ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ| ಸಪ್ಲೈ ಚೈನ್... ಬೇಡಿಕೆಯಲ್ಲಿರುವ ಕ್ಷೇತ್ರ

Last Updated 13 ನವೆಂಬರ್ 2022, 19:30 IST
ಅಕ್ಷರ ಗಾತ್ರ

1. ನಾನು ಬಿಇ (ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್) ಮಾಡಿದ್ದೇನೆ. ಆರಂಭದಲ್ಲಿ, ಮೂರು ವರ್ಷ ದತ್ತಾಂಶ ಸಂಗ್ರಹ ಸಂಸ್ಥೆಯಲ್ಲಿ ಕೆಲಸ ಮಾಡಿದೆ. ನಂತರ, ಅನಿವಾರ್ಯ ಕಾರಣಗಳಿಂದ ಸಪ್ಲೈ ಚೈನ್ ವಿಭಾಗದಲ್ಲಿ ಕೆಲಸ ಮಾಡಿದೆ. ಈಗ, ಕೆಲಸವಿಲ್ಲದೆ ಇದ್ದೇನೆ. ಸಪ್ಲೈ ಚೈನ್ ಕ್ಷೇತ್ರವನ್ನೇ ಆರಿಸಿಕೊಳ್ಳಲೇ? ಇದಕ್ಕಾಗಿ ಯಾವ ಕೋರ್ಸ್ ಮಾಡಬೇಕು? ಹೇಗೆ ಮುಂದುವರಿಯಬೇಕೋ ತಿಳಿಯುತ್ತಿಲ್ಲ. ಮಾರ್ಗದರ್ಶನ ಮಾಡಬಹುದೇ?
ಹೆಸರು, ಊರು ತಿಳಿಸಿಲ್ಲ.

Caption
Caption

ನೀವು ಓದಿರುವ ಕೋರ್ಸಿಗೂ ಈವರೆಗೆ ಮಾಡಿರುವ ಉದ್ಯೋಗಕ್ಕೂ ನೇರವಾದ ಸಂಬಂಧವಿಲ್ಲ; ಆದರೆ ಚಿಂತೆಯಿಲ್ಲ. ನಮ್ಮ ಅಭಿಪ್ರಾಯದಂತೆ, ನಿಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಮೂರು ಮಾರ್ಗಗಳಿವೆ: ದತ್ತಾಂಶ ಸಂಗ್ರಹ, ಪರಿಷ್ಕರಣೆ ಮತ್ತು ನಿರ್ವಹಣೆ ಬೇಡಿಕೆಯಲ್ಲಿರುವ ಕ್ಷೇತ್ರ. ಹಾಗಾಗಿ, ಈ ಕ್ಷೇತ್ರದಲ್ಲಿ ನಿಮ್ಮ ಅನುಭವದ ಆಧಾರದ ಮೇಲೆ, ಉದ್ಯೋಗವನ್ನು ಅರಸುವ ಸಾಧ್ಯತೆಯನ್ನು ಪರಿಶೀಲಿಸಿ. ಜೊತೆಗೆ ಸಂಜೆ ಕಾಲೇಜು/ಆನ್‌ಲೈನ್ ಮುಖಾಂತರ ಡೇಟಾ ಅನಲಿಟಿಕ್ಸ್ ಡಿಪ್ಲೊಮಾ ಕೋರ್ಸ್/ಎಂಬಿಎ (ಡೇಟಾ ಅನಲಿಟಿಕ್ಸ್) ಮಾಡಬಹುದು.

- ಸಪ್ಲೈ ಚೈನ್ ಕೂಡಾ ಬೇಡಿಕೆಯಲ್ಲಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಉದ್ಯೋಗವನ್ನು ಮಾಡುತ್ತಾ ಸಂಜೆ ಕಾಲೇಜು/ಆನ್‌ಲೈನ್
ಮುಖಾಂತರ ಎಂಬಿಎ (ಸಪ್ಲೈ ಚೈನ್) ಮಾಡಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.
- ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನೂ ಆಸಕ್ತಿಯಿದ್ದರೆ, ಎಂಇ/ಎಂಟೆಕ್ ಮಾಡಬಹುದು.
ಪ್ರಮುಖವಾಗಿ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಭಿರುಚಿ, ಆಸಕ್ತಿ ಮತ್ತು ಅನುಭವದ ಆಧಾರದ ಮೇಲೆ ವೃತ್ತಿಯೋಜನೆಯನ್ನು ಮಾಡಿದರೆ ಮುಂದಿನ ಆಯ್ಕೆ ಸುಲಭವಾಗುತ್ತದೆ. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:https://www.youtube.com/@ExpertCareerConsultantAuthor

2. 2013ರಲ್ಲಿ ಬಿಸಿಎ ಮುಗಿಸಿದ್ದೇನೆ. 31 ವರ್ಷವಾಗಿದ್ದು, ಮದುವೆಯಾಗಿದ್ದೇನೆ. ಈಗ, ನನಗೆ ಉದ್ಯೋಗದ ಅವಶ್ಯಕತೆ ಇದೆ; ಆದರೆ, ಯಾವುದೇ ಕೆಲಸ ಸಿಗುತ್ತಿಲ್ಲ. ಈಗ ಏನು ಮಾಡಬೇಕು ತಿಳಿಯುತ್ತಿಲ್ಲ. ಮರಳಿ ಕೆಲಸ ಪಡೆಯಲು ಯಾವುದಾದರೂ ಕೋರ್ಸ್ ಮಾಡಬೇಕೆ? ದಯವಿಟ್ಟು ತಿಳಿಸಿ ಸರ್.
ಹೆಸರು, ಊರು ತಿಳಿಸಿಲ್ಲ.

ಬದುಕಿನಲ್ಲಿ ಮುನ್ನಡೆಯಬೇಕು ಎನ್ನುವುದರ ಜೊತೆಗೆ ಸ್ಪಷ್ಟವಾದ ಗುರಿಯಿರಬೇಕು; ಅದನ್ನು ಸಾಧಿಸುವ ಆತ್ಮವಿಶ್ವಾಸವಿರಬೇಕು. ಐಟಿ ವಿಸ್ತಾರವಾದ ಕ್ಷೇತ್ರ. ಈ ಕ್ಷೇತ್ರದಲ್ಲಿರುವ ಆಕರ್ಷಕ ಮತ್ತು ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳಲು ವೃತ್ತಿಯೋಜನೆಯಿರಬೇಕು. ಆದ್ದರಿಂದ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಅಭಿರುಚಿಯಂತೆ ವೃತ್ತಿಯೋಜನೆಯನ್ನು ಮಾಡಿದರೆ ನಿಮಗೆ ಯಾವ ಕ್ಷೇತ್ರ ಸೂಕ್ತವೆಂದು ಅರಿವಾಗುತ್ತದೆ. ಕ್ಷೇತ್ರದ ಆಯ್ಕೆಗೆಅನುಗುಣವಾಗಿ ಪ್ರೋಗ್ರಾಮಿಂಗ್, ಡೇಟಾ ಸೈಂಟಿಸ್ಟ್, ವೆಬ್ಡೆವಲಪ್‌ಮೆಂಟ್, ಡಿಜಿಟಲ್ ಮಾರ್ಕೆಟಿಂಗ್, ಪ್ರಾಡಕ್ಟ್ ಮ್ಯಾನೇಜ್‌ಮೆಂಟ್, ಬ್ಲಾಕ್‌ಚೈನ್ ಮುಂತಾದಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ ಮಾಡಿದ ನಂತರ ಉದ್ಯೋಗವನ್ನು ಅರಸಬಹುದು.ಈಗ ಮನೆಯಿಂದಲೇ ಮಾಡಬಹುದಾದ ಅನೇಕ ವೃತ್ತಿಗಳೂ ಇವೆ.ಉದಾಹರಣೆಗೆ, ವೆಬ್ ಡೆವಲಪ್‌ಮೆಂಟ್, ಯುಎಕ್ಸ್ ಡಿಸೈನರ್, ದತ್ತಾಂಶ ನಿರ್ವಹಣೆ, ವಿಷಯಾಭಿವೃದ್ಧಿ, ಅನುವಾದ, ಸಬ್‌ಟೈಟಲ್ಸ್, ಟ್ರಾನ್ಸ್ಕ್ರಿಪ್ಷನ್ ಇತ್ಯಾದಿ ಅವಕಾಶಗಳಿವೆ. ಹಾಗೂ, ನಿಮ್ಮ ವಯಸ್ಸಿಗೆ ಅನುಗುಣವಾಗಿ ಲಭ್ಯವಿರುವ ಸರ್ಕಾರಿ ವಲಯದ ಅವಕಾಶಗಳನ್ನೂ ಪರಿಶೀಲಿಸಿ.

ವೃತ್ತಿ ಸಂದರ್ಶನದಲ್ಲಿ ಸಫಲತೆಯನ್ನು ಪಡೆಯಲು ಸೂಕ್ತವಾದ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ
ವಿಡಿಯೊ ವೀಕ್ಷಿಸಿ:https://www.youtube.com/watch?v=T_z3ngIeyWk

3.ಪತ್ರಿಕೋದ್ಯಮ ಮಾಡಿ ಕೆಲಸವಿಲ್ಲದೆ ಇದ್ದೇನೆ. ಹೇಗಾದರೂ ಮಾಡಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡಬೇಕು ಅಂದುಕೊಂಡಿದ್ದೇನೆ. ಮಾರ್ಗದರ್ಶನ ಮಾಡಿ ಸರ್.
ಹೆಸರು, ಊರು ತಿಳಿಸಿಲ್ಲ.

Caption
Caption

ವೃತ್ತಿ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಹಂಬಲದ ಜೊತೆಗೆ ಆ ಕನಸುಗಳನ್ನು ಸಾಕಾರಗೊಳಿಸಲು ಸಕಾರಾತ್ಮಕವಾಗಿ ಪರಿಶ್ರಮ
ಪಡಬೇಕಾಗುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಪತ್ರಿಕೋದ್ಯಮ ಕೋರ್ಸ್ ಜೊತೆಗೆ ವೃತ್ತಿ ಸಂಬAಧಿತ ಕೌಶಲಗಳಾದ ಸಂವಹನ (ಓದುವಿಕೆ, ಬರವಣಿಗೆ, ಮಾತುಗಾರಿಕೆ, ನಿರೂಪಣೆ ಇತ್ಯಾದಿ), ಭಾಷಾ ಪರಿಣತಿ, ವಿಶ್ಲೇಷಾತ್ಮಕ ಕೌಶಲ, ದಿಟ್ಟತನ, ಸಮಯದ ನಿರ್ವಹಣೆ ಇತ್ಯಾದಿಗಳನ್ನೂ ಬೆಳೆಸಿಕೊಳ್ಳಬೇಕು. ಯಾವುದೇ ವಿಚಾರವನ್ನು ಒಪ್ಪಿಕೊಳ್ಳುವ ಮುನ್ನ ತನಿಖೆ ಅಥವಾ ಪರಿಶೋಧನೆ ಮಾಡುವ ಮನಸ್ಥಿತಿ ಇರಬೇಕು. ಇದಲ್ಲದೆ, ಬೇರೆ ವೃತ್ತಿಗಳಿಗೆ ಹೋಲಿಸಿದರೆ ಪತ್ರಕರ್ತರಿಗೆ ಹೆಚ್ಚಿನ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯಿರುವುದು ಸಹಜ; ಹಾಗಾಗಿ, ಪ್ರಾಮಾಣಿಕತೆ, ನಿಷ್ಠೆ, ಬದ್ದತೆಯನ್ನು ನಿಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಳ್ಳಬೇಕು.
ಅತ್ಯಂತ ವಿಸ್ತಾರವಾದ ಈ ಕ್ಷೇತ್ರದಲಿ,್ಲ ಮುದ್ರಣ ಮಾಧ್ಯಮ (ದಿನ ಪತ್ರಿಕೆಗಳು, ನಿಯತಕಾಲಿಕೆಗಳು ಇತ್ಯಾದಿ), ಟೆಲಿವಿಷನ್, ರೇಡಿಯೊ, ಸಾಮಾಜಿಕ ಮಾಧ್ಯಮ, ವೆಬ್‌ಸೈಟ್ಸ್, ಬ್ಲಾಗ್ಸ್, ವಿಡಿಯೊ, ಪಾಡ್‌ಕಾಸ್ಟ್ ಇತ್ಯಾದಿ ವಲಯಗಳಿವೆ. ನಿಮ್ಮ ಆಸಕ್ತಿ, ಅಭಿರುಚಿಯಂತೆ, ಹೆಚ್ಚಿನ ತಜ್ಞತೆಗಾಗಿ ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್ ಮಾಡಿ, ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.
ತಿದ್ದುಪಡಿ: ಕಳೆದ ವಾರದ ಪ್ರಶ್ನೋತ್ತರದಲ್ಲಿ ಜಿಪಿಎಸ್‌ಟಿಆರ್ ಪರೀಕ್ಷೆಯ ಭಾಷಾ ಸಾಮರ್ಥ್ಯ ಪತ್ರಿಕೆಯ ಗರಿಷ್ಠ ಅಂಕಗಳು 150 ಎಂದು ತಿಳಿಸಲಾಗಿತ್ತು. ವಾಸ್ತವವಾಗಿ, ಈ ಪತ್ರಿಕೆಯ ಗರಿಷ್ಠ ಅಂಕಗಳು 100.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT