣೆ ಹಾಗೂ ಉಪಸಂಹಾರ (ಸಮಾರೋಪ/ವಿಷಯದ ಸಮಾಪ್ತಿ).

ಪ್ರಬಂಧಕ್ಕೆ ಆಕರ್ಷಕ ಪೀಠಿಕೆ ಅಗತ್ಯ. ಅದು ಗಾದೆ, ಶ್ಲೋಕ, ಮಹಾನ್ ವ್ಯಕ್ತಿಗಳ ಹೇಳಿಕೆಯ ಉಲ್ಲೇಖದಿಂದ ಆರಂಭವಾಗುವಂತಿದ್ದರೆ ಉತ್ತಮ. ನಂತರ ವಿಷಯದ ಪ್ರತಿಪಾದನೆ ಅಥವಾ ನಿರೂಪಣೆ. ಇದು ಪ್ರಬಂಧದ ಜೀವಾಳ. ಆಯ್ಕೆ ಮಾಡಿಕೊಂಡ ವಿಷಯವನ್ನು ಸಮರ್ಪಕವಾಗಿ ಮಂಡಿಸಬೇಕು. ಚಿಕ್ಕಚಿಕ್ಕ ವಾಕ್ಯಗಳ ಮೂಲಕ ಪ್ರಸ್ತುತಪಡಿಸಬೇಕು.

ಪ್ರಬಂಧ ಉಪಸಂಹಾರದೊಂದಿಗೆಅಂತ್ಯಗೊಳ್ಳಬೇಕು. ಆ ಉಪಸಂಹಾರವೂ ಸಕಾರಾತ್ಮಕವಾಗಿ ಇರಬೇಕು. ಹಾಗೆಯೇ ಪ್ರಬಂಧದ ಕೊನೆಯ ವಾಕ್ಯವೂ ಪ್ರಬಂಧದಲ್ಲಿ ಚರ್ಚೆಯಾಗಿರುವ ವಿಷಯಗಳ ಮುಕ್ತಾಯವನ್ನೂ ಸೂಚಿಸುವಂತಿರಬೇಕು. ಓದುಗನ ಆಸಕ್ತಿಯನ್ನು ಉದ್ದೀಪಿಸುವಂತಿರಬೇಕು.

ಈ ಪರೀಕ್ಷೆಯಲ್ಲಿ...

ವಿಶೇಷ ಮೀಸಲು ಸಬ್‌ಇನ್‌ಸ್ಪೆಕ್ಟರ್‌ ಪರೀಕ್ಷೆಯಲ್ಲಿ ಪ್ರಥಮ ಪತ್ರಿಕೆಯಲ್ಲಿ 20 ಅಂಕಗಳಿಗೆ ಪ್ರಬಂಧ ರಚನೆ ಇರುತ್ತದೆ. 600 ಶಬ್ದಗಳ ಮಿತಿಯಲ್ಲಿ ಪ್ರಬಂಧ ರಚಿಸಬೇಕು. ಸಾಮಾನ್ಯವಾಗಿ ಪ್ರಚಲಿತ ಘಟನೆಗಳನ್ನು ಆಧರಿಸಿ ಪ್ರಬಂಧ ಬರೆಯುವಂತೆ ಕೇಳಲಾಗಿರುತ್ತದೆ. ಹಾಗೆಂದು ಪ್ರಬಂಧವೆಂದರೆ ಪ್ರಚಲಿತ ಘಟನೆಗಳನ್ನೇ ಒಳಗೊಂಡಿರಬೇಕು ಎಂದೇನೂ ಇಲ್ಲ.
ಸಾಂಪ್ರದಾಯಿಕ ವಿಷಯಗಳನ್ನು ಒಳಗೊಂಡಿರಬಹುದು. ಉದಾ: ಮಹಿಳಾ ಶಿಕ್ಷಣದ ಮಹತ್ವ, ಮರಣ ದಂಡನೆ, ಕೈ ಕೆಸರಾದರೆ ಬಾಯಿ ಮೊಸರು.. ಇತ್ಯಾದಿ.

ಪ್ರತಿ ಅಭ್ಯರ್ಥಿಗೆ 10 ಪುಟಗಳ ಉತ್ತರ ಪತ್ರಿಕೆ ನೀಡಲಾಗಿರುತ್ತದೆ. ಅದರಲ್ಲಿ ಅಭ್ಯರ್ಥಿಯು 5 ರಿಂದ 6 ಪುಟಗಳಲ್ಲಿ ಪ್ರಬಂಧ ಬರೆಯಬಹುದು. ಉಳಿದ ಪುಟಗಳನ್ನು ಭಾಷಾಂತರ ಹಾಗೂ ಸಾರಾಂಶ ಬರಹಕ್ಕೆ ಉಪಯೋಗಿಸಿಕೊಳ್ಳಬಹುದು.

ಪ್ರಬಂಧ ಬರೆಯುವ ಮುನ್ನ..

ಪರೀಕ್ಷೆಯಲ್ಲಿ 5 ವಿಷಯಗಳನ್ನು ನೀಡಿರುತ್ತಾರೆ. ಅದರಲ್ಲಿ ನೀವು ಯಾವ ವಿಷಯ ಆರಿಸಿಕೊಳ್ಳಬೇಕು ಎಂಬುದೇ ಮಹತ್ವದ್ದು. ಹೀಗಾಗಿ ನಿಮ್ಮ ಆಯ್ಕೆ ಸರಿಯಾಗಿರಲಿ.

ಮೊದಲು ಒಂದು ವಿಷಯ ಆಯ್ಕೆ ಮಾಡಿಕೊಂಡು ಒಂದು ಪುಟ ಬರೆದು ನಂತರ ಅದು ಸರಿ ಕಾಣಲಿಲ್ಲ ಎಂದು ವಿಷಯ ಬದಲಿಸಬೇಡಿ. ಕೊಟ್ಟಿರುವ ಸಮಯದಲ್ಲಿ ಮೊದಲ 30 ನಿಮಿಷದಲ್ಲಿ 2 ನಿಮಿಷವನ್ನು ವಿಷಯ ಆಯ್ಕೆಗೆ ಮೀಸಲಿಡಿ. ಒಂದು ವಿಷಯವನ್ನು ಆರಿಸಿಕೊಳ್ಳಿ. ಬಳಿಕ 3 ರಿಂದ 4 ನಿಮಿಷದಲ್ಲಿ, ಆ ವಿಷಯಕ್ಕೆ ಏನು ಪೀಠಿಕೆ ಬರೆಯಬೇಕು? ಯಾವ ರೀತಿ ವಿಷಯವನ್ನು ಮಂಡಿಸಬೇಕು? ಗಾದೆ, ಶ್ಲೋಕ, ಉಕ್ತಿ, ಗೀತೆ ಹಾಗೂ ಹಿರಿಯರ ಅನುಭವದ ನುಡಿಗಳನ್ನು ಎಲ್ಲೆಲ್ಲಿ ಬಳಸಬೇಕು? ಎಂಬ ಬಗ್ಗೆ ಮನಸ್ಸಿನಲ್ಲೇ ಒಂದು ಚಿತ್ರಣವನ್ನು ರಚಿಸಿಕೊಳ್ಳಿ. ಒಂದು ಹಾಳೆಯಲ್ಲಿ ಮನಸ್ಸಿನಲ್ಲಿ ಮೂಡಿದ ಈ ಎಲ್ಲ ಚಿತ್ರಣಗಳನ್ನೂ ಬರೆದಿಟ್ಟುಕೊಳ್ಳಿ.ಉಪಸಂಹಾರವನ್ನು ಹೇಗೆ ಸುಂದರವಾಗಿಸಿ, ಪ್ರಬಂಧ ಪೂರ್ಣಗೊಳಿಸಬಹುದು ಎಂಬುದನ್ನು ಸಿದ್ಧಮಾಡಿಟ್ಟುಕೊಳ್ಳಿ.

ಉಳಿದ 20 ರಿಂದ 25 ನಿಮಿಷಗಳ ಅವಧಿಯಲ್ಲಿ ಉತ್ತಮವಾಗಿ ಪ್ರಬಂಧ ರಚಿಸಲು ಪ್ರಯತ್ನಿಸಿ. ಕೆಲವೊಮ್ಮೆ ಇದು 40 ರಿಂದ 45 ನಿಮಿಷ ತೆಗೆದುಕೊಳ್ಳುವುದು ಇದೆ. ನೆನಪಿರಲಿ ಶಬ್ದಗಳ ಮಿತಿ ಮೀರಬೇಡಿ. ನಿಗದಿತಕ್ಕಿಂತ ಹೆಚ್ಚು ಸಮಯ ತೆಗದುಕೊಳ್ಳಬೇಡಿ. ಏಕೆಂದರೆ ಭಾಷಾಂತರ ಹಾಗೂ ಸಾರಾಂಶ ಬರಹಕ್ಕೂ ಸಮಯ ಬೇಕಾಗುತ್ತದೆ.

ಹೀಗೆ ಮಾಡಿ...

*ಪ್ರಬಂಧದ ಆರಂಭದಲ್ಲಿರುವ 5 ರಿಂದ 6 ಸಾಲುಗಳೇ ಪೀಠಿಕೆ ಆಗಿರಲಿ. ಆ ಪೀಠಿಕೆ ಆಕರ್ಷಕವಾಗಿರಲಿ. ನಂತರ ವಿಷಯವನ್ನು ಬರೆಯಲು ಆರಂಭಿಸಿ. ಸಣ್ಣ ಪ್ಯಾರಾಗಳ ಮೂಲಕ ವಿಷಯವನ್ನು ವಿವರಿಸಿ.

*ವಿಷಯ ನಿರೂಪಣೆ ಎಂಬುದು ಪ್ರಬಂಧದ ಹೃದಯ ಭಾಗ. ಹಾಗಾಗಿ ವಿಷಯ ಮಂಡನೆ ಸಮರ್ಪಕವಾಗಿರಲಿ. ಅಗತ್ಯವಿದ್ದರೆ ಮಾತ್ರ ಪರ ಹಾಗೂ ವಿರೋಧದ ವಾದಗಳನ್ನು ಮಂಡಿಸಿ, ಇಲ್ಲದಿದ್ದರೆ ಬೇಡ.

*ವಿಷಯದ ಸೌಂದರ್ಯ ಹೆಚ್ಚಿಸಲು ಒಂದು ಅಥವಾ ಎರಡು ಚಿತ್ರಗಳು /ರೇಖಾ ಚಿತ್ರಗಳನ್ನು ಬಳಸಿ.

*ಪ್ರಬಂಧದಲ್ಲಿ ಕೇಂದ್ರ/ರಾಜ್ಯ ಸರ್ಕಾರಗಳು ತಂದಿರುವ ಕಾನೂನುಗಳು ಅಥವಾ ಯೋಜನೆಯ ವಿವರಣೆಯ ಅಗತ್ಯವಿದೆ ಎಂದಾದರೆ ಅವುಗಳನ್ನು ಉಲ್ಲೇಖಿಸಿ. ಯಾವುದೇ ರಾಜಕೀಯ ವ್ಯಕ್ತಿಯ ಹೆಸರು ಉಲ್ಲೇಖಿಸುವುದನ್ನು ಆದಷ್ಟು ತಪ್ಪಿಸಿ. ಯಾವುದೇ ಪಕ್ಷವನ್ನು ಟೀಕಿಸುವುದು, ಅತಿಯಾಗಿ ಹೊಗಳುವುದು ಮಾಡಬೇಡಿ.

*ಪ್ರಬಂಧ ಬರೆಯುವುದನ್ನು ಮನೆಯಲ್ಲಿ ಚೆನ್ನಾಗಿ ಅಭ್ಯಾಸ ಮಾಡಿ. ಇದರಿಂದ ಪರೀಕ್ಷೆಯಲ್ಲಿ ಪ್ರಬಂಧ ರಚನೆ ಸುಲಭವಾಗುತ್ತದೆ.

*ತಪ್ಪಿಲ್ಲದ, ವ್ಯಾಕರಣ ಪೂರ್ಣ ವಾಕ್ಯ, ಸರಳ ಶಬ್ದಗಳು, ಚಿಂತನೆಗೆ ಹಚ್ಚುವ ವಿಚಾರಗಳು ಪ್ರಬಂಧದಲ್ಲಿ ಇರಲಿ.

ಹೀಗೆ ಮಾಡಬೇಡಿ...

*ಪ್ರಬಂಧ ಬರೆಯುವಾಗ ಪ್ರತ್ಯೇಕವಾಗಿ ಪೀಠಿಕೆ, ವಿಷಯ ಮತ್ತು ಉಪಸಂಹಾರ ಎಂದು ಬರೆಯಬೇಡಿ. ಎಲ್ಲಾ ವಾಕ್ಯಗಳಿಗೂ ಅಡಿಗೆರೆ (ಅಂಡರ್‌ ಲೈನ್) ಹಾಕಬೇಡಿ. ಅತಿ ಮುಖ್ಯ ಎನಿಸುವ ಒಂದೆರಡು ಸಾಲುಗಳಿಗೆ ಅಡಿಗೆರೆ ಹಾಕಬಹುದು. ಅಗತ್ಯವಿರುವ ಕಡೆ ಅಲ್ಪವಿರಾಮ, ಪೂರ್ಣವಿರಾಮ, ಭಾವಸೂಚಕ ಚಿಹ್ನೆ, ಪ್ರಶ್ನಾರ್ಥಕ ಚಿಹ್ನೆ ಬಳಸುವುದನ್ನು ಮರೆಯಬೇಡಿ.

*ನಿಗದಿಪಡಿಸಿದ ಪದ ಮಿತಿ ದಾಟಬೇಡಿ. ಬರವಣಿಗೆ ಸುಂದರವಾಗಿರಲಿ.

*ಪ್ರಬಂಧಕ್ಕೆಂದೇ ಪುಸ್ತಕಗಳನ್ನು ಹುಡುಕುವುದು ಬೇಡ.

(ಪ್ರಬಂಧ ರಚನೆಗೆ ಸಾಮಾನ್ಯವಾಗಿ ಬಡತನ, ಮಹಿಳೆ, ಶಿಕ್ಷಣ, ನಿರುದ್ಯೋಗ, ಭಯೋತ್ಪಾದನೆಯಂತಹ ವಿಷಯಗಳನ್ನು ನೀಡುತ್ತಾರೆ. ಈ ಬಾರಿ ಸಾಂಕ್ರಾಮಿಕ ರೋಗ/ಕೋವಿಡ್‌ ವಿಷಯಗಳ ಮೇಲೆ ಪ್ರಬಂಧಗಳು ಬರಬಹುದು).

*ಇದಲ್ಲದೇ ಪ್ರಚಲಿತ ವಿದ್ಯಮಾನಗಳ ಮೇಲೆಯೇ ಒಂದು ಪ್ರಬಂಧ ಇರುತ್ತದೆ. ಹೀಗಾಗಿ ಪ್ರಚಲಿತ ವಿದ್ಯಮಾನಗಳ ಅಧ್ಯಯನದ ನಿರ್ಲಕ್ಷ್ಯ ಸಲ್ಲದು.

(ನಿರ್ದೇಶಕರು: ಜ್ಞಾನಭಾರತಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಬೆಂಗಳೂರು )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT