ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಶಿಕ್ಷಕರ ನೇಮಕಾತಿ ಪರೀಕ್ಷೆ: ‘ಸಾಮಾನ್ಯ ಜ್ಞಾನ’ಕ್ಕೆ ಬೇಕು ಸಮಗ್ರ ಓದು

Last Updated 4 ಮೇ 2022, 19:30 IST
ಅಕ್ಷರ ಗಾತ್ರ

‘ಸಾಮಾನ್ಯ ಜ್ಞಾನ‘ ಪತ್ರಿಕೆಯ ಸಿದ್ಧತೆಗಾಗಿ ರಾಜಕೀಯ, ವಿಜ್ಞಾನ–ತಂತ್ರಜ್ಞಾನ, ಪ್ರಚಲಿತ ವಿದ್ಯಮಾನ ಸೇರಿದಂತೆ ಎಲ್ಲ ವಿಷಯಗಳನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಆಧರಿಸಿ ನಡೆಸುವ ಅಧ್ಯಯನ ಕೂಡ ಸಿದ್ಧತೆಗೆ ಪೂರಕವಾಗುತ್ತದೆ.

**

ಪ್ರಾಥಮಿಕ ಶಾಲಾ ಶಿಕ್ಷಕರ (6 ರಿಂದ 8ನೇ ತರಗತಿ) ನೇಮಕಾತಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-1ರಲ್ಲಿ ‘ಸಾಮಾನ್ಯ ಜ್ಞಾನ’ಕ್ಕೆ 25 ಅಂಕಗಳ 25 ಪ್ರಶ್ನೆಗಳಿರುತ್ತವೆ. ಪ್ರಚಲಿತ ವಿದ್ಯಮಾನ ಹಾಗೂ ಮಾನಸಿಕ ಸಾಮರ್ಥ್ಯವೂ ಸಾಮಾನ್ಯ ಜ್ಞಾನದ ಭಾಗವಾಗಿರುತ್ತವೆ. ಇದು ವಿಶಾಲವಾದ ವ್ಯಾಪ್ತಿಯ, ಸಮಗ್ರ ವಿಷಯಗಳನ್ನು ಹೊಂದಿದೆ.ಹೆಚ್ಚು ತಿಳಿಯುವ ಆಸಕ್ತಿ ಇದ್ದರೆ ಮಾತ್ರ ಇದರಲ್ಲಿ ಯಶಸ್ವಿಯಾಗಬಹುದು.

ಸಿದ್ದತೆಗೂ ಮುನ್ನ: ಪ್ರಸ್ತುತ ಸಾಮಾನ್ಯ ಜ್ಞಾನ ಪರೀಕ್ಷೆಗೆ ಮೀಸಲಿಸಿದ ಪಠ್ಯಕ್ರಮವನ್ನು ಅಧ್ಯಯನ ಮಾಡಿ, ಅದನ್ನು ವಿಶ್ಲೇಷಣೆಗೆ ಒಳಪಡಿಸಿಕೊಂಡರೆ ಮುಂದಿನ ತಯಾರಿಗೆ ಒಂದು ಸ್ಪಷ್ಟ ಚಿತ್ರಣ ದೊರೆಯುತ್ತದೆ. ಇದರ ಜೊತೆಗೆ, ಹಳೆಯ ಪ್ರಶ್ನೆ ಪತ್ರಿಕೆ ಗಳನ್ನು ಗಮನಿಸಿ, ಈಗಿನ ಪಠ್ಯಕ್ರಮವನ್ನು ಅಧ್ಯಯನ ಮಾಡಿದರೆ, ಸಿದ್ಧತೆಗೊಂದು ದಾರಿ ಸಿಗುತ್ತದೆ. ಅಂದ ಹಾಗೆ, 2019ರ ಪತ್ರಿಕೆಯ ಸಾಮಾನ್ಯ ಜ್ಞಾನ ಪ್ರಶ್ನೆಪತ್ರಿಕೆಯಲ್ಲಿ ವಿಜ್ಞಾನಕ್ಕೆ 2 ಪ್ರಶ್ನೆಗಳು, ಸಮಾಜ ವಿಜ್ಞಾನ ಮತ್ತು ಗಣಿತಕ್ಕೆ ತಲಾ 4, ಸಾಹಿತ್ಯ ಮತ್ತು ಸಂಸ್ಕೃತಿಗೆ 5, ಪ್ರಚಲಿತ ವಿದ್ಯಮಾನ ಮತ್ತು ಕ್ರೀಡೆಗೆ ತಲಾ 3 ಪ್ರಶ್ನೆಗಳು ಹಾಗೂ ಮಾನಸಿಕ ಸಾಮರ್ಥ್ಯಕ್ಕೆ 4 ಪ್ರಶ್ನೆಗಳು ಮೀಸಲಾಗಿದ್ದವು.

ಏನೇನು ಓದಬೇಕು?: ‘ಸಾಮಾನ್ಯ ಜ್ಞಾನ’ವು ವಿವಿಧ ವಿಷಯಗಳಲ್ಲಿ ಅಡಕವಾಗಿದೆ. ಆದ್ದರಿಂದ ಐಚ್ಛಿಕ ಪತ್ರಿಕೆಗೆ ಅಗತ್ಯವಾದ ಎಲ್ಲಾ ವಿಷಯ ಗಳನ್ನು ಓದುವ ಮೂಲಕ ಪೂರಕ ಮಾಹಿತಿ ಸಂಗ್ರಹಿಸಿ. ಪ್ರತಿ ವಿಷಯದ ಮೂಲಾಂಶಗಳು, ತತ್ವ ಸಿದ್ದಾಂತ, ಸೂತ್ರಗಳನ್ನು ತಿಳಿದುಕೊಳ್ಳಿ. ಇತಿಹಾಸದಲ್ಲಿ ಪ್ರಮುಖ ಘಟನಾವಳಿಗಳ ಇಸವಿಗಳನ್ನು ನೆನಪಿಟ್ಟುಕೊಳ್ಳಿ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರಸಿದ್ದ ಪುಸ್ತಕಗಳು ಹಾಗೂ ಲೇಖಕರು, ವಿವಿಧ ಕ್ಷೇತ್ರಗಳಿಗೆ ನೀಡುವ ಪ್ರಶಸ್ತಿ ಪುರಸ್ಕಾರಗಳ ಪಟ್ಟಿ, ವಿವಿಧ ಸಂಶೋಧಕರು ಹಾಗೂ ಸಂಶೋಧನಾ ಪಟ್ಟಿ ತಯಾರಿಸಿಕೊಂಡರೆ ಪರೀಕ್ಷೆ ಎದುರಿಸುವುದು ಸುಲಭವಾಗುತ್ತದೆ.

ವಿಶ್ವದಾದ್ಯಂತ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳನ್ನು ಅರಿಯಲು ನಿಯತಕಾಲಿಕೆಗಳು ಹಾಗೂ ದಿನಪತ್ರಿಕೆಗಳು ಹೆಚ್ಚು ಪರಿಣಾಮಕಾರಿ ಓದಿನ ಸಂಪನ್ಮೂಲಗಳು. ಅವುಗಳಲ್ಲಿನ ಮಹತ್ವದ ಲೇಖನಗಳು, ಟಾಪರ್ಸ್‌ ಯಶಸ್ಸಿನ ವಿಮರ್ಶೆ, ಸಂದರ್ಶನದ ಬಗ್ಗೆ ಚರ್ಚೆಗಳು ಅಧ್ಯಯನಕ್ಕೊಂದು ಮಾರ್ಗ ತೋರಿಸುತ್ತವೆ.

ದಿನಪತ್ರಿಕೆಗಳು ರಾಜಕೀಯ, ರಾಷ್ಟ್ರೀಯ, ವ್ಯಾಪಾರ, ಕ್ರೀಡೆ, ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವಿದ್ಯಮಾನಗಳ ಆಳವಾದ ಜ್ಞಾನವನ್ನು ನೀಡುತ್ತವೆ. ಸಂಪಾದಕೀಯ ಪುಟ ಹಾಗೂ ವಿಶೇಷ ಪುರವಣಿಗಳು ಮಾಹಿತಿಯ ಮೂಲಗಳಾಗಿವೆ.

ಅಭ್ಯರ್ಥಿಗಳು ಕನಿಷ್ಠ ಎರಡು ಪತ್ರಿಕೆಗಳನ್ನು ಓದುವ ಅಭ್ಯಾಸ ರೂಢಿಸಿಕೊಂಡಿರಬೇಕು. ಅದರಲ್ಲಿ ಒಂದು ಆಂಗ್ಲಭಾಷಾ ಪತ್ರಿಕೆ ಇರಲಿ. ಸ್ಥಳೀಯ ಭಾಷೆಯ ಪತ್ರಿಕೆಗಳನ್ನು ಕಡ್ಡಾಯವಾಗಿ ಓದಿ. ಸಾಮಾನ್ಯ ಜ್ಞಾನದ ಅಭ್ಯಾಸಕ್ಕಾಗಿ ಹಲವಾರು ಆನ್‌ಲೈನ್‌ ರಸಪ್ರಶ್ನೆ ಜಾಲ ತಾಣಗಳಿವೆ. ಅವುಗಳಿಗೆ ಲಾಗಿನ್‌ ಆಗುವ ಮೂಲಕ ನಿಮ್ಮ ಜ್ಞಾನ ಪರೀಕ್ಷಿಸಿಕೊಳ್ಳಬಹುದು ಮತ್ತು ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲೂಬಹುದು.

ಭೌಗೋಳಿಕ, ವಿಶ್ವದ ಮಾಹಿತಿ: ಭಾರತವೂ ಸೇರಿದಂತೆ ವಿವಿಧ ದೇಶಗಳ ಭೌಗೋಳಿಕ ಲಕ್ಷಣಗಳು, ಸಾಗರಗಳು, ಸಮುದ್ರಗಳು, ನದಿಗಳು, ಕರಾವಳಿ ತೀರ ಗಳು, ಮರುಭೂಮಿಗಳು, ಜ್ವಾಲಾಮುಖಿಗಳು, ದ್ವೀಪಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿಕೊಳ್ಳಿ. IMF, WTO, WB, IMO ನಂತಹ ವಿಶ್ವದ ಪ್ರಮುಖ ಸಂಸ್ಥೆಗಳು ಪರೀಕ್ಷೆಯ ದೃಷ್ಟಿಕೋನದಿಂದ ಪ್ರಮುಖವಾಗಿವೆ, ಅವುಗಳ ರಚನೆ, ಕಾರ್ಯ ನಿರ್ವಹಣೆ, ತಿಳಿದಿರಬೇಕು. ಅಂತೆಯೇ ASEAN, SAARC ನಂತಹ ಪ್ರಮುಖ ಜಾಗತಿಕ ಗುಂಪುಗಳು. ಅವುಗಳ ಪ್ರಧಾನ ಕಚೇರಿ, ಅಧ್ಯಕ್ಷರು ಅಥವಾ ಅವುಗಳ ಪ್ರಮುಖ ಘಟನೆಗಳ ಬಗ್ಗೆ ತಿಳಿದಿರಬೇಕು.

ದೈನಂದಿನ ವಿಜ್ಞಾನ ಕುರಿತು ಹಲವು ಪ್ರಶ್ನೆಗಳಿರುತ್ತವೆ. ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದ ಸೈದ್ಧಾಂತಿಕ ಅಂಶಗಳಿಗಿಂತ ಹೆಚ್ಚಾಗಿ ವಿಜ್ಞಾನದ ಅನ್ವಯದ ಪ್ರಶ್ನೆಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತದೆ. ಇದಲ್ಲದೆ, ಸಮೂಹ ಸಂವಹನ, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಜೈವಿಕ ತಂತ್ರಜ್ಞಾನ ಸೇರಿದಂತೆ ವಿವಿಧ ವಿಷಯಗಳಲ್ಲಿ ಒಳಗೊಂಡಿರುವ ತಂತ್ರಜ್ಞಾನಗಳ ಕುರಿತು ಮಾಹಿತಿ ಸಂಗ್ರಹಿಸಬೇಕು. ಬಹುತೇಕ ಇಲ್ಲಿನ ಪ್ರಶ್ನೆಗಳು ಪ್ರೌಢಶಾಲಾ ಮಟ್ಟದ ಪ್ರಶ್ನೆಗಳಾಗಿರುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ಸಂವಿಧಾನ ಮತ್ತು ನೀತಿ: ಭಾರತದ ರಾಜಕೀಯ ವ್ಯವಸ್ಥೆಯ ಕಾರ್ಯನಿರ್ವಹಣೆಯ ಕುರಿತು ತಿಳಿಯಲು ಸಂವಿಧಾನ ವಿಷಯವನ್ನು ಓದಬೇಕು. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿದ ಪ್ರಮುಖ ಸಾಮಾಜಿಕ ಯೋಜನೆಗಳ ವೈಶಿಷ್ಟ್ಯಗಳ ಬಗ್ಗೆಯೂ ತಿಳಿದಿರಬೇಕು. ಏಕೆಂದರೆ ಈ ಪತ್ರಿಕೆಯಲ್ಲಿ ಸಾಂವಿಧಾನಿಕ ತಿದ್ದುಪಡಿಗಳ ಮೇಲೆ ಪ್ರಶ್ನೆಗಳನ್ನು ನಿರೀಕ್ಷಿಸಬಹುದು.

ಮಾನಸಿಕ ಸಾಮರ್ಥ್ಯ: ಅಕ್ಷರ ಹಾಗೂ ಸಂಖ್ಯೆ ಸರಣಿ ಕ್ರಮ, ಕೋಡಿಂಗ್ , ಮಾನವ ಸಂಬಂಧಗಳು, ಮಾರ್ಗ ಜ್ಞಾನ, ಗಣಿತಿಯ ಲೆಕ್ಕಾಚಾರಗಳು, ವಿವಿಧ ಆಕೃತಿಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಕ್ಷೇತ್ರಗಣತಿಯ ಮಾಹಿತಿ, ಚಿತ್ರ ನಕ್ಷೆ ಕುರಿತ ವಿಮರ್ಶಾತ್ಮಕ ಚಿಂತನೆಯಂತಹ ಮಾಹಿತಿಗಳನ್ನು ಅಧ್ಯಯನ ಮಾಡಿ.

ಟಿಪ್ಪಣಿ ಮಾಡಿಟ್ಟುಕೊಳ್ಳಿ:ಓದಿದ ಪ್ರತಿ ಅಂಶವನ್ನು ಟಿಪ್ಪಣಿ ಮಾಡಿಕೊಳ್ಳಬೇಕು. ಈ ಮಾಹಿತಿಯು ಜ್ಞಾನವಾಗಿ ರೂಪುಗೊಳ್ಳುತ್ತದೆ.

ರಾಜಕೀಯ ಮತ್ತು ಅಂತರರಾಷ್ಟ್ರೀಯ ವಿದ್ಯಮಾನಗಳ ಕುರಿತು ವಿಶ್ಲೇಷಣೆ ನೀಡುವ ಹಲವು ಯೂಟ್ಯೂಬ್ ಚಾನಲ್‌ ಗಳಿವೆ. ಅವುಗಳ ಮೂಲಕವೂ ಮಾಹಿತಿ ಪಡೆದು ಸಾಮಾನ್ಯ ಜ್ಞಾನ ವಿಸ್ತರಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT