ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿವಿಲ್ ಸರ್ವೀಸಸ್ ಪರೀಕ್ಷೆ: ವಿಶ್ಲೇಷಣಾತ್ಮಕ ಉತ್ತರ ಬಯಸುವ ಮುಖ್ಯ ಪರೀಕ್ಷೆ!

ಪಾಠ – 7
ಅಕ್ಷರ ಗಾತ್ರ

ಸಿವಿಲ್‌ ಸರ್ವೀಸಸ್‌ನ ಮುಖ್ಯ ಪರೀಕ್ಷೆಯ ಪ್ರಶ್ನೆಗಳು ನಿಖರ, ವಿಶ್ಲೇಷಣಾತ್ಮಕ ಮತ್ತು ಮೌಲಿಕವಾದ ಉತ್ತರಗಳನ್ನು ನಿರೀಕ್ಷಿಸುತ್ತವೆ. ಹಾಗಾಗಿ ಈ ಪರೀಕ್ಷೆಗೆ ಕಠಿಣ ಸಿದ್ಧತೆ ಅಗತ್ಯ.

ಮೊದಲೇ ತಿಳಿಸಿದಂತೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮುಖ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಒಂಬತ್ತು ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಬೇಕು. ಪರೀಕ್ಷೆ ಎರಡು ಭಾಗಗಳಲ್ಲಿ ವಾರಾಂತ್ಯದಲ್ಲಿ ಒಟ್ಟು 5 ದಿನ ನಡೆಯುತ್ತದೆ. ಮೊದಲ ವಾರದ ಶುಕ್ರವಾರದಂದು ಮೂರು ಗಂಟೆ ಅವಧಿಯ ಪ್ರಬಂಧ ಪತ್ರಿಕೆ ಇರುತ್ತದೆ. ಶನಿವಾರ ಮತ್ತು ಭಾನುವಾರ ದಿನಕ್ಕೆ ಎರಡರಂತೆ ಮೂರು ತಾಸಿನ ‘ಸಾಮಾನ್ಯ ಅಧ್ಯಯನ’ದ ನಾಲ್ಕು ಪತ್ರಿಕೆಗಳಿರುತ್ತವೆ. ಮುಂದಿನ ಶನಿವಾರ ಮತ್ತು ಭಾನುವಾರ ಕಡ್ಡಾಯ ಭಾಷೆ (ಪೇಪರ್ ಎ), ಇಂಗ್ಲಿಷ್ (ಪೇಪರ್ ಬಿ) ಮತ್ತು ಎರಡು ಐಚ್ಛಿಕ ಪತ್ರಿಕೆಗಳಿರುತ್ತವೆ. ದಿನಕ್ಕೆ ಆರು ತಾಸು ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಪೂರ್ಣ ತಯಾರಿ, ತಾಳ್ಮೆ ಮತ್ತು ಆತ್ಮವಿಶ್ವಾಸದ ಜೊತೆ ಕೆಳಗಿನ ಅಂಶಗಳ ಕಡೆ ಗಮನ ಹರಿಸಬೇಕು.

ಪ್ರಶ್ನೆ ಅರ್ಥ ಮಾಡಿಕೊಳ್ಳಿ
ಪ್ರಶ್ನೆ ಪತ್ರಿಕೆಯಲ್ಲಿ ಎಷ್ಟು ಪ್ರಶ್ನೆ, ಭಾಗಗಳಿವೆ ? ಕಡ್ಡಾಯವಾಗಿ ಉತ್ತರಿಸಬೇಕಾದ ಪ್ರಶ್ನಗಳಿವೆಯೇ ? ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಉದಾಹರಣೆಗೆ, ಸಾಮಾನ್ಯ ಅಧ್ಯಯನದ ಪ್ರತ್ರಿಕೆ 1 ರಲ್ಲಿ 20 ಪ್ರಶ್ನೆಗಳಿದ್ದು ಎಲ್ಲವೂ ಕಡ್ಡಾಯವಾಗಿರುತ್ತವೆ. ಐಚ್ಛಿಕ ವಿಷಯಗಳ ಪತ್ರಿಕೆಗಳ ಎರಡು ವಿಭಾಗಗಳಲಿ ಎಂಟು ಪ್ರಶ್ನೆಗಳಿರುತ್ತವೆ. ಅದರಲ್ಲಿ 5 ಪ್ರಶ್ನೆಗಳಿಗೆ ಉತ್ತರ ಬರೆಯಬೇಕು ಮತ್ತು 1 ಮತ್ತು 5ನೆಯ ಪ್ರಶ್ನೆಗಳಿಗೆ ಕಡ್ಡಾಯ ಉತ್ತರಿಸಬೇಕು. ಪ್ರಶ್ನೆಗಳ ಯಾವ ಅಂಶದ ಕುರಿತು ಉತ್ತರಿಸಬೇಕು ಎಂಬುದಕ್ಕೆ ಪ್ರಶ್ನೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಕೆಲವು ಪ್ರಶ್ನೆಗಳಲ್ಲಿ ಉತ್ತರವೇನಿರಬೇಕು ಎಂಬ ಸುಳುಹು ಇರುತ್ತದೆ. ಅದರ ಲಾಭ ಪಡೆದುಕೊಳ್ಳಿ.

ಪದಮಿತಿಯ ಪಾಲನೆ ಮುಖ್ಯ
ಪ್ರತಿ ಪ್ರಶ್ನೆಗೂ ಇಂತಿಷ್ಟು ಪದಗಳ ಉತ್ತರವಿರಬೇಕು ಎಂಬ ನಿಯಮವಿದೆ. ಅದನ್ನು ಪಾಲಿಸಬೇಕು. ಉದಾಹರಣೆಗೆ, ಸಾಮಾನ್ಯ ಅಧ್ಯಯನ ಪತ್ರಿಕೆ 1 ರಲ್ಲಿ ಮೊದಲ ಹತ್ತು ಪ್ರಶ್ನೆಗಳನ್ನು 150 ಪದಗಳಲ್ಲಿ ಮತ್ತು 11 ರಿಂದ 20ನೆಯ ಪ್ರಶ್ನೆಗಳನ್ನು 250 ಪದಗಳಲ್ಲಿ ಉತ್ತರಿಸಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಉತ್ತರಕ್ಕೆ ಸತ್ವ ತುಂಬುವ ಪ್ರಮುಖ ಮಾಹಿತಿ, ಅಂಶಗಳನ್ನು ತಪ್ಪದೇ ಪದಮಿತಿಯ ಒಳಗೇ ಬರೆಯಬೇಕು. ವಿಷಯ ಚನ್ನಾಗಿದೆ ಮತ್ತು ಸುಲಭ ಎಂಬ ಕಾರಣಕ್ಕೆ ಅಗತ್ಯಕ್ಕೂ ಮೀರಿದ ಉತ್ತರಗಳನ್ನು ಬರೆಯವುದು ಬೇಡ. ಪದಮಿತಿಯನ್ನು ಪಾಲಿಸುವ ಅಭ್ಯರ್ಥಿಗಳು ಹೆಚ್ಚಿನ ಅಂಕಗಳಿಸಿರುವುದು ಈವರೆಗಿನ ಪರೀಕ್ಷೆಗಳಲ್ಲಿ ಋಜುವಾತಾಗಿದೆ. 10–20 ಪದಗಳು ಆಚೀಚೆಯಾದರೆ ಅಡ್ಡಿಯಿಲ್ಲ. ಅದು 50-100 ಪದಗಳನ್ನು ದಾಟಬಾರದು.

ಬಗೆ ಬಗೆಯ ಉತ್ತರಗಳು ಬೇಕು
ಸಾಮಾನ್ಯ ಅಧ್ಯಯನ ಮತ್ತು ಐಚ್ಛಿಕ(Optional) ವಿಷಯಗಳಿಗೆ ಬರೆಯುವ ಉತ್ತರಗಳು ಭಿನ್ನವಾಗಿರುತ್ತವೆ. ವಿಶೇಷವಾಗಿ ಜನರಲ್ ಸ್ಟಡೀಸ್ (ಸಾಮಾನ್ಯ ಅಧ್ಯಯನ) ಪತ್ರಿಕೆಗಳ ಪ್ರಶ್ನೆಗಳಿಗೆ ಸಾಮಾನ್ಯ ರೀತಿಯ ಉತ್ತರಕ್ಕಿಂತ ವಿಭಿನ್ನ ರೀತಿಯ ಉತ್ತರಗಳಿರಬೇಕು. ಉತ್ತರಗಳು ಹಲವು ಆಯಾಮಗಳನ್ನು ಒಳಗೊಂಡಿ ರಬೇಕು. ಉದಾಹರಣೆಗೆ ಅಂತರರಾಷ್ಟ್ರೀಯ ಸಂಬಂಧಗಳ ಕುರಿತ ಪ್ರಶ್ನೆಗೆ ವಸ್ತುಸ್ಥಿತಿ ಆಧರಿಸಿದ ಸಿದ್ಧ ಉತ್ತರದ ಜೊತೆಗೆ ದೇಶದ ಆಡಳಿತ, ಬದಲಾಗುತ್ತಿರುವ ಅಂತರರಾಷ್ಟ್ರೀಯ ಪರಿಸರ, ಇಲ್ಲಿನ ರಾಜಕೀಯ ವಿದ್ಯಮಾನ ಮತ್ತು ಆಂತರಿಕ ಹಾಗೂ ಬಾಹ್ಯ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ತರಿಸಬೇಕು. ನೆನಪಿರಲಿ, ಉತ್ತರದಲ್ಲಿ ಎಲ್ಲಿಯೂ ನೀವು ಪೂರ್ವಾಗ್ರಹ ಪೀಡಿತರು ಅಥವಾ ವಿಷಯದ ಕುರಿತು ಪಕ್ಷಪಾತ ಧೋರಣೆ ಉಳ್ಳವರು ಎಂದು ತೋರಿಸಿಕೊಳ್ಳಬೇಡಿ. ಈಗ ನಡೆಯುತ್ತಿರುವ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತದ ನಿಲುವು ಏನಾಗಿರ ಬೇಕು? ಎಂಬ ಪ್ರಶ್ನೆಗೆ ಈಗ ವಾಸ್ತವದಲ್ಲಿರುವುದನ್ನೇ ಬರೆಯಬೇಕು. ನಿಮ್ಮ ವೈಯಕ್ತಿಕ ನಿಲುವನ್ನು ಇಲ್ಲಿ ಬರೆಯಬಾರದು.

ಕ್ಲೀಷೆ ವಾಕ್ಯಗಳ ಬಳಕೆ ಬೇಡ
‘ಲಾಸ್ಟ್ ಬಟ್ ನಾಟ್ ದ ಲೀಸ್ಟ್’, ‘ಅಟ್ ದ ಔಟ್‌ಸೆಟ್’, ‘ಪ್ರಾಕ್ಟೀಸ್ ಮೇಕ್ಸ್ ಒನ್ ಪರ್ಫೆಕ್ಟ್’, ‘ಆಲ್ ಸೆಡ್ ಅಂಡ್ ಡನ್’...ಇಂಥ ಕ್ಲೀಷೆ ವಾಕ್ಯಗಳನ್ನು ಉತ್ತರದಲ್ಲಿ ಬರೆಯದಿರುವುದು ಒಳ್ಳೆಯದು. ಪ್ರತಿ ಪ್ರಶ್ನೆಯೂ ನಿಖರ ಮತ್ತು ವಿಶ್ಲೇಕ್ಷಣಾತ್ಮಕ ಉತ್ತರ ಬಯಸುತ್ತದೆ. ಆದ್ದರಿಂದ ವಿಷಯವನ್ನು ಸಾರ್ವತ್ರೀಕರಣಗೊಳಿಸ ಕೂಡದು. ಉತ್ತರದಲ್ಲಿ ಸರಿಯಾದ ಮಾಹಿತಿ, ಅದಕ್ಕೆ ಪೂರಕ ಸಾಕ್ಷ್ಯ ಮತ್ತು ಸರಿಯಾದ ಆರಂಭ ಹಾಗೂ ಅಂತ್ಯಗಳಿರಲೇಬೇಕು. ಸಾಮಾನ್ಯ ಅಧ್ಯಯನದ ಪತ್ರಿಕೆಗಳಿಗೆ ಅಭಿಪ್ರಾಯ ಆಧಾರಿತ ಮತ್ತು ಸತ್ಯಾಸತ್ಯತೆ ಆಧರಿತ ಉತ್ತರಗಳು ಬೇಕಿರುತ್ತವೆ. ಯಾವುದಕ್ಕೆ ಏನು? ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಉತ್ತರಿಸಿರಿ. ಯಾವುದಾದರೊಂದು ವಿಷಯದ ಕುರಿತು ನಿಮ್ಮ ಮುಕ್ತ ಅಭಿಪ್ರಾಯವೇನು? ಎಂಬ ಪ್ರಶ್ನೆಗೆ ನಿಮ್ಮ ಅಭಿಪ್ರಾಯದ ಜೊತೆಗೆ ಅದನ್ನು ಸಮರ್ಥಿಸುವ ಕೆಲ ಅಂಕಿ – ಅಂಶ, ವರದಿ, ಸರ್ಕಾರಿ ಹೇಳಿಕೆಗಳನ್ನಾದರೂ ಉಲ್ಲೇಖಿಸಬೇಕು.

ಪೂರ್ಣ ಉತ್ತರ, ಸರಳ ಭಾಷೆ
ಉತ್ತರಿಸುವ ಭಾಷೆ ಅತ್ಯಂತ ಸರಳವಾಗಿರಲಿ. ಹಾಗೆಯೇ ಪ್ರಶ್ನೆಗೆ ಬೇಕಾದ ಸಂಪೂರ್ಣ ಉತ್ತರ ಬರೆಯಿರಿ. ಮುಖ್ಯ ವಾಕ್ಯ, ಪದ, ಇಸವಿ, ಸಂಖ್ಯೆಗಳಿಗೆ ಅಡಿ ಗೆರೆ(ಅಂಡರ್‌ಲೈನ್) ಹಾಕಿರಿ. ಉತ್ತರಗಳು ಪಾಯಿಂಟ್ ರೂಪದಲ್ಲಿರ ಬೇಕೇ ಅಥವಾ ಪ್ಯಾರಾಗ್ರಾಫ್‌ಗಳಲ್ಲಿರಬೇಕೇ ಎಂಬ ಅನುಮಾನ ಹಲವು ಅಭ್ಯರ್ಥಿಗಳದ್ದು. ಹೀಗೇ ಉತ್ತರಿಸಬೇಕೆಂಬ ನಿಯಮವಿಲ್ಲ. ಆದರೆ ಕೆಲವು ಉತ್ತರಗಳನ್ನು ಬುಲೆಟ್ ಪಾಯಿಂಟ್ ರೂಪದಲ್ಲಿ, ಇನ್ನು ಕೆಲವನ್ನು ಪ್ಯಾರಾ ರೂಪದಲ್ಲಿ ಬರೆದರೆ ಮೌಲ್ಯಮಾಪಕರಿಗೂ ಏಕತಾನತೆ ಕಾಡುವುದಿಲ್ಲ. ಆಗ ಉತ್ತಮ ಅಂಕಗಳು ದೊರೆಯುವ ಸಾಧ್ಯತೆಗಳಿರುತ್ತವೆ. ಉತ್ತರ ರೂಪದಲ್ಲಿ ಎನನ್ನೇ ಬರೆದರೂ ಅದು ಸುಂದರವಾಗಿರಲೇ ಬೇಕೆಂದಿಲ್ಲ, ಆದರೆ ಸ್ಫುಟವಾಗಿರಬೇಕು. ಉತ್ತರ ಪತ್ರಿಕೆಯ ಮೊದಲಿನಿಂದ ಕೊನೆಯವರೆಗೂ ಒಂದೇ ರೀತಿಯ ಬರವಣಿಗೆ ಇರಬೇಕು. ಬರೆಯುವ ಚಿತ್ರಗಳು, ನಮೂದಿಸುವ ಭಾಗ, ಸಂಖ್ಯೆ, ಜಾಗಗಳು ಸ್ಪಷ್ಟವಾಗಿರಬೇಕು. ಇದಕ್ಕಾಗಿ ಈ ಮೊದಲೇ ಅಭ್ಯಾಸ ಮಾಡಿರಬೇಕು. ಹಳೆಯ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆದು ಅಭ್ಯಸಿಸಿರಬೇಕು.

ಚಿತ್ರ, ಗ್ರಾಫ್, ಪಟ್ಟಿಗಳ ಬಳಕೆ
ಸಾಮಾನ್ಯ ಅಧ್ಯಯನದ 3 ನೆಯ ಪತ್ರಿಕೆಯ ಆರ್ಥಿಕ ಅಭಿವೃದ್ಧಿಯ ಪತ್ರಿಕೆಯ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರದ ಏಜೆನ್ಸಿಗಳು, ಸಂಸ್ಥೆಗಳು ಬಿಡುಗಡೆ ಮಾಡುವ, ಮಾಡಿರುವ ತೀರಾ ಇತ್ತೀಚಿನ ಅಂಕಿ – ಅಂಶ ಮತ್ತು ಸಮೀಕ್ಷಾ ವರದಿಗಳ ಸಾರಾಂಶ ಬರೆಯಬೇಕಾಗುತ್ತದೆ. ಆಗ ಕೆಲವು ಭಾಗಗಳನ್ನು ಗ್ರಾಫ್, ಹಿಸ್ಟೋಗ್ರಾಂ, ಪೈ ಚಾರ್ಟ್‌ಗಳ ಮೂಲಕ ಪ್ರಸ್ತುತ ಪಡಿಸಬೇಕು. ಯೋಜನೆ, ನೀತಿ, ಅನುಷ್ಠಾನದ ಕ್ರಮ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಸ್ಥಾನ, ಅಂತರರಾಷ್ಟ್ರೀಯ ಸಾಲ, ಒಡಂಬಡಿಕೆ, ವಿದೇಶಿ ಮಾರುಕಟ್ಟೆಯಲ್ಲಿ ನಮ್ಮ ಹಣಕ್ಕಿರುವ ವಿನಿಮಯ (ಮುಖ) ಬೆಲೆಯ ಕುರಿತು ನಿಖರ ಉತ್ತರಗಳು ಇರಬೇಕು. ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತರ ಹೇಳಿಕೆ, ನಮ್ಮ ಆರ್ಥಿಕ ಸಚಿವಾಲಯದ ಘೋಷಣೆಗಳನ್ನು ಉಲ್ಲೇಖಿಸಿದ್ದಷ್ಟೂ ಉತ್ತರ ಮತ್ತಷ್ಟು ಗಟ್ಟಿಯಾಗುತ್ತದೆ. ಬರೆಯುವ ಪ್ರತಿಯೊಂದು ವಾಕ್ಯಕ್ಕೂ ನಿಶ್ಚಿತತೆ ಇರಬೇಕು. ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಚಿತ್ರ ಫ್ಲೊಚಾರ್ಟ್ ಬರೆಯಬೇಕು. ಜೀವಿವೈವಿಧ್ಯ, ಪರಿಸರ ಕುರಿತಾದ ಪ್ರಶ್ನೆಗಳಿಗೆ ಹೋರಾಟ, ವರದಿ, ಕಾನೂನು, ತೀರ್ಪುಗಳ ಬಗ್ಗೆ ಉಲ್ಲೇಖವಿರಬೇಕು.

ಐಚ್ಛಿಕ ವಿಷಯಗಳ ಪ್ರಶ್ನೆಗಳಿಗೆ ಕರಾರುವಾಕ್ಕಾದ ಉತ್ತರಗಳನ್ನೇ ಬರೆಯಬೇಕಾಗುತ್ತದೆ. ಪ್ರಶ್ನೆಗಳಿಗೆ ಅಗತ್ಯವಿದ್ದಷ್ಟು ಉತ್ತರ ಬರೆಯುವ ಮಿತಿ ಮತ್ತು ಸ್ವಾತಂತ್ರ್ಯ ಎರಡೂ ಅಲ್ಲಿರುತ್ತವೆ. ಉದಾಹರಣೆಗೆ, ಭೌತವಿಜ್ಞಾನದ ‘ಹುಕ್ಸ್‌ನ ನಿಯಮ’ ವನ್ನು ಗಣಿತರೂಪದಲ್ಲಿ ನಿರೂಪಿಸಿ ಎಂದು ಕೇಳಿದರೆ ಎಂಟೊಂಬತ್ತು ಸಾಲುಗಳಲ್ಲಿ ಅದನ್ನು ಬರೆದು ಮುಗಿಸಬಹುದು. ಅಗತ್ಯ ದತ್ತಾಂಶ, ಚಿತ್ರ, ಸಮೀಕರಣಗಳೊಂದಿಗೆ ನಿರೂಪಿಸಿದ ಮೇಲೆ ಬರೆಯಲು ಮತ್ತೇನೂ ಇರುವುದಿಲ್ಲ. ಇಲ್ಲಿ ಪದಗಳ ಮಿತಿಗಿಂತ ವಿಷಯದ ಪೂರ್ಣ ಪಾಠದ ಕಡೆ ಗಮನವಿರಬೇಕು.

ವ್ಯಾಕರಣ ಶುದ್ಧತೆ ಮುಖ್ಯ
ನಿಮ್ಮ ಉತ್ತರಗಳ ವ್ಯಾಪ್ತಿ ಏನೇ ಇರಲಿ, ಬರೆದಿರುವ ಪ್ರತಿ ವಾಕ್ಯವೂ ವ್ಯಾಕರಣ ಬದ್ಧವಾಗಿರಬೇಕು. ಅದಕ್ಕಾಗಿ ನೀವು ವ್ಯಾಕರಣ ಪಂಡಿತರಾಗಬೇಕಿಲ್ಲ! ಯಾವ ಭಾಷೆಯಲ್ಲಿ ಉತ್ತರಿಸುತ್ತೀರೋ ಆಯಾ ಭಾಷೆಯ ವ್ಯಾಕರಣ ಗೊತ್ತಿರಬೇಕು, ಇಲ್ಲವೆ ಬರವಣಿಗೆಯಲ್ಲಿ ವ್ಯಾಕರಣ ಶುದ್ಧತೆ ಇರುವಂತೆ ನೋಡಿಕೊಳ್ಳಬೇಕು. ಅಲ್ಪ ಪ್ರಾಣ, ಮಹಾ ಪ್ರಾಣ, ಒತ್ತಕ್ಷರ, ದೀರ್ಘ, ಹ್ರಸ್ವ ಸ್ವರಗಳ ಕುರಿತು ಕಾಳಜಿ ವಹಿಸಬೇಕು. ಸ್ಪೆಲ್ಲಿಂಗ್ ಮಿಸ್ಟೇಕ್ ಇರಲೇ ಕೂಡದು. ಇಂಗ್ಲಿಷ್‌ನಲ್ಲಿ ಉತ್ತರಿಸುವಾಗ ‘ಪ್ರಿಪೊಸಿಷನ್’ ಮತ್ತು ‘ಟೆನ್ಸ್’ ಗಳನ್ನೂ ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು.

(ಮುಂದಿನ ವಾರ: ಪಾಠ 8– ಮೌಲಿಕ ಪ್ರಬಂಧದ ನಿಬಂಧನೆಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT