ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾ ವಾಣಿ: ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ಸರಳ ಸೂತ್ರಗಳು ಇಲ್ಲಿವೆ ನೋಡಿ

Last Updated 2 ಮಾರ್ಚ್ 2022, 20:45 IST
ಅಕ್ಷರ ಗಾತ್ರ

(ಯುಪಿಎಸ್‌ಸಿ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದಿನಾಂಕ ನಿಗದಿಯಾಗಿದೆ. ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರು ಅನುಸರಿಸಬಹುದಾದ ಸರಳ ಸೂತ್ರಗಳು ಇಲ್ಲಿವೆ.)

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇವಲ ಪರಿಶ್ರಮವೊಂದೇ ಅಲ್ಲ. ಚತುರತೆಯೂ ಮುಖ್ಯ. ಉತ್ತಮ ಗ್ರಹಣ ಸಾಮರ್ಥ್ಯ, ಸಮಯ ನಿರ್ವಹಣಾ ಕೌಶಲ, ವಿಷಯವನ್ನು ವಸ್ತುನಿಷ್ಠ ರೂಪದಲ್ಲಿ ಸಂಗ್ರಹಿಸಿ, ಸ್ಪಷ್ಟ ಯೋಜನೆಯೊಂದಿಗೆ ಪ್ರಸ್ತುತಪಡಿಸುವ ಸ್ಮಾರ್ಟ್‌ವರ್ಕರ್‌ಗಳು ಹೆಚ್ಚು ಯಶಸ್ವಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ‘ಸ್ಮಾರ್ಟ್‌’ ಕೆಲಸದೊಂದಿಗೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ.

ಆತ್ಮವಿಶ್ವಾಸ: ಆತ್ಮವಿಶ್ವಾಸ ಎಂಬುದು ತನ್ನ ಸಾಮರ್ಥ್ಯದ ಬಗ್ಗೆ ತನಗಿರುವ ನಂಬಿಕೆ. ಇದನ್ನು ಬೆಳೆಸಿಕೊಳ್ಳಲು ಪರಿಶುದ್ಧ ಆಲೋಚನೆ ಮತ್ತು ಶುದ್ಧವಾದ ಮನಸ್ಸಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರು ಸ್ವ-ಸಾಮರ್ಥ್ಯದ ಮೇಲೆ ನಂಬಿಕೆಯಿಡಬೇಕು. ಆಗ ಸೋಲಿನ ಭಯವಿರುವುದಿಲ್ಲ. ಆತ್ಮವಿಶ್ವಾಸ ಸಹಜವಾಗಿರಲಿ ಹಾಗೂ ಕಾರ್ಯತತ್ಪರತೆಯನ್ನು ಹೊಂದಿರಬೇಕು. ಆದರೆ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.

ಸಕಾರಾತ್ಮಕ ಚಿಂತನೆ: ಪರೀಕ್ಷಾರ್ಥಿಗಳು ಸಮಾಧಾನ ಹಾಗೂ ಸಕಾರಾತ್ಮಕ ಮನಸ್ಥಿತಿ ಹೊಂದಿರಬೇಕು. ಉದ್ವೇಗಗೊಂಡ ಮನಸ್ಸು ಹಿತಕರ ಅನುಭವವನ್ನು ನಿರಾಕರಿಸಿ, ಹತಾಶೆ, ಖಿನ್ನತೆ, ಒಂಟಿತನ, ಆತಂಕ, ಚಂಚಲದಂತಹ ನಕಾರಾತ್ಮಕ ಭಾವದತ್ತ ಸಾಗುತ್ತದೆ. ಭಾವನೆಗಳ ತಾಕಲಾಟ ಖಿನ್ನತೆಯಂತಹ ಮಾನಸಿಕ ಕಾಯಿಲೆಗೂ ಕಾರಣವಾಗಬಹುದು. ಸಕಾರಾತ್ಮಕ ಚಿಂತನೆಗಳು ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕಾಲದ ಪರಿಜ್ಞಾನ: ಕಾಲವೆಂಬುದು ಎಲ್ಲವನ್ನು ಮೀರಿದ್ದು. ಅದನ್ನು ತಡೆಯಲು ಸಾಧ್ಯವಿಲ್ಲ. ಕಾಲಕ್ಕೆ ಅನುಗುಣವಾಗಿ ಸಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುವವರು ದೊರೆಯುವ ಪ್ರತಿ ಅವಕಾಶವನ್ನು ಕೊನೆಯ ಅವಕಾಶವೆಂದು ಭಾವಿಸಿಯೇ ತಯಾರಿ ನಡೆಸಬೇಕು. ವಯಸ್ಸಾದಂತೆಲ್ಲ ಗ್ರಹಿಸುವ ಸಾಮರ್ಥ್ಯ, ಆತ್ಮವಿಶ್ವಾಸ, ಸ್ಮರಣ ಸಾಮರ್ಥ್ಯ, ನಿರ್ಧಾರ ಶಕ್ತಿ, ಆಸಕ್ತಿ ಮತ್ತು ವೇಗ ಕ್ಷೀಣಿಸಲಾರಂಭಿಸುತ್ತದೆ. ದೇಹ ಹಾಗೂ ಮನಸ್ಸು ಪೂರ್ಣಪ್ರಮಾಣದ ಸಾಮರ್ಥ್ಯ ಹೊಂದಿರುವಾಗಲೇ ಕಂಡ ಕನಸನ್ನು ನನಸು ಮಾಡಿಕೊಳ್ಳಬೇಕು.

ಕಲಿಯಬೇಕು: ಮೇಲುಸ್ತರದ ಓದು ಅಥವಾ ಕಂಠಪಾಠ ಕೆಲ ಸಮಯದ ಮಟ್ಟಿಗೆ ನೆನಪಿನಲ್ಲಿ ಉಳಿಯುತ್ತದೆ. ಹಾಗಾಗಿ ಕಲಿಕೆ ಸಹಜ ಹಾಗೂ ವಸ್ತು ಆಧಾರಿತವಾಗಿರಬೇಕು.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಯ ವಿಷಯದ ಪಾಂಡಿತ್ಯವನ್ನಷ್ಟೆ ಪರೀಕ್ಷಿಸದೆ, ವಿಷಯ ಅರ್ಥೈಸಿಕೊಂಡ ಶೈಲಿ, ವಿಶ್ಲೇಷಣಾ ಸಾಮರ್ಥ್ಯ, ತುಲನಾತ್ಮಕ ಮನೋಬಲ, ಒತ್ತಡ ನಿರ್ವಹಣಾ ಕೌಶಲ, ಸಮಯ ನಿರ್ವಹಣೆ ಗುಣ, ವಿಷಯ ಪ್ರಸ್ತುತಪಡಿಸುವ ಚಾಕಚಕ್ಯತೆಯನ್ನು ಪರೀಕ್ಷಿಸಲಾಗುತ್ತದೆ. ಆದ್ದರಿಂದ ಕಂಠಪಾಠಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯೋಗಕ್ಕೆ ಬರುವುದಿಲ್ಲ.

ಸ್ಪಷ್ಟತೆಯಿರಲಿ: ನಾವು ಮಾಡುವ ಕೆಲಸದ ಬಗ್ಗೆ ಸ್ಪಷ್ಟತೆ ಇರಬೇಕು. ನಿರ್ದಿಷ್ಟ ಗುರಿಯ ಬಗ್ಗೆ ನಿಖರತೆ ಇದ್ದಾಗ ಸ್ಪಷ್ಟತೆ ತಾನಾಗಿಯೇ ಮೂಡುತ್ತದೆ. ವಿಷಯವನ್ನು ಸತತವಾಗಿ ಅವಲೋಕಿಸಿ ಆಲೋಚಿಸಿದಾಗ ಮನಸಿನಲ್ಲಿ ಸ್ಪಷ್ಟತೆ ಮೂಡುತ್ತದೆ. ಭಾವನಾತ್ಮಕವಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಬದಲಾಗಿ, ತರ್ಕಬದ್ಧವಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಯಲ್ಲಿ ಇದು ಮುಖ್ಯ.

ತರಬೇತಿ ಕೇಂದ್ರದ ಆಯ್ಕೆ, ಅಧ್ಯಯನ ಸಾಮಗ್ರಿಗಳ ಸಂಗ್ರಹಣೆ, ಸಮಯದ ನಿರ್ವಹಣೆ, ವಿಷಯದ ಟಿಪ್ಪಣಿ ಸಿದ್ಧಪಡಿಸುವಿಕೆ, ನಿಗದಿತ ಸಮಯದಲ್ಲಿ ಪಠ್ಯಕ್ರಮವನ್ನು ಪೂರ್ಣಗೊಳಿಸುವುದು. ಘಟಕ ಪರೀಕ್ಷೆಗಳ ಫಲಿತಾಂಶದ ತುಲನೆಯಂತಹ ವಿಷಯದ ಬಗ್ಗೆ ಸ್ಪಷ್ಟತೆ ಮೂಡಿದರೆ ಸಾಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಧ ಯಶಸ್ಸು ಸಾಧಿಸಿದಂತೆ.

ಉತ್ತಮ ವಾತಾವರಣ: ನಮ್ಮ ಸುತ್ತಮುತ್ತಲಿನ ವಾತಾವರಣ ಚೆನ್ನಾಗಿದ್ದರೆ, ಮನಸ್ಸು ಆಹ್ಲಾದಕರವಾಗಿರುತ್ತದೆ. ಕ್ರಿಯಾಶೀಲವಾಗಿರಲು ಪೂರಕವಾಗಿರುತ್ತದೆ. ಹಾಗಾಗಿ, ತಮ್ಮ ಸುತ್ತಲಿನ ವಾತಾವರಣವನ್ನು ತಿಳಿಯಾಗಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ಉತ್ತಮ ಮಿತ್ರರ ಬಳಗವಿರಬೇಕು. ಗೆದ್ದಾಗ ಸಂಭ್ರಮಿಸಲು, ಸೋತಾಗ ಉಪಚರಿಸಿ, ಸಮಾಧಾನ ಹೇಳುವಂತಹ ಉತ್ತಮ ವ್ಯಕ್ತಿತ್ವವುಳ್ಳ ಸ್ನೇಹಿತರು ಬಳಗವಿರಬೇಕು.

ಅಹಂ ರಹಿತ ಮನಸ್ಥಿತಿ: ತಾನು ತಿಳಿದಿದ್ದೇ ಸರಿ ಎಂಬ ಅಹಂ ಭಾವ ಬೇಡ. ಒಳ್ಳೆಯದನ್ನು ಸ್ವೀಕರಿಸುವ ಹಾಗೂ ತಿಳಿದವರು ಹೇಳಿದ್ದನ್ನು ಕೇಳಿಸಿಕೊಳ್ಳುವಂತಹ ಗುಣ ಬೆಳೆಸಿಕೊಳ್ಳಬೇಕು. ಆಗ ನಿಮ್ಮ ಆಯ್ಕೆ ಹಾಗೂ ನಿರ್ಧಾರಗಳು ಬದಲಾಗುತ್ತವೆ. ಹೊಂದಾಣಿಕೆಯ ಅಲೆಗಳು ಕಾಣುತ್ತವೆ ಅವಕಾಶಗಳು ತೆರೆದುಕೊಳ್ಳುತ್ತವೆ.

ಉತ್ತಮ ನಿದ್ರೆ: ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಪ್ರತಿ ದಿನ ಕನಿಷ್ಠ 8 ರಿಂದ 9 ಗಂಟೆ ಗಾಢವಾದ ನಿದ್ರೆ ಮಾಡಬೇಕು. ಸಾಮಾನ್ಯವಾಗಿ ತಯಾರಿ ಒತ್ತಡಕ್ಕೆ ಒಳಗಾಗಿ 6 ರಿಂದ 7 ಗಂಟೆ ನಿದ್ರಿಸುತ್ತಾರೆ. ನಿದ್ರಾವಸ್ಥೆಯಲ್ಲಿ ಮಿದುಳಿನ ನರಕೋಶಗಳು ಸ್ಮರಣಾ ಸಂಪರ್ಕವನ್ನು ರೂಪಿಸಿ ಗಟ್ಟಿಗೊಳಿಸುತ್ತದೆ. ನಿದ್ರಾಹೀನತೆಯಿಂದ ಗ್ರಹಣ ಸಾಮರ್ಥ್ಯ ಕುಸಿಯುತ್ತದೆ. ಅಷ್ಟೆ ಅಲ್ಲದೆ ಏಕಾಗ್ರತೆ, ಸ್ಮರಣೆ, ನಿರ್ಧಾರ, ಸಾಮರ್ಥ್ಯ ಹಾಗೂ ಸೃಜನಶೀಲತೆಯ ಮೇಲೂ ಪ್ರಭಾವ ಬೀರುತ್ತದೆ.

ಒತ್ತಡ ರಹಿತ ಪ್ರಯತ್ನ: ಒತ್ತಡದಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸುವವರು ಮನಸ್ಸಿನ ಸ್ವಾಸ್ಥ್ಯ ಹಾಳಾಗುತ್ತದೆ. ಮನಸ್ಸು ಒತ್ತಡದಲ್ಲಿದ್ದಾಗ ಮಿದುಳಿನ ಸೊಮೊಟೊ ಸೆನ್ಸರಿ ಮೊಟೊರ್ ಸಂಪರ್ಕ ಬಿಗಿಯಾಗಿರುತ್ತದೆ. ಸಹಜ ಸಂದರ್ಭದಲ್ಲಿ ಆರಾಮವಾಗಿರುತ್ತದೆ. ಮಿದುಳಿಗೆ ತೀವ್ರ ಒತ್ತಡವಾದಾಗ ತನ್ನನ್ನು ತಾನು ರಕ್ಷಿಸಿಕೊಳ್ಳಲು ‘ರಕ್ಷಣಾತ್ಮಕ ಯಂತ್ರ (ಡಿಫೆನ್ಸಿವ್ ಮೆಕ್ಯಾನಿಸಂ) ವನ್ನು ಉಪಯೋಗಿಸುತ್ತದೆ. ಇಂತಹ ಸಂದರ್ಭದಲ್ಲಿ ಅತೀ ನಿದ್ರೆ, ಮರೆವು, ನಿರಾಸೆ, ಸಂದಿಗ್ಧ ವಾತಾವರಣ ಕಂಡುಬರುತ್ತದೆ. ಹಾಗಾಗಿ ಒತ್ತಡ ರಹಿತವಾಗಿ ಸಿದ್ಧತೆ ನಡೆಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT