ಶುಕ್ರವಾರ, ಜುಲೈ 1, 2022
26 °C

ಯೋಜನಾಧಾರಿತ ಓದು ಸಾಫಲ್ಯಕ್ಕೆ ದಾರಿ

ಸಂದರ್ಶನ: ಚನ್ನಬಸಪ್ಪ ರೊಟ್ಟಿ Updated:

ಅಕ್ಷರ ಗಾತ್ರ : | |

Prajavani

ಮೂಲತಃ ಬೆಳಗಾವಿ ಜಿಲ್ಲೆ, ರಾಯಬಾಗ ತಾಲ್ಲೂಕಿನ ಖನದಾಳ ಗ್ರಾಮದವರಾದ ಲೋಕೇಶ ಜಗಲಾಸರ, 2014 ರ ಬ್ಯಾಚ್‌ನ ಐ.ಪಿ.ಎಸ್‌ ಅಧಿಕಾರಿ. ಅವರು ಪ್ರಸ್ತುತ ಬಾಗಲಕೋಟೆ ಎಸ್‌.ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 23 ನೇ ವಯಸ್ಸಿನಲ್ಲಿಯೇ ಐ.ಪಿ.ಎಸ್‌ ಅಧಿಕಾರಿ ಆದ ಹೆಗ್ಗಳಿಕೆ ಅವರದ್ದು. ‌ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶ ಸಾಧಿಸಿ, ಉನ್ನತ ಹುದ್ದೆ ಗಿಟ್ಟಿಸುವ ನಿಟ್ಟಿನಲ್ಲಿ ಅವರು ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಶೈಕ್ಷಣಿಕ ಜೀವನ ಹೇಗಿತ್ತು?

ಆರಂಭಿಕ ಪ್ರಾಥಮಿಕ ಶಿಕ್ಷಣವನ್ನು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಪಡೆದ ನಂತರ 10 ನೇ ತರಗತಿವರೆಗೆ ಓದಿದ್ದು ಬೆಳಗಾವಿಯ ಸೇಂಟ್‌ ಫಾಲ್ಸ್‌ ಶಾಲೆಯಲ್ಲಿ. ಪಿಯು ವಿಜ್ಞಾನ ಓದಿದ್ದು ಬೆಂಗಳೂರಿನ ಜೈನ್ ಕಾಲೇಜಿನಲ್ಲಿ. ಬಿ.ಟೆಕ್ ಪದವಿ ಪಡೆದದ್ದು ಸುರತ್ಕಲ್‌ನಲ್ಲಿ.

ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಒಲವು ಬೆಳೆದಿದ್ದು ಹೇಗೆ?

ಮನೆಯಲ್ಲಿ ಪೋಷಕರು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಯಾವಾಗಲೂ ಹೇಳುತ್ತಿದ್ದರು. ಹೀಗಾಗಿ, ಈ ಕುರಿತು ಆಸಕ್ತಿ ಇತ್ತು. ಹೀಗಾಗಿ, ಬಿ.ಟೆಕ್‌ ಪಾಸಾದ ನಂತರ ನಾನು ನಾಗರಿಕ ಸೇವಾ ಪರೀಕ್ಷೆಗಳತ್ತ ಗಮನವಹಿಸಿದೆ. ಯು.ಪಿ.ಎಸ್.ಸಿ ಪರೀಕ್ಷೆ ಪಾಸಾದರೆ ಸಿಗುವ ಹುದ್ದೆ, ಅವಕಾಶಗಳ ಬಗ್ಗೆ ಅರಿತಾಗ ಆ ಕುರಿತು ಆಸಕ್ತಿ ಹೆಚ್ಚಾಯಿತು.

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿತ್ತು?

ಬಿ.ಟೆಕ್ ಓದುವಾಗ ನಾನು ಸರಾಸರಿ ವಿದ್ಯಾರ್ಥಿಯೇ ಆಗಿದ್ದೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗೆ ಓದುವಾಗ ಗಂಭೀರನಾದೆ. ನಾನು ಕೋಚಿಂಗ್‌ ಎಂದು ದೆಹಲಿ, ಹೈದರಾಬಾದ್‌ಗೆ ಹೋಗಲಿಲ್ಲ. ಸ್ಥಳೀಯ ಸಾಧಕರ ಜೊತೆ ಸಮಾಲೋಚನೆ ನಡೆಸಿ, ಅವರು ನೀಡಿದ ಸಲಹೆ ಮತ್ತು ನನ್ನ ಆಸಕ್ತಿಯಂತೆ ಯು.ಪಿ.ಎಸ್‌.ಸಿ.ಯಲ್ಲಿ ಭೂಗೋಳವನ್ನು ಐಚ್ಛಿಕ ವಿಷಯವನ್ನಾಗಿ ಆಯ್ದುಕೊಂಡೆ. ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆ ಓದುತ್ತಿದ್ದೆ. ಕನಿಷ್ಠ 8 ಗಂಟೆ ನಿದ್ರಿಸುತ್ತಿದ್ದೆ. ಪ್ರತ್ಯೇಕ ನೋಟ್ಸ್‌ ಮಾಡಿಕೊಳ್ಳುತ್ತಿರಲಿಲ್ಲ. ಉತ್ತಮವಾದ ಆಕರ ಗ್ರಂಥಗಳನ್ನೇ ಪದೇಪದೇ ಓದುತ್ತಿದ್ದೆ. ಪುಸ್ತಕದಲ್ಲಿಯೇ ‘ಸೈಡ್‌ ನೋಟ್‌’ ಮಾಡಿಕೊಳ್ಳುತ್ತಿದ್ದೆ. ಇದು ಪರೀಕ್ಷೆಯಲ್ಲಿ ‘ಮೈಂಡ್‌ ಮ್ಯಾಪ್’ ಆಗಿ ಕೆಲಸ ಮಾಡಿತು.

ಪ್ರಚಲಿತ ವಿದ್ಯಮಾನಗಳಿಗಾಗಿ ಪ್ರತಿದಿನ ಇಂಗ್ಲಿಷ್‌ ದಿನಪತ್ರಿಕೆ ಹಾಗೂ ಯೋಜನಾ, ಕುರುಕ್ಷೇತ್ರದಂತಹ ನಿಯತಕಾಲಿಕೆಗಳನ್ನು ಓದುತ್ತಿದ್ದೆ. ಇದರಿಂದ ಒಂದು ವಿಷಯದ ಪರ–ವಿರೋಧ ನಿಲುವು, ವಿಮರ್ಶೆ, ವಿಶ್ಲೇಷಣೆ, ನಿರೂಪಣಾ ವಿಧಾನ ಎಲ್ಲವೂ ಅರಿವಾಗುತ್ತಿತ್ತು.

ವೃತ್ತಿ ಜೀವನ ಆರಂಭಿಸಿದ್ದು ಯಾವ ಹುದ್ದೆಯಿಂದ?

2012 ರಲ್ಲಿ ಬಿ.ಟೆಕ್ ಮುಗಿಸಿದ ನಂತರ 6 ತಿಂಗಳವರೆಗೆ ಗಂಭೀರ ಅಧ್ಯಯನ ನಡೆಸಿ, ಯು.ಪಿ.ಎಸ್‌.ಸಿ ಪರೀಕ್ಷೆಯನ್ನು ಮೊದಲ ಬಾರಿಗೆ ಎದುರಿಸಿದೆ. ಮೊದಲ ಯತ್ನದಲ್ಲಿ ರೈಲ್ವೇಸ್‌ನಲ್ಲಿ ‘ಅಸಿಸ್ಟೆಂಟ್ ಸೆಕ್ಯೂರಿಟಿ ಕಮಾಂಡೆಂಟ್’ ಹುದ್ದೆ ಗಿಟ್ಟಿಸಿಕೊಂಡೆ. ರೈಲ್ವೆ ಇಲಾಖೆಯಲ್ಲಿ ತರಬೇತಿ ಪಡೆಯುತ್ತಿರುವಾಗಲೇ 2013 ರಲ್ಲಿ ಮತ್ತೊಮ್ಮೆ ಯು.ಪಿ.ಎಸ್‌.ಸಿ ಪರೀಕ್ಷೆ ಬರೆದೆ. 2ನೇ ಪ್ರಯತ್ನದಲ್ಲಿ ಐ.ಪಿ.ಎಸ್‌ ಹುದ್ದೆ ಒಲಿಯಿತು. 2014 ರಲ್ಲಿ ರಾಯಚೂರಿನಲ್ಲಿ ಟ್ರೇನಿಂಗ್ ಅವಧಿಯನ್ನು ಪೂರೈಸಿ, ಕಲಬುರ್ಗಿ ಸಬ್‌ ಡಿವಿಷನ್‌ನಲ್ಲಿ ಎ.ಎಸ್‌.ಪಿ ಆಗಿ 2017 ರವರೆಗೆ ಸೇವೆ ಸಲ್ಲಿಸಿದೆ. ನಂತರ ಮುಂಬಡ್ತಿಯೊಂದಿಗೆ ಬೆಂಗಳೂರಿಗೆ ತೆರಳಿ ಆಂತರಿಕ ಸುರಕ್ಷಾ ವಿಭಾಗದಲ್ಲಿ ಎಸ್‌.ಪಿ ಆಗಿ ಸೇವೆ ಸಲ್ಲಿಸಿದೆ. ಇದೇ ಅವಧಿಯಲ್ಲಿ ಚುನಾವಣಾ ಸೆಲ್‌ನಲ್ಲೂ ಕಾರ್ಯಾನುಭವ ಪಡೆದೆ. ಪ್ರಸ್ತುತ 2019 ರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಎಸ್‌.ಪಿ ಆಗಿ ಸೇವೆಯಲ್ಲಿದ್ದೇನೆ.

ಸಂದರ್ಶನದ ಅನುಭವವೇನು?

ಸಂದರ್ಶನದಲ್ಲಿ ನಾವು ಭರ್ತಿ ಮಾಡಿದ್ದ ‘ಡಿಟೇಲ್ಡ್‌ ಅಪ್ಲಿಕೇಷನ್‌ ಫಾರ್ಮ್’ ಆಧರಿಸಿಯೇ ಪ್ರಶ್ನೆಗಳನ್ನು ಕೇಳುತ್ತಾರೆ. ಹೀಗಾಗಿ, ನಿಮ್ಮ ಕುರಿತಾದ ವಾಸ್ತವಿಕ ವಿಚಾರಗಳನ್ನು ಮಾತ್ರ ಅದರಲ್ಲಿ ಉಲ್ಲೇಖಿಸಿ. ಸುಳ್ಳು ಮಾಹಿತಿ ಕೊಡಬೇಡಿ.

ಸ್ಪರ್ಧಾರ್ಥಿಗಳಿಗೆ ನಿಮ್ಮ ಸಲಹೆ ಏನು?

ನಿಮ್ಮ ಓದು ಯೋಜನಾಬದ್ಧವಾಗಿರಬೇಕು. ಪರೀಕ್ಷೆಗೆ ಮೂರು ತಿಂಗಳು ಇದೆ ಎನ್ನುವಾಗ ಮೂರು ತಿಂಗಳಲ್ಲಿ, ಎರಡು ತಿಂಗಳಲ್ಲಿ, ಒಂದು ತಿಂಗಳಲ್ಲಿ, ಒಂದು ವಾರದಲ್ಲಿ, ಒಂದು ದಿನದಲ್ಲಿ ಏನು ಓದಬೇಕು ಎಂಬ ಸ್ಪಷ್ಟತೆ ಇರಬೇಕು. ಇದಲ್ಲದೆ, ಏನು ಓದಬಾರದು ಎಂಬ ವಿವೇಚನೆಯೂ ಇರಬೇಕು. ಒಂದು ವಿಷಯಕ್ಕೆ ಸಂಬಂಧಿಸಿ, 2–3 ಪುಸ್ತಕಗಳನ್ನು ಓದದೇ, ಗುಣಮಟ್ಟದ ಒಂದೇ ಪುಸ್ತಕವನ್ನು ಪದೇಪದೇ ಓದಿ, ಉಜ್ಜಳನೆಗೆ ಆದ್ಯತೆ ನೀಡಿ. ಯು.ಪಿ.ಎಸ್‌.ಸಿ.ಯ ಹಳೆಯ ಪ್ರಶ್ನೆಪತ್ರಿಕೆ, ಮಾದರಿ ಉತ್ತರಗಳನ್ನು ಕಡ್ಡಾಯವಾಗಿ ಅವಲೋಕಿಸಿ. ಕಷ್ಟಪಟ್ಟು ಓದದೇ, ಬುದ್ಧಿವಂತಿಕೆಯಿಂದ ಓದಿ.

ಒಂದು ಹುದ್ದೆಯ ಗುರಿ ಇಟ್ಟುಕೊಂಡಿದ್ದೀರಿ ಎಂದಾದರೆ, ಒಂದು ಅಥವಾ ಎರಡು ಪ್ರಯತ್ನದಲ್ಲಿ ಆ ಹುದ್ದೆಯನ್ನು ಪಡೆಯಬೇಕು. ಇಲ್ಲದಿದ್ದರೆ, ಬೇರೆ ಹುದ್ದೆಗೆ ಪ್ರಯತ್ನಿಸಬೇಕು. ಅದೇ ಹುದ್ದೆಗೆ ಪದೇಪದೇ ಯತ್ನಿಸುತ್ತ ನಿಮ್ಮ ಶ್ರಮ, ಸಮಯ ವ್ಯಯಿಸದಿರಿ.

ಪೊಲೀಸ್‌ ಇಲಾಖೆಯ ಹುದ್ದೆ ಆಕಾಂಕ್ಷಿಗಳಿಗೆ ನಿಮ್ಮ ಕಿವಿ ಮಾತೇನು?

ಪೊಲೀಸ್ ಇಲಾಖೆ ಜನಸಾಮಾನ್ಯರಿಗೆ ಹತ್ತಿರವಾದ ಇಲಾಖೆ. 24x7 ಜನಸೇವೆ ಅಪೇಕ್ಷಿಸುವ, ಪ್ರತಿದಿನ ಹೊಸ ಸವಾಲೊಡ್ಡುವ ಇಲಾಖೆ. ಹೀಗಾಗಿ, ಈ ಇಲಾಖೆಗೆ ನೌಕರಿಗೆಂದೋ ಅಥವಾ ದುಡ್ಡು ಮಾಡಬೇಕೆಂದೋ ಬರಬೇಡಿ. ಜನರು ಪೊಲೀಸರನ್ನು ಅತಿ ಹೆಚ್ಚು ಗಮನಿಸುತ್ತಾರೆ. ಪೊಲೀಸರು ಪ್ರಾಮಾಣಿಕ, ದಕ್ಷರಾಗಿರಬೇಕು ಎಂದು ನಿರೀಕ್ಷಿಸುತ್ತಾರೆ. ಹೀಗಾಗಿ, ಶೇ 100 ರಷ್ಟು ಬದ್ಧತೆ ಇದ್ದವರು ಮಾತ್ರ ಪೊಲೀಸ್ ಆಗಬೇಕು.

(ಸಂದರ್ಶಕರು: ನಿರ್ದೇಶಕರು, ಸ್ಲೇಟ್‌ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು