ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ: ಇತಿಹಾಸದ ಓದು ಹೀಗಿರಲಿ..

Last Updated 14 ಅಕ್ಟೋಬರ್ 2021, 2:57 IST
ಅಕ್ಷರ ಗಾತ್ರ

ಬ ಹುತೇಕ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಸಾಮಾನ್ಯ ಅಧ್ಯಯನ ವಿಭಾಗದಲ್ಲಿ ಇತಿಹಾಸ ಪ್ರಮುಖ ವಿಷಯವಾಗಿದೆ. ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಸರ್ಕಾರಿ ಉದ್ಯೋಗಕ್ಕೆ ಸೇರ ಬಯಸುವವರು ಈ ವಿಷಯದಲ್ಲಿ ಸರಿಯಾದ ಕ್ರಮದಲ್ಲಿ ಹಾಗೂ ವಿಸ್ತೃತವಾಗಿ ಅಧ್ಯಯನ ನಡೆಸಬೇಕಾಗುತ್ತದೆ.

ಯುಪಿಎಸ್‌ಸಿಯಿಂದು ಹಿಡಿದು ಗ್ರೂಪ್‌ ಸಿ ಕ್ಲರಿಕಲ್‌ ಪರೀಕ್ಷೆಯವರೆಗೂ ಸಾಮಾನ್ಯ ಅಧ್ಯಯನವೆಂಬುದು ಮೂಲಾಧಾರ ಎನ್ನಬಹುದು. ಈ ದೃಷ್ಟಿಯಿಂದ ಈ ವಿಭಾಗದಲ್ಲಿ ನೀವು ಹೇಗೆ ಸಿದ್ಧತೆ ನಡೆಸುತ್ತೀರಿ ಎಂಬುದರ ಮೇಲೆ ನಿಮ್ಮ ಪರೀಕ್ಷೆಯ ಫಲಿತಾಂಶ ಅಡಗಿದೆ. ಸಾಮಾನ್ಯ ಅಧ್ಯಯನ ವಿಭಾಗದಲ್ಲಿ ಭೂಗೋಳ, ಭಾರತದ ನೀತಿ ನಿರೂಪಣೆ, ವಿಜ್ಞಾನ, ಕ್ರೀಡೆ, ಪ್ರಚಲಿತ ವಿದ್ಯಮಾನ, ಅರ್ಥಶಾಸ್ತ್ರ, ಇತಿಹಾಸ.. ಹೀಗೆ ಎಲ್ಲಾ ಬಗೆಯ ವಿಷಯಗಳು ಅಡಕವಾಗಿದೆ.

ಈಗ ಇತಿಹಾಸದ ವಿಷಯಕ್ಕೆ ಬರೋಣ. ಇದು ಕೇವಲ ಹಿಂದೆ ನಡೆದ ಘಟನೆಗಳ ವಿವರಣೆ ಮಾತ್ರವಲ್ಲ, ವಿಶಾಲವಾದ ದೃಷ್ಟಿಕೋನದಿಂದ ನೋಡಿದರೆ ಇದು ಮಾನವನ ಅಭಿವೃದ್ಧಿ ಪಥವನ್ನು ದಾಖಲಿಸುವ ಪ್ರಕ್ರಿಯೆ ಎನ್ನಬಹುದು. ಕೇವಲ ವರ್ಷ, ಅವಧಿ ನೆನಪಿಟ್ಟುಕೊಂಡರೆ ಸಾಕಾಗದು, ಪ್ರತಿಯೊಂದು ಘಟನೆಯ ಹಿಂದಿನ ಕಾರಣಗಳು, ಅದರ ಪರಿಣಾಮವನ್ನು ವಿಶ್ಲೇಷಣಾತ್ಮಕವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಕೇವಲ ಕಲಿಕೆಯ ದೃಷ್ಟಿಯಿಂದ ಅಥವಾ ಪರೀಕ್ಷೆಯ ದೃಷ್ಟಿಯಿಂದ ಮಾತ್ರವಲ್ಲ, ಪ್ರಸ್ತುತ ವಿದ್ಯಮಾನಕ್ಕೆ ಜೋಡಿಸಿ ಅಂದಿನ ಘಟನೆಗಳನ್ನು ಅಧ್ಯಯನ ಮಾಡುವುದು ಸೂಕ್ತ.

ಮಾಹಿತಿ ಬೇಕಾದಷ್ಟು ಲಭ್ಯ

ಇತಿಹಾಸ ವಿಷಯ ಪ್ರಮುಖವಾದದ್ದು ಎಂದೇ ಪರಿಗಣಿಸಬಹುದು. ಏಕೆಂದರೆ ಬಹುತೇಕ ಪ್ರಶ್ನೆಗಳನ್ನು ಇತಿಹಾಸದ ಮೇಲೆಯೇ ಕೇಳಲಾಗುತ್ತದೆ. ಇದು ಅತ್ಯಂತ ವಿಸ್ತೃತವಾದ ವಿಷಯ ಎಂದು ಪರಿಗಣಿಸಲಾಗಿದ್ದರೂ ಇದನ್ನು ವಿವಿಧ ವಿಭಾಗಗಳನ್ನಾಗಿ ಮಾಡಿ ಸರಳೀಕರಿಸಿದರೆ ಪ್ರತಿಯೊಂದು ಪ್ರಶ್ನೆಗೂ ನಿಖರವಾದ ಉತ್ತರವನ್ನು ಗುರುತಿಸುವುದು ಬಹಳ ಸುಲಭ. ಮಾಹಿತಿಯನ್ನು ಸ್ಥಿರ ವಿಷಯವೆಂದು ಪರಿಗಣಿಸಲಾಗಿದ್ದು, ಅಧ್ಯಯನ ಸಾಮಗ್ರಿಗಳು ವಿಪುಲವಾಗಿ ದೊರಕುತ್ತವೆ. ಆಫ್‌ಲೈನ್‌ ಮಾತ್ರವಲ್ಲ, ಆನ್‌ಲೈನ್‌ನಲ್ಲೂ ಈಗ ಸಾಕಷ್ಟು ಮಾಹಿತಿ ಲಭ್ಯ.

ಸಾಮಾನ್ಯವಾಗಿ ಪ್ರತಿಯೊಂದು ವಿಷಯಕ್ಕೂ ಒಂದು ಇತಿಹಾಸವಿರುತ್ತದೆ. ಅಂದರೆ ಅದರ ಮೂಲ, ಬೆಳವಣಿಗೆ.. ಹೀಗೆ. ಉದಾಹರಣೆಗೆ ಭಾರತೀಯ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸಂವಿಧಾನದ ರಚನೆಯ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಹೀಗೆ ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮೊದಲಾದವ ವಿಷಯಗಳಲ್ಲೂ ಇದೇ ತತ್ವ ಅಡಕವಾಗಿದೆ.

ಶಾಖೆಗಳು

ಇತಿಹಾಸವು ವಿವಿಧ ಶಾಖೆಗಳನ್ನು ಹೊಂದಿದೆ. ರಾಜಕೀಯ, ಸಮಾಜವಿಜ್ಞಾನ, ಅರ್ಥಶಾಸ್ತ್ರ, ಸಾಂಸ್ಕೃತಿಕ, ಆಡಳಿತ ಮೊದಲಾದವು. ಈ ಹಿಂದೆ ಪರೀಕ್ಷೆಯಲ್ಲಿ ರಾಜಕೀಯ ವಿಷಯದ ಮೇಲೆ ಪ್ರಶ್ನೆಗಳು ಬರುತ್ತಿದ್ದವು. ಹಿಂದೆ ರಾಜ್ಯಭಾರ ಮಾಡಿದ ರಾಜರು, ರಾಜಮನೆತನ ಇವೆಲ್ಲವುಗಳ ಮೇಲೆಯೇ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಈಗ ಸಾಕಷ್ಟು ಬದಲಾವಣೆಗಳಾಗಿದ್ದು, ಇತಿಹಾಸದ ವಿವಿಧ ಶಾಖೆಗಳ ಮೇಲೆ ಗಮನವನ್ನು ಕೇಂದ್ರೀಕರಿಸಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಯ ದೃಷ್ಟಿಯಿಂದ ಸ್ಪರ್ಧಾರ್ಥಿಗಳು ಭಾರತೀಯ ಇತಿಹಾಸ, ಅಂದರೆ ಪ್ರಾಚೀನ ಇತಿಹಾಸ, ಮಧ್ಯಕಾಲೀನ ಭಾರತ, ಆಧುನಿಕ ಭಾರತ, ಭಾರತದ ಸ್ವಾತಂತ್ರ್ಯ ಹೋರಾಟ ಹಾಗೂ ಪ್ರಸಕ್ತ ಭಾರತದ ಸ್ಥಿತಿ ಬಗ್ಗೆ ಓದಿ, ಮನನ ಮಾಡಿಕೊಳ್ಳಬೇಕು. ಹಾಗೆಯೇ ಜಾಗತಿಕ ಇತಿಹಾಸದ ಬಗ್ಗೆ ತಿಳಿವಳಿಕೆ ಅವಶ್ಯಕ. ಅಂತರರಾಷ್ಟ್ರೀಯ ಘಟನೆಗಳ ಬಗ್ಗೆ ಸಾಕಷ್ಟು ಜ್ಞಾನ ಇರಬೇಕಾಗುತ್ತದೆ. ಇನ್ನೊಂದು ಮುಖ್ಯ ವಿಷಯವೆಂದರೆ ಒಂದು ರಾಜ್ಯದ ಪರೀಕ್ಷೆ, ಉದಾಹರಣೆಗೆ ಕೆಪಿಎಸ್‌ಸಿ ಪರೀಕ್ಷೆಗೆ ಕೂರುವುದಾದರೆ ಕರ್ನಾಟಕದ ಇತಿಹಾಸದ ಬಗ್ಗೆ ಆಳವಾದ ಅಧ್ಯಯನ ಅಗತ್ಯ.

ಇತಿಹಾಸ ಅಂದರೇ ಹಿಂದಿನ ಘಟನೆಗಳ ಬಗ್ಗೆ ಅಧ್ಯಯನ ಮಾಡುವುದು. ಆದರೆ ಎಷ್ಟು ಹಿಂದಿನಿಂದ ಓದಬೇಕು ಎಂಬ ಪ್ರಶ್ನೆ ಏಳುವುದು ಸಹಜ. ಇತಿಹಾಸ ಪೂರ್ವದಿಂದಲೇ ಓದಬೇಕಾಗುತ್ತದೆ. ಅಂದರೆ ನಾಗರಿಕತೆ ಶುರುವಾದಾಗಿನಿಂದ ಅದರ ಬಗ್ಗೆ ದಾಖಲೆ ಮಾಡಲಾದ ವಿಷಯಗಳನ್ನು ಅಧ್ಯಯನ ಮಾಡುವುದು ಸೂಕ್ತ. ಉದಾಹರಣೆಗೆ ಶಿಲಾಯುಗ. ಬೇರೆ ಬೇರೆ ಸಾಕ್ಷಿಗಳ ಆಧಾರದ ಮೇಲೆ ಘಟನೆಗಳನ್ನು ಜೋಡಿಸಿ ಈ ಬಗ್ಗೆ ಇತಿಹಾಸವನ್ನು ಬರೆಯಲಾಗಿದ್ದು, ಸ್ಪರ್ಧಾರ್ಥಿಗಳು ಇಲ್ಲಿಂದಲೇ ಓದಲು ಆರಂಭಿಸುವುದು ಅವಶ್ಯಕ.

ಸಂಸ್ಕೃತಿಯ ಅಧ್ಯಯನ

ಇತಿಹಾಸದ ಜೊತೆ ಇದು ಗಟ್ಟಿಯಾಗಿ ಜೋಡಿಸ್ಪಲಟ್ಟಿದೆ. ಇದು ಬದುಕಿನ ಒಂದು ಭಾಗ ಎನ್ನುವುದಕ್ಕಿಂತ ಬದುಕಿನ ಜೊತೆ ಹಾಸುಹೊಕ್ಕಾಗಿದೆ. ನಾವು ಏನು ತಿನ್ನುತ್ತೇವೆ, ಏನು ಬಟ್ಟೆ ಧರಿಸುತ್ತೇವೆ, ಮನರಂಜನೆಗೆ ಏನು ಮಾಡುತ್ತೇವೆ, ಯಾವ ಭಾಷೆ ಮಾತನಾಡುತ್ತೇವೆ... ಇವೆಲ್ಲ ಸಂಸ್ಕೃತಿಯಲ್ಲಿ ಬರುತ್ತವೆ. ಕಲೆ, ಸಂಗೀತ, ಸಾಹಿತ್ಯ, ವಾಸ್ತುಶಿಲ್ಪ, ಧರ್ಮ ಈ ಎಲ್ಲವೂ ಸಂಸ್ಕೃತಿಯ ಭಾಗ. ಹಾಗೆಯೇ ಪರಂಪರೆ, ಸಂಪ್ರದಾಯ, ಹಬ್ಬಗಳ ಆಚರಣೆ ಕೂಡ.

ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಇತಿಹಾಸವನ್ನು ಅಧ್ಯಯನ ಮಾಡಬೇಕು. ಪರೀಕ್ಷೆಯ ದೃಷ್ಟಿಯಿಂದ ಇದು ಅತ್ಯಂತ ಮುಖ್ಯ. ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಇದರ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕಲೆ ಮತ್ತು ವಾಸ್ತುಶಿಲ್ಪ, ಧರ್ಮ, ಸಾಹಿತ್ಯದ ಕುರಿತು ಹೆಚ್ಚಿನ ಪ್ರಶ್ನೆಗಳು ಬರುತ್ತವೆ. ಹೀಗಾಗಿ ಇದರ ಬಗ್ಗೆ ಹೆಚ್ಚಿನ ಗಮನ ನೀಡಿ. ವೇದ ಕಾಲದ ಸಾಹಿತ್ಯ, ಜೈನ ಮತ್ತು ಬೌದ್ಧ ಧರ್ಮ ಹಾಗೂ ಅವುಗಳ ಕೊಡುಗೆಗಳು, ವಾಸ್ತುಶಿಲ್ಪ, ಕಲೆ, ಅಂದಿನ ದೇವಾಲಯಗಳ ನಿರ್ಮಾಣ ಮೊದಲಾದವುಗಳಿಗೆ ಒತ್ತು ನೀಡಿ.

ಎಲ್ಲದಕ್ಕೂ ಯೋಜನೆ ಮಾಡಿಕೊಂಡು ಮುಖ್ಯವಾದದ್ದನ್ನು ಗುರುತಿಸಿ, ಅಭ್ಯಾಸ ಮಾಡಿ. ಅಂದರೆ ಪರೀಕ್ಷೆಯ ಓದಿಗೆ ಯೋಜನೆ ಮಾಡಿಕೊಂಡು, ಆದ್ಯತೆ ಮೇಲೆ ಓದಿ. ನೆನಪಿನಲ್ಲಿರಬೇಕಾದರೆ ಪುನರ್‌ಮನನ ಅವಶ್ಯಕ.

ಟಿಪ್ಪಣಿ ಮಾಡಿಕೊಳ್ಳಿ

ಈ ಮೊದಲೇ ಹೇಳಿದಂತೆ ಇದು ಬಹು ವಿಸ್ತಾರವಾದ ವಿಷಯ. ಹೀಗಾಗಿ ನೀವು ಎಷ್ಟು ಓದಿದರೂ ಕಡಿಮೆಯೇ. ವಿಷಯವನ್ನು ವಿವಿಧ ವಿಭಾಗಗಳಾಗಿ ವಿಭಾಗಿಸಿದರೆ ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಸುಲಭ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಓದಿದ್ದನ್ನು ಪುನರ್‌ಮನನ ಮಾಡಬೇಕಾಗುತ್ತದೆ. ಸುಲಭದ ಕೀ ಶಬ್ದಗಳನ್ನು ನೀವೇ ಸಿದ್ಧಪಡಿಸಿ ನೆನಪಿಟ್ಟುಕೊಳ್ಳಿ. ನೋಟ್ಸ್‌ ಮಾಡಿಕೊಂಡರೆ ಮತ್ತೆ ಮತ್ತೆ ಓದಬಹುದು.

ಹಾಗೆಯೇ ಮ್ಯಾಪ್‌, ಟೇಬಲ್‌ಗಳನ್ನು ಸಿದ್ಧಪಡಿಸಿಕೊಳ್ಳಿ. ನೆನಪಿನಲ್ಲಿ ಇಟ್ಟುಕೊಳ್ಳಲು ಇವು ಸುಲಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT