ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ವ್ಯಕ್ತಿತ್ವ ಪರೀಕ್ಷೆಯ ವಿಶ್ವದರ್ಶನ

Last Updated 1 ಜೂನ್ 2022, 21:30 IST
ಅಕ್ಷರ ಗಾತ್ರ

ಯುಪಿಎಸ್‌ಸಿ ಪರೀಕ್ಷೆಯ ಕೊನೆಯ ಮತ್ತು ನಿರ್ಣಾಯಕ ಹಂತ ವ್ಯಕ್ತಿತ್ವ ಪರೀಕ್ಷೆ ಅಥವಾ ‘ಸಂದರ್ಶನ’. 1750 ಅಂಕಗಳಿಗೆ ಸಮನಾದ ಒಂಬತ್ತು ಪ್ರಶ್ನೆ ಪತ್ರಿಕೆಗಳಿಗೆ ಯಶಸ್ವಿಯಾಗಿ ಉತ್ತರ ಬರೆದು, ಸಂದರ್ಶನದ ಸುತ್ತಿಗೆ ಬೇಕಾದಷ್ಟು ಅಂಕಗಳಿಸಿದವರು 275 ಅಂಕಗಳ ಮೌಖಿಕ ‘ಸಂದರ್ಶನ’ ಎದುರಿಸಬೇಕು. ಇದರಲ್ಲಿ ಯಶಸ್ಸು ಗಳಿಸಿದರೆ ದೇಶದ ಅತ್ಯಂತ ಉನ್ನತ ಹಾಗೂ ಜವಾಬ್ದಾರಿಯುತ ಹುದ್ದೆಗೆ ನೇಮಕಗೊಳ್ಳುವ ಅವಕಾಶ ದೊರಕುತ್ತದೆ. ಅವರ ಜೀವಮಾನದ ಕನಸೂ ಈಡೇರಿರುತ್ತದೆ. ಅಚ್ಚರಿಯ ಸಂಗತಿಯೆಂದರೆ 250 ಅಂಕಗಳಿಗೆ 3 ತಾಸುಗಳ ಉತ್ತರ ಬರೆಯುವ ಅಭ್ಯರ್ಥಿಗಳು 275 ಅಂಕಗಳ ಸಂದರ್ಶನವನ್ನು ಕೇವಲ ಅರ್ಧಗಂಟೆಯಲ್ಲಿ ಎದುರಿಸಬೇಕಾಗುತ್ತದೆ!

ಯಾರಿಗೆ ಸಂದರ್ಶನದ ಕರೆ?

ಮುಖ್ಯ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ 2500 – 3000 ಅಭ್ಯರ್ಥಿಗಳಿಗೆ ಸಂದರ್ಶನದ ಕರೆ ಬರುತ್ತದೆ. ಇವರಲ್ಲಿ ಶೇ 35 (1000-1100) ರಷ್ಟು ಜನರಿಗೆ ಉದ್ಯೋಗ ಸಿಗುತ್ತದೆ. ಸಂದರ್ಶನ ನಡೆಯುವ ಹತ್ತು ದಿನ ಮುಂಚೆಯೇ ಅಭ್ಯರ್ಥಿಗಳು ಯುಪಿಎಸ್‌ಸಿ ಕೇಳುವ ವಿವರ ಮತ್ತು ಪಾಸ್‌ಪೋರ್ಟ್ ಅಳತೆಯ ಆರು ಭಾವಚಿತ್ರಗಳನ್ನು ಸಂಬಂಧಿಸಿದ ಇಲಾಖೆಗೆ ಅಂಚೆಯ ಮೂಲಕ ತಲುಪಿಸಬೇಕು.

ಸಂದರ್ಶನದ ದಿನಾಂಕ ಮತ್ತು ಸ್ಥಳವನ್ನು ಯಾವ ಕಾಲಕ್ಕೂ ಬದಲಾಯಿಸುವುದಿಲ್ಲ. ಅಭ್ಯರ್ಥಿಗಳಿಗೆ ಪ್ರಯಾಣ ಮತ್ತು ವಸತಿ ವೆಚ್ಚವನ್ನು ಯುಪಿಎಸ್ಸಿ ನೀಡುತ್ತದೆ(ರೈಲು ಮತ್ತು ಬಸ್ ಪ್ರಯಾಣದ ಖರ್ಚು ನೀಡಲಾಗುತ್ತದೆ. ಕಳೆದ ವರ್ಷ ಕೋವಿಡ್ ಉಪಟಳದಿಂದಾಗಿ ವಿಮಾನ ಪ್ರಯಾಣ ವೆಚ್ಚವನ್ನು ಯುಪಿಎಸ್ಸಿ ಭರಿಸಿತ್ತು).ಸಂದರ್ಶನ ಎರಡನೇ ದಿನಕ್ಕೆ ಮುಂದುವರಿದರೆ ಅಥವಾ ಆಡಳಿತಾತ್ಮಕ ಕಾರಣಗಳಿಗೆ ನಿಗದಿಯಾದ ದಿನ ನಡೆಯದಿದ್ದರೆ ದಿನಕ್ಕೆ ₹30 ರಂತೆ ವಸತಿ ವೆಚ್ಚ ನೀಡುತ್ತಾರೆ.

ವಿದ್ಯಾರ್ಹತೆ, ಅಂಗವೈಕಲ್ಯ, ಜಾತಿ ಪ್ರಮಾಣ ಪತ್ರ ಅಥವಾ ಇನ್ನಾವುದೇ ವಿನಾಯಿತಿ ಬಯಸುವ ಅಭ್ಯರ್ಥಿಗಳು ಸಂಬಂಧಿಸಿದ ಮೂಲ ಪ್ರಮಾಣ ಪತ್ರಗಳನ್ನು ಸಂದರ್ಶನ ಸಮಿತಿಯ ಎದುರು ಹಾಜರು ಪಡಿಸಬೇಕು. ಯಾವುದೇ ಒಂದು ಪ್ರಮಾಣ ಪತ್ರಇಲ್ಲದಿದ್ದರೂ ಅಭ್ಯರ್ಥಿಯನ್ನು ಸಂದರ್ಶನ ಸುತ್ತಿನಿಂದ ಅನರ್ಹ ಗೊಳಿಸಲಾಗುತ್ತದೆ.

ಸಂದರ್ಶನ ಸಮಿತಿಯಲ್ಲಿ ಮುಖ್ಯಸ್ಥರೂ ಸೇರಿದಂತೆ ಒಟ್ಟು ಐದು ಜನ ಇರುತ್ತಾರೆ. ಮುಖ್ಯಸ್ಥರು ಯುಪಿಎಸ್‌ಸಿ ಸದಸ್ಯರಾಗಿರುತ್ತಾರೆ ಮತ್ತು ಉಳಿದ ನಾಲ್ವರು ಸಾಮಾಜಿಕ ಜೀವನದ ಬೇರೆ ಬೇರೆ ಕ್ಷೇತ್ರಗಳ ಪರಿಣತರಾಗಿರುತ್ತಾರೆ. ಅಭ್ಯರ್ಥಿ ಭಾರತದಂಥ ದೊಡ್ಡ ಹಾಗೂ ವೈವಿಧ್ಯಮಯ ದೇಶದ ಆಡಳಿತ ನಡೆಸಲು ಯಾವ ಮಟ್ಟದ ಬದ್ಧತೆ ಮತ್ತು ಕ್ಷಮತೆ ಹೊಂದಿದ್ದಾರೆ ಎಂಬುದನ್ನು ಸಮಿತಿಯು ಪರೀಕ್ಷಿಸುತ್ತದೆ. ಬಹಳಷ್ಟು ಅಭ್ಯರ್ಥಿಗಳು ಇಂಗ್ಲಿಷ್‌ನಲ್ಲಿ ಚೆನ್ನಾಗಿ ಉತ್ತರಿಸಿದರೆ ಹೆಚ್ಚಿನ ಅಂಕ ದೊರಕುತ್ತವೆ ಎಂದು ತಪ್ಪು ತಿಳಿದಿರುತ್ತಾರೆ. ಆದರೆ ಸಂದರ್ಶನ ಸಮಿತಿಯು ನಿಮ್ಮ ವ್ಯಕ್ತಿತ್ವದ ವಿಶೇಷ ಗುಣವನ್ನು ಪರೀಕ್ಷಿಸುತ್ತದೆ.

‘ಜ್ಞಾನ’ವಲ್ಲ, ವ್ಯಕ್ತಿತ್ವ ಪರೀಕ್ಷೆ

ಬಹಳಷ್ಟು ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ಮುನ್ನ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಸೇರುವುದು, ಮುಖ್ಯ ಪರೀಕ್ಷೆಗೆ(ಮೇನ್ಸ್‌) ಓದಿದ ಪುಸ್ತಕಗಳನ್ನು ಮತ್ತೆ – ಮತ್ತೆ ಓದುವುದು ಮಾಡುತ್ತಾರೆ. ನೆನಪಿರಲಿ. ಸಂದರ್ಶನದಲ್ಲಿ ನಿಮ್ಮ ವ್ಯಕ್ತಿತ್ವದ ಪರೀಕ್ಷೆ ನಡೆಯುತ್ತದೆಯೇ ಹೊರತು ಜ್ಞಾನ ಪರೀಕ್ಷೆಯಲ್ಲ. ನೀವು ಪರೀಕ್ಷೆಗೆ ಅರ್ಜಿ ತುಂಬುವಾಗ ನಿಮ್ಮ ಬಗ್ಗೆ ಹಲವು ವೈಯಕ್ತಿಕ ವಿವರಗಳನ್ನು ನೀಡಿರುತ್ತೀರಿ. ಅದರ ಕುರಿತೇ ಬಹುತೇಕ ಪ್ರಶ್ನೆಗಳಿರುತ್ತವೆ. ಪ್ರಶ್ನೆಗಳ ಉತ್ತರವನ್ನು ಇಂಗ್ಲಿಷ್‌ನಲ್ಲೇ ಉತ್ತರಿಸಬೇಕೆಂಬ ನಿಯಮವಿಲ್ಲ. ಹಿಂದಿ ಅಥವಾ ಸಂವಿಧಾನದ ಎಂಟನೇ ಅನುಚ್ಛೇದದಲ್ಲಿ ಪಟ್ಟಿ ಮಾಡಿದ 22 ಭಾಷೆಗಳಲ್ಲಿ ನಿಮಗೆ ಚೆನ್ನಾಗಿ ಬರುವ ಭಾಷೆಯಲ್ಲಿ ಉತ್ತರಿಸುವ ಅವಕಾಶವಿದೆ. ಆದರೆ ನಿಮ್ಮ ಆಯ್ಕೆಯ ಭಾಷೆಯನ್ನು ಸಂದರ್ಶನ ಸಮಿತಿಗೆ ಮೊದಲೇ ತಿಳಿಸಿದ್ದರೆ ಭಾಷಾಂತರಕಾರರನ್ನು ಅವರೇ ನೇಮಿಸುತ್ತಾರೆ. ಸಂದರ್ಶನದಲ್ಲಿ ನಿಮ್ಮ ಜ್ಞಾನದ ಆಳ ಎಷ್ಟಿದೆ, ನೀವೆಷ್ಟು ತಿಳಿದುಕೊಂಡಿದ್ದೀರಿ ಎಂಬುದನ್ನೆಂದೂ ಪರೀಕ್ಷಿಸುವುದಿಲ್ಲ. ಅದನ್ನು ಲಿಖಿತ ಪರೀಕ್ಷೆಯ 9 ಪತ್ರಿಕೆಗಳ ಮೂಲಕ ಮಾಡಲಾಗಿರುತ್ತದೆ.

ಪ್ರಶ್ನೆಗಳ ಉತ್ತರ ಹೇಗಿರಬೇಕು?

ಸಂದರ್ಶನದಲ್ಲಿ ರಾಷ್ಟ್ರಮಟ್ಟದ ಹುದ್ದೆಗೆ ಸೇರುವ ಅರ್ಹತೆ ಅಭ್ಯರ್ಥಿಗಳಿಗಿದೆಯೇ ಮತ್ತು ಇಡೀ ಭಾರತದ ಸ್ವರೂಪವನ್ನು ಅರ್ಥಮಾಡಿಕೊಂಡು ಆಡಳಿತ ನಡೆಸುವ ಮನೋಭಾವವಿದೆಯೇ ಎಂಬುದನ್ನು ಪರೀಕ್ಷಿಸುವ ಪ್ರಶ್ನೆಗಳೇ ಇರುತ್ತವೆ. ಉದಾಹರಣೆಗೆ ನೀವು ಕರ್ನಾಟಕದವರಾಗಿದ್ದರೆ, ಕಾವೇರಿ ನದಿ ನೀರು ಹಂಚಿಕೆ ಕುರಿತ ಕಾನೂನು ಹೋರಾಟದ ಬಗ್ಗೆ ಪ್ರಶ್ನೆ ಕೇಳುತ್ತಾರೆ ಎಂದಿಟ್ಟುಕೊಳ್ಳೋಣ. ಆಗ ನೀವು ಕೇವಲ ಕರ್ನಾಟಕದ ಪರವಹಿಸಿ ಮಾತನಾಡಿದರೆ ನಿಮಗೆ ಹೆಚ್ಚಿನ ಅಂಕ ಸಿಗುವುದಿಲ್ಲ. ಬದಲಿಗೆ ನದಿ ನೀರಿನ ವಿವಾದದಿಂದಾಗಿ ಎರಡೂ ರಾಜ್ಯಗಳ ರೈತರು ಮತ್ತು ಜನ ಅನುಭವಿಸುತ್ತಿರುವ ಸಂಕಷ್ಟಗಳು ಕುರಿತು ಮಾತನಾಡಿದರೆ ನಿಮ್ಮ ಜನಪರ ಧೋರಣೆ ಸಮಿತಿಯ ಮೆಚ್ಚುಗೆಗೆ ಪಾತ್ರವಾಗುತ್ತದೆ ಮತ್ತು ಹೆಚ್ಚಿನ ಅಂಕಗಳು ದೊರಕುತ್ತವೆ. ನೀವು ಯಾವುದಾದರೊಂದು ರಾಜ್ಯವನ್ನೋ, ರಾಜಕೀಯ ನಾಯಕನನ್ನೋ, ಪಕ್ಷವನ್ನೋ, ಸಿದ್ಧಾಂತವನ್ನೋ ಸಮರ್ಥಿಸಿ ಮಾತನಾಡಿದರೆ ನಿಮ್ಮಗೆ ವಿಶಾಲ ಮನೋಭಾವದ ಕೊರತೆ ಇದೆ ಎಂಬುದನ್ನು ನಿರ್ಧರಿಸಿ ಕಡಿಮೆ ಅಂಕ ನೀಡುವ ಸಾಧ್ಯತೆಗಳಿರುತ್ತದೆ.

ಗಮನವಿರಲಿ ಅಂಕಿ – ಅಂಶಗಳ ಬಗ್ಗೆ

ಉತ್ತರ ನೀಡುವಾಗ ಯಾವುದಾದರೂ ವಿದ್ಯಮಾನ, ವಿಚಾರದ ಬಗ್ಗೆ ಪ್ರಸ್ತಾಪ ಬಂದರೆ ಅದರ ಕುರಿತ ಎಲ್ಲ ಅಂಕಿ ಅಂಶಗಳನ್ನು ನಿಖರವಾಗಿ ಪ್ರಸ್ತಾಪಿಸಿ. ತಪ್ಪು ಅಥವಾ ಅರ್ಧಂಬರ್ಧ ಅಂಶಗಳನ್ನು ಹೇಳಿದರೆ ಅಂಕಗಳಿಗೆ ನೀವೇ ಕತ್ತರಿಹಾಕಿಕೊಂಡಂತೆ. ಸಾಧ್ಯವಾದಷ್ಟೂ ಅಂಕಿ – ಅಂಶಗಳನ್ನು ಬದಿಗಿರಿಸಿ ಒಟ್ಟು ಘಟನೆಯ ಚಿತ್ರಣ, ವಿಶ್ಲೇಷಣೆಯ ಕಡೆ ಗಮನ ಹರಿಸಿ. ಇತಿಹಾಸದ ಪ್ರಶ್ನೆಗಳಿದ್ದರೆ ಇಸವಿ, ದಿನಾಂಕ, ಸ್ಥಳದ ಕುರಿತು ಹೇಳಲೇ ಬೇಕಾದ ಅನಿವಾರ್ಯತೆ ಇರುತ್ತದೆ. ಆಗ ಪ್ರತಿಯೊಂದನ್ನೂ ಸರಿಯಾಗಿ ಹೇಳಿರಿ. ಸಮಕಾಲೀನ ವಿದ್ಯಮಾನಗಳ ಕುರಿತೂ ಪ್ರಶ್ನಗಳಿರುತ್ತವೆ. ರಾಜ್ಯ, ರಾಷ್ಟ್ರ– ಅಂತರರಾಷ್ಟ್ರೀಯ ವಿಚಾರಗಳ ಕುರಿತು ಗಹನ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಉತ್ತರಿಸಲು ಬೇಕಾದ ಸಂಗತಿಗಳು ವಿಶ್ವಾಸಾರ್ಹ ದಿನ – ವಾರ ಪತ್ರಿಕೆಗಳಲ್ಲಿರುತ್ತವೆ. ಅವುಗಳ ನಿರಂತರ ಮತ್ತು ಸರಿಯಾದ ಅಧ್ಯಯನ ನಿಮ್ಮ ಸಂದರ್ಶನದ ಉತ್ತರಗಳಿಗೆ ಹೆಚ್ಚಿನ ಬಲ ತುಂಬುತ್ತದೆ. ಆದ್ದರಿಂದ ದಿನಪತ್ರಿಕೆಗಳನ್ನು ತಪ್ಪದೇ ಓದಿರಿ.

ಇಕ್ಕಟ್ಟಿನ ಪ್ರಶ್ನೆಗೆ ಕಟ್ಟು ನಿಟ್ಟಿನ ಉತ್ತರ

ನಿಮ್ಮ ವಿಚಾರವಂತಿಕೆ ಮತ್ತು ಜೀವನದ ದೃಷ್ಟಿಕೋನದ ಪರೀಕ್ಷೆಗಾಗಿ ಕೆಲವು ಇಕ್ಕಟ್ಟಿಗೆ ಸಿಕ್ಕಿಸುವ ಪ್ರಶ್ನೆಗಳನ್ನು ಕೇಳಲಾಗು ತ್ತದೆ. ಉದಾಹರಣೆಗೆ: ‘ಬಂಡುಕೋರ ಸಂಘರ್ಷಗಳು ನಡೆಯುವ ಜಾಗಗಳಲ್ಲಿ ಕೆಲಸ ಮಾಡುತ್ತೀರಾ?‘ ಎಂಬ ಪ್ರಶ್ನೆಗೆ, ನಿಮ್ಮ ವೈಯಕ್ತಿಕ ನಿಲುವು ಏನೇ ಇದ್ದರೂ, ಮುಂದೆ ಸರ್ಕಾರವನ್ನು ಪ್ರತಿನಿಧಿಸುವ ನೀವು ಅದನ್ನು ದೇಶದ ಭದ್ರತೆಗೆ ಒದಗುವ ಅಪಾಯ ಎಂದೆ ಪರಿಗಣಿಸಿ ಉತ್ತರ ನೀಡಬೇಕಾಗುತ್ತದೆ.

ಉಕ್ರೇನ್ – ರಷ್ಯಾದ ಯುದ್ಧದ ಕುರಿತು ಭಾರತದ ನಿಲುವು ಸರಿ ಇದೆಯೆ? ಎಂಬ ಪ್ರಶ್ನೆಗೆ ನಿಮ್ಮ ಉತ್ತರ ತುಂಬಾ ಸಮನ್ವಯದಿಂದ ಕೂಡಿರಬೇಕಾಗುತ್ತದೆ. ಜಾತಿ ಮೀಸಲಾತಿ, ಹಣದುಬ್ಬರ, ರೈತರ ಆತ್ಮಹತ್ಯೆ, ನೋಟು ಅಮಾನ್ಯೀಕರಣ, ನಿರುದ್ಯೋಗ ಸಮಸ್ಯೆಯ ಕುರಿತಾದ ಪ್ರಶ್ನೆಗಳಿಗೆ ನಿಮ್ಮ ಉತ್ತರ ಅತ್ಯಂತ ಸಮತೋಲನದಿಂದ ಕೂಡಿರಬೇಕು. ಜೊತೆಗೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕೆಂದೇನೂ ಇಲ್ಲ. ಕೆಲ ಪ್ರಶ್ನೆಗಳಿಗೆ ಉತ್ತರ ಗೊತ್ತಿರದಿದ್ದರೆ ‘ಗೊತ್ತಿಲ್ಲ’ ಎಂದು ಹೇಳುವುದೇ ಸರಿಯಾದ ಉತ್ತರವಾಗಿರುತ್ತದೆ. ಹಾಗಾಗಿ ದೇಶದ ಅಭಿವೃದ್ಧಿ, ಭದ್ರತೆ, ನೀತಿ - ನಿಯಮಗಳ ಕುರಿತಾದ ಪ್ರಶ್ನೆಗಳಿಗೆ ವಿಶ್ಲೇಷಣಾತ್ಮಕ ಹಾಗೂ ಸಕಾರಾತ್ಮಕ ಉತ್ತರಗಳನ್ನು ನೀಡುವುದು ಸೂಕ್ತ. ಅದರೆ ನೀಡುವ ಉತ್ತರಗಳು ಖಚಿತವಾಗಿರಬೇಕು.

ಯಾವುದಕ್ಕೆ ಎಷ್ಟು ಅಂಕ?

ಸಿವಿಲ್ ಸರ್ವಿಸಸ್ ಪರೀಕ್ಷೆ ಒಟ್ಟು 2025 ಅಂಕಗಳಿಗೆ ನಡೆಯುತ್ತದೆ. ಇದರಲ್ಲಿ ಶೇ 86.4 ರಷ್ಟು ಅಂದರೆ 1750 ಅಂಕಗಳಿಗೆ ಲಿಖಿತ ಪರೀಕ್ಷೆಗೆ ನಡೆದರೆ ಶೇ 13.6 ರಷ್ಟು ಅಂದರೆ 275 ಅಂಕಗಳು ಸಂದರ್ಶನಕ್ಕೆ ಮೀಸಲಾಗಿರು ತ್ತದೆ. ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ ಎರಡರಲ್ಲೂ ಬಂದ ಅಂಕಗಳಿಂದ ರ‍್ಯಾಂಕ್ ನಿರ್ಧಾರಗೊಳ್ಳುತ್ತದೆ.

‘ಸಿವಿಲ್ ಸರ್ವೀಸಸ್ ಪ್ರಾಥಮಿಕ ಪಾಠಗಳ ಸರಣಿ’ ಮುಕ್ತಾಯವಾಯಿತು. ಈ ಸರಣಿಯಲ್ಲಿ ಇಲ್ಲಿವರೆಗೆ ಪ್ರಕಟವಾಗಿರುವ ಲೇಖನಗಳ ಕುರಿತ ಪ್ರತಿಕ್ರಿಯೆಗಳಿಗೆ ಸ್ವಾಗತ. ನಿಮ್ಮ ಅಭಿಪ್ರಾಯಗಳನ್ನು shikshana@prajavani.co.in ಗೆ ಕಳುಹಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT