ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ ಶಾಲಾ ಸಹಶಿಕ್ಷಕರ ನೇಮಕಾತಿ: ಗಣಿತ, ವಿಜ್ಞಾನ ಪತ್ರಿಕೆಗೆ ಹೀಗಿರಲಿ ತಯಾರಿ

ಪ್ರಾಥಮಿಕ ಶಾಲಾ ಸಹಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ
Last Updated 30 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ವಿಜ್ಞಾನ ಪದವೀಧರ ಶಿಕ್ಷಕರಾಗಲುಸಹಶಿಕ್ಷಕರ ನೇಮಕಾತಿಗಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-2 (ಗಣಿತ ಮತ್ತು ವಿಜ್ಞಾನ)ರಲ್ಲಿ ಉತ್ತಮ ಅಂಕಗಳಿಸಬೇಕು. ಇದು 150 ಅಂಕಗಳ ಪತ್ರಿಕೆಯಾ ಗಿದ್ದು, ಅಭ್ಯರ್ಥಿಗಳು ಶೇ 45 ಅಂಕ ಗಳಿಕೆ ಕಡ್ಡಾಯ. ಅಲ್ಲದೇ ಇಲ್ಲಿ ಗಳಿಸಿದ ಅಂಕಗಳನ್ನು ಮೆರಿಟ್‌ಗೆ ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಪತ್ರಿಕೆಯಲ್ಲಿ ಹೆಚ್ಚು ಅಂಕಗಳಿಸುವುದು ಬಹು ದೊಡ್ಡ ಸವಾಲು.

ಈಗ ಸಮಯ ಕಡಿಮೆ ಇರುವುದರಿಂದ,ಹೆಚ್ಚು ಅಧ್ಯಯನ ಮಾಡಬೇಕು. ಹಾಗಂತ ಅಭ್ಯರ್ಥಿಗಳು ಭಯ ಬೀಳುವ ಅಗತ್ಯವಿಲ್ಲ. ಅದಕ್ಕೊಂದಿಷ್ಟು ಪೂರ್ವಯೋಜಿತ ತಯಾರಿ ಅಗತ್ಯ.

ನಿರ್ದಿಷ್ಟ ವೇಳಾಪಟ್ಟಿ ಇರಲಿ:ಗಣಿತ ಮತ್ತು ವಿಜ್ಞಾನ ಶಿಕ್ಷಕರು ಮೂರು ಪತ್ರಿಕೆ (ಪತ್ರಿಕೆ-1, 2 ಮತ್ತು 3)ಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಈ ಆಧಾರದಲ್ಲಿ ನಿರ್ದಿಷ್ಟ ವೇಳಾಪಟ್ಟಿ ತಯಾರಿಸಿಕೊಳ್ಳಿ. ಅದರಲ್ಲಿ ಪತ್ರಿಕೆ-1ಕ್ಕೆ 4 ಗಂಟೆ, ಪತ್ರಿಕೆ-2ಕ್ಕೆ 6 ಗಂಟೆ ಹಾಗೂ ಪತ್ರಿಕೆ-3ಕ್ಕೆ 2 ಗಂಟೆಗಳ ಸಮಯ ಮೀಸಲಿಡಿ. ಪತ್ರಿಕೆ-2 ಕ್ಕೆ ಮೀಸಲಾದ 6 ಗಂಟೆಗಳಲ್ಲಿ ಗಣಿತ ಹಾಗೂ ವಿಜ್ಞಾನ ಅಧ್ಯಯನಕ್ಕೆ ತಲಾ 3 ಗಂಟೆ ಮೀಸಲಿಡಿ.

ಪತ್ರಿಕೆಯ ಸ್ವರೂಪ ಗಮನಿಸಿ:ಮೇಲೆ ತಿಳಿಸಿದಂತೆ ಗಣಿತ ಮತ್ತು ವಿಜ್ಞಾನ ಪತ್ರಿಕೆಯು 150 ಅಂಕಗಳಿಗೆ ಮೀಸಲಾಗಿದ್ದು, ಇದರಲ್ಲಿ 50 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳು ಹಾಗೂ 100 ಅಂಕಗಳಿಗೆ ವಿವರಾಣಾತ್ಮಕ ಪ್ರಶ್ನೆಗಳಿರುತ್ತವೆ. ಇದರಲ್ಲಿ ಪ್ರತಿ ವಿಷಯದಲ್ಲೂ ಬೋಧನಾ ಪದ್ಧತಿಗೆ ಅನುಗುಣವಾಗಿ ಶೇ 8 ರಿಂದ10 ಅಂಕಗಳ ಪ್ರಶ್ನೆಗಳಿರುತ್ತವೆ. ಒಟ್ಟಾರೆ ಪ್ರತಿ ವಿಷಯದಲ್ಲೂ ಅಂದರೆ ಗಣಿತಕ್ಕೆ 75 ಹಾಗೂ ವಿಜ್ಞಾನಕ್ಕೆ 75 ಅಂಕಗಳಿಗೆ ಪ್ರಶ್ನೆಗಳಿರುತ್ತವೆ.

ಪಠ್ಯದ ಖಚಿತತೆ ಇರಲಿ: ಈಗಾಗಲೇ ಇಲಾಖೆಯು ಸಹಶಿಕ್ಷಕರ ನೇಮಕಾತಿ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ಪಠ್ಯಕ್ರಮವನ್ನು ಬಿಡುಗಡೆ ಮಾಡಿದೆ. ಅದರನ್ವಯ ವಿಷಯವನ್ನು ಅಧ್ಯಯನ ಮಾಡಿ. ಇದಕ್ಕಾಗಿ 4 ರಿಂದ 12 ನೇ ತರಗತಿವರೆಗಿನ ಎನ್.ಸಿ.ಇ.ಆರ್.ಟಿ ಹಾಗೂ ಕರ್ನಾಟಕ ರಾಜ್ಯ ಪಠ್ಯ ಪುಸ್ತಕ ಮಂಡಳಿಯ ಪಠ್ಯಪುಸ್ತಕಗಳನ್ನು ಅಧ್ಯಯನ ಮಾಡಿ.

ಅಧ್ಯಯನದ ಸುಲಭರೂಪಕ್ಕಾಗಿ ಗಣಿತದಲ್ಲಿ ಅಂಕಗಣಿತ, ಬೀಜಗಣಿತ ಹಾಗೂ ರೇಖಾಗಣಿತದ ಮೂಲಾಂಶಗಳನ್ನು ಅರ್ಥೈಸಿಕೊಳ್ಳಿ. ಮೂರೂ ವಿಭಾಗಗಳಲ್ಲಿ ಗಣಿತದ ಮೂಲಾಂಶಗಳಾದ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರಗಳನ್ನು ವಿವಿಧ ಹಂತಗಳಲ್ಲಿ ಅನ್ವಯಿಸುವ ಹಾಗೂ ಸಮಸ್ಯೆ ಬಿಡಿಸುವ ವಿಧಾನಗಳನ್ನು ತಿಳಿದುಕೊಳ್ಳಿ. ಅದರಂತೆ ವಿಜ್ಞಾನದಲ್ಲಿ ಭೌತವಿಜ್ಞಾನ ರಸಾಯನವಿಜ್ಞಾನ ಹಾಗೂ ಜೀವವಿಜ್ಞಾನ ಪ್ರತ್ಯೇಕವಾಗಿ ಅಧ್ಯಯನ ಮಾಡಿ. ಪ್ರತಿ ವಿಭಾಗದ ಮೂಲ ಪರಿಕಲ್ಪನೆಯನ್ನು ಅರ್ಥೈಸಿಕೊಂಡರೆ ಯಾವುದೇ ಪ್ರಶ್ನೆಗೂ ಉತ್ತರಿಸುವ ಸಾಮರ್ಥ್ಯ ಬೆಳೆಯುತ್ತದೆ.

ಟಿಪ್ಪಣಿ ಮಾಡಿಕೊಳ್ಳಿ: ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ತತ್ವಗಳು, ಸಿದ್ಧಾಂತಗಳು ಹಾಗೂ ಸೂತ್ರಗಳ ಸಂಖ್ಯೆ ಸಾಕಷ್ಟಿರುತ್ತವೆ. ಪ್ರತಿ ವಿಭಾಗದಲ್ಲಿನ ತತ್ವ, ಸಿದ್ಧಾಂತ ಹಾಗೂ ಸೂತ್ರಗಳನ್ನು ಪ್ರತ್ಯೇಕವಾಗಿ ಟಿಪ್ಪಣಿ ಮಾಡಿಕೊಳ್ಳಿ. ಪರಿಕಲ್ಪನೆ ಅರ್ಥೈಸಿಕೊಳ್ಳಲು ಇದು ತುಂಬಾ ಸಹಕಾರಿ. ಪರಿಕಲ್ಪನೆಯ ಸ್ಪಷ್ಟ ಚಿತ್ರಣಕ್ಕಾಗಿ ಮೈಂಡ್‌ಮ್ಯಾಪ್ ತಂತ್ರವನ್ನು ಬಳಸಿ ಟಿಪ್ಪಣಿ ಮಾಡಿಕೊಳ್ಳಿ.

ಬರವಣಿಗೆಗೆ ಒತ್ತು ಕೊಡಿ: ಪತ್ರಿಕೆ-2 ರಲ್ಲಿ 100 ಅಂಕಗಳ ಪ್ರಶ್ನೆಗಳಿಗೆ ವಿವರಣಾತ್ಮಕವಾಗಿ ಉತ್ತರ ಬರೆಯುವುದೇ ಬಹುದೊಡ್ಡ ಸವಾಲು. ಇದನ್ನು ಸುಲಭಗೊಳಿಸಲು ಪ್ರತಿದಿನ ಕನಿಷ್ಠ 3 ರಿಂದ 4 ಗಂಟೆಗಳ ಕಾಲ ಬರವಣಿಗೆ ತಾಲೀಮು ಮಾಡಿ. ಗಣಿತದಲ್ಲಿ ಸಮಸ್ಯೆಗಳನ್ನು ಹಂತಹಂತವಾಗಿ ಬಿಡಿಸುವುದನ್ನು ರೂಢಿಸಿಕೊಳ್ಳಿ. ವಿಜ್ಞಾನದಲ್ಲಿ ನಿರ್ದಿಷ್ಟ ವಿಷಯವನ್ನು ಪ್ರಶ್ನೆಯ ಪ್ರಸ್ತುತತೆ ಮತ್ತು ಅಂಕಕ್ಕೆ ತಕ್ಕಂತೆ ವಿವರಿಸುವ, ವಿಶ್ಲೇಷಿಸುವ ಹಾಗೂ ತಾರ್ಕಿಕವಾಗಿ ಉತ್ತರ ಬರೆಯುವ ಕೌಶಲ ಬೆಳೆಸಿಕೊಳ್ಳಿ.

ಹಳೆಯ ಪ್ರಶ್ನೆಪತ್ರಿಕೆ ಬಿಡಿಸಿ: ಪ್ರಶ್ನೆಗಳಿಗೆ ಉತ್ತರಿಸುವ ಕೌಶಲ ಬೆಳೆಸಿಕೊಳ್ಳಲು ಹಾಗೂ ಪ್ರಶ್ನೆಗಳ ಸ್ವರೂಪ ಅರಿಯಲು ಹಳೆಯ ಪ್ರಶ್ನೆಪತ್ರಿಕೆಗಳು ಹೆಚ್ಚು ಸಹಕಾರಿಯಾಗಿವೆ. ಅವುಗಳ ಸ್ವರೂಪ ಗಮನಿಸಿದರೆ ನಿಮ್ಮ ಓದಿಗೊಂದು ಸ್ಪಷ್ಟತೆ ಸಿಗುತ್ತದೆ.

ಪರಿಣಿತರ ಸಲಹೆ ಪಡೆಯಿರಿ: ಪ್ರತಿ ವಿಷಯದ ಬಗ್ಗೆ ಹೆಚ್ಚುವರಿ ಹಾಗೂ ಪ್ರಸ್ತುತ ಮಾಹಿತಿ ಪಡೆಯಲು ವಿಷಯ ಪರಿಣಿತರ ಸಲಹೆ ಪಡೆಯಿರಿ. ಶಿಕ್ಷಣ ಇಲಾಖೆಯು ಏಪ್ರಿಲ್ 1 ರಿಂದ ಪ್ರತಿ ಬ್ಲಾಕ್ ಹಂತದಲ್ಲಿ ವಿಷಯ ಪರಿಣಿತರ ತಂಡದೊಂದಿಗೆ ಉಚಿತ ಪರೀಕ್ಷಾ ತರಬೇತಿ ನೀಡಲು ಸಿದ್ಧತೆ ಮಾಡಿಕೊಂಡಿದೆ. ಇದರ ಸದುಪಯೋಗ ಪಡೆದುಕೊಳ್ಳಿ.

ಇನ್ನೂ ಏನೇನು ಓದಬೇಕು?

ಸಹ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಗಣಿತ ಪುಸ್ತಕಗಳ ಜೊತೆಗೆ, 6 ರಿಂದ 10ನೇ ತರಗತಿ ವರೆಗಿನ ಕನ್ನಡ ಭಾಷೆ ಮತ್ತು ಸಾಹಿತ್ಯ ಚರಿತ್ರೆಯ ಪ್ರಾಥಮಿಕ ಜ್ಞಾನದ ಜೊತೆಗೆ ವ್ಯಾಕರಣ ಓದಿಕೊಳ್ಳಬೇಕು. 6, 7, 8ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪುಸ್ತಕಗಳು ಮತ್ತು ಇಂಗ್ಲಿಷ್‌ ಭಾಷೆಯ ಪಠ್ಯಪುಸ್ತಕಗಳ ಅಧ್ಯಾಯದ ಕೊನೆಯಲ್ಲಿ ನೀಡಲಾಗುವ ವ್ಯಾಕರಣದ ಭಾಗ, ಕವಿ, ಕೃತಿ ಪರಿಚಯ ಓದಿಕೊಳ್ಳಬೇಕು. ಶಿಶು ಮನೋವಿಜ್ಞಾನ ಮತ್ತು ವಿಕಸನಕ್ಕೆ ಸಂಬಂಧಿಸಿದಂತೆ ಡಿ.ಇಡಿ ಪದವಿಯಲ್ಲಿರುವ ಪಠ್ಯಗಳನ್ನು ಓದಬಹುದು.

(ಗಣಿತ ಮತ್ತು ವಿಜ್ಞಾನ ಪತ್ರಿಕೆಗಳನ್ನು ಬರೆಯುವ ಅಭ್ಯರ್ಥಿಗಳು 1 ರಿಂದ 10ನೇ ತರಗತಿಯ ಪಠ್ಯಪುಸ್ತಕ ಗಳಿಗಾಗಿ https://ktbs.kar.nic.in/New/index.html#!/textbook ಈ ಲಿಂಕ್ ಕ್ಲಿಕ್ ಮಾಡಿ ಮತ್ತು ಪಿಯುಸಿ ಕನ್ನಡ ಮಾಧ್ಯಮದ ಪಠ್ಯ ಪುಸ್ತಕಗಳಿಗಾಗಿ https://www.governmentexams.co.in/1st-puc-textbooks/ ಈ ಲಿಂಕ್ ಕ್ಲಿಕ್ ಮಾಡಿ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT