ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ: 1673 ಪ್ರೊಬೆಷನರಿ ಆಫೀಸರ್ಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬ್ಯಾಂಕಿಂಗ್‌ ನೇಮಕಾತಿ ಪರೀಕ್ಷೆ
Last Updated 28 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಪ್ರಸಕ್ತ ವರ್ಷ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌, ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ವಿಶೇಷವಾಗಿ ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ) ತಮ್ಮಲ್ಲಿ ಖಾಲಿ ಇರುವ ವಿವಿಧ ಹಂತದ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿವೆ. ಎಸ್‌ಬಿಐ ಕಳೆದ ವಾರವಷ್ಟೇ ಜೂನಿಯರ್‌ ಅಸೋಸಿಯೇಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕ ಪೂರ್ಣಗೊಳ್ಳುವುದರೊಳಗೆ, 1673 ಪ್ರೊಬೆಷನರಿ ಆಫೀಸರ್‌ಗಳು(ಪಿಒ) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌, ದೇಶದಾದ್ಯಂತವಿರುವ ತನ್ನ ಬ್ಯಾಂಕ್‌ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ 73 ಬ್ಯಾಕ್‌ಲಾಗ್‌ ಹುದ್ದೆಗಳೂ ಸೇರಿದಂತೆ 1673 ಪ್ರೊಬೆಷನರಿ ಆಫೀಸರ್‍ಸ್‌ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಒಟ್ಟು ಹುದ್ದೆಗಳಲ್ಲಿಸಾಮಾನ್ಯ ವರ್ಗದವರಿಗೆ 648,ಆರ್ಥಿಕವಾಗಿ ದುರ್ಬಲ ವರ್ಗದವರಿಗೆ 160, ಪರಿಶಿಷ್ಟ ಜಾತಿಯವರಿಗೆ 270, ಪರಿಶಿಷ್ಟ ವರ್ಗಕ್ಕೆ 131 ಮತ್ತು ಹಿಂದುಳಿದ ವರ್ಗದವರಿಗೆ 464 ಹುದ್ದೆಗಳನ್ನು ಮೀಸಲಿಡಲಾಗಿದೆ. ಆಸಕ್ತರು ಬ್ಯಾಂಕ್‌ನ ಅಧಿಕೃತ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹು ದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 12 ಕೊನೆಯ ದಿನ.

ಶೈಕ್ಷಣಿಕ ಅರ್ಹತೆ

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಪದವಿ ಅಂತಿಮ ವರ್ಷ/ಸೆಮಿಸ್ಟರ್‌ ನಲ್ಲಿರುವವರು ತಾತ್ಕಾಲಿಕವಾಗಿ ಅರ್ಜಿ ಸಲ್ಲಿಸಬಹುದು. ಈ ರೀತಿ ಅರ್ಜಿ ಸಲ್ಲಿಸಿದವರಿಗೆ ಒಂದೊಮ್ಮೆ ಸಂದರ್ಶನಕ್ಕೆ ಕರೆ ಬಂದರೆ, ಡಿಸೆಂಬರ್ 31, 2022 ಅಥವಾ ಅದಕ್ಕಿಂತ ಮೊದಲು ಪದವಿ ಪರೀಕ್ಷೆ ಉತ್ತೀರ್ಣರಾಗಿರುವುದಕ್ಕೆ ಪುರಾವೆಗಳನ್ನು ಒದಗಿಸಬೇಕಾಗುತ್ತದೆ.

ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ (ಐಡಿಡಿ) ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳೂ ಡಿಸೆಂಬರ್ 31, 2022 ಅಥವಾ ಅದಕ್ಕಿಂತ ಮುಂಚೆಯೇ ಈ ಕೋರ್ಸ್‌ನಲ್ಲಿ ಉತ್ತೀರ್ಣರಾ ಗಿರುವುದನ್ನು ದೃಢೀಕರಿಸಬೇಕು. ವೈದ್ಯಕೀಯ, ಎಂಜಿನಿಯರಿಂಗ್ ಚಾರ್ಟರ್ಡ್ ಅಕೌಂಟೆಂಟ್ ಅಥವಾ ಕಾಸ್ಟ್ ಅಕೌಂಟೆಂಟ್ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು.

ವಯೋಮಿತಿ

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷಗಳು (01.04.2022ಕ್ಕೆ ಅನ್ವಯವಾಗುವಂತೆ). ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗ‌ಳಿಗೆ 5 ವರ್ಷಗಳು,ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳಷ್ಟು ವಯೋಮಿತಿಯನ್ನು ವಿಸ್ತರಿಸಲಾಗಿದೆ.

ಕೆಟಗರಿ ಕೋಡ್ ಗಮನಿಸಿ:ಅರ್ಜಿಯಲ್ಲಿ01 ರಿಂದ 25 ರವರೆಗೆ ಆಯಾ ವರ್ಗಕ್ಕೆ ಸಂಬಂಧಿಸಿದಂತೆ ಕೆಟಗರಿ ಕೋಡ್ ನೀಡಲಾಗಿದೆ. ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವ ವೇಳೆ, ಸಂಬಂಧಿಸಿದ ಕೋಡ್ ನಮೂದಿಸುವುದನ್ನು ಮರೆಯಬಾರದು.

ಅರ್ಜಿ ಶುಲ್ಕ: ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ₹750 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.

ಶುಲ್ಕ ಪಾವತಿ: ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಕೆ ವಿಧಾನ: ನಿಗದಿತ ಜಾಲತಾಣದ ಮೂಲಕಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬೇಕು.

ಪರೀಕ್ಷಾ ಪ್ರಕ್ರಿಯೆ

ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ಎರಡು ಲಿಖಿತ ಪರೀಕ್ಷೆಗಳು ಆನ್‌ಲೈನ್‌ನಲ್ಲೇ ನಡೆಯಲಿವೆ.

ಮೊದಲ ಹಂತ: ಪೂರ್ವಭಾವಿ ಪರೀಕ್ಷೆ – ಡಿಸೆಂಬರ್ 17ರಿಂದ 20, 2022ರವರೆಗೆ

ಎರಡನೇ ಹಂತ: ಮುಖ್ಯ ಪರೀಕ್ಷೆ – ಜನವರಿ- ಫೆಬ್ರುವರಿ– 2023.

ಮೂರನೇ ಹಂತ:ಸೈಕೋಮೆಟ್ರಿಕ್ ಪರೀಕ್ಷೆ (ಇದು ಈ ಬಾರಿಯಲ್ಲಾಗಿರುವ ಬದಲಾವಣೆ)

ಮೂರನೇ ಹಂತದಲ್ಲಿ ಶಾರ್ಟ್‌ಲಿಸ್ಟ್‌ ಆದ ಅಭ್ಯರ್ಥಿಗಳನ್ನು ಮುಂದೆ ಸಂದರ್ಶನಕ್ಕೆ ಆಯ್ಕೆ ಮಾಡಲು ಸೈಕೊಮೆಟ್ರಿಕ್ ಪರೀಕ್ಷೆ ನಡೆಸಲಾಗುತ್ತದೆ. ಇದೇ ಮೊದಲ ಬಾರಿಗೆ ಇಂಥದ್ದೊಂದು ಹೊಸ ಬದಲಾವಣೆ ತರಲಾಗಿದೆ. ಅಭ್ಯರ್ಥಿಗಳ ವ್ಯಕ್ತಿತ್ವ ಪ್ರೊಫೈಲಿಂಗ್‌ಗಾಗಿ ಬ್ಯಾಂಕ್ ಸೈಕೊಮೆಟ್ರಿಕ್ ಪರೀಕ್ಷೆಯನ್ನು ನಡೆಸುತ್ತಿದೆ. ಅಭ್ಯರ್ಥಿಗಳ ದೃಷ್ಟಿಕೋನವನ್ನು ಪರಿಶೀಲಿಸುವುದು ಇದರ ಉದ್ದೇಶ. ಈಸೈಕೊಮೆಟ್ರಿಕ್ ಪರೀಕ್ಷೆ, ಸಂದರ್ಶನ ಮತ್ತು ಗುಂಪು ಚರ್ಚೆ ಫೆಬ್ರುವರಿ / ಮಾರ್ಚ್ 2023ರಂದು ನಡೆಯಲಿದೆ.

ನೇಮಕ ಹೇಗೆ?

ಮೊದಲ ಹಂತದಲ್ಲಿ ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್) ನಡೆಯಲಿದೆ. ಬೆಳಗಾವಿ, ಬೆಂಗಳೂರು, ಬೀದರ್, ದಾವಣಗೆರೆ, ಧಾರವಾಡ ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪೂರ್ವಭಾವಿ ಪರೀಕ್ಷಾ ಕೇಂದ್ರಗಳಿರಲಿವೆ.

ಪ್ರತಿ ಪರೀಕ್ಷೆಯಲ್ಲೂ ಕನಿಷ್ಠ ಅಂಕ ಗಳಿಸಬೇಕೆಂಬ ನಿಯಮವಿಲ್ಲ. ಆದರೆ ಒಟ್ಟಾರೆ ಹೆಚ್ಚು ಅಂಕಗಳಿಸುವುದು ಮುಖ್ಯ. (ಆಯಾ ವರ್ಗಗಳಿಗೆ ಇರುವ ಹುದ್ದೆಗಳ ಸಂಖ್ಯೆಗಿಂತ 10 ಪಟ್ಟು (1:10 ಅನುಪಾತ) ಹೆಚ್ಚು ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ)

‌ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯು ಬೆಂಗಳೂರಿನಲ್ಲಿ ಮಾತ್ರ ನಡೆಯಲಿದೆ. ಎರಡು ಹಂತಗಳಲ್ಲಿ ಈ ಪರೀಕ್ಷೆ ನಡೆಯಲಿದೆ. ಮೂರು ಗಂಟೆಗಳ ಅವಧಿಯ ಈ ಪರೀಕ್ಷೆಯಲ್ಲಿ 200 ಅಂಕಗಳಿಗೆ 155 ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಅರ್ಜಿ ಭರ್ತಿ ಮಾಡುವ ಮುನ್ನ

ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡುವ ಮುನ್ನ ಅಧಿಸೂಚನೆಯನ್ನು ಪೂರ್ಣವಾಗಿ ಪರಿಶೀಲಿಸಿ. ಅದರಲ್ಲಿರುವ ಅರ್ಹತಾ ಮಾನದಂಡಗಳನ್ನು ನೀವು ಪೂರೈಸುತ್ತೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಜೊತೆಗೆ, ಸಂವಹನದ ಉದ್ದೇಶಕ್ಕಾಗಿ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೊಗ್ರಾಫ್, ಇತ್ಯಾದಿ ದಾಖಲೆಗಳನ್ನು ಅಣಿಗೊಳಿಸಿಕೊಳ್ಳಿ. ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ. ಅದರ ಮಾಹಿತಿ ಅಪ್ಲೋಡ್ ಮಾಡಿ.

ಎಲ್ಲಾ ಮಾಹಿತಿಯನ್ನು ಅರ್ಜಿಯಲ್ಲಿ ಭರ್ತಿ ಮಾಡಿದ ನಂತರ, ನಮೂದಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಆ ನಂತರವೇ ಕಂಪ್ಯೂಟರ್‌ನಲ್ಲಿರುವ ‘ಸಲ್ಲಿಸು’ ಅಥವಾ Submit ಬಟನ್ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಸಲು ಈ ವೆಬ್ ಲಿಂಕ್ ಬಳಸಿ: https://bank.sbi/careers or https://www.sbi.co.in/careers.

(ಲೇಖಕರು: ಬ್ಯಾಂಕಿಂಗ್ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಮತ್ತು ವೃತ್ತಿ ಮಾರ್ಗದರ್ಶಕರು, ಮಡಿಕೇರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT