ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ದುರ್ಬಲ ವರ್ಗಗಳಿಗೆ ಮೀಸಲಾತಿ(ಇಡಬ್ಲ್ಯುಎಸ್‌)

Last Updated 16 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಆರ್ಥಿಕ ದುರ್ಬಲ ವರ್ಗದವರಿಗೆ(Economically Weaker Section-EWS) ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿ ಯಲ್ಲಿ ಶೇ 10 ರಷ್ಟು ಮೀಸಲಾತಿ ನೀಡುವ ಸಂವಿಧಾನದ 103ನೇ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದು ಬಹುಮತದ ತೀರ್ಪು ನೀಡಿದೆ. ಬಹುಮತದ ತೀರ್ಪು ತಿದ್ದುಪಡಿಯ ಪರವಾಗೇ ಇದ್ದ ಕಾರಣ, ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಲಾಗಿದ್ದ 40ಕ್ಕೂ ಹೆಚ್ಚು ಅರ್ಜಿಗಳನ್ನು ವಜಾ ಮಾಡಲಾಗಿದೆ.

ಇಡಬ್ಲ್ಯುಎಸ್‌ ಮೀಸಲಾತಿ

ದೇಶದಲ್ಲಿ 70 ವರ್ಷಗಳಿಂದಲೂ ಮೀಸಲಾತಿ ಪರ-ವಿರೋಧದ ಚರ್ಚೆ ನಿರಂತರವಾಗಿ ನಡೆಯುತ್ತಾ ಬಂದಿದೆ. ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವ ಮಂಡಲ್ ವರದಿ ಜಾರಿಯಾದಾಗ ಅದನ್ನು ವಿರೋಧಿಸಿ ದೊಡ್ಡ ಹೋರಾಟ ನಡೆದಿತ್ತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು 2019ರ ಲೋಕಸಭಾ ಚುನಾವಣೆಗೂ ಮೊದಲು ಸಂವಿಧಾನ ತಿದ್ದುಪಡಿಯ ಮೂಲಕ ಆರ್ಥಿಕವಾಗಿ ದುರ್ಬಲರಾದ ಮೇಲ್ಜಾತಿ ಎಂದು ಕರೆಯಲ್ಪಡುವ ಸಮುದಾಯಗಳಿಗೆ (EWS) ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿತ್ತು.

ಮಾನದಂಡವೇನು ?

ಈ ಆರ್ಥಿಕವಾಗಿ ಹಿಂದುಳಿದ ಬಡವರು ಯಾರು ಎಂಬ ಪ್ರಶ್ನೆಗೆ ‘₹8 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಮತ್ತು 5 ಎಕರೆಗಿಂತ ಕಡಿಮೆ ಜಮೀನು ಮತ್ತು 1000 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ಮನೆ ಹೊಂದಿರಬೇಕು’ ಎಂಬ ಮಾನದಂಡವನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ.

ಇದು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ನೂರಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈಗ ಅವೆಲ್ಲವನ್ನೂ ವಜಾಗೊಳಿಸಲಾಗಿದೆ.

ಈ ಮೀಸಲಾತಿ ಜಾರಿಗೊಳಿಸುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೀಸಲಾತಿ ಪಟ್ಟಿಯಲ್ಲಿ ವ್ಯತ್ಯಾಸಗಳು ಇರುವುದರಿಂದ ಅದಕ್ಕೆ ಅನುಗುಣವಾಗಿಯೇ ಮೀಸಲಾತಿಯಲ್ಲೂ ವ್ಯತ್ಯಾಸಗಳು ಉಂಟಾಗುತ್ತವೆ.

ಸಾಂವಿಧಾನಿಕ ತಿದ್ದುಪಡಿ

ಸಂಸತ್ತಿನಲ್ಲಿ ಅಂಗೀಕಾರವಾದ ಮೂಲ ಸಂವಿಧಾನ ತಿದ್ದುಪಡಿ ಮಸೂದೆಯ (THE CONSTITUTION (ONE HUNDRED AND TWENTY-FOURTH AMENDMENT) BILL, 2019) ಪ್ರಕಾರ ಇದು ನಮ್ಮ ಸಂವಿಧಾನಕ್ಕೆ ಮಾಡುತ್ತಿರುವ 103ನೇ ತಿದ್ದುಪಡಿ. ಈ ಮೂಲಕ ಸಂವಿಧಾನದ 15ನೇ ವಿಧಿಯಲ್ಲಿ ಈಗಾಗಲೇ 5 ಅನುಚ್ಛೇದ(clause)ಗಳಿದ್ದು ಅದರಲ್ಲಿ ಈಗ 6ನೇಅನುಚ್ಛೇದವನ್ನು ಸೇರಿಸಲಾಗಿದೆ. ಜೊತೆಗೆ ಸಂವಿಧಾನದ 16ನೇ ವಿಧಿಗೂ ತಿದ್ದುಪಡಿ ಮಾಡಲಾಗಿದೆ.‌ ಅದರ ಸಾರಾಂಶ ಹೀಗಿದೆ;

ಆ ಪ್ರಕಾರ 4 ಮತ್ತು 5ನೇ ಅನುಚ್ಛೇದಗಳಲ್ಲಿರುವ ಸಮುದಾಯಗಳನ್ನು ಹೊರತುಪಡಿಸಿ ಉಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಪ್ರಸ್ತಾಪವಿದೆ.

4 ಮತ್ತು 5ನೇ ಅನುಚ್ಛೇದಗಳಲ್ಲಿರುವ ಸಮುದಾಯಗಳನ್ನು ಹೊರತುಪಡಿಸಿದ ಸಮುದಾಯಗಳೆಂದರೆ, ಅನುಸೂಚಿತ ಜಾತಿಗಳು (Scheduled castes - SCs), ಅನುಸೂಚಿತ ಬುಡಕಟ್ಟುಗಳು ((Scheduled Tribes -STs) ಮತ್ತು ಹಿಂದುಳಿದ ವರ್ಗಗಳು (Other Backword Castes -OBCs). ಈ ಮೂರು ವಿಭಾಗಗಳ ಸಮುದಾಯಗಳನ್ನು ಹೊರತುಪಡಿಸಿ ಉಳಿದವರಿಗೆ ಈ ಶೇ 10 ಮೀಸಲಾತಿ ಸೌಲಭ್ಯ ದೊರಕಲಿದೆ.

ಕರ್ನಾಟಕದಲ್ಲಿ ಈ ಮೀಸಲಾತಿ ಹೇಗೆ ಅನ್ವಯಿಸುತ್ತದೆ?

ಪ್ರಸಕ್ತ ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ, ‘ಇದುವರೆಗೆ ಯಾವ ಜಾತಿಯ ಜನರು ಯಾವುದೇ ಬಗೆಯ ಮೀಸಲಾತಿಯ ಪಟ್ಟಿಯಲ್ಲಿ ಸೇರ್ಪಟ್ಟಿಲ್ಲವೋ ಅಂತಹ ಜಾತಿಯ ಆರ್ಥಿಕವಾಗಿ ಹಿಂದುಳಿದವರಿಗೆ ಈ ಶೇ10 ಮೀಸಲಾತಿಯು ಅನ್ವಯಿಸುತ್ತದೆ’ ಎಂದು ತಿಳಿಸಲಾಗಿದೆ.

ಈ ಮೀಸಲಾತಿಯ ಅಡಿಯಲ್ಲಿ ಸೌಲಭ್ಯ ಪಡೆಯುವ ಜಾತಿಗಳು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಾಗಿವೆ.

ಕರ್ನಾಟಕದಲ್ಲಿ ಈ ಮೀಸಲಾತಿಗೆ ಅರ್ಹರಾಗಿರುವ ಕೆಲವು ಜಾತಿಗಳಿದ್ದು ಅವು ಪ್ರಧಾನವಾಗಿ ಬ್ರಾಹ್ಮಣರು,ಆರ್ಯವೈಶ್ಯರು, ನಾಯರ್ ಮತ್ತು ಮೊದಲಿಯಾರ್ ಮತ್ತು ಕೆಲ ಸಣ್ಣ ಸಮೂಹಗಳು ಮಾತ್ರ.ರಾಜ್ಯದ ಜನಸಂಖ್ಯೆಯಲ್ಲಿ ಈ ಎಲ್ಲಾ ಜಾತಿಗಳ ಶೇಕಡಾವಾರು ಪ್ರಮಾಣ ಶೇಕಡಾ 5 ನ್ನೂ ಮೀರುವುದಿಲ್ಲ.

ಮೀಸಲಾತಿ ಒಂದು ಹಿನ್ನೋಟ

ಮಂಡಲ್ ಆಯೋಗದ ನಂತರ ದೇಶದಾದ್ಯಂತ ಮೀಸಲಾತಿ ವಿರುದ್ಧ ಗಲಭೆಗಳು ನಡೆದಿದ್ದು 2006ರಲ್ಲಿ.
ಅಂದಿನ ಯುಪಿಎ ಸರ್ಕಾರ ಹಿಂದುಳಿದ ವರ್ಗಗಳಿಗೆ ಉನ್ನತ ಶಿಕ್ಷಣದಲ್ಲಿ ಶೇ 27 ಮೀಸಲಾತಿ ನೀಡುವ ಕಾಯ್ದೆ ತರಲು ಹೊರಟಾಗ ಮತ್ತೆ ಟೀಕೆಗಳು ಕೇಳಿ ಬಂದಿದ್ದವು.

ದೇಶದ ಜನಸಂಖ್ಯೆಯಲ್ಲಿ ಶೇ 70ರಷ್ಟಿರುವ ಹಿಂದುಳಿದ ಜಾತಿಗಳಿಗೆ ಶೇ 27 ಮೀಸಲಾತಿ ನೀಡುವುದು ‘ಪ್ರತಿಭೆಗೆ ಮಾಡುವ ಅನ್ಯಾಯ’ ಎಂಬ ಮಾತುಗಳು ಕೇಳಿಬಂದಿದ್ದವು.

ವಿವಾದಗಳು ಮತ್ತು ಗೊಂದಲಗಳು

ದೇಶದ ಜನಸಂಖ್ಯೆಯ ಶೇ 90ರಷ್ಟು ಸಮುದಾಯಗಳಿಗೆ ಮೀಸಲಾತಿಯನ್ನು ಶೇ 50ಕ್ಕೆ ಮಾತ್ರ ಮಿತಿಗೊಳಿಸಿರುವ ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆಯೂ ಆಕ್ಷೇಪಗಳಿವೆ. ಈಗ ಇಡಬ್ಲ್ಯೂಎಸ್‌ಗೆ ಶೇ 10ರಷ್ಟು ಮೀಸಲಾತಿ ನೀಡಿದ ನಂತರ ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲಂಘನೆಯಾಗುವುದಿಲ್ಲವೆ? ಎಂಬ ಪ್ರಶ್ನೆಯೂ ಕೇಳಿಬಂದಿತ್ತು. ಈ ಪ್ರಶ್ನೆಗೆ ಇತ್ತೀಚೆಗೆ ಉತ್ತರಿಸಿದ್ದ ಕೇಂದ್ರ ಕಾನೂನು ಸಚಿವರವಿಶಂಕರ್ ಪ್ರಸಾದ್‌ ‘ಸುಪ್ರೀಂ ತೀರ್ಪಿನ ಉಲ್ಲಂಘನೆಯಾಗುವುದಿಲ್ಲ’ಎಂದು ಹೇಳಿದ್ದರು. ಮೀಸಲಾತಿಯ ಪ್ರಮಾಣ ಶೇ 50ಕ್ಕಿಂತ ಹೆಚ್ಚಿರಬಾರದು ಎಂದು ಸಂವಿಧಾನವೇನೂ ಹೇಳಿಲ್ಲ, ಅದನ್ನು ಹೇಳಿದ್ದು ಕೋರ್ಟ್‌ ಎಂಬುದು ಅವರ ವಾದ.

ಅಲ್ಲದೇ ಸುಪ್ರೀಂ ಕೋರ್ಟ್‌ ಹೇಳಿದ್ದು ‘ಹಿಂದುಳಿದ ವರ್ಗಗಳಿಗೆ (ಎಸ್‌.ಸಿ, ಎಸ್‌.ಟಿ ಮತ್ತು ಒಬಿಸಿ) ನೀಡಲಾಗುವ ಮೀಸಲಾತಿ ಪ್ರಮಾಣ ಶೇ 50ಕ್ಕಿಂತ ಹೆಚ್ಚಿರಬಾರದು ಎಂದಿದೆ. ಈಗ ನೀಡುತ್ತಿರುವ ಶೇ 10 ರಷ್ಟು ಮೀಸಲಾತಿ ಅವರಿಗಲ್ಲ. ಅದು ಮುಂದುವರೆದವರಿಗಾಗಿ, ಮುಂದುವರೆದ ಸಮುದಾಯಗಳ ಬಡವರಿಗಾಗಿ. ಹಾಗಾಗಿ, ಅದು ಸುಪ್ರೀಂ ಕೋರ್ಟ್‌ನ ತೀರ್ಪು ಉಲ್ಲಂಘನೆಯಾಗುವುದಿಲ್ಲ’ ಎಂದೂ ಕೆಲವರು ವಾದಿಸುತ್ತಾರೆ.

ಕರ್ನಾಟಕದಲ್ಲಿ ಮೀಸಲಾತಿ

ಈ ಕಾನೂನಿನ ಪ್ರಕಾರ ಮೀಸಲಾತಿ ಘೋಷಣೆಯಾದಲ್ಲಿ ಮೀಸಲಾತಿಯ ಪ್ರಮಾಣ ಶೇ 66 ಹಾಗೂ ಜನರಲ್ ಕೆಟಗರಿಯ ಪ್ರಮಾಣ ಶೇ 34 ಆದಂತೆ ಆಗುತ್ತದೆ.ಈಗ ಶೇ 66ರಷ್ಟು ಮೀಸಲಾತಿಯಲ್ಲಿ ಯಾವ ಸಮುದಾಯಕ್ಕೆ ಎಷ್ಟು ಸಿಗುತ್ತದೆ ಎಂದು ನಾವು ಕಂಡುಕೊಳ್ಳಬೇಕು. ಒಂದು ರಾಜ್ಯದ ಉದಾಹರಣೆ ತೆಗೆದುಕೊಂಡರೆ ಈ ವಿಷಯವನ್ನು ಇನ್ನಷ್ಟು ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಒಂದೊಮ್ಮೆ ಕರ್ನಾಟಕದಲ್ಲಿ ಈ ಮೀಸಲಾತಿ ಜಾರಿಯಾದರೆ, ಅದರ ಹಂಚಿಕೆ ಪ್ರಮಾಣ ಈ ಕೆಳಕಂಡಂತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT